ಫ್ಯಾಕ್ಟ್‌ಚೆಕ್ : ಬಾಲ ರಾಮನ ಮೂರ್ತಿಗೆ ಶಿಲೆ ನೀಡಿದ ವ್ಯಕ್ತಿಗೆ 80 ಸಾವಿರ ದಂಡ ! ಯಾಕೆ ಗೊತ್ತೆ? ಕಾಂಗ್ರೆಸ್ ರಾಮನ ವಿರೋಧಿಯೇ?

ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಮೂರ್ತಿಯನ್ನು ಕೆತ್ತಿದವರು ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್. ರಾಮನ ವಿಗ್ರಹ ತಯಾರಾಗಲು ಬಳಸಿದ ಕಪ್ಪು ಶಿಲೆ ಕೂಡ ಮೈಸೂರಿನದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ರಾಮನ ಮೂರ್ತಿಗೆಂದು ಶಿಲೆ ನೀಡಿದ ವ್ಯಕ್ತಿಗೆ ಕರ್ನಾಟಕ ಸರ್ಕಾರ 80 ಸಾವಿರ ರೂ ದಂಡವನ್ನು ಹಾಕುವ ಮೂಲಕ ರಾಮ ವಿರೋಧಿ ಕಾಂಗ್ರೆಸ್‌ ಎಂದು ಸಾಭೀತು ಪಡಿಸಿದೆ ಎಂದು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಕಳೆದ ಕೆಲವು ವಾರಗಳಿಂದ ಸಾಮಾಜಿಕ ಮಾಧ್ಯಮಗಳು ಮತ್ತು ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಅಯೋಧ್ಯೆ ರಾಮ ಮಂದಿರ ಕುರಿತಾದ ಸುದ್ದಿಗಳಿಗೆ ಹೆಚ್ಚಿನ ಪಾಲು ಮೀಸಲಾಗಿತ್ತು. ಮಾಧ್ಯಮಗಳಲ್ಲಿ ಭಿತ್ತರವಾದ ಬಹುಪಾಲು ಕಾರ್ಯಕ್ರಮಗಳಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ವಿರುದ್ದ ಒಂದು ರೀತಿಯ ಪ್ರಾಪಗಾಂಡ ರೂಪಿತವಾದಂತಿತ್ತು.

ಅಯೋಧ್ಯೆ ರಾಮ ಮಂದಿರ ಕಾರ್ಯಕ್ರಮಕ್ಕೆ ಕರ್ನಾಟಕ ಸರ್ಕಾರ ರಜೆ ಘೋಷಿಸಬೇಕೆಂದು  ಬಿಜೆಪಿ ಆಗ್ರಹಿಸಿತ್ತು. ಇದನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದಾಗ, ಇದನ್ನೆ ದೊಡ್ಡದು ಮಾಡಿದ ಬಿಜೆಪಿ, ಕರ್ನಾಟಕದ ಕಾಂಗ್ರೆಸ್ ಹಿಂದೂ ವಿರೋಧಿ ಮತ್ತು ರಾಮ ಮಂದಿರದ ಬಗ್ಗೆ ಗೌರವವಾಗಲಿ ಭಕ್ತಿಯಾಗಿ ಇಲ್ಲ ಎಂದೆಲ್ಲ ಅಪಪ್ರಚಾರ ಮಾಡುವ ಪೋಸ್ಟ್‌ಗಳನ್ನು ಹಂಚಿಕೊಂಡಿತ್ತು. ಈಗ ರಾಮನ ವಿಗ್ರಹಕ್ಕೆ ಕಲ್ಲು ನೀಡಿದ ಶ್ರೀನಿವಾಸ್ ಎಂಬ ವ್ಯಕ್ತಿಗೆ 80 ಸಾವಿರ ದಂಡ ಹಾಕುವ ಮೂಲಕ ಕಾಂಗ್ರೆಸ್ ರಾಮ ವಿರೋಧಿ ಎಂಬುದು ಸಾಭೀತಾಗಿದೆ. ಹಾಗಾಗಿ ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಹೇಳಿಕೆಗಳನ್ನು ನೀಡಿ ಪೋಸ್ಟ್‌ಗಳನ್ನು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ. ಆದರೆ ಕಲ್ಲು ನೀಡಿದ ವ್ಯಕ್ತಿಗೆ 80 ಸಾವಿರ ರೂ ದಂಡ ಹಾಕುಲು ಕಾರಣ ಬೇರೆಯೇ ಇದೆ. ಏನು ಆ ಕಾರಣ?

80 ಸಾವಿರ ದಂಡ ಹಾಕಲು ಕಾರಣವೇನು ಗೊತ್ತೆ?

ಸೋಶಿಯಲ್ ಮೀಡಿಯಾಗಳಲ್ಲಿ ಹೇಳುತ್ತಿರುವಂತೆ ರಾಮನ ಮೂರ್ತಿಗೆ ಕಲ್ಲು ನೀಡಿದ ಶ್ರೀನಿವಾಸ್ ಎಂಬ ವ್ಯಕ್ತಿಗೆ ದಂಡ ಹಾಕಲು ಕಾರಣ ಅಕ್ರಮ ಕಲ್ಲು ಗಣಿಗಾರಿಕೆ. ಇದನ್ನು ಸ್ವತಃ ಶ್ರೀನಿವಾಸ್ ಒಪ್ಪಿಕೊಂಡಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದ ನಿವಾಸಿ ಹನುಮಯ್ಯ ಅವರ ಪುತ್ರ ಹೆಚ್.ರಾಮದಾಸ್ ಅವರು ಗ್ರಾಮದಿಂದ 2.ಕಿ.ಮೀ ದೂರದ ಸರ್ವೇ ನಂ.176,177ರ ತಮ್ಮ ಜಮೀನನ್ನು ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು.

ಹತ್ತು ಅಡಿ ಆಳದಲ್ಲಿ ಭೂಮಿ ಕೊರೆದು ಬೃಹತ್ ಕಲ್ಲುಗಳನ್ನು ತೆರೆದಿರುವ ಹಿನ್ನೆಲೆಯಲ್ಲಿ ಯಾರೋ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿರುವ ಅಧಿಕಾರಿಗಳು ಅನುಮತಿ ಇಲ್ಲದೇ ಅನಧಿಕೃತವಾಗಿ ಕಲ್ಲು ತೆಗೆದ ಹಿನ್ನೆಲೆಯಲ್ಲಿ ಕಲ್ಲುಗಳ ಗಾತ್ರಗಳ ಆಧಾರದಲ್ಲಿ 80 ಸಾವಿರ ರೂಪಾಯಿ ದಂಡ ವಿಧಿಸಿತ್ತು.

ಕಲ್ಲು ತೆಗೆಯಲು ಅನುಮತಿ ಪಡೆಯಬೇಕು ಎನ್ನುವ ಅರಿವಿಲ್ಲದೆ ಗುತ್ತಿಗೆದಾರ ಶ್ರೀನಿವಾಸ್​ ನಟರಾಜನ್​​ ಅನ್ಯ ಮಾರ್ಗವಿಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ ದಂಡವನ್ನು ಆನ್‌ಲೈನ್ ಮೂಲಕವೇ ಪಾವತಿಸಿದ್ದರು.

ಅಕ್ರಮ ಗಣಿಗಾರಿಕೆ ಮಾಡಿದ್ದಕ್ಕೆ ದಂಡ:

ಇತ್ತ ಭೂ ಮಾಲೀಕ ರಾಮದಾಸ್ ಅವರು ಭೂಮಿ ಒಳಗಿದ್ದ ಬಂಡೆ ತೆಗೆಯುವಂತೆ ಶ್ರೀನಿವಾಸ್​ಗೆ ಗುತ್ತಿಗೆ ನೀಡಿದ್ದರು. ಅದರಂತೆಯೇ ಆ ಕಲ್ಲನ್ನು ಹೊರಕ್ಕೆ ತೆಗೆದು ಜಮೀನಿನ ಪಕ್ಕದಲ್ಲಿ ಇಟ್ಟಿದ್ದೆ. ಆ‌ ವೇಳೆ ಸ್ಥಳಕ್ಕೆ ಬಂದ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಅಂತ ಆರೋಪ ಮಾಡಿ 80 ಸಾವಿರ ರೂಪಾಯಿ ದಂಡವನ್ನು ನನ್ನಿಂದ ಕಟ್ಟಿಸಿಕೊಂಡಿದ್ದಾರೆ ಎಂದು ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ.

ಹೆಚ್ಚಿನ ಮಾಹಿತಿಗೆಂದು ಏನ್‌ಸುದ್ದಿ.ಕಾಂ ಗಣಿ ಹಾಗೂ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತ್ತಾದರೂ ಅಧಿಕಾರಿಗಳು ಕರೆಯನ್ನು ಸ್ವೀಕರಿಸದ ಕಾರಣ ಅವರ ನಂತರ ಅವರ ಹೇಳಿಕೆಯನ್ನು ದಾಖಲಿಸಲಾಗುವುದು.

ಒಟ್ಟಾರೆಯಾಗಿ ಹೇಳುವುದಾದರೆ, ರಾಮ ಮಂದಿರದ ವಿಷಯದಲ್ಲಿ ಕರ್ನಾಟಕ ಸರ್ಕಾರವನ್ನು ಹಿಂದೂ ವಿರೋಧಿ ಎಂಬಂತೆ ಬಿಂಬಿಸಲು ಸುಳ್ಳು ಸುದ್ದಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ರಾಷ್ಟ್ರಪತಿ ದ್ರೌಪದಿ ಮುರ್ಮುರವರಿಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿರಲಿಲ್ಲವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights