ಮಳೆ, ಗಾಳಿ, ಚಳಿ ಎನ್ನದೇ  ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ರೈತರ ಪ್ರತಿಭಟನೆ ಮುಂದುವರೆದಿದ್ದು ರೈತರ ಪ್ರತಿಭಟನೆ 2 ನೇ ದಿನಕ್ಕೆ ಕಾಲಿಟ್ಟಿದೆ.

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ  ರೈಲ್ವೆ ನಿಲ್ದಾಣದ ಬಳಿ ರೈತಮುಖಂಡ ವೀರೇಶ್ ಸೊರಬದಮಠ ನೇತೃತ್ವದಲ್ಲಿ ರೈತರು ಧರಣಿ ನಡೆಸುತ್ತಿದ್ದಾರೆ. ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಅಧಿಸೂಚನೆ ಹೊರಡಿಸಬೇಕು. ಈ ವಿಚಾರದಲ್ಲಿ ರಾಷ್ಟ್ರ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಹಾಗೆಯೇ ರಾಜ್ಯಪಾಲರ ಭೇಟಿಗೂ ಧರಣಿನಿರತರು ಪಟ್ಟು ಹಿಡಿದಿದ್ದಾರೆ. ಇನ್ನು ಮಹಾರಾಷ್ಟ್ರಕ್ಕೆ ನೀರುಹರಿಸುವುದಾಗಿ ಹೇಳಿಕೆ ನೀಡಿರುವ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ದ ರೈತ ಮುಖಂಡರು, ನೀವು ಕರ್ನಾಟಕ್ಕೆ ಸಿಎಂ ಆಗಿದ್ದೀರೋ ಮಹಾರಾಷ್ಟ್ರಕ್ಕೆ ಸಿಎಂ ಆಗಿದ್ದೀರೋ. ಮೊದಲು ಮಹದಾಯಿ ವಿವಾದ ಬಗೆಹರಿಸಿ ಎಂದು ಕಿಡಿ ಕಾರಿದರು.

ನಿನ್ನೆ ಹುಬ್ಬಳ್ಳಿಯಿಂದ ರೈಲಿನಲ್ಲಿ ಬಂದು ಪಾದಯಾತ್ರೆ ಮೂಲಕ ರಾಜಭವನದತ್ತ ಸಾಗಲು ನಿರ್ಧರಿಸಿದ್ದ ರೈತ ಹೋರಾಟಗಾರರನ್ನು ರೈಲ್ವೆ ನಿಲ್ದಾಣದಲ್ಲೇ ತಡೆಯಲಾಗಿತ್ತು. ರಾತ್ರೀಯಿಡಿ ರೈಲ್ವೆ ನಿಲ್ದಾಣದಲ್ಲೇ ಕಳೆದ ರೈತರ ಪ್ರತಿಭಟನೆ 2 ನೇ ದಿನಕ್ಕೆ ಕಾಲಿಟ್ಟಿದೆ. ನ್ಯಾಯಾಧಿಕರಣ ತಿಳಿಸಿರುವಂತೆ ನೀರನ್ನು ಬಳಕೆ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿಲ್ಲ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.