ಅಸಮಾನತೆಯನ್ನು ಸರ್ಕಾರಗಳೇ ಬೆಳೆಸುತ್ತಿವೆ: ಹೆಚ್.ಎಸ್‌.ದೊರೆಸ್ವಾಮಿ ಆರೋಪ

ಬಡಜನರ ಪರ ಸದಾ ಹೋರಾಟ ನಿರತ ಸ್ವಾತಂತ್ರ್ಯ ಸೇನಾನಿ, ಶತಾಯುಷಿ ದೊರೆಸ್ವಾಮಿಯವರು ಇಂದಿಗೆ 103 ವರ್ಷಕ್ಕೆ   ಕಾಲಿಟ್ಟಿದ್ದಾರೆ. ಕೊರೊನಾ ಸಾಂಕ್ರಾಮಿಕದ ಲಾಕ್‍ಡೌನ್‍ ಕಾರಣದಿಂದ ಹೆಚ್ಚು ಜನ ಸೇರದೇ ಮೂರ್ನಾಲ್ಕು ಮಂದಿ ಮಾತ್ರಅವರಿಗೆ  ಇಂದು ಶುಭ ಹಾರೈಸಿ, ಅವರ ಹೋರಾಟದೊಂದಿಗೆತಾವಿದ್ದೇವೆ ಎಂಬ ಮಾತುಕೊಡುವ ಮೂಲಕ ಅರ್ಥಪೂರ್ಣಆಚರಣೆ ಇಂದು ಅವರ ಜೆ.ಪಿ ನಗರದ ನಿವಾಸದಲ್ಲಿ ಜರುಗಿತು.

ನಂತರ ತಮ್ಮ ಜನ್ಮದಿನದ ಸಂದರ್ಭದಲ್ಲಿ ನಾಡಿಗೆ ಒಂದು ಸಂದೇಶ ನೀಡಬೇಕೆಂದು ಕೇಳಿದಾಗ ದೊರೆಸ್ವಾಮಿಯವರು ಹೇಳಿದ್ದಿಷ್ಟು. “ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷದ ಮೇಲಾಗಿದೆ. ಆದರೆ ಅಸಮಾನತೆಯೂ ಅಷ್ಟೇ ಪ್ರಮಾಣದಲ್ಲಿ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿಒಟ್ಟು ಆದಾಯದ ಮೂರನೇಎರಡು ಭಾಗ ಮಾತ್ರಎಲ್ಲಾ ಸಾಮಾನ್ಯ ಜನರಿಗೆ ತಲುಪುತ್ತಿದೆ. ಆದರೆ ಕೇವಲ 10% ಜನರು ಮೂರನೇ ಒಂದು ಭಾಗ ಆದಾಯವನ್ನು ಪಡೆಯುತ್ತಿದ್ದಾರೆ. ಇದು ಆತಂಕಕಾರಿ ವಿಚಾರ. ಅಸಮಾನತೆಯನ್ನು ಪ್ರಭುತ್ವಗಳೇ ಬೆಳೆಸುತ್ತಿವೆ. ಈ ಅಸಮಾನತೆ ತೊಲಗಿ ಸಾಮಾನ್ಯ ಜನರು ಸಹ ಬದುಕು ಬಾಳುವ ಹಕ್ಕಿದೆ ಎಂಬ ಸಮಾಜ ಬರಬೇಕಿದೆ. ಎಲ್ಲರಿಗೂ ಊಟ, ಉದ್ಯೋಗ, ಸ್ವಾವಲಂಬನೆಯಿಂದ ಬದುಕುವ ಅವಕಾಶ ಸಿಗಬೇಕಿದೆ” ಎಂದರು.

ಜವಾಬ್ದಾರಿಯುತ ಪ್ರಜೆಯಾಗಿ ಜನರನ್ನು ಬೆಳೆಸುವಂತ ಕೆಲಸ ಸರ್ಕಾರದ್ದಾಗಿದೆ. ಬಡತನ ನಿರ್ಮೂಲನೆಯಾಗಬೇಕಿದೆ. ಇಂದಿಗೂ ದೇಶದಲ್ಲಿ 100ಕ್ಕೆ 30 ಜನ ಹಸಿವಿನಿಂದ ಮಲಗುವ ಪರಿಸ್ಥಿತಿ ಇದೆ. 13ನೇ  ಪಂಚವಾರ್ಷಿಕ ಯೋಜನೆ ಮುಗಿದಿದೆ. ಇದರ ಫಲಿತಾಂಶಎಂದರೆ ಬಡವ ಮತ್ತಷ್ಟು ಬಡವನಾದ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗಿದ್ದಾರೆ. ಬಡವ ಮತ್ತು ಬಲಿದಾನ ನಡುವೆ ಅಂತರವನ್ನು ಹೆಚ್ಚು ಮಾಡುವ ವ್ಯವಸ್ಥೆಯೂ ಇಂದಿಗೂ ಬಲಿಷ್ಠವಾಗಿದೆ.

ಬಡವರ ಬಗ್ಗೆ ಮೊದಲು ಚಿಂತನೆಯಾಗಬೇಕೆಂದು ಗಾಂಧೀಜಿಯವರು ಹೇಳುತ್ತಿದ್ದರು. ಸ್ವರಾಜ್ಯದಲ್ಲಿ ಮೊದಲು ಬಡತನ ನಿರ್ಮೂಲನೆಯಾಗಬೇಕೆಂದು ಹೇಳಿದ್ದರು. ಆದರೆ ಸ್ವಾತಂತ್ರ್ಯ ನಂತರ ಆಳಿದವರು ಬಡತನ ನಿರ್ಮೂಲನೆ ಮಾಡುವ ಬದಲು ಬಡತನವನ್ನು ಬೆಳೆಸುವ ಕೆಲಸ ಮಾಡಿದ್ದಾರೆ. 2ನೇ ಪಂಚವಾರ್ಷಿಕ ಯೋಜನೆಗಳನ್ನು ಬಡತನ ನಿರ್ಮೂಲನೆಗಾಗಿ ಮೀಸಲಿಟ್ಟಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು.

ನಮ್ಮ ಜನಈಗಲಾದರೂ ಸಾಮಾನ್ಯಜನರ ಏಳಿಗೆಗಾಗಿ, ಅವರಿಗೆ ಸಮಾನತೆಯನ್ನು ತರುವುದಕ್ಕಾಗಿ, ಅವರು ಬದುಕಿ ಬಾಳುವುದಕ್ಕಾಗಿ ಪ್ರಯತ್ನಿಸಬೇಕು ಎಂದು ಬಯಸುತ್ತೇನೆಎಂದರು.

ಸಮಾಜವಾದಿ ಚಿಂತಕರಾದ ಸಿ.ಜಿ.ಕೆ.ರೆಡ್ಡಿ, ರವಿಚಂದ್ರ ಸರ್, ಸಂವಿಧಾನ ಉಳಿವಿಗಾಗಿ ಕರ್ನಾಟಕದ ಗೌರಿ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಮರಿಸ್ವಾಮಿ, ನಾಗರಾಜ್, ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಮಚಂದ್ರ, ಎಸ್.ರಾಘವೇಂದ್ರ ಗೌಡ ಮತ್ತು ಹಲವಾರು ಗೆಳೆಯರು ಬೇರೆ ಬೇರೆ ಸಮಯದಲ್ಲಿ ಬಂದು ಶುಭ ಹಾರೈಸಿದರು.

ಫೇಸ್‍ಬುಕ್, ವಾಟ್ಸಾಪ್ ಮೂಲಕ ಬಂದ ಸಂದೇಶಗಳನ್ನು, ಅಭಿಮಾನದ ಮಾತುಗಳನ್ನು ದಿನವಿಡೀ ಕುಮಾರ್ ಸಮತಳರವರು ದೊರೆಸ್ವಾಮಿಯವರಿಗೆ ಓದಿ ಹೇಳಿದರು. ಬಹು ಸಂತೋಷದಿಂದಲೇ ದೊರೆಸ್ವಾಮಿಯವರು ಅದನ್ನೆಲ್ಲ ಆಲಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights