ಮಾಸ್ತಿ-129: ನುಡಿ ನಾಡು ಜನ; ಮಾಸ್ತಿ ಮನ; ಕೆವಿಎನ್ ಸಂದರ್ಶನ

[ಕನ್ನಡದ ಪ್ರಖ್ಯಾತ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಜನ್ಮದಿನ ಇಂದು. ಮಾಸ್ತಿಯವರು ಪುಣ್ಯತಿಥಿ ಕೂಡ ಇಂದೆ. ಚಿಕ್ಕವೀರ ರಾಜೇಂದ್ರ, ಚೆನ್ನಬಸವ ನಾಯಕ ಕಾದಂಬರಿಗಳು, ಕಾಕನಕೋಟೆ ನಾಟಕ ಮತ್ತು ಅಪಾರ ಸಣ್ಣ ಕಥೆಗಳ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಮಾಸ್ತಿ ಅವರನ್ನು ವಿಮರ್ಶಕ ಮತ್ತು ಭಾಷಾಶಾಸ್ತ್ರಜ್ಞ ಕೆ ವಿ ನಾರಾಯಣ್ ಅವರು ಸಂದರ್ಶನ ನಡೆಸಿದ ಪೂರ್ಣ ಪಠ್ಯ ಇಲ್ಲಿದೆ. ಈ ಭಾಗವನ್ನು ಕೆ ವಿ ಎನ್ ಅವರ ಸಮಗ್ರ ಬರಹಗಳ ಸಂಕಲನ ‘ತೊಂಡುಮೇವು’ ಇಂದ ಆರಿಸಿಕೊಳ್ಳಲಾಗಿದೆ]

ಈ ಶತಮಾನದಲ್ಲಿ ಕನ್ನಡ ಜನತೆ ಕಂಡಿರುವ ಮಹಾ ಧೀಮಂತರಲ್ಲಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಪ್ರಮುಖರು. ಹತ್ತೊಂಬತ್ತನೇ ಶತಕದ ಕೊನೆಯ ದಶಕ (1891)ದಲ್ಲಿ ಹುಟ್ಟಿದ ಅವರು ತಮ್ಮ ಈ ನಿಡುಗಾಲದ ಬಾಳ್ವೆಯ ಉದ್ದಕ್ಕೂ ನಮ್ಮ ಸಂಸ್ಕೃತಿಯ ಹಿರಿಮೆಯನ್ನು ಹೆಚ್ಚಿಸುವ ಹೊಣೆಯನ್ನು ಹೊತ್ತಿದ್ದಾರೆ. ಶ್ರೀನಿವಾಸ ಎಂಬ ಹೆಸರಿನಲ್ಲಿ ಅವರು ರಚಿಸಿದ ಸೃಜನಾತ್ಮಕ ಬರೆಹಗಳನ್ನು ಓದಿ ಪ್ರಬುದ್ಧ ಜೀವನಕ್ರಮವೊಂದಕ್ಕೆ ಪ್ರವೇಶ ಪಡೆಯುವ ಕನ್ನಡಿಗರು ಅಲ್ಲಿ ಕಂಡುಬರುವ ಅಪೂರ್ವ ಜೀವೋತ್ಸಾಹ, ಶ್ರದ್ದೆಗಳನ್ನು ಕಂಡಿದ್ದಾರೆ. ಕಥೆಗಳು, ಕವನಗಳು, ನಾಟಕಗಳು, ವಿಮರ್ಶೆ, ವಿಚಾರ ಹೀಗೆ ಹಲವು ಮುಖಗಳಲ್ಲಿ ನಡೆದಿರುವ ಅವರ ಸಾಹಿತ್ಯ ರಚನೆ ಇನ್ನೂ ಕುಡಿಯೊಡೆಯುತ್ತಲೇ ಇದೆ. ಜಗತ್ತಿನ ಶ್ರೇಷ್ಠ ಚಿಂತಕರ ವಿಚಾರಗಳನ್ನು ಅವರು ಕನ್ನಡದಲ್ಲಿ ನಮಗೆ ನೀಡಿದ್ದಾರೆ. ತಮ್ಮ ಜೀವನ ವೃತ್ತಾಂತವನ್ನು ಅವರು ‘ಭಾವ’ ಎಂಬ ಗ್ರಂಥದಲ್ಲಿ ಹೇಳಿದ್ದಾರೆ. ಹೊರಗೆ ಕಾಣುವ ಬರಹಗಾರ ಚೇತನದ ಒಳ ವಿವರಗಳು ಅಲ್ಲಿ ಪ್ರಕಟಗೊಂಡಿವೆ. ಇದಲ್ಲದೆ ಹಲವು ಹತ್ತು ವೇಳೆಗಳ ಸಂದರ್ಶನಗಳಲ್ಲೂ ಅವರ ವಿಚಾರಗಳು ತಿಳಿದುಬಂದಿವೆ.

ಮಾಸ್ತಿಯವರೊಡನೆ ಮಾತನಾಡಲು ಅವರ ಮನೆಗೆ ಬೆಳಗಿನ ವೇಳೆಯಲ್ಲಿ ಹೋದೆವು. ನಾವು ಹೋಗುತ್ತಿದ್ದಂತೆಯೇ ಉದ್ದ ಕೋಟು ತೊಟ್ಟು ಬಂದರು. ಬಾಗದ ದಿಟ್ಟ ದೇಹ, ತೆಳುನಿಲುವು, ಹತ್ತಿರ ಕುಳಿತರು, ಮಾತಿಗೆ ತೊಡಗಿದೆ. ನನ್ನ ಜತೆ ಬಂದ ವಿಜಯಾ, ಮಾಸ್ತಿಯವರಿಗೆ ಪರಿಚಿತರು. ಮಾಸ್ತಿಯವರು ಅವರ ಆರೋಗ್ಯ ಕುರಿತಂತೆ ಕೆಲವು ಮಾತುಗಳನ್ನು ಕೇಳಿದರು. ಆಮೇಲೆ ನನ್ನ ಕೆಲಸ ಊರುಗಳ ಬಗೆಗೆ ಕೇಳಿದರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಒಂದು ಹಳ್ಳಿ ಕಂಪಲಾಪುರದವನೆಂದು ಹೇಳಿದಾಗ ತಾವು 1928ರಲ್ಲಿ ಮೈಸೂರು ಸಬ್‌ಡಿವಿಷನ್ ಆಫೀಸರ್ ಆಗಿದ್ದಾಗ ಕಂಡ ನನ್ನ ಹಳ್ಳಿಯ ಒಂದು ನೆನಪನ್ನು ತೆಗೆದರು. ಅಲ್ಲಿನ ಒಬ್ಬ ಲಾವಣಿಕಾರ ಹಾಡಿದ ಒಂದು ಲಾವಣಿಯ ಸೊಗಸು ತಮ್ಮ ಮೇಲೆ ಪ್ರಭಾವ ಬೀರಿದ್ದನ್ನು ಹೇಳಿದರು. ದೊಡ್ಡವೀರ ರಾಜನ ಹೆಸರು ಕೇಳಿದರೆ ಪರಂಗಿಯವರು ತಲೆಯ ಮೇಲೆ ಟೋಪಿಯನ್ನು ತೆಗೆಯುತ್ತಿದ್ದರೆಂದು ಆ ಲಾವಣಿ ಹೇಳಿತಂತೆ. ಇವರ ನೆನಪಿನಲ್ಲಿ ಐದು ದಶಕಗಳ ನಂತರವೂ ಹಸುರಾಗಿ ಉಳಿದ ನನ್ನ ಹಳ್ಳಿಯ ಆ ಲಾವಣಿಕಾರನನ್ನು ಮತ್ತು ಅವನ ಲಾವಣಿಯನ್ನು ಕುರಿತು ಯೋಚಿಸುತ್ತಿರುವಂತೆ ಇವರ ಬರೆಹಗಳ ಹಿಂದಿರುವ ಎಣೆಯಿಲ್ಲದ ಜೀವನ ಸಮ್ಮುಖತೆಯ ಬೇರುಗಳು ಕಾಣತೊಡಗಿದವು. ಕವಿ ಕೆ.ಎಸ್.ನ.ಅವರ ಕವನದ ಸಾಲೊಂದು ನೆನಪಿಗೆ ಬಂತು. ‘ಮರೆತ ಹಾಡು ಇವರ ಹೃದಯದೊಳಗೆ ಸೇರಿಹೋದ ಸುದ್ದಿ ನನ್ನ ಕಿವಿಗೆ ಬಿದ್ದು ಬೆಳಕು ಹರಿಯಿತು.”

ಸರಿ, ನಾನು ಕೆಲವು ಪ್ರಶ್ನೆಗಳೊಡನೆ ಸಿದ್ಧನಾಗಿ ಹೋಗಿದ್ದೆ. ಹೇಗೆ ಉತ್ತರ ಕೊಡುತಾರೋ ಎಂಬ ಕುತೂಹಲ, ಜತೆಗೆ ಕೊಂಚ ಭಯ ಎರಡೂ ಇದ್ದವು. ಮೊದಲು ಮಾಡಿದೆ. ಜೀವನದಲ್ಲಿ ನಿಡುಗಾಲವನ್ನು ಕಳೆದು ಮಾಗಿದ ವಲಯದಲ್ಲಿ ನಿಂತ ಇವರಿಗೆ ಯಾರೋ ಪರಿಚಯವಿಲ್ಲದ ಮನುಷ್ಯನೊಬ್ಬ ಪ್ರಶ್ನೆಗಳನ್ನು ಹಾಕಿ ಉತ್ತರವನ್ನು ಬಯಸುವುದು ಕೊಂಚ ವಿಚಿತ್ರ ಅನ್ನಿಸಿರಬಹುದೆ? ಅದೇ ಮಾತನ್ನು ಅವರಲ್ಲಿ ಕೇಳಿದೆ. ಬಹುಜನರಿಗೆ ಗೊತ್ತಿರುವ ಅವರ ನಗೆಯೊಡನೆ ಹೇಳಿದರು: “ನನಗೆ ಯಾರೂ ಅಪರಿಚಿತರು ಅನ್ನಿಸುವುದಿಲ್ಲ. ನನ್ನ ಕಿರಿಯರು ನಾನು ಕಂಡವರೇ; ನಾನು ಅವರನ್ನು ಕಂಡವನೇ ಇರತೇನೆ ಏನು ಬೇಕೋ ಕೇಳಿ.’

ಇವರು ಈ ಶತಮಾನದ ನಮ್ಮ ಸಾಹಿತ್ಯದ ಬೆಳವಣಿಗೆಯಲ್ಲಿ ತಾವು ಭಾಗಿಗಳಾಗಿದ್ದಲ್ಲದೆ, ಅದರ ವಿವಿಧ ಚಳುವಳಿಗಳನ್ನು ಕಂಡವರು. ಬೇರೆ ಬೇರೆ ಹಂತಗಳಲ್ಲಿ ನಡೆದ ಈ ಸಾಹಿತ್ಯ ಚಳವಳಿಗಳು ಏನು ಪರಿಣಾಮಗಳನ್ನು ತಂದಿವೆ? ಅದರಲ್ಲೂ ಈ ಹೊತ್ತು ನಿಂತು ನೋಡಿದರೆ ಮಾಸ್ತಿಯವರಿಗೆ ಇವು ಹೇಗೆ ಕಾಣುತ್ತವೆ? ಎಂದು ತಿಳಿಯುವ ಬಗೆಯಲ್ಲಿ ಒಂದು ಮಾತು ಕೇಳಿದೆ.

‘ನಾನು ಬರೆಯೋಕೆ ಪ್ರಾರಂಭಮಾಡಿದ ಕಾಲದಲ್ಲಿ ಈ ದೇಶದಲ್ಲಿ ಬರವಣಿಗೆ, ಮನುಷ್ಯರು ಎಲ್ಲ ಸೇರಿ ಬಹು ಅಲ್ಪ ಸಂಖ್ಯೆಯ ಜನ ಇದ್ದಿರಬಹುದು. ಧಾರವಾಡದ ಕಡೆ ಕೆಲವರು, ಮಂಗಳೂರು ಕಡೆ, ಮೈಸೂರು ಕಡೆ ಒಂದು ಹತ್ತು ಜನ, ಮಿಕ್ಕ ಹಾಗೆ ಒಂದಿಷ್ಟು ಜನ ಇದ್ದೆವು. ಬರೆಯುವವರ ಸಂಖ್ಯೆ ಹೀಗಿರುತ್ತಾ ಓದುವವರ ಸಂಖ್ಯೆ ಐನೂರೋ ಆರುನೂರೋ; ಈಗ ಬರೆಯುವವರು ನೂರಾರು ಜನ ಆಗಿದ್ದಾರೆ. ಹಾಗೆ ಓದುವವರು ಹತ್ತಾರು ಸಾವಿರ. ಈ ಚಳವಳಿ ಅನ್ನೋ ಶಬ್ದವೇ ತಪ್ಪು. ಬರೆಯೋರು ಬರೀತಾನೇ ಇರ್ತಾರೆ, ಬೇರೆಯವರು ಅದು ಬೇಕು ಇದು ಬೇಕು ಅಂತ ಅನ್ನತಾನೇ ಇರತಾರೆ, ಚಳವಳಿ ಅಂತ ಏನಿರುತ್ತೆ? ಅದರಿಂದ ಪರಿಣಾಮ ಏನಾಗುತ್ತೆ? ಇನ್ನು ಜನ ಏನು ಮಾಡುತ್ತಾರೆ ಅಂತ? ಇವತ್ತು ತಾನೇ ಏನು ಪರಿಣಾಮ ಬೀರುತಾರೆ? ಜನರಿಂದ ಏನೂ ಆಗೋದಿಲ್ಲ. ಯಾರೋ ಬರೆಯುವವನು ಸಾಹಿತ್ಯಕಾರ ಸಾಹಿತ್ಯದ ವಿಷಯದಲ್ಲಿ ಮಾತನಾಡುತ್ತಾನೆ. ನಾನು ಮಾಡುತ್ತೇನೆ, ಬಿಡತೇನೆ ಅಂತಾನೆ. ಇನ್ನೊಬ್ಬರ ಬರೆಹ ಚೆನ್ನಾಗಿಲ್ಲ ಅಂತಾನೆ, ನಾನೇ ಗಟ್ಟಿಗ ಅನ್ನತಾನೆ. ಮಿಕ್ಕ ಜನ ಬೇರೆ ಏನೋ ಅನ್ನತಾರೆ. ಬರೆಯೋನಿಗೆ ಆತ್ಮ ವಿಶ್ವಾಸ ಇರಬೇಕು. ಆತ್ಮವಿಶ್ವಾಸ ಇಲ್ಲದಿದ್ದರೆ ಯಾರಿಗೆ ಕೆಲಸ ಮಾಡೋಕೆ ಆಗುತ್ತೆ? ಬೇರೆಯವರ ವಿಷಯದಲ್ಲಿ ಅಲಕ್ಷ ಇರಬಾರದು.

ಅಲ್ಲಿಂದ ಮುಂದಿನ ಪ್ರಶ್ನೆಗೆ; ಅವರ ಸಾಹಿತ್ಯವನ್ನು ಕುರಿತಂತೆ ಕೆಲವು ಮಾತುಗಳನ್ನು ಕೇಳಲು ಬಯಸಿದ್ದೆ. ಸಾಮಾನ್ಯವಾಗಿ ಅವರ ಬರೆಹಗಳಲ್ಲಿ ಕಂಡು ಬರುವ ಜೀವನದೃಷ್ಟಿ; ಸಮಾಧಾನ, ನೆಮ್ಮದಿ ಇದು ಅವರು ಜೀವನದಲ್ಲಿ ಅಪೇಕ್ಷಿಸುವ ಸ್ಥಿತಿಯೋ ಅಥವಾ ನಮ್ಮ ಬದುಕಿನ ಒಳಗೆ ಅದರ ಬೇರುಗಳು ಇವೆ ಅಂತ ತಿಳಿಯುತ್ತಾರೋ? ನಾನು ಬಳಸಿದ ಸಮಾಧಾನ ಎಂಬ ಮಾತು ಕುರಿತು ಕೇಳಿದರು. ‘ಸಮಾಧಾನ ಎಂದರೆ ಏನು ಅರ್ಥ? ಇದ್ದು ಬಿದ್ದದ್ದೆಲ್ಲಾ ಸರಿಯಾಗಿದೆ ಅಂತಲೇ?’  ‘ಅಲ್ಲ, ಸರಿಯಾಗಿದೆ ಅಂತ ನಾನು ಹೇಳಲಿಲ್ಲ’. ವಿವರಣೆ ಕೊಡುತ್ತಾ ನಾನು ಹೇಳಿದೆ. ‘ನಿಮ್ಮ ಪಾತ್ರಗಳು ಜೀವನದ ಮೂಲಭೂತ ಬದಲಾವಣೆಗೆ ಯತ್ನ ಮಾಡದೆ ಪರಿಸ್ಥಿತಿಯನ್ನು ಪರಿವರ್ತನೆ ಮಾಡಿಕೊಂಡು ಹೋಗುತ್ತವೆಯಲ್ಲವೇ?’

‘ನನ್ನ ಬರೆಹದ ಎಲ್ಲ ಕಡೆಯೂ ಹಾಗೆ ಇದೆ ಅಂತ ಹೇಳೋಕೆ ಬರೋಲ್ಲ. ಜೀವನವನ್ನು ಚಿತ್ರಿಸೋದರಲ್ಲಿ ನನ್ನದೂ ಒಂದು ದಾರಿ ಇದೆ. ಆ ದಾರಿ ಸಹಜವಾಗಿಯೇ ಒಂದು ರೀತಿಯಲ್ಲಿ ಕಾಣುತ್ತದೆ. ಇನ್ನು ಸಮಾಧಾನದ ಮಾತು. ಕಷ್ಟ ಪಡುವವರು ಪಡತಾನೆ ಇರುತ್ತಾರೆ. ನನ್ನ ಬರಹಗಳಲ್ಲಿ ಕೂಡ ಇದು ಕಾಣುತ್ತೆ’.

ನಾನು ಕತೆಗಳ ಬಗೆಗೆ ಹೇಳಿದ ಒಟ್ಟಂದದ ಮಾತುಗಳ ಬಗೆಗೆ ಹೇಳಿದರು: ‘ಯಾರೋ ನಾಲ್ಕು ಜನ ಬುದ್ದಿವಂತರು ಹೇಳಿದ ಮಾತು ಇದು, ಗಿಳಿಪಾಠ ಆಗಿಹೋಗಿದೆ. ಎಲ್ಲ ಸಮಾಧಾನ ಇದೆಯೆ? ಎಲ್ಲ ಒಳ್ಳೆಯವರೇ ಇದ್ದಾರೆಯೇ? ಕೆಟ್ಟವರೂ ಇದ್ದಾರೆ. ಕೆಲವರು ಮಾಸ್ತಿಯವರ ಕಥೆಗಳಲ್ಲಿ ಕೆಟ್ಟ ಜನವೇ ಇಲ್ಲ ಅಂತ ಹೇಳಿದ್ದಾರೆ. ಓದುವವನಿಗೆ ಹಾಗೆ ಅನ್ನಿಸಿದರೆ ನಾನೇನು ಮಾಡಲಿ?’ ಅನಿಸಿದರೂ ಅನಿಸಿತೇ; ಅದರಲ್ಲಿ ತಪ್ಪೇನೂ ಇಲ್ಲ….’

ಇಲ್ಲಿ ನಾನು ಅನಂತಮೂರ್ತಿಯವರು ಈಚೆಗೆ ಮಾಸ್ತಿಯವರ ಕಥೆಗಳ ಬಗೆಗೆ ಬರೆದ ಮಾತುಗಳನ್ನು ಹೇಳುತ್ತಾ ಆ ಬಗೆಗೆ ಮಾಸ್ತಿಯವರ ಅಭಿಪ್ರಾಯ ಕೇಳಬಯಸಿದೆ:’ನೀವು ಮನುಷ್ಯನ ಪ್ರವೃತ್ತಿಯ ಮತ್ತು ಅವನ ಹೊರಗಿನ ಸಂಸ್ಕೃತಿ ಇವುಗಳ ಮುಖಾಮುಖಿಯಲ್ಲಿ ಸಂಸ್ಕೃತಿಯ ಪರವಾಗಿ ನಿಲ್ಲುವ ಪಾತ್ರಗಳನ್ನು ಸೃಷ್ಟಿಸುತ್ತೀರಿ ಅಂತಾ ಹೇಳಿದ್ದಾರೆ…..’

‘ಜೀವನದಲ್ಲಿ ಹೇಗಿದೆಯೋ ಹಾಗೆ ಬರೆದಿದ್ದೇನೆ. ಅದು ನನ್ನ ತಿಳುವಳಿಕೆ, ಅದು ಸಹಜವಾಗಿ ಇದ್ದರೆ ಚಿತ್ರ ಸರಿಯಾದ ಚಿತ್ರ ಅದರ ಯಾವುದೋ ಒಂದು ಭಾಗ ಮುಖ್ಯವಾಗಿ ಕಾಣಬಹುದು. ಇನ್ನೊಂದು ಭಾಗ ಅಷ್ಟೊಂದು ಮುಖ್ಯವಾಗಿ ಕಾಣದೇ ಇರಬಹುದು. ನನ್ನ ಮುಖ್ಯ ಉದ್ದೇಶ ಜೀವನದ ಚಿತ್ರ ಕೊಡೋದು, ಕಂಡ ಜೀವನ ಹೇಳಿದ್ದೇನೆ. ಇದು ಒಳ್ಳೆಯದು, ಇದು ಕೆಟ್ಟದ್ದು, ಅಂತ ಹೇಳೋದಿಲ್ಲ. ಹಾಗೆ ಆಗಬೇಕಿತ್ತು ಅಂತಾನೂ ಹೇಳೋದಿಲ್ಲ. ಹೀಗಿದೆ ಅಪ್ಪ ಅನ್ನತೇನೆ. ನೀವು ಏನು ಮಾಡುತ್ತೀರೋ ಅದನ್ನು ಮಾಡಿ, ಹಾಗೆ ಹೇಳೋದು ನನ್ನ ಕೆಲಸ ಅಲ್ಲ ಅನ್ಸತ್ತೆ, ನನ್ನ ಕೆಲಸ ಯಾವುದು ಅಂದರೆ ನನ್ನ ಹಿರಿಯರು ಮಾಡಿದ ಬಗೆಯದು. ವಾಲ್ಮೀಕಿ, ಕಾಳಿದಾಸ, ಷೇಕ್ಸ್ಪಿಯರ್, ಗಯಟೆ ಇವರೆಲ್ಲ ನನ್ನ ಹಿರಿಯರು. ನನ್ನದು ಅವರ ದೃಷ್ಟಿ, ಏನಂತಾರೆ ಅವರು? “ಜೀವನ ದೊಡ್ಡದು, ಕಷ್ಟ ಇದೆ; ನೋವು ಇದೆ” ನಾನು ಇದರಲ್ಲೇ ಅವರ ಜತೆಗೇ ಇದೇನೆ.’

ಈ ಜೀವನ ನಿರೀಕ್ಷೆಯ ಕ್ರಮವೇ ನಿಮ್ಮ ಕಥೆಗಳ ತಂತ್ರವನ್ನು ನಿರ್ದೇಶಿಸಿರಬಹುದೆ?” ಎಂದು ಕೇಳಿದೆ. ಅವರೆಂದರು: ‘ತಂತ್ರವೇ ಇಲ್ಲ’, ‘ಹಾಗಲ್ಲ, ಉದಾಹರಣೆಗೆ ನಿಮ್ಮ ಬಹುಪಾಲು ಬರೆಹಗಳಲ್ಲಿ ಯಾರೋ ನಿಮಗೆ ಹೇಳಿದ್ದನ್ನು ನೀವು ನಮಗೆ ಹೇಳುವ ಬಗೆಯನ್ನು ಅನುಸರಿಸುತ್ತೀರಿ. ಇದು ನಿಮ್ಮ ಮೊದಲ ಬರೆಹಗಳಲ್ಲಿ ಕಂಡಷ್ಟೆ ಇಂದಿನ ಬರೆಹಗಳಲ್ಲೂ ಕಾಣುತ್ತದೆ.

ಇರಬಹುದು, ಯಾರೋ ನನಗೆ ಹೇಳಿದ್ದು ಅವರು ಹೇಳಿದಂತೆ ನಿಮಗೆ ಹೇಳುತೇನೆ. ಎಲ್ಲ ಕಥೇನೂ ಯಾರೋ ಒಬ್ಬರು ಹೇಳುತ್ತಾರೆ ಮತ್ತು ಜನ ಕೇಳುತಾರೆ ಕೆಲವು ವೇಳೆ ನಾನು ಹೇಳಬಹುದು-ಬಹು ವೇಳೆ ಇತರರು ಹೇಳಬಹುದು.’

ಇದು ನಮ್ಮ ಪರಂಪರೆಯ ಸಾಹಿತ್ಯದಲ್ಲೂ ಕಂಡುಬರುವ ಲಕ್ಷಣ ಕೂಡ ಅಲ್ಲವೇ?

‘ಏನೋ ನನಗೆ ಗೊತ್ತಿಲ್ಲಪ್ಪಾ,  ಜನಜೀವನವನ್ನು ತಿಳಿಸಬೇಕು ಅನೋದಷ್ಟೇ  ನನ್ನ ಮುಖ್ಯ ಗಮನ. ಇದನ್ನು ಕುರಿತು ‘ಭಾವ’ದಲ್ಲಿ ಬರೆದಿದ್ದೇನೆ. ತರುಣ, ಹೊರಗಿನ ಕಥೆಗಳನ್ನು ಓದಿದೆ. ಅದರಲ್ಲೂ ಸ್ಟಾಂಡ್ ಮ್ಯಾಗಜೀನ್‌ನಲ್ಲಿ ಬರುತ್ತಿದ್ದ ಕಥೆಗಳನ್ನು ಓದಿ ನಮ್ಮ ಜನಗಳಿಗೆ ಇಂಥದು ಇದ್ದರೆ ಚೆನ್ನಾಗಿರುತ್ತೆ ಅಂತ ಅನ್ನಿಸಿತು. 1910-11ರಲ್ಲಿ ಮೊದಲ ಕಥೆ ಬರೆದೆ. ಆಗ ನಾನು ವಿದ್ಯಾರ್ಥಿ, ಬಿ.ಎ. ತರಗತಿಯಲ್ಲಿ ಇದ್ದೆ. ಹಾಗೇ ಬರೀತಾ ಬಂದೆ. ಹತ್ತು ವರ್ಷದಲ್ಲಿ ಹನ್ನೊಂದು ಕಥೆಗಳನ್ನು ಬರೆದೆ. ಅವುಗಳಲ್ಲಿ ಹತ್ತನ್ನು ಸೇರಿಸಿ ಕೆಲ ಸಣ್ಣ ಕಥೆಗಳು ಅಂತ ಅಚ್ಚು ಮಾಡಿದೆ. ಹಾಗೇ ಪದ್ಯ ಬರೆದೆ. ಹಾಡು ಬರೆದೆ, ನಾವೆಲ್ಲು ಬರೆದೆ, ಉದ್ದಕ್ಕೂ ಇದೇ ದೃಷ್ಟಿ, ನಮ್ಮ ಜನಕ್ಕೆ ಒಳ್ಳೆ ಪುಸ್ತಕ ಇರಬೇಕು ಅನ್ನೋದು. ಬರೆದಿರೋದರ ಬಗೆಗೆ ನಾನು ವಿನಯದಿಂದ ಮಾತನಾಡೋದಿಲ್ಲ. ನನ್ನ ಅಪೇಕ್ಷೆ ಏನು ಅನ್ನೋದು ಮಾತ್ರ ನಾನು ಹೇಳಬಲ್ಲೆ. ನನ್ನ ಬರಹ ಅನ್ನೋದು ಆ ಬಗೆಯ ಬರೆಹದಲ್ಲಿ ಅತ್ಯುತ್ತಮ ಆಗಬೇಕು ಅಂತ ನನ್ನ ಬಯಕೆ. ಆಯಿತೇ, ಇಲ್ಲವೇ ಅದನ್ನು ನೀವು ಹೇಳಬೇಕು. ನನ್ನ ಮುಖ್ಯ ಉದ್ದೇಶ ನಮ್ಮ ಜನಕ್ಕೆ ಓದನ್ನು ಒದಗಿಸುವುದು. ನಾನು ಮನೆಯಲ್ಲಿ ಕಥೆ ಹೇಳುವ ತಾಯಿ. ತಾಯಿ ತನ್ನ ಮಕ್ಕಳಿಗೆ ಒಳ್ಳೆಯದು ತಂದುಕೊಟ್ಟಂತೆ, ನನ್ನ ಮನೆಯ ಮಕ್ಕಳಿಗೆ ಒಳ್ಳೆಯದು ಸಿಗಬೇಕೂಂತ ನನ್ನ ಅಪೇಕ್ಷೆ, ಸಾಹಿತ್ಯ ಯಾಕೆ ಬರೆಯಬೇಕು? ತನ್ನ ಜನರಿಗೆ ಒಳ್ಳೆಯ ವಿಷಯ ಸಿಗಬೇಕು ಅಂತ ಅಲ್ಲವೇ? ನನ್ನ ಚಿತ್ರ ಚೆನ್ನಾಗಿರಬೇಕು ಅಂತ ನನ್ನ ಆಶೆ, ಕೆಲವರು ಚೆನ್ನಾಗಿದೆ ಅಂತಾರೆ. ಕೆಲವರು ಚೆನ್ನಾಗಿಲ್ಲ ಅಂತಾರೆ. ಎರಡೂ ಮಾತು ಸರಿಯೆ. ಅದು ಅವರವರ ಮನಸ್ಸು.’ ಮಾತಿನ ಕೊನೆಗೆ ಅವರು ತಮ್ಮ ಸಹಜವಾದ ಮುಗುಳುನಗೆಯನ್ನು ತುಂಬಿಕೊಂಡಿದ್ದರು.’

ಹೀಗೆ ಬೇರೆ ಬೇರೆ ನಿಲುವುಗಳನ್ನು ಸಾಹಿತ್ಯದಿಂದ ಅಪೇಕ್ಷಿಸಲು ಅನುಭವ ಬೇರೆ ಬೇರೆಯಾಗಿರುವುದು ಕಾರಣ ಆಗಿರಬಹುದೇ?

‘ಇರಬೇಕು, ಅನುಭವ ಬೇರೆ ಇರತ್ತೆ, ನಿರೀಕ್ಷೆ ಬೇರೆ ಇರುತ್ತೆ, ಕೆಲವರಿಗೆ ಸಿಹಿ ಆಸೆ, ಕೆಲವರಿಗೆ ಉಪ್ಪು ಆಸೆ ಅಲ್ಲವೆ?

ಮಾತಿನ ನಡುವೆ ವಾಲ್ಮೀಕಿಯ ವಿಚಾರ ಬಂದಿತು. ಅಲ್ಲದೆ ಮಾಸ್ತಿಯವರು ರಾಮಾಯಣವನ್ನು ತಮ್ಮ ಬರೆಹದ ಬದುಕಿನ ಉದ್ದಕ್ಕೂ ಒಂದಲ್ಲ ಒಂದು ವಿಧದಲ್ಲಿನಮಗೆ ತಿಳಿಸಿ ಹೇಳುತ್ತಾ ಬರುತ್ತಿದ್ದಾರೆ. ಅವರ ಈಚಿನ ಪುಸ್ತಕವೂ (ಮುದ್ರಣದಲ್ಲಿ ಇರುವುದು) ಕೂಡ ಅದೇ ಕ್ರಮದ್ದು. ಹಾಗಾಗಿ ಕೇಳಿದೆ. ‘ಆ ಕೃತಿಯಲ್ಲಿ ನಿಮಗೆ ವೈಯಕ್ತಿಕವಾದದ್ದಕ್ಕಿಂತಲೂ, ನಮ್ಮ ಜೀವನ ಕ್ರಮಕ್ಕೆ ಸೂಚಿಯಾಗಬಲ್ಲ ಯಾವ ಅರ್ಥ ಕಂಡಿದೆ?”

ಉಲ್ಲಸಿತರಾಗಿ ಮಾತನಾಡತೊಡಗಿದರು. ‘ಯಾವ ಅರ್ಥ ಬೇಕು ನಮಗೆ ವ್ಯಕ್ತಿ ಜೀವನಕ್ಕೊಂದು ಧೈಯ ಬೇಕು. ನಮ್ಮ ದೇಶಕ್ಕೊಂದು ಧೈಯ, ಮಾದರಿ ರಾಮಚಂದ್ರ, ದೊಡ್ಡ ಮನುಷ್ಯನಾಗಿರಬೇಕು; ಸ್ವಾರ್ಥ ಕೂಡದು, ಇನ್ನೊಬ್ಬರ ಕಷ್ಟದಲ್ಲಿ ಸಹಾಯವಾಗಬೇಕು; ತನ್ನ ಕಷ್ಟ ಸಹಿಸಬೇಕು; ನಮ್ಮ ರಾಷ್ಟ್ರದ ಆದರ್ಶ ಇದು. ಧರ್ಮರಾಯ, ರಾಮಚಂದ್ರ ಭರತವರ್ಷದ ಆದರ್ಶ ಪುರುಷರು, ದೊಡ್ಡವರಾಗಿ. ಬಾಳಬೇಕಾದರೆ ಏನು ಮಾಡಬೇಕು? ರಾಮನ ಹಾಗೆ ಇರಬೇಕು. ಅನ್ಯಾಯವಾಗಿ ರಾಜ್ಯವನ್ನು ಆಕ್ರಮಿಸಿಕೊಂಡ ಜ್ಞಾತಿಗೆ ಎಲ್ಲ ನೀನೇ ಇಟ್ಟುಕೊಳ್ಳೋ ಅಪ್ಪ, ನನಗೆ ಐದು ಗ್ರಾಮಗಳು ಕೊಡು’ ಅಂತ ಕೇಳೋ ಧರ್ಮರಾಯನ ತಾಳ್ಮೆ ಇರಬೇಕು. ದೇಶ ಸಮಾಧಾನವಾಗಿ ಇರಬೇಕು ಅಂತ ಇಷ್ಟ ಇದ್ದರೆ ನಿಸ್ವಾರ್ಥ ಇರಬೇಕು. ಮತ್ತು ದೊಡ್ಡತನ ಇರಬೇಕು. ಅವನೇನು ಭೀತಿಯಿಂದ ಕೇಳಿದನೆ? ಇಲ್ಲ. ನನ್ನ ರಾಜ್ಯ ನನ್ನದು, ನೀನು ತಗೊಂಡಿದೀಯಾ, ಬೇಕಾದರೆ ಅರ್ಧ ನೀನು ಇಟ್ಟುಕೋ. ಹೀಗೆ ಹೇಳಿಯೇನು ಆದರೆ ಅರ್ಧ ಸಾಲದು ಅಂತೀಯಲ್ಲಾ ಐದು ಗ್ರಾಮಗಳಾದರೂ ಕೊಡು’ ಅಂದ. ಎದುರಾಳಿ ‘ಕೊಡೋದಿಲ್ಲ’ ಅಂದ. ಈ ಕತೆಯ ಉದ್ದೇಶ ಏನು? ನಿಸ್ವಾರ್ಥ ಒಳ್ಳೆಯದು. ಸ್ವಾರ್ಥ ಕೆಟ್ಟದು. ಸ್ವಾರ್ಥ ಅಣ್ಣತಮ್ಮಂದಿರಲ್ಲಿ ಜಗಳ ತಂದಿತು ಲಂಕೇಲಿ, ಕಿಷ್ಠಿಂದೆಯಲ್ಲಿ. ನಿಸ್ವಾರ್ಥ ದೊಡ್ಡದು, ಎಲ್ಲಿಲ್ಲದ ಜೀವನ ಸೌಂದರ್ಯ ತಂದಿತು. ಅಯೋಧ್ಯೆಲಿ. ನೀ ತಗೋ ಅಂತ ಅವನು, ನೀ ತಗೋ ಅಂತ ಇವನು. ಹ್ಯಾಗೆ ಬದುಕಿದರು ಭರತ-ರಾಮ! ನನ್ನದು ಅಂದ ಕಿಷ್ಕಂಧೇಲಿ; ಏನಾಯ್ತು ಅಲ್ಲಿ? ಲಂಕೇಲಿ ಏನಾಯ್ತು? ಯಾಕೆ ಪ್ರಾಣ ಕಳಕೋತೀಯೋ ಅಂದ ವಿಭೀಷಣ, ಬಿಟ್ಟು ಹೊರಗೆ ಬಂದ. ಲೋಕದಲ್ಲಿ ಒಳ್ಳೆಯದು ಆಗೋದು ನಿಸ್ವಾರ್ಥದಿಂದ; ಕೆಡಕು ಆಗೋದು ಸ್ವಾರ್ಥದಿಂದ ಲೋಕಾ ನಡೆಸೋದು ಒಳ್ಳೇತನ. ಹಾಗೇ ಕೆಡಸೋದು ಕೂಡ ಸಾಧ್ಯ. ತುಂಬ ಒಳ್ಳೆಯವನಾಗಿದ್ದ ಭರತ ಕೆಟ್ಟವನಾಗಿದ್ದರೆ? ರಾಜ್ಯಾನೆಲ್ಲ ಇಟ್ಟುಕೊಂಡಿದ್ದರೆ? ಒಳ್ಳೆಯತನ ಲೋಕಾನ ಕೆಡಿಸಿಬಿಡಬಹುದು. ಹೀಗೆ ಧರ್ಮರಾಯನ ಒಳ್ಳೆಯತನ ಕೆಡಿಸಲಿಲ್ಲವೇ?’

‘ಅದು ಹೇಗೆ?’ ಕೊಂಚ ವಿವರಣೆ ಬಯಸಿ ಕೇಳಿದೆ.

ಹೌದು “ಯುದ್ಧಸ್ಯ ವಿಗತ ಜ್ವರಃ” ಅಂತ ಗೀತೆ ಸಾರುತ್ತೆ, ಗೀತೆ ಯಾಕೆ ಬಂತು ಮಹಾಭಾರತದ ಮಧ್ಯದಲ್ಲಿ – ಧರ್ಮರಾಯ ಮಾಡಿದ್ದು ಸರಿಯಲ್ಲ ಅಂತ ಹೇಳೋಕೆ, ದ್ವೇಷ ಬೇಡ; ಆದರೆ ನ್ಯಾಯಕ್ಕಾಗಿ ಬಡಿದಾಡಬೇಕು ನೀನು. ನ್ಯಾಯ ಉಳಿಯೋದಾದರೂ ಹೇಗೆ ಮಹಾ ಒಳ್ಳೆಯವನಾಗಿದ್ದೇನೆ ಅಂತ ಎಲ್ಲರಿಗೂ ದಾರಿ ಬಿಟ್ಟು ಬಿಟ್ಟರೆ? ದುಷ್ಟರು ಮಗುವನ್ನು ಕೊಲ್ಲುತ್ತೇನೆ ಅಂತ ಬಂದಾಗ ತಾಯಿ ಅದನ್ನು ಕಾಪಾಡಬೇಕು. ಸುಮ್ಮನೆ ಇದ್ದುಬಿಟ್ಟರೆ ತಾಯಿಯಾಗಿ ಮಾಡಿದ್ದೇನು? ಒಳ್ಳೆತನ ಅನ್ನೋದು ಮುಟ್ಟಾಳತನ ಆಗಬಾರದು. ಹೊಣೆ ಬಿಡಬಾರದು. ಕೇಳಿದ್ದೇವೆ. ಪ್ಯಾಸಿವ್ ರೆಸಿಸ್ಟನ್ಸ್ ಅಂತ. ನಾನು ಅನೇಕ ವೇಳೆ ಹೇಳಿದ್ದೇನೆ. ಇದು ನಮಗೆ ಸರಿಯಲ್ಲ ಅಂತ. ಇದು ಧರ್ಮ ಅಲ್ಲ, ಯುದ್ದ ಮಾಡಬೇಕು; ದ್ವೇಷ ಇರಬಾರದು. ಯುದ್ಧ ಮಾಡದೇ ಇದ್ದರೆ ದೇಶದಲ್ಲಿ ಏಕೆ ಎಲ್ಲೂ ಒಳ್ಳೆಯದೇ ಉಳಿಯೋದಿಲ್ಲ.’

ಮುಂದಿನ ಪ್ರಶ್ನೆ ಕೊಂಚ ನನ್ನ ಆಸಕ್ತಿಯ ವಿಷಯವನ್ನು ಕುರಿತದ್ದು ಆಗಿತ್ತು. ನಮ್ಮ ನವೋದಯ ಕಾಲದ ಬರೆಹಗಾರರಲ್ಲಿ ಬಹುಮಂದಿಗೆ ಕನ್ನಡ ಮನೆಯ ಮಾತಾಗಿರಲಿಲ್ಲ. ಆದರೂ ಅದು ಅವರ ಅಭಿವ್ಯಕ್ತಿಯ ಭಾಷೆಯಾಗಿ ಒದಗಿ ಬಂತು. ಎರಡು ಭಾಷೆಯ ಸಂದರ್ಭದ ಬಗೆಗೆ ಈಗ ನಮ್ಮಲ್ಲಿ ಚರ್ಚೆ ನಡೆಯುತ್ತಿರುವಾಗ ಈ ವಿಷಯದ ಬಗೆಗೆ ಮಾಸ್ತಿಯವರ ಅನುಭವ ಏನೆಂಬುದನ್ನು ತಿಳಿಯುವ ಉದೇಶವಿತ್ತು ನನಗೆ. ಹಾಗೆ ಕೇಳಿದೆ.

ನನ್ನ ಮಾತು ಕನ್ನಡ ಅಲ್ಲ ಅಂದರೆ ಏನು? ಮನೇಲಿ ಕನ್ನಡ ಆಡಲ್ಲ ಅಂತಾನೆ? ಅದರೇನು? ಮಿಕ್ಕಿದ್ದೆಲ್ಲಾ ಕನ್ನಡಾನೇ. ನನ್ನ ಭಾಷೆ ಯಾವುದು ಅಂದರೆ ಕನ್ನಡ ಅನ್ನತೇನೆ. ತಮಿಳು ಮನೆಮಾತು. ಮನೇಲಿ ಮಾತನಾಡುವಾಗ ತಮಿಳು ಮಾತಾಡತೇನೆ. ಮಿಕ್ಕಿದಾಗ ಅದು ನನ್ನ ಭಾಷೆ ಅಲ್ಲ. ನನ್ನ ತಾಯಿ ಆಡಿದ ಮಾತು ತಮಿಳು ಮಾತ್ರ ಅಲ್ಲ. ಅವರಿಗೆ ಕನ್ನಡ ಕೂಡ ಬರುತ್ತಿತ್ತು. ನಾನು ಕನ್ನಡದ ಒಳಗೆ ಬೆಳೆದವನೆ, ನನ್ನ ಜನವೆಲ್ಲಾ ಕನ್ನಡಿಗರೇನೆ. ಹೊಂಗೇನಹಳ್ಳಿಲಿ ಬೆಳೆದೆ, ಮಳವಳ್ಳಿಲಿ ಬೆಳೆದೆ. ಕೃಷ್ಣರಾಜಪೇಟೇಲಿ ಬೆಳೆದೆ. ಎಲ್ಲಾ ಕಡೇನೂ ಕನ್ನಡಾನೆ ಇತ್ತು’

ನನ್ನ ಪ್ರಶ್ನೆಯನ್ನು ಸ್ವಲ್ಪ ಸ್ಪಷ್ಟಪಡಿಸುವ ಉದ್ದೇಶದಿಂದ “ಈಗ ಬರೆಯೋ ಲೇಖಕನಿಗೆ ಅದರಲ್ಲೂ ಕನ್ನಡ ಮನೆಯ ಮಾತಾಗಿರುವವರಿಗೆ ಮನೇಲಿ ಒಂದು ಬಗೆಯ ಕನ್ನಡ, ಶಾಲೆಯಲ್ಲಿ ಒಂದು ಬಗೆಯ ಕನ್ನಡ, ಹೀಗೆ ಎರಡು ರೂಪಗಳು ಸಿಕ್ಕುತ್ತಿವೆ. ಇದು ಅವರಿಗೆ ಏನು ಮಾಡುತ್ತಿದೆಯೋ ಅದು ಹಾಗಿರಲಿ: ನಿಮಗೆ ಈ ಪರಿಸ್ಥಿತಿ ಇರಲಿಲ್ಲ ಅಲ್ಲವೇ’ ಅಂದೆ.

‘ಮೈಸೂರು ದೇಶದಲ್ಲಿ ಬಾಳೋ ಹುಡುಗರಿಗೆ ಈ ಕನ್ನಡವೆಲ್ಲಾ ಒಂದೇ. ನಮಗೆಲ್ಲಾ ಸಿಕ್ಕಿದ್ದು ಒಂದೇ ಕನ್ನಡ. ನಾವು ಬೇರೆ ಭಾಷೆ ಕೇಳಿದ್ದು ಎಷ್ಟು? ಬೇಂದ್ರೆ ಮನೇಲಿ ಕೇಳಿದ್ದು ಎಷ್ಟು? ವೆಂಕಟನಾರಣಪ್ಪನವರು, ನಮ್ಮ ಮೇಷ್ಟು, ತೆಲುಗು ಎಷ್ಟು ಕೇಳಿದರು? ಹಾಗೆ ವೆಂಕಣ್ಣಯ್ಯನವರು? ಇವರೆಲ್ಲಾ ಏನು ಮಾತಾಡ್ತಾ ಇದ್ದರು? ಯಾವಾಗಲೂ ಕನ್ನಡಾನೇ ಮಾತನಾಡುತ್ತಾ ಇದ್ದರು. ಅವರು ಕೇಳಿದ್ದು ಕೂಡ ಬೀದಿ ಕನ್ನಡಾನೇ. ಓದೋ ಹುಡುಗನಿಗೆ ಶಾಲೆ ಕನ್ನಡ ಎಷ್ಟು ಹೊತ್ತು ಇರುತ್ತೆ. ಯಾರಾದರೂ ನನ್ನನ್ನು ಹೊರಗಿನವರು, ಕನ್ನಡ ದೇಶದಲ್ಲಿ ನೆಲೆ ನಿಂತವನು ಅಂದರೆ ಅವರಿಗೆ ತಿಳಿವಳಿಕೆ ಇಲ್ಲ ಅನ್ನುತ್ತೇನೆ…”

ಪ್ರಶ್ನೆಯನ್ನು ನಾನು ಖಚಿತವಾಗಿ ಕೇಳಲಿಲ್ಲವೆನ್ನಿಸಿತು. ನಾನು ಆ ಉದ್ದೇಶದಲ್ಲಿ ಕೇಳಲಿಲ್ಲ…’

“ಮುಖ್ಯವಾದ ಮಾತು ಇದು. ನಾನು ಒಬ್ಬ ತಮಿಳು ಮನುಷ್ಯ, ಕನ್ನಡದಲ್ಲಿ ಬರೆಯುತ್ತಿದ್ದೇನೆ ಅನ್ನುವುದು ಸರಿಯಲ್ಲ. ನಾನು ಕನ್ನಡಿಗನೆ. ನಾನು ಇದನ್ನು ಅನೇಕ ಸಂದರ್ಭದಲ್ಲಿ ಹೇಳಿದ್ದೇನೆ. ನಾನು ತಮಿಳು ಕನ್ನಡಿಗ, ಬೇಂದ್ರೆ ಮರಾಠಿ ಕನ್ನಡಿಗ, ವೆಂಕಣ್ಣಯ್ಯ ತೆಲುಗು ಕನ್ನಡಿಗ, ಮಿರ್ಜಾ ಇಸ್ಮಾಯಿಲ್ ಉರ್ದು ಕನ್ನಡಿಗ.’

ಮುಂದಿನ ಪ್ರಶ್ನೆ: ‘ನೀವು ರಾಷ್ಟ್ರೀಯ ಚಳವಳಿ ನಡೀತಿದ್ದ ಕಾಲದಲ್ಲಿ ಅದನ್ನು ಗಮನಿಸುತ್ತ ಇದ್ದವರು. ಅದರ ಬಗೆಗೆ ನಿಮ್ಮ ಪ್ರತಿಕ್ರಿಯೆ ಯಾವ ತರಹದ್ದಾಗಿತ್ತು ಅನ್ನೋದನ್ನ ತಿಳಿಯುವ ಆಸಕ್ತಿ ನನಗೆ.’

‘ರಾಷ್ಟ್ರಕ್ಕೆ ಸ್ವಾತಂತ್ರ್ಯ ಬೇಕು ಅಂತ ಎಲ್ಲರಿಗೂ ಅನ್ನಿಸಿದ ಹಾಗೆ ನನಗೆ ಅನ್ನಿಸುತ್ತಾ ಇತ್ತು. ನಾನು ಪ್ಯಾಸಿವ್ ರೆಸಿಸ್ಟನ್ಸ್ಗೆ ಹೋಗಲಿಲ್ಲ. ನನಗೆ ಅದರಲಿ ನಂಬಿಕೆ ಇರಲಿಲ್ಲ. ಸೈನ್ಯ ಕಟ್ಟೋರು ಇದ್ದಿದ್ದರೆ ನಾನು ಹೋಗಿ ನಿಲ್ಲುತ್ತಿದ್ದೆನೇನೋ ಹೇಳಲಾರೆ. ಆದರೆ ಕೊಲ್ಲೋದಾದರೆ ಕೊಲ್ಲು ಅನ್ನೋದು ನನಗೆ ಬರಲಿಲ್ಲ. ಗಾಂಧೀಜಿ ಸ್ವಾತಂತ್ರ್ಯ ಪಡೆದುಕೊಳ್ಳೋದಕ್ಕೆ ಒಂದು ಸಂಸ್ಥೆಯನ್ನು ಏರ್ಪಾಡು ಮಾಡಿದರು. ಅದು ಕಾಂಗ್ರೆಸ್ಸು, ಸೆಕೆಂಡ್ ವರ್ಲ್‌ವಾರ್ ಆಗದೇ ಇದ್ದಿದ್ದರೆ, ಕೊನೆಯಲ್ಲಿ ಇಂಗ್ಲೆಂಡಿಗೆ ಅಷ್ಟು ಕಷ್ಟ ಆಗದೇ ಇದ್ದಿದ್ದರೆ, ಅವರು ಸ್ವಾತಂತ್ರ್ಯ ಕೊಡತಾ ಇರಲಿಲ್ಲ. ಮಹಾಯುದ್ಧ ಮುಗೀತು ಪರಂಗಿಯವನಿಗೆ ಇಲ್ಲಿ ಉಳಿಯುವ ತ್ರಾಣ ಇರಲಿಲ್ಲ. ಅವನ ದೇಶದ ಕೆಲಸಕ್ಕೆ ಜನ ಸಾಲುತ್ತಿರಲಿಲ್ಲ. ಅವನು ವಿಧಿ ಇಲ್ಲದೆ ಈ ದೇಶವನ್ನು ಬಿಟ್ಟು ಹೋಗಬೇಕಾಯಿತು. ಬಿಟ್ಟು ಹೋದ.’

‘ಆ ಕಾಲದಲ್ಲಿ ಅಹಿಂಸಾ ಚಳವಳಿಗೆ ವಿರೋಧ ಇತ್ತು. ಅದರ….

‘ವಿರೋಧಿಗಳು ಏನೆಂದರು? ನಮ್ಮ ದೇಶದ ದಾರಿ ಇದಲ್ಲ. ನಮ್ಮ ದೇಶ ಏನು ಹೇಳಿದೆ? ಯುದ್ಧಸ್ಯ ವಿಗತ ಜ್ವರಃ ಅಂತ. ನನ್ನ ಮನಸ್ಸು ಹೀಗೆ ಇತ್ತು. ಆದರೆ ನಾನು ಗಾಂಧಿಯವರ ಜತೆ ನಿಂತು ಮಾತಾಡೋ ಮನುಷ್ಯನೇ? ಅಲ್ಲವಲ್ಲ. ಬರೆಯೋಕೆ? ನಾನೇನು ಪತ್ರಿಕೆ ಮನುಷ್ಯನೂ ಆಗಿರಲಿಲ್ಲ.’

ಅಲ್ಲಿಂದ ಮುಂದೆ ಇನ್ನೊಂದು ಪ್ರಶ್ನೆ : ನಮ್ಮ ಸಂಸ್ಕೃತಿಯನ್ನು ಗಮನಿಸಿದ ಹಲವರು ಹೇಳುತ್ತಾರೆ: ನಮ್ಮ ಜನಗಳು ಏನನ್ನೂ ಪ್ರಶ್ನಿಸದೆ ಒಪ್ಪಿಕೊಳ್ಳುತ್ತಾರೆ. ಇದರಿಂದ ಅವರ ಒಟ್ಟಾರೆ ಸ್ಥಿತಿಯಲ್ಲಿ ಬದಲಾಗೋದು ಕಷ್ಟ ಅಂತ. ನೀವು ಇದನ್ನ ಹೇಗೆ ಕಾಣುತ್ತೀರಿ?

‘ಜನ ಅಂದರೆ ಸಾಮಾನ್ಯ ಜನ ಅನ್ನೋದಾದರೆ ಅವರು ಎಲ್ಲೂ ಏನೂ ಮಾಡೋದಿಲ್ಲ. ಇಂಗ್ಲೆಂಡಿನಲ್ಲಿ ಏನು ಮಾಡುತಿದ್ದಾರೆ? ರಷ್ಯದಲ್ಲಿ ಏನು ಮಾಡತಾ ಇದಾರೆ? ಜರ್ಮನೀಲಿ ಏನು ಮಾಡತಾ ಇದಾರೆ? ನಮ್ಮ ಜನ ಏನು ಬಂತು, ಯಾವ ಜನವೂ ಇರೋದೇ ಹಾಗೆ, ಮೇಲೆ ಕುಳಿತ ಹತ್ತು ಜನ ದೊಡ್ಡವರು ದೊಡ್ಡತನ ಮಾಡತಾ ಇರತಾರೆ, ಉಳಿದವರು ಅವರ ಹಿಂದೆ ಹೋಗುತ್ತಾರೆ. ಯೋಚನೆ ಮಾಡದೆ ಹೋಗತಾರೆ. ಎಲ್ಲ ಜನಾನೂ ಹಾಗೇ. ಇವತ್ತು ಲೋಕಾನೇ ಹಾಗಿದೆ. ಕೆಲವರು ಯೋಚನೆ ಮಾಡೋರು, ಸರಿ ಇಲ್ಲವಲ್ಲ ಅನ್ನೋರು ನಿಂತು ಕೊಳ್ಳುತ್ತಾರೆ. ನಾವು ನಾಯಕರು ಅನ್ನುತ್ತಾರೆ. ಜನಗಳ ಪಡೆ ಕಟ್ಟತಾರೆ. ಜನಗಳನ್ನು ನಡೆಸುತ್ತಾರೆ. ನಡೆಸುತ್ತಾ ಇರೋದು ಹತ್ತು ಜನ, ಅವರ ಕ್ರಮ ಸರಿ ಅಲ್ಲ ಅನ್ನೋರು ಹತ್ತು ಜನ. ಉಳಿದವರು ಅವರ ಇವರ ಹಿಂದೆ ನಡೆಯುವವರು.’

ಕೊಂಚ ಮುಂದುವರಿದು ಹೇಳಿದೆ: ‘ಬೇರೆ ಬೇರೆ ಹಂತಗಳಲ್ಲಿ ಜನರು ಏನು ಮಾಡಿದಾರೆ ಅನ್ನೋದು.

‘ ಅವರು ಹೇಳಿದರು ‘ಇಂದಿನ ಜೀವನ ವೇದಕಾಲದಲ್ಲಿ ಇದ್ದ ಹಾಗೆ ಇದೆಯೇ? ಐದು ಸಾವಿರ ವರ್ಷದಲ್ಲಿ ಬೇರೆಯಾಗಿಲ್ಲವೆ? ಶಂಕರಾಚಾರ್ಯರು ಏನೂ ಮಾಡಲಿಲ್ಲವೇ? ರಾಮಾನುಜಾಚಾದ್ಯರು ಏನೂಮಾಡಲಿಲ್ಲವೇ? ಬಸವಣ್ಣ? ಇವರೆಲ್ಲ ಬಹಳ ಮಾಡಿದರು. ಜನಜೀವನ ಬೇರೆ ಮಾಡಬೇಕು ಅಂತ ಕಷ್ಟಪಟ್ಟಿದ್ದಾರೆ.

ನಾನು ಮತ್ತೆ ‘ಜನರು…’ ಎನ್ನುತ್ತ ನಡುವೆ ಹೋದೆ. ತಡೆದರು.

“ಜನರು ಮಾಡೋದಿಲ್ಲಪ್ಪ. ನಾನು ಹೇಳತೇನಲ್ಲಾ ದೊಡ್ಡವನು ಹೇಳಿದ ಹಾಗೆ ಹಿಂದೆ ಹೋಗುತ್ತಾರೆ. ಹೋಗಿದ್ದಾರೆ. ಮೈಸೂರು ದೇಶದಲ್ಲಿ ಇಷ್ಟು ಜನ ಶ್ರೀವೈಷ್ಣವರು ಇದ್ದಾರೆ. ಯಾರೋ ಗುರುಗಳು ಬಂದರು. ಇದು ಒಳ್ಳೆಯದು ಅಂದರು. ನಾಮ ಹಚ್ಚಿಕೊಳ್ಳಿ ಅಂದರು. ಕೇಳಿದವರು ನಿಂತು ನಾಮ ಹಚ್ಚಿಸಿಕೊಂಡು ಶ್ರೀವೈಷ್ಣವರಾದರು. ವಿಭೂತಿ ಹಚ್ಚತೀನಿ ಅಂತ ಇತರರು ಬಂದರು. ಅದು ವೀರಶೈವ ಮತ ಅಂತ ಆಯಿತು. ಜನ ಇವರ ಮಾತು ಅವರ ಮಾತು ಹೌದು ಎಂದರು. ಅವರ ಹಿಂದೆ ನಡೆದರು. ಇವತ್ತು ಯಾರೋ ಒಬ್ಬರು ಹಾಗೆ ಸಾಯಿಬಾಬಾ ಅಂತ ಬರತಾರೆ. ಅದ್ಭುತಗಳನ್ನು ಮಾಡತಾರೆ. ಅವರ ಹಿಂದೆ ಸಾವಿರ ಜನ ಹೋಗುತ್ತಾರೆ: ಕಾಲಕಾಲದಲ್ಲಿ ಎಷ್ಟೋ ಮಾರ್ಪಾಟು ಆಗಿದೆ. ಆಗತಾ ಇದೆ, ಮುಂದಕ್ಕೂ ಆಗುತ್ತೆ, ಲೋಕ ಇದ್ದ ಹಾಗೆ ಇಲ್ಲವಲ್ಲ?’

ಮಾಸ್ತಿಯವರ ‘ಜೀವನ’ ಪತ್ರಿಕೆಯಲ್ಲಿ ಬರೆಯುತ್ತಿದ್ದ ರಾಜಕೀಯ ಧೋರಣೆಗಳ ಬಗೆಗೆ ಒಂದು ಪ್ರಶ್ನೆ ನನ್ನ ಪಟ್ಟಿಯೊಳಗಿತ್ತು ಕೇಳಿದೆ. ‘ಆ ಟಿಪ್ಪಣಿಗಳಲ್ಲಿ ಕಂಡುಬರುತ್ತಿದ್ದ ಒಂದು ಬಗೆಯ ಉದಾರವಾದಿ ಧೋರಣೆ ಆ ಹೊತ್ತಿನ ರಾಜಕೀಯಕ್ಕೂ ಹೊಂದುತ್ತೆ ಅಂತ ತಿಳಿಯುತ್ತೀರಾ?” ತಕ್ಷಣ ಕೇಳಿದರು. ‘ಉದಾರವಾದಿ ಅಂದರೆ?’ ಅದು ಅವರು ಒಡ್ಡಿದ ಬಲೆ. ನಾನು ಥಟ್ಟನೆ ಉತ್ತರಿಸಿದೆ. ಲಿಬರಲ್ ಅವರು ಮತ್ತೆ ಕೇಳಿದರು ‘ಹಾಗೆಂದರೆ?’ ನಾನು ಉಪಯೋಗಿಸಿದ ಪದ ಅವರಿಗೆ ಸರಿ ಕಂಡಿರಲಿಲ್ಲ. ಅದು ನನಗೆ ಗೊತ್ತಾಯಿತು. ಸುಮ್ಮನೆ ಕುಳಿತೆ. ಅವರೇ ಮುಂದುವರಿದರು.

ಇಂಗ್ಲಿಶ್ ಪದ ಲಿಬರಲ್ ಅನ್ನೋದು ಯಾಕೆ ಬಂತು? ಅದನ್ನೇ ನಾನು ಕೇಳತೇನೆ. ಅದು ನಮ್ಮ ಪದ ಅಲ್ಲವಲ್ಲ. ಮನೆಮಾತು ಕನ್ನಡ ಆದವರು ಅದನ್ನ ಕನ್ನಡದಲ್ಲಿ ಹೇಳೋಕೆ ಸಾಧ್ಯ ಆಗಬೇಕಲ್ಲ. ಹೇಳಿ ಯಾಕೆ ಆಗೋಲ್ಲ?’ ಮತ್ತೆ ನನ್ನ ಉತ್ತರವಿರಲಿಲ್ಲ. ಅವರು: “ಹೇಳಿ” ಅಂದರು.

ನಾನು ‘ಚರ್ಚೆಯಲ್ಲಿ ಅಂಥ ಮಾತುಗಳನ್ನು ಬಳಸುತ್ತೇವೆ. ಅದು ರೂಢಿಯಾಗಿ ಹೋಗಿದೆ. ಅದು ತಪ್ಪು ಅಂತ…’

‘ತುಂಬಾ ತಪ್ಪು. ನಮ್ಮ ಅನುಭವ ಅಲ್ಲ ಅದು. ಅದನ್ನು ಹೊರಗಿನಿಂದ ತಕ್ಕೊಂಡು ಪ್ರತಿ ಮಾಡುತ್ತಾ ಇದ್ದೇವೆ. ನಮ್ಮ ಮಾತು ಅನುಕರಣ ಆಗಿಬಿಟ್ಟಿದೆ. ಹೊರಗಿನ ಮಾತನ್ನು ಪ್ರತಿ ಮಾಡುತ್ತಾ ಇದ್ದೇವೆ. ಒಳಗೆ ಅಲ್ಲ. ಮುಖವಾಡ ಮಾಡಿಕೊಂಡು ಬಿಟ್ಟಿದೇವೆ ಶಬ್ದಗಳನ್ನು, ಲಿಬರಲ್ ಶಬ್ದದ ಅರ್ಥ ಹೇಳಿ ನೋಡೋಣ. ನಮ್ಮ ಮಾತಲ್ಲಿ ಹೇಳಿ.’

ನಾನು ಇನ್ನು ಪದವನ್ನು ಕುರಿತು ಮುಂದುವರಿಯುವುದು ಸಾಕು ಎಂದುಕೊಂಡು ಹೀಗೆ ಕೇಳಿದೆ‘ಆ ಟಿಪ್ಪಣಿಗಳಲ್ಲಿ ನೀವು ತಾಳುತ್ತಿದ್ದ ಧೋರಣೆಯೊಂದು ಇದ್ದಿತಲ್ಲ. ಅದು ಈಗಲೂ ರಾಜಕೀಯದ ಸಂದರ್ಭಕ್ಕೆ ಹೊಂದುತ್ತೆ ಅಂತ ನೀವು ಭಾವಿಸುತ್ತಿರಾ?’

ಅವರೆಂದರು: ‘ರಾಜಕೀಯದಲ್ಲಿ ಮಾತ್ರ ಅಲ್ಲ ಯಾವಾಗಲೂ ಒಂದೇ ದಾರಿ ಸರಿಯಾದದ್ದು. ಸಮಾಧಾನವಾಗಿ ಇರಬೇಕು. ನನ್ನದೇ ಮಾತು ಅಂತ ಹಠ ಮಾಡಬಾರದು. ಎದುರಾಳಿಯದು ತಪ್ಪು ಅಂತ ಅಹಂಕಾರ ಮಾಡಬಾರದು. ಕೆಟ್ಟ ಮಾತು ಆಡಬಾರದು, ಏನು ಹೇಳತಿ ಹೇಳಪಾ’ ಅನ್ನಬೇಕು. ನೀನು ನನ್ನ ಸೋದರ.ನನ್ನ ಸ್ನೇಹಿತ, ಲೋಕದಲ್ಲಿ ನೀನು ನಾನೂ ಜೊತೆ. ಇಬ್ಬರೂ ಕಾಡಿನಲ್ಲಿ ಇದ್ದೇವೆ. ಹೊರಗೆ ಹೋಗೋದಕ್ಕೆ ದಾರಿ ಕಾಣಬೇಕು. ನಿನಗೆ ಯಾವುದು ಕಾಣುತ್ತೆ ಹೇಳು ಯೋಚನೆ ಮಾಡೋಣ. ಯಾರಿಗೆ ಏನು ತೋರುತ್ತೋ ಹೇಳೋಣ, ಕೇಳೋಣ, ಈ ಸಮಾಧಾನದ ಹೊರತು ಬೇರೆ ದಾರಿ ಇಲ್ಲವೇ ಇಲ್ಲ. ಧರ್ಮದಲ್ಲೇ ಆಗಲಿ. ರಾಜಕೀಯದಲ್ಲೇ ಆಗಲಿ, ದಿನದ ಬಾಳೆಯಲ್ಲೇ ಆಗಲಿ ಯಾವ ಕೆಲಸದಲ್ಲೂನೂ ಜೊತೆಯಲ್ಲಿರೋ ಜನರೊಂದಿಗೆ ವಿಶ್ವಾಸವಾಗಿ ನಡಕೊಳ್ಳೋದು ಒಳ್ಳೇದಾರಿ. ಯಾವುದು ಒಳ್ಳೆಯದು ಅಂತ ವಿಚಾರ ಮಾಡೋದು; ಒಳ್ಳೆ ನಿರ್ಣಯ ಮಾಡೋದು; ಅದರಂತೆ ನಡೆಯೋದು. ಬದುಕುವ ದಾರಿ ಇದೊಂದೇ ಬೇರೇದು ಇಲ್ಲವೇ ಇಲ್ಲ. ಉದಾರವಾದವೋ ಮತ್ತಾವದಾದರೂ ವಾದವೋ ಗೊತ್ತಿಲ್ಲ ನನಗೆ. ಸಮಾಧಾನಿಯಾಗಿ ದೊಡ್ಡವನಾಗಿ ಬದುಕಬೇಕು ಮನುಷ್ಯ. ದೊಡ್ಡವನಾಗೋಕೆ ಒಳ್ಳೆಯವನಾಗೋಕೆ ದಾರಿ ಏನಿದೆ ಅದನ್ನು ಕಾಣಬೇಕು.. ಪರಂಗಿಯವರ ಮಾತು ನನಗೆ ಬೇಕಿಲ್ಲ. ಹೊರಗಿನ ಮಾತು ಯಾಕೆ ಬೇಕು? ನಿಮ್ಮ ಮನಸ್ಸಿನಲ್ಲಿ ಭಾವನೆ ಇದ್ದರೆ ಅದಕ್ಕೆ ಹೆಸರು ಇಲ್ಲವೆ? ನಮ್ಮ ಮಕ್ಕಳಿಗೆ ನಾವು ಅಂಡ್ರು, ಜಾನ್ ಅಂತ ಹೆಸರಿಡಲಿಲ್ಲವಲ್ಲ. ನಾವು ಕಿಟ್ಟು, ರಾಮು, ಲಲಿತ, ಸರೋಜಿನಿ, ಅಂತ ಇವೆಯಲ್ಲಿ ಹೆಸರುಗಳು ನೂರು, ಅವನ್ನು ತಾನೇ ಇಡೋದು? ಅದಕ್ಕೆ ಯಾಕೆ ಬೇರೆ ಹೆಸರು? ಸ್ವತಂತ್ರವಾಗಿ ಬಾಳೋಕೆ ಯೋಗ್ಯತೆಯೇ ಇಲ್ಲವೇ ನಮಗೆ? ನಮ್ಮ ಅನುಭವ ಹೇಳಿ, ಹೊರಗಿನ ಜನರ ಮಾತನ್ನು ಕಟ್ಟಿಕೊಂಡು ಅವರ ಹಾಗೆ ಮಾತಾಡೋದು ನನಗೆ ಬೇಕಿಲ್ಲ. ಅದು ಅವರ ಮಾತು ಅವರು ಆಡುತ್ತಾರೆ. ಅವರ ಸೀಮೆ ಗಾಳಿ ಬೇರೆ. ಅವರ ಸೀಮೆ ಬಿಸಿಲು ಬೇರೆ. ಅವರ ಬಾಳೆ ಬೇರೆ. ನಮ್ಮದು ಬೇರೆ. ನಾವು ಇಲ್ಲಿಯ ಮಾತನ್ನು ಆಡಬೇಕು. ನಮ್ಮ ಜನ ಬಾಳಲೇ ಇಲ್ಲವೆ? ಪರಂಗಿಯವರನ್ನು ನೋಡಿಕೊಂಡೇ ಬಾಳಿದರೆ ಯಾವಾಗಲೂ? ಜನ ನಡೀತಾ ಇತ್ತು. ರಾಮನ ರಾಜ್ಯಭಾರ ಚೆನ್ನಾಗಿತ್ತು ಅಂತ ಹೇಳಿದ್ದಾರೆ. ಚೆನ್ನ ಆದದ್ದು ಬೇರೆಯವರಂತೆ ಇದ್ದದ್ದರಿಂದ ಅಲ್ಲ. ಇವತ್ತು ಯಾಕೆ ಪರಂಗಿಯವರ ವಿಚಾರ ನಮಗೆ? ಅವರು ಮಾಡಿದ್ದರಲ್ಲಿ ಒಳ್ಳೆಯದು ಇದ್ದರೆ ಅದರಂತೆ ಮಾಡೋಣವಂತೆ. ಆದರೆ ನಮ್ಮ ದಾರಿ ಯಾವುದು ಅಂತ ನೋಡಿ ನಾವು ಅದನ್ನು ಹಿಡಿಯಬೇಕು. ಅವರು ಮಾಡುತ್ತಾ ಇರೋದೆ ಚೆನ್ನಾಗಿದೆ ಅಂತ ಕಂಡರೆ ಹಾಗೇ ಮಾಡಬಹುದು. ನಮ್ಮ ದಾರಿ ನಾವು ಕಂಡುಕೊಂಡು ಅದನ್ನು ಹಿಡೀಬೇಕು. ಯೋಚನೆ ಮಾಡಬೇಕು ಅವರು ಮಾಡಿದರು ಅಂತ ವಿಚಾರ ಕೂಡ ನಾವು ಮಾಡುತ್ತೇವೆ ಎನ್ನೋದು ಸರಿಯಲ್ಲ.’

ಇನ್ನೊಂದು ಪ್ರಶ್ನೆ ತೆಗೆದೆ: ಮಾಸ್ತಿಯವರು ಅಧಿಕಾರಿಯಾಗಿದ್ದವರು. ಈ ಹೊತ್ತಿನ ದಿನಗಳಲ್ಲಿ ಸಮಾಜದಲ್ಲಿ ಆಗುವ ಬದಲಾವಣೆಗಳಿಗೆ, ಬೆಳೆದು ಭದ್ರವಾಗಿ ನಿಂತಿರುವ ಅಧಿಕಾರ ವರ್ಗ, ಈ ಬದಲಾವಣೆಗಳು ತನ್ನ ಹಿತಾಸಕ್ತಿಗೆ ವಿರುದ್ಧವಾದುದು ಅನ್ನುವ ಕಾರಣದಿಂದ ಅಡ್ಡಿ ಬರುತ್ತೆ ಅನ್ನುವ ಮಾತು ಕೇಳಿ ಬರುತ್ತಿದೆ. ಮಾಸ್ತಿಯವರು ಈ ಬಗೆಗೆ ಏನು ಹೇಳುವವರು ಎಂದು ಕೊಂಡು ಅದನ್ನವರಿಗೆ ಕೇಳಿದೆ.

ಅವರ ಉತ್ತರ: ‘ಅಧಿಕಾರ ವರ್ಗ ಎಷ್ಟಿದೆ? ಅಷ್ಟು ಕೊಳ್ಳೆ ಹೋದದ್ದು? ನೂರರಲ್ಲಿ ಇಬ್ಬರೋ ಮೂವರೋ ಇದ್ದಾರೋ ಇಲ್ಲವೋ.ಈ ನಾಲ್ವರು ಜನ ಏನಾದರೂ ಮಾಡಲು ಸಾಧ್ಯವೇ? ನಾಯಕರು ಏನಾದರೂ ಮಾಡಬಹುದು. ಆದರೆ ಜನ ಹೊರಟರೆ ಅಧಿಕಾರಿ ವರ್ಗ ತಡೆಯೋಕೆ ಆಗೋಲ್ಲ. ಅಧಿಕಾರ ವರ್ಗ ಕೊಚ್ಚಿಕೊಂಡು ಹೋಗುತ್ತೆ. ಅಧಿಕಾರದಲ್ಲಿ ಇದ್ದುಕೊಂಡು ಏನು ಮಾಡಬಹುದು? ದುಡ್ಡು ಮಾಡಿಕೊಳ್ಳಬಹುದು. ನಾಲ್ಕು ದಿನ ನಡೆದೀತು ಐದನೇ ದಿನ ಕೊಲೆಯಾಗುತ್ತೆ. ಮೊದಲು ಹೇಳತಾ ಇರಲಿಲ್ಲವೇ ಕಳ್ಳನ ಹೆಂಡತಿ ಎಂದಿದ್ದರೂ ಮುಂಡೆ ಅಂತ. ಹಾಗೆ ರಷ್ಯಾದ ಜಾರ್‌ಗಿಂತಲೂ ಹೆಚ್ಚಿನ ಅಧಿಕಾರಿ ವರ್ಗ ಇರೋಕೆ ಸಾಧ್ಯವಿಲ್ಲ. ಏನಾದ ಜಾರ್? ಜಾರ್ ಮಾಡಿದ ಪಾಪ ಅವನ ಮಕ್ಕಳನ್ನೆಲ್ಲಾ ತಿಂದು ಹಾಕಿತು. ಜಾರ್ ಅನ್ಯಾಯ ಮಾಡಿದ. ಒಂದು ಸಲ ಯಾವುದೊ ರಿಫಾರ್ಮ್ ಮಾಡಿ ಅಂತ ಕೇಳೋಕೆ ಐದಾರು ಸಾವಿರ ಜನ ಅವನ ಮನೆಗೆ ಹೋದರು. ಮುಠಾಳ ಅರಮನೇಲಿ ನಿಂತುಕೊಂಡು ಸೈನ್ಯಾನಾ ಕರದು ಷೂಟ್ ಅಂತ ಹೇಳಿದ. ಅವರು ಜನರನ್ನ ಸುಟ್ಟರು. ಕೇಳಿದೀರೋ ಇಲ್ಲವೋ? 1905-06ರಲ್ಲಿ ನಡೆದದ್ದು. ಸರಿಯಾಗಿ ಹನ್ನೆರಡು ವರ್ಷದ ಆಚೆಗೆ ಜನ ಜಾರ್‌ನ ಹೆಣ್ಣುಮಕ್ಕಳು ಮೂರು ಜನಾನ ಗೋಡೆ ಹತ್ತಿರ ನಿಲ್ಲಿಸಿ ಗುಂಡು ಹೊಡೆದು ಕೊಂದರು. ಜಾರ್‌ ತನ್ನ ಮಕ್ಕಳನ್ನು ಕೊಲ್ಲೋದಕ್ಕೆ ಹನ್ನೆರಡು ವರ್ಷದ ಮೊದಲೇ ಏರ್ಪಾಡು ಮಾಡಿದ್ದ. ಅವನಿಗೆ ಅದು ಗೊತ್ತಿರಲಿಲ್ಲ. ಆದರೆ ಮಾಡಿದ ಕೆಲಸ ಮಾತ್ರ ಇಷ್ಟೇನೆ.’

ನಮ್ಮ ಸುತ್ತ ನಡೆಯುತ್ತಾ ಇರೋ ಸಾಮಾಜಿಕ ಬದಲಾವಣೆಗಳ ಬಗೆಗೆ ಮಾಸ್ತಿಯವರ ಪ್ರತಿಕ್ರಿಯೆ ತಿಳಿಯಬಯಸಿ ರೂಪಿಸಿದ ಪ್ರಶ್ನೆಯನ್ನು ಕೇಳಿದೆ, ‘ಮೂಲದಲ್ಲಿ ಏನೂ ಬದಲಾವಣೆ ನನಗೆ ಕಾಣುತ್ತಿಲ್ಲ. ಯಾವ ಕಾಲದಲ್ಲೂ ಮುಠಾಳರು ಇದ್ದಾರೆ. ಹಾಗೆಯೇ ಈಗ ಕೂಡ. ವಿವರ ಕೆಲವು ಬೇರೆ ಆಗಿರುತ್ತದೆ. ಒಟ್ಟಿನಲ್ಲಿ ಬಹಳ ಆಗಿರುವುದಿಲ್ಲ.’

ನಾನು ಕೇಳಿದೆ “ಕಳೆದ ಒಂಭತ್ತು ದಶಕಗಳಿಂದ ನೀವು ನೋಡುತ್ತಿರುವುದರಲ್ಲಿ ಜನ ಬದುಕುವ ಕ್ರಮ ಹಾಗೇ ಇದೆಯೇ?’

‘ಬಹಳ ಮಟ್ಟಿಗೆ ಹಾಗೇ ಇದೆ. ಏನೋ ಒಂದು ಹೊತ್ತಿನಲ್ಲಿ ಹೀಗೆ ಮಾಡಿದರೆ ಚೆನ್ನಾಗಿತ್ತು ಹಾಗೆ ಮಾಡಿದರೆ ಚೆನ್ನಾಗಿತ್ತು ಅಂತ ಹೇಳಬಹುದು. ಹಾಗೆ ಕೇಳುವವರು ಹೇಳತಾನೆ ಇರತಾರೆ. ಯಾವುದೋ ಒಂದು ನಡೀತಾನೆ ಇರುತ್ತೆ. ಯಾವುದೂ ಯೋಚನೆ ಮಾಡಿ ಮಾಡಿದ್ದಲ್ಲ ರಿಫಾರ್ಮ್, ರಿಫಾರ್ಮ್ ಅಂತ ಜನ ಹೇಳತಾರಲ್ಲ. ಯಾರೂ ರಿಫಾರ್ಮ್ ಮಾಡಲಿಲ್ಲ. ತಾನೇ ರಿಫಾರ್ಮ್ ಆಗಿದೆ, ಒಳಗಿನಿಂದ, ಅದರಲ್ಲಿ ಅಷ್ಟು ಒಳ್ಳೆಯದು, ಅಷ್ಟು ಕೆಟ್ಟದ್ದು ಇದೆ.’

‘ಹಾಗಾದರೆ ಈ ಬದಲಾವಣೆಗಳ ಹಿಂದಿನ ಶಕ್ತಿಗಳು ಯಾವುವು ಅಂತ ನೀವು ತಿಳೀತೀರಾ?’

“ಪ್ರತ್ಯೇಕ ಶಕ್ತಿ ಏನೂ ಇಲ್ಲ ಜೀವನದ ಪ್ರವಾಹವೇ ಆಗಿದೆ. ಜೀವನದಲ್ಲಿ ವ್ಯತ್ಯಾಸಗಳು ಆಗುತ್ತಲೇ ಇವೆ. ಯಾವುದೋ ಒಂದು ಕಾರಣ. ಇಂಗ್ಲಿಶ್ ಬಂತು ವಿದ್ಯೆಗೆ, ಅನೇಕ ಸಂಗತಿಗಳು ಬಂದು ನಮಗೆ ತಿಳಿದು ನಾವು ಬುದ್ದಿವಂತರಾದೆವು.ಹಿಂದೆ ಒಂದು ಕಾಲದಲ್ಲಿ ಐವತ್ತು ಸಂಗತಿ ಕೆಟ್ಟದ್ದು ಇದ್ದವು. ಜನ ತಿದ್ದಿಕೊಂಡರು. ಒಳ್ಳೆಯದನ್ನು ಕೆಟ್ಟದನ್ನು ಆಯ್ಕೆ ಮಾಡಿದೆವು. ಕಟ್ಟುನಿಟ್ಟು ಹೆಚ್ಚಾಯಿತು ಎಂದರು. ಸ್ವಾತಂತ್ರ್ಯ ವಹಿಸಿದೆವು. ಅದರ ಹೆಸರಿನಲ್ಲಿ ಹತ್ತು ಒಳ್ಳೆಯದನ್ನು ಬಿಟ್ಟುಬಿಟ್ಟೆವು. ಕಟ್ಟುನಿಟ್ಟು ಅತಿ ಆಗಬಾರದು ನಿಜ. ಆದರೆ ಅವು ತೀರಾ ಇಲ್ಲದೇನೂ ಹೋಗಬಾರದು. ಇವತ್ತು ಕೂಡ ಹಾಗೇ ಯೋಚನೆ ಮಾಡತಾರೆ. ಹಾಗೇ ಮಾಡತಾರೆ. ಯಾವುದೋ ಒಂದು ನಡೀತಾ ಇರುತ್ತೆ. ಯಾವ್ಯಾವುದೋ ಕಥೆಗಳನ್ನು ಕೇಳತೇವೆ. ಧರ್ಮದಲ್ಲೇ ಆಗಲೀ, ರಾಜಕೀಯದಲ್ಲೇ ಆಗಲೀ ಸಮಾಜದಲ್ಲೇ ಆಗಲೀ ಎಲ್ಲದರಲ್ಲೂ ಒಳ್ಳೇದು ಕೆಟ್ಟದು ಆಗತಾನೇ ಇರುತ್ತೆ. ಹಿಂದಿನ ಕಾಲದಲ್ಲಿ ಕೇಳಿದ್ದೇವೆ. ಕಾಸು ಕೊಟ್ಟು ಹುಡುಗೀನ ಪಡೀತಿದ್ರು. ಆಗ ಕನ್ಯಾಶುಲ್ಕ ಈಗ ಬಾಲಶುಲ್ಕನೋ ಯುವಶುಲ್ಕನೊ ಕೊಟ್ಟು ಹುಡುಗನ್ನ ಕೊಂಡುಕೋತಾರೆ. ಹೆಣ್ಣುಮಕ್ಕಳನ್ನ ಹೆತ್ತವರಿಂದ. ಇದೆಲ್ಲಾ ರಿಫಾರ್ಮ್ ಅಂತ ಬಂತೆ? ಜನ ಯೋಚನೆ ಮಾಡಿ ತಿದ್ದಬೇಕೂ ಅಂತ ಬಂತೇ? ತಾನೇ ಬಂತು. ಈಗಲೂ ಅಷ್ಟೇ. ಇದು ಯಾವುದೂನೂ ಸಭೆ ಸೇರಿ ಯೋಚನೆ ಮಾಡಿ ನಿರ್ಣಯಕ್ಕೆ ಬಂದದ್ದಲ್ಲ. ಹಿಂದಿನ ಕಾಲದಲ್ಲಿ ಹುಡುಗಿಯರು ಮೈನೆರೆಯುವುದಕ್ಕೆ ಮೊದಲು ಮದುವೆ ಮಾಡಿಬಿಡುತ್ತಿದ್ದರು. ಮೈನೆರೆದ ಮೇಲೆ ಮದುವೆ ಮಾಡುವುದು ಅಪರಾಧ ಅಂತ ಇತ್ತು. ಇವತ್ತು? ಹಾಗೆನ್ನುತ್ತಿದ್ದವರ ಹೆಣ್ಣುಮಕ್ಕಳೆಲ್ಲ ಮದುವೆಯಾಗೋಕೆ ಮುಂಚೆ ದೊಡ್ಡವರಾದವರೇ. ಹಿಂದೆ ಬಹಿಷ್ಕಾರ ಹಾಕತಾ ಇದ್ದರು. ಈಗ ಯಾರಾದರೂ ಅವರ ತಂಟೆಗೆ ಹೋಗುತಾರೊ? ಆಚಾರವಂತ ಅನ್ನೋನು ಏನಾದರೂ ಹೇಳಿದರೆ ಹೋಗೋ ಮುಠ್ಠಾಳ ಅನ್ನತಾರೆ.’

“ಈ ಬದಲಾವಣೆಗಳೆಲ್ಲಾ ನಡೆದಿವೆಯಲ್ಲಾ, ಇವು ನಮ್ಮ ಬದುಕಿಗೆ ಒಳ್ಳೆಯದನ್ನು ಮಾಡಿವೆ ಅಂತ ನಿಮಗೆ ಅನ್ನಿಸುತ್ತಾ ಇದೆಯೊ?’

‘ಒಳ್ಳೆಯದು ಅನ್ನಿಸದೇ ಇದ್ದಿದ್ದರೆ ಯಾಕೆ ಮಾಡುತ್ತಾ ಇದ್ದರು? ಗುಣ ಇಲ್ಲದಿದ್ದರೆ ಮಾಡತಾ ಇದ್ದರೇ? ಒಳ್ಳೇದು ಆಗಿರೋದರಿಂದಲೇ ಎಲ್ಲರೂ ಆಚರಿಸಿದರು. ಯಾವಾಗಲೂ ಬರೀ ಒಳ್ಳೇದೇ ಆಗೋದಿಲ್ಲ. ಒಳ್ಳೇದು, ಕೆಟ್ಟದ್ದು ಎರಡೂ ಇರುತ್ತೆ. ಎಲ್ಲದಕ್ಕೂ ಉಪಯೋಗ ದುರುಪಯೋಗ ಎರಡೂ ಇದ್ದೇ ಇರುತ್ತೆ’

ಇಲ್ಲಿಗೆ ನನ್ನ ಪ್ರಶ್ನೆಗಳ ಪಟ್ಟಿ ಮುಗಿದಿತ್ತು. ಅವರು ಮಾತು ಮುಗಿಸುತ್ತಾ ಹೇಳಿದರು. ಅದು ಕೂಡ ದಾಖಲಾಗಲು ತಕ್ಕದ್ದು.

‘ಯೋಚನೆ ಮಾಡಿರಪ್ಪಾ; ಆತುರ ಮಾಡಿಕೊಳ್ಳಬೇಡಿ. ಇನ್ನೊಬ್ಬರು ಒಂದು ಹೇಳತಾರೆ ತಿಳಿದುಕೊಳ್ಳಿ, ತಿಳಿದುಕೊಂಡು ಸಮಾಧಾನವಾಗಿ ಮಾತನಾಡಿ, ಎಲ್ಲರೂ ಜೊತೆಯಾಗಿ ಕೆಲಸ ಮಾಡಿ, ಏನು ಕೆಲಸ ಮಾಡಬೇಕು ಅನ್ನೋದನ್ನು ಜ್ಞಾಪಕ ಇಟ್ಟುಕೊಳ್ಳಿ, ಒಬ್ಬರಿಗೊಬ್ಬರು ಶತ್ರುಗಳಲ್ಲ. ನೀವು ಜಗಳ ಆಡೋಕೆ ಬಂದಿಲ್ಲ. ಎಲ್ಲರೂ ಕುಳಿತುಕೊಂಡು ಮಾತನಾಡಿ ಯಾವುದು ಒಳ್ಳೇದು ಸಮಾಜಕ್ಕೆ ಹೇಳಿ, ದೇಶಕ್ಕೆ ಏನು ಬೇಕು ಅಂತ ಹೇಳಿ. ಆದರೆ ಈಗ ಏನಾಗುತ್ತಾ ಇದೆ? ಅಸೆಂಬ್ಲಿಲಿ “ಫ್ಯುರೊರ್” ಅಂತ ಪತ್ರಿಕೆ ವರದಿ. ಅಸೆಂಬ್ಲಿ ಇರೋದು ಫ್ಯುರೊರ್ಗೋಸ್ಕರವೇ? ಬೇರೆ ಬೇರೆ ಅಭಿಪ್ರಾಯ ಇದ್ದೇ ಇರುತ್ತೆ, ಯಾವುದು ಸರಿಯೋಚನೆ ಮಾಡೋಣ. ಪಾರ್ಲಿಮೆಂಟು ಯಾತಕ್ಕೆ ಇರೋದು? ಡೆಮಾಕ್ರಸಿ ಎಂದರೆ ಏನು? ಅದು ಕೂಡ ಗೊತ್ತಿಲ್ಲ ಇವರಿಗೆ ಪ್ರತಿನಿಧಿ ಅಂತ ಕೂತು ಕೆಟ್ಟ ಮಾತು ಆಡತಾರೆ. ಒಬ್ಬರನ್ನೊಬ್ಬರು ಹೊಡೀತೇನೆ ಅನ್ನತಾರೆ. ಚಪ್ಪಲಿ ಎತ್ತಿ ತೋರಿಸುತ್ತಾರೆ. ನಮ ಊರುಗಳ ಚಾವಡೀಲಿ ನಮ್ಮ ಜನ ಮರ್ಯಾದೆಯಾಗಿ ನಡೆದುಕೊಳ್ಳುತ್ತಿದ್ದರು. ಒಬ್ಬ ಕೆಟ್ಟ ಮಾತಾಡಿದರೆ ಪಟೇಲನಾದೊನು, ಶಾನುಭೋಗನಾದೋನು ಪುರೋಹಿತನಾದೋನು, “ಅಪ್ಪ ಕೆಟ್ಟಮಾತು ಆಡತಾ ಇದೀಯಾ’ ಅನ್ನೋರು. ಬಾಯಿ ಮುಚ್ಚಿಕೊಳ್ಳೋನು ಅವನು. ಇನ್ನೂ ಹಾಗೆ ಮಾತಾಡಿದರೆ ಅವರು “ನೀನು ಮಾತಾಡೋದು ಸರಿಯಾಗಿಲ್ಲ ಹೊರಗೆ ನಿಲ್ಲು” ಅನ್ನುತ್ತಿದ್ದರು. ಬೇರೆ ಏನೂ ಮಾಡತಾ ಇರಲಿಲ್ಲ. ಚಪ್ಪಲಿ ತೋರಿಸ್ತಾ ಇರಲಿಲ್ಲ. ಇದು ನಮ್ಮ ಜನ ನಡೆದುಕೊಂಡ ರೀತಿ, ಈ ಜನಕ್ಕೆ ಅದು ಆಗದೇ ಹೋಗಿದೆ. ಪಾರ್ಲಿಮೆಂಟಿನಲ್ಲಿ ಇವರು ನಮ್ಮ ಪ್ರತಿನಿಧಿಗಳಂತೆ. ಇವರ ದಾರಿ ನಮ್ಮ ಜನಗಳದಾಗಲಿಲ್ಲ.’

‘ಇಂಥವರು ಆಳತಾ ಇದ್ದಾರಲ್ಲ ಅದಕ್ಕೇನು ಮಾಡೋಣ’

ಏನು ಮಾಡೋದು? ಹಾಗಿದೆ. ದುರ್ಯೋಧನ ಆಳತಾ ಇದ್ದ. ಗ್ರಾಮದ ಜನ ಪಟ್ಟಣದ ಜನ ಏನು ಮಾಡತಾ ಇದ್ದರು? ರಾವಣ ಆಳತಾ ಇದ್ದ ಲಂಕೇಲಿ, ಲಂಕೆ ಜನವೆಲ್ಲಾ ಹೋಗಿ ಅವನಿಗೆ ಹೇಳಿದರೇ? ಅವನು ಮಾಡಿದ್ದು ಸರಿ ಅಂತ? ಯಾರದೋ ಹೆಣ್ಣುಮಗಳನ್ನು ತಕ್ಕೊಂಡು ಬಂದು ನಾವೆಲ್ಲಾ ಅಳೋ ಹಾಗೆ ಮಾಡಿದ ಅಂದರು; ಬೈದರು. ಜನ ಏನು ಮಾಡುತ್ತಾರಪ್ಪಾ? ಯಾವಾಗಲೂನೂ ಶಕ್ತಿಯುಳ್ಳವನು ಏನೋ ಮಾಡುತ್ತಾನೆ, ಕೆಟ್ಟವನಾಗಿದ್ದರೆ ಜನಗಳಿಗೆ ನೋವು ಕೊಡುತ್ತಾನೆ. ಒಳ್ಳೆಯವನಾಗಿದ್ದರೆ ದೇವರ ಹಾಗೆ ಕಾಪಾಡತಾನೆ. ಒಟ್ಟು ಮಾತು ಇದು. ಎಲ್ಲರೂ ಕಾಡಿನಲ್ಲಿ ಇದೇವೆ. ಹೊರಗೆ ಹೋಗೋ ದಾರಿ ನೋಡಬೇಕು ನಾವು ಅಂದೆನಲ್ಲ. ಜಗಳ ಮಾಡಿದರೆ ದಾರಿ ಕಾಣೋಲ್ಲ. ದಾರಿ ಯಾವುದು ಕಾಣುತ್ತೆ ಅಂತ ಒಬ್ಬರು ಇನ್ನೊಬ್ಬರಿಗೆ ತಿಳಿಸಿ ಹೇಳಬೇಕು.’

“ಹಾಗಾದರೆ ಜನಗಳಿಗೆ ಈ ಜವಾಬ್ದಾರಿಯನ್ನು ತಿಳಿಸಿ ಹೇಳೋ ಹೊಣೆ ಯಾರ ಮೇಲೆ ಇದೆ ಅಂತ ಭಾವಿಸುತ್ತೀರಾ?’

‘ನಾ ಬಲ್ಲೆ ಅನ್ನೋ ಎಲ್ಲರ ಮೇಲೂ ಇದೆ. ನನ್ನ ಮೇಲೂ ಇದೆ. ನಾನು ಹೇಳಿದೇನೆ ಇದೇ ಮಾತು, ಜಗಳ ಆಡಬೇಡಿ ಸಮಾಧಾನವಾಗಿರಿ. ಆದರೆ ಕೇಳೊರು ಯಾರು? ಹೇಳೋದು ಮಾತ್ರ ಅಲ್ಲದೆ ಬೇರೇನು ಮಾಡೋಕೆ ಆಗುತ್ತೆ ನನ್ನಂಥವನಿಗೆ? ನಾನು ಹೇಳೋದನ್ನು ನಾನು ಹೇಳಿದ್ದೇನೆ. ನಿರ್ಣಯಾನ ನಿಮ್ಮ ಇಷ್ಟಕ್ಕೆ ಬಿಟ್ಟಿದ್ದೇನೆ ಅನ್ನೋದು ಅಲ್ಲವೆ?’

ಮಾಸ್ತಿಯವರು ಈ ಮಾತನ್ನು ನೋವಿನಿಂದ ಆಡಿರಬಹುದೇ ಎಂದುಕೊಂಡು ಹಾಗೆ ಅವರನ್ನು ಕೇಳಿದೆ. ಅವರೆಂದರು ‘ನೋವು ಯಾಕೆ?ಹಿಂದೆ ಕೇಳಲಿಲ್ಲ. ಈಗಲೂ ಕೇಳೋದಿಲ್ಲ. ಲೋಕದ ಚರಿತ್ರೆನೇ ಹಾಗಿದೆಯಲ್ಲ; ನನಗಿಂತ ಸಾವಿರಪಟ್ಟು ದೊಡ್ಡವರು.

ನನ್ನ ಗುರು ವ್ಯಾಸನೇ ಹೇಳಿದ “ಊರ್ಧ್ವ ಬಾಹುರ್ವಿಭೌಮ್ಯಷ ನತುಕಶ್ಚಿತ್ ಶೃಣೋತಿ ಮೇ ಧರ್ಮಾರ್ಥಶ್ಚ ಕಾಮಶ್ಚ ನ ಕಿಮರ್ಥಂ ನ ಸೇವ್ಯತೇ’ ಅಂತ. ಯಾವುದು ಸರಿಯಾದದ್ದು ಅಂತ ನಾನು ಹೇಳತಾನೇ ಇದೇನೆ, ಎಲ್ಲರೂ ಸುಮ್ಮನೇ ಹೋಗತಾ ಇದ್ದಾರೆ’ ಅಂದ: ಭಾರತದಲ್ಲಿ ಬರುತ್ತೆ ಈ ಮಾತು. ವ್ಯಾಸನಾದೊನೇ ಹಾಗೆ ಹೇಳಿ ಗೋಳು ಇಡಬೇಕಾದರೆ ನಾನೇನು ಮಾಡಬೇಕು? ನನ್ನಂತೆ ಮಾತನಾಡೋ ಹತ್ತು ಜನ ಏನು ಮಾಡಬೇಕು? ಒಳ್ಳೆ ಮಾತು ಇದು ಅಂತ ಹೇಳತಾ ಇದೇನೆ, ಕೇಳೋದಿಲ್ಲವಲ್ಲ ಅಂತೇನೆ. ನನ್ನ ಮಾತು ತಪ್ಪಲ್ಲ. ಆದರೆ ಪ್ರಯೋಜನ ಏನು?’ ಈ ಮಾತು ಹೇಳಿ ಕೊಂಚ ತಡೆದು.

‘ನಾನು ದೊಡ್ಡ ಗುರು ಅಂತ ಹೇಳತಾ ಇಲ್ಲ ಈ ಮಾತನ್ನು; ಲೋಕದ ಗುರು ಅಲ್ಲ ನಾನು. ನನಗೆ ತೋರಿದ್ದು ನಾನು ಹೇಳತಾ ಇದೇನೆ. ಗುರು ಅಂತ ಹೇಳಿಕೊಳ್ಳದೆ ಇದ್ದರೂ ನಾನು ಗುರು ಕೂಡಾ ಆಗಿದೇನೆ. ಯಾಕೆ ಅಂದರೆ ನಾನು ಹೇಳೋ ಮಾತು ಎಲ್ಲರೂ ಕೇಳಬೇಕಾದ ಮಾತು. ನಾನು ಬರಿಯ ಉಪಕರಣ, ಐಯಾಮ್ ದ ಗ್ರಾಮಫೋನ್ ಸ್ಪೀಕರ್‌ ತ್ರೂ ವಿಚ್ ಮೈ ಎಲ್ಡರ್ಸ್ ಸ್ಪೀಕ್ (ನನ್ನ ಮೂಲಕ ನನ್ನ ಹಿರಿಯರು ಮಾತಾಡತಾ ಇದಾರೆ. ನಾನು ಗ್ರಾಮಫೋನ್ ಸ್ಪೀಕರ್‌ ಇದ್ದ ಹಾಗೆ) ಈ ಮಾತು ಬಹುಪಾಲು ನನ್ನ ಸ್ವಂತದ್ದಲ್ಲ. ಸ್ವಂತ ಸ್ವಲ್ಪ ಇದೆ. ಅದು ಇರುವುದು ಸಮನ್ವಯದಲ್ಲಿ. ಆದರೆ ಮೊತ್ತ ಹಿರಿಯರದು.’ ಈ ಮಾತು ಹೇಳಿ ಸುಮ್ಮನಾದರು. ಕೊಂಚ ಹೊತ್ತು ಬಿಟ್ಟು ಅಲ್ಲಿಂದ ಹೊರಟೆವು. ಅವರು ಅಲ್ಲಿಂದ ಹೊರಬಾಗಿಲವರೆಗೆ ಬಂದರು. ಮೇಲಿನ ಮೆಟ್ಟಲಿನ ಮೇಲೆ ನಿಂತು ಮಾತಾಡುತ್ತಾ ಬಾಗಿ ನಮಗೆ ಹೇಳಿದರು. ‘ಕ್ರಾಮ್ವೆಲ್ಲರ ಒಂದು ಉಕ್ತಿಯನ್ನು ಕೇಳಿದೀರಾ ಐ ಬಿಸೀಚ್ ಯು ಬ್ರದರ್ಸ್, ಬೈ ದ ಬೊವೆಲ್ಸ್ ಆಫ್ ದ ಕ್ರೈಸ್ಟ್, ಕನ್ಸಿಡರ್ ದಟ್ ಯು ಮೇ ಬಿ ಮಿಸ್ಟೇಕನ್ (ನೀವು ಅಂದುಕೊಂಡಿರೋದು ತಪ್ಪಿರಬಹುದು. ದಯವಿಟ್ಟು ಯೋಚಿಸಿರಿ ಅಂತ ಬೇಡಿಕೊಳ್ಳುತ್ತೇನೆ.)’ ಜನರ ನಡುವೆ ವಿನಾಕಾರಣ ತಪ್ಪು ತಿಳಿವಳಿಕೆ ಬರುವುದನ್ನು ಕುರಿತಂತೆ ಆಗ ಮಾತು ಬಂದಿತಷ್ಟೆ.

ಕ್ರಾಮ್‌ವೆಲ್‌ನ ಈ ಮಾತು ಮತ್ತೆ ನೆನಪು ಮಾಡಿಕೊಂಡೆ. ಹೌದೇ ಅನ್ನಿಸಿತು. ಹೊರಗೆ ಹೊರಟವನು ಗೇಟಿನ ಬಳಿ ನಿಂತು ತಿರುಗಿ ನೋಡಿದೆ. ಅವರು ನಿಂತು ಕೈಬೀಸುತ್ತಿದ್ದರು. ಅದೇ ನಗೆಮುಖದಲ್ಲಿ, ಅದು ಬೆಳಗಿನ ತಿರುಗಾಟದ ಹೊತ್ತು ಅವರಿಗೆ. ಇನ್ನು ಅವರು ತಮ್ಮ ಎಂದಿನ ದಿನಚರಿಗೆ ತೊಡಗುವರು. ಮನೆಗೆ ಹಿಂತಿರುಗುತ್ತಾ ಇರುವಂತೆ ಮತ್ತೆ ಅವರು ಕೊನೆಯಲ್ಲಿ ಹೇಳಿದ ಮಾತು ನೆನಪಿಗೆ ತಂದುಕೊಂಡೆ. ನಮ್ಮ ತಿಳಿವಳಿಕೆ ತಪ್ತಿರುವುದು ನಮಗೆ ಗೊತ್ತಿಲ್ಲದೇ ಇರಬಹುದಲ್ಲವೆ?

  • ಡಾ. ಕೆ ವಿ ನಾರಾಯಣ,ಹಂಪಿ ಕನ್ನಡ ವಿಶ್ವವಿದ್ಯಾಲಯದ ಆರಂಭಿಕ ಹಂತದಲ್ಲಿಯೇ ರಿಜಿಸ್ಟಾರ್ ಆಗಿ ವಿಶ್ವವಿದ್ಯಾಲಯ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ ವಿ ಎನ್, ಕನ್ನಡದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಶಿಕ್ಷಣದ ಬಗ್ಗೆ ಹೊಸ ಚಿಂತನೆಯನ್ನು ಕಟ್ಟಲು ಶ್ರಮಿಸಿದವರು ಕೂಡ. ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ, ನುಡಿಗಳ ಅಳಿವು ಕೆ ವಿ ಎನ್ ಅವರ ಇತ್ತೀಚಿನ ಪುಸ್ತಕಗಳು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights