ಮಗನಿಗಾಗಿ 1400 ಕಿ.ಮೀ ಸ್ಕೂಟಿ ಓಡಿಸಿದ ಮಹಿಳೆ

ಕೊರೊನಾ ವೈರಸ್‌ ಹರಡುವಿಕೆಯ ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ಮಾಡಲಾಗಿದೆ. ಯಾವುದೇ ಪೂರ್ವ ಸುಳಿವು ನೀಡದೆಯೇ ಲಾಕ್‌ಡೌನ್‌ ಪ್ರಕಟಿಸಿದ ಕಾರಣ, ಹಲವಾರು ಜನರು ತಾವು ಎಲ್ಲಿದ್ದರೋ ಅಲ್ಲಿಯೇ ಸಿಲುಕಿಕೊಂಡರು. ಸ್ಬೇಹಿತರ, ಸಂಬಂಧಿಗಳ ಮನೆಗಳಿಗೆ ತೆರಳಿದ್ದ ಜನರು ಹಿಂದಿರುಗಿ ತಮ್ಮ ಊರಿಗೆ-ಮನೆಗೆ ಹಿಂದಿರುಗಿ ಬರಲು ಸಾಧ್ಯವಾಗದೇ ಸಿಲುಕಿಕೊಂಡಿದ್ದರು.

ಇಂತಹ ಸನ್ನಿವೇಶದಲ್ಲಿ ತನ್ನ ಮಗನನ್ನು ಕರೆದುಕೊಂಡು ಬರಲು ತಾಯಿಯೊಬ್ಬಳು ಸುಮಾರು 1400 ಕಿ.ಮೀ ಬೈಕಿನಲ್ಲಿ ಪ್ರಯಾಣ ಮಾಡಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.

ಹೌದು, 50 ವರ್ಷ ರಜಿಯಾ ಬೇಗಂ ಲಾಕ್‌ಡೌನ್‌ನಿಂದ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ತನ್ನ ಸ್ನೇಹಿತನ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 17 ವರ್ಷದ ಮಗನನ್ನು ಕರೆತರಲು ತನ್ನ ಸ್ಕೂಟಿ ಬೈಕಿನಲ್ಲಿ 1400 ಕಿ.ಮೀ ಹೋಗಿ ಬಂದಿದ್ದಾರೆ. ತೆಲಂಗಾಣದ ನಿಜಾಮಾಬಾದ್‌ನಿಂದ ನೆಲ್ಲೂರಿಗೆ 700 ಕಿ.ಮೀ ಇದೆ. ಹೋಗಿ ಬರುವುದಕ್ಕೆ 1400 ಕಿ.ಮೀ ಆಗುತ್ತೆ.

ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದ ರಜಿಯಾ ಬೇಗಂ ನಿಜಾಮಾಬಾದ್‌ನ ಬೋದನ್ ಟೌನ್‌ನಿಂದ ಸೋಮವಾರ ಸ್ಕೂಟಿ ಬೈಕಿನಲ್ಲಿ ಪ್ರಯಾಣ ಆರಂಭಿಸಿದ್ದರು. ಮಂಗಳವಾರ ಬೆಳಿಗ್ಗೆ ನೆಲ್ಲೂರಿ ತಲುಪಿದ ರಜಿಯಾ, ಮತ್ತೆ ಬುಧವಾರ ಸಂಜೆ ನಿಜಾಮಾಬಾದ್‌ಗೆ ಮರಳಿದರು. ಒಟ್ಟು 1400 ಕಿ.ಮೀ ಪ್ರಯಾಣ ಮಾಡಿದ್ದಾರೆ.

ಬೋದನ್ ನಗರದ ಎಸ್‌ಪಿ ಅವರ ಬಳಿ ಅನುಮತಿ ಪಡೆದುಕೊಂಡಿದ್ದ ರಜಿಯಾ, ತನ್ನ ಮಗನನ್ನು ಮನೆಗೆ ವಾಪಸ್ ಕರೆತರಲು ಸಾಧ್ಯವಾಯಿತು.ಹೋಗಿ ಬರುವ ವೇಳೆ ಹಲವು ಕಡೆ ಪೊಲೀಸರು ಅಡ್ಡ ಹಾಕಿದರು. ಆದರೆ, ನನ್ನ ಬಳಿ ಪಾಸ್ ಮತ್ತು ಪೊಲೀಸರ ಅನುಮತಿ ಪತ್ರ ಇದ್ದ ಕಾರಣ ಕಳುಹಿಸಿದರು ಎಂದು ರಜಿಯಾ ಹೇಳಿದ್ದಾರೆ.

ನೆಲ್ಲೂರಿನಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದ ರಜಿಯಾ, ಮಗನನ್ನು ನೋಡಿದ ತಕ್ಷಣ ಸಮಯ ವ್ಯರ್ಥ ಮಾಡದೆ, ಮತ್ತೆ ಹಿಂತಿರುಗಿದರು. ”ಮಗನನ್ನು ಯಾವಾಗ ನೋಡುತ್ತೇನೆ ಎಂಬ ಆತುರವೇ ಹೆಚ್ಚಿತ್ತು. ಅವನನ್ನು ನೋಡಿದ್ದು ನನಗೆ ಮತ್ತಷ್ಟು ಶಕ್ತಿ ನೀಡಿತು. ಹಾಗಾಗಿ, ಎಲ್ಲಿಯೂ ನಿಲ್ಲದೇ ಮತ್ತೆ ವಾಪಸ್ ಬಂದೆ” ಎಂದು ರಜಿಯಾ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights