ಮುಸ್ಲೀಮನೆಂದು ಥಳಿಸಿದೆವು; ವಕೀಲನಲ್ಲಿ ಕ್ಷಮೆ ಕೇಳಿದ ಮಧ್ಯಪ್ರದೇಶ ಪೊಲೀಸರು

ಭಾರತದಲ್ಲಿ ಇಸ್ಲಾಮೋಫೋಬಿಯಾ ಯಾವ ರೀತಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಬಹಿರಂಗ ಉದಾಹರಣೆಯೊಂದು ಮಧ್ಯಪ್ರದೇಶದ ಬೇತುಲ್‌ನಲ್ಲಿ ವರದಿಯಾಗಿದೆ. ಇದರಲ್ಲಿ ಪೊಲೀಸರೆ ಪ್ರಧಾನ ಪಾತ್ರಧಾರಿಗಲಾಗಿದ್ದು ಅವರ ಅಧಿಕಾರ ದುರುಪಯೋಗ ಮತ್ತು ಮುಸ್ಲಿಂ ದ್ವೇಷ ಹಾಡಹಗಲೇ ಜಗಜ್ಜಾಹೀರಾಗಿದೆ.

ಮಾರ್ಚ್ 23 ರಂದು ವಕೀಲ ದೀಪಕ್ ಬುಂಡೆಲೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದಾಗ ರಾಜ್ಯ ಪೊಲೀಸರು ಅವರನ್ನು ಕ್ರೂರವಾಗಿ ಥಳಿಸಿದ್ದರು. ಅಲ್ಲದೇ ದೀಪಕ್‌ ಒಂದು ತಿಂಗಳ ನಂತರ, ಅವರು ತಮ್ಮ ದೂರನ್ನು ಹಿಂಪಡೆಯುವಂತೆ ಪೊಲೀಸರಿಂದ ಒತ್ತಡಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ಅಧಿಕಾರಿಗಳು, ಬುಂಡೆಲೆ ಅವರನ್ನು ಮುಸ್ಲಿಂ ವ್ಯಕ್ತಿ ಎಂದು ತಪ್ಪಾಗಿ ಗುರುತಿಸಿದ್ದರಿಂದ ಅವರನ್ನು ಥಳಿಸಲಾಯಿತು ಎಂದು ಹೇಳಿದ್ದಾರೆ!

ನಡೆದಿದ್ದೇನು?

ಮಾರ್ಚ್ 23 ರಂದು ಸಂಜೆ 5.30 ರಿಂದ 6 ರವರೆಗೆ ಅವರು ಆಸ್ಪತ್ರೆಗೆ ತೆರಳುತ್ತಿದ್ದಾಗ ಅವರನ್ನು ಪೊಲೀಸರು ತಡೆದಿದ್ದಾರೆ. “ಆಗಿನ್ನು ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೆ ಬಂದಿರಲ್ಲ. ಆದರೆ ಸೆಕ್ಷನ್ 144 ಅನ್ನು ಬೆತುಲ್‌ನಲ್ಲಿ ವಿಧಿಸಲಾಗಿತ್ತು. ನಾನು ಕಳೆದ 15 ವರ್ಷಗಳಿಂದ ತೀವ್ರ ಮಧುಮೇಹ ಮತ್ತು ರಕ್ತದೊತ್ತಡ ರೋಗಿಯಾಗಿದ್ದೇನೆ. ನನಗೆ ಆರೋಗ್ಯವಾಗದ ಕಾರಣ, ನಾನು ಆಸ್ಪತ್ರೆಗೆ ಭೇಟಿ ನೀಡಲು ಮತ್ತು ಕೆಲವು ಔಷಧಿಗಳನ್ನು ಪಡೆಯಲು ಹೊರಟಿದ್ದೆ. ಆದರೆ ನನ್ನನ್ನು ಪೊಲೀಸರು ಮಧ್ಯದಲ್ಲಿ ನಿಲ್ಲಿಸಿದರು. ಆಗ ನಾನು ಔಷಧಿಗಳನ್ನು ಪಡೆದುಕೊಳ್ಳಬೇಕು ಎಂದು ಪೊಲೀಸ್ ಸಿಬ್ಬಂದಿಗೆ ವಿವರಿಸಿದೆ. ಆದರೆ ಅವರಲ್ಲಿ ಒಬ್ಬರು ನಾನು ಹೇಳುತ್ತಿರುವುದನ್ನು ಕೇಳದೆ ಕಪಾಳಕ್ಕೆ ಹೊಡೆದರು” ಎಂದಿದಾರೆ.

“ಪೊಲೀಸರು ಸಾಂವಿಧಾನಿಕ ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ನಾನು ಅವರಿಗೆ ಹೇಳಿದೆ, ಮತ್ತು ನಾನು ತಪ್ಪು ಮಾಡಿದ್ದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188ರ ಅಡಿಯಲ್ಲಿ ಬಂಧನಕ್ಕೊಳಗಾಗಲು ಸಿದ್ಧನಿದ್ದೇನೆ ಎಂದು ಹೇಳಿದೆ. ಇದನ್ನು ಕೇಳಿದ ಪೊಲೀಸ್ ಸಿಬ್ಬಂದಿ ಕೋಪದಿಂದ ನನ್ನನ್ನು ಮತ್ತು ಭಾರತೀಯ ಸಂವಿಧಾನವನ್ನು ನಿಂದಿಸಲು ಪ್ರಾರಂಭಿಸಿದರು. ಆಗ ಅನೇಕ ಪೊಲೀಸ್ ಅಧಿಕಾರಿಗಳು ಬಂದು ನನ್ನನ್ನು ಲಾಠಿಗಳಿಂದ ಹೊಡೆಯಲು ಪ್ರಾರಂಭಿಸಿದರು” ಎಂದು ಬುಂಡೆಲೆ ಹೇಳಿದ್ದಾರೆ.

ನಾನು ವಕೀಲನಾಗಿದ್ದೇನೆ ಮತ್ತು ಕೇಸು ದಾಖಲಿಸುತ್ತೇನೆ ಎಂದು ಹೇಳಿದ ನಂತರವೇ ಅವರು ನನ್ನನ್ನು ಹೊಡೆಯುವುದನ್ನು ನಿಲ್ಲಿಸಿದರು “ಆದರೆ ಆ ಹೊತ್ತಿಗೆ ನನ್ನ ಕಿವಿಯಲ್ಲಿ ತೀವ್ರವಾಗಿ ರಕ್ತಸ್ರಾವವಾಗಲು ಪ್ರಾರಂಭಿಸಿತು” ಎಂದು ಬುಂಡೆಲೆ ಆರೋಪಿಸಿದ್ದಾರೆ. ನಂತರ ಆಸ್ಪತ್ರೆಗೆ ಹೋಗಲು ನಾನು ನನ್ನ ಸ್ನೇಹಿತ ಮತ್ತು ಸಹೋದರನನ್ನು ಕರೆದು ಎಂಎಲ್ಸಿ ವರದಿ ಪಡೆದೆ. ಮಾರ್ಚ್ 24 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಸ್.ಭಡೋರಿಯಾ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ವಿವೇಕ್ ಜೊಹ್ರಿ ಅವರಿಗೆ ದೂರು ಸಲ್ಲಿಸಿದ್ದೇನೆ ಎಂದಿದ್ದಾರೆ.

ನಂತರ ಮುಖ್ಯಮಂತ್ರಿ, ರಾಜ್ಯದ ಮಾನವ ಹಕ್ಕುಗಳ ಆಯೋಗ, ಮಧ್ಯಪ್ರದೇಶದ ಮುಖ್ಯ ನ್ಯಾಯಮೂರ್ತಿ ಮತ್ತು ಉನ್ನತ ಸರ್ಕಾರಿ ಅಧಿಕಾರಿಗಳಿಗೆ ಪತ್ರ ಬರೆದೆ. ಮಾರ್ಚ್ 23ರ ಘಟನೆಯ ಸಿಸಿಟಿವಿ ದೃಶ್ಯಾವಳಿಗಳಿಗಾಗಿ ಆರ್‌ಟಿಐ ಅರ್ಜಿಯನ್ನು ಸಲ್ಲಿಸಿದ್ದೇನೆ, ಆದರೆ ಮಾಹಿತಿಯನ್ನು ನಿರಾಕರಿಸಲಾಗಿದೆ ಎಂದು ಬುಂಡೆಲೆ ಹೇಳಿದ್ದಾರೆ. “ನನ್ನ ಆರ್‌ಟಿಐ ಅರ್ಜಿಗೆ ಮಾಹಿತಿ ನೀಡದಿದ್ದುದ್ದಕ್ಕೆ ಪೊಲೀಸರು ಕಾರಣವನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಸರ್ಕಾರಿ ಫೈಲ್‌ಗಳಿಂದ ಅಳಿಸಿರಬಹುದು ಎಂದು ನನಗೆ ಅನಧಿಕೃತವಾಗಿ ತಿಳಿಸಲಾಗಿದೆ” ಎಂದು ಅವರು ದೂರಿದ್ದಾರೆ.

ಅಂದಿನಿಂದ, ಪೊಲೀಸರು ದೂರನ್ನು ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ. ಮುಸ್ಲಿಂ ಎಂದು ತಪ್ಪಾಗಿ ತಿಳಿದು ಥಳಿಸಲಾಗಿದೆ. ನೀವು ಕೆಲವು ಉನ್ನತ ಅಧಿಕಾರಿಗಳು ನನ್ನ ದೂರನ್ನು ಹಿಂತೆಗೆದುಕೊಂಡರೆ ಘಟನೆಯನ್ನು ಖಂಡಿಸಿ ಕ್ಷಮೆಯಾಚಿಸುವ ಹೇಳಿಕೆ ನೀಡಬಹುದು ಎಂದು ಹೇಳಿದ್ದಾರೆ. ಆದರೆ ನನ್ನ ಸ್ನೇಹಿತೆರು ಶಾಂತಿಯುತವಾಗಿ ಕಾನೂನು ಸಮರ ಮುಂದುವರೆಸಲು ಸಲಹೆ ನೀಡಿದ್ದಾರೆ ಎಂದು ಬುಂಡೆಲೆ ತಿಳಿಸಿದ್ದಾರೆ.

“ನಾವು ಆ ಅಧಿಕಾರಿಗಳ ಪರವಾಗಿ [ಬುಂಡೆಲೆ ಮೇಲೆ ಹಲ್ಲೆ ಮಾಡಿದ] ಕ್ಷಮೆಯಾಚಿಸುತ್ತೇವೆ. ಘಟನೆಯಿಂದಾಗಿ ನಾವು ನಿಜವಾಗಿಯೂ ಮುಜುಗರಕ್ಕೊಳಗಾಗಿದ್ದೇವೆ. ನಿಮಗೆ ಬೇಕಾದರೆ ನಾನು ಆ ಅಧಿಕಾರಿಗಳನ್ನು ಕರೆತಂದು ನಿಮ್ಮಲ್ಲಿ ಖುದ್ದಾಗಿ ಕ್ಷಮೆಯಾಚಿಸುತ್ತೇನೆ” ಎಂದು ಆಪಾದಿತ ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

“ಪೊಲೀಸರು ನನ್ನೊಂದಿಗೆ ಅಸಭ್ಯವಾಗಿ ವರ್ತಿಸಲಿಲ್ಲ ಅಥವಾ ನನ್ನನ್ನು ಥಳಿಸಲಿಲ್ಲ” ಎಂದು ಬರೆಯಲು ನಾನು ನಿಮಗೆ ಹೃತ್ಪೂರ್ವಕ ವಿನಂತಿಯನ್ನು ಮಾಡುತ್ತಿದ್ದೇನೆ. ದಯವಿಟ್ಟು ನಮ್ಮ ವಿನಂತಿಯನ್ನು ಒಪ್ಪಿಕೊಳ್ಳಿ; ನಾವು ಗಾಂಧಿಯವರ ದೇಶದಲ್ಲಿ ವಾಸಿಸುತ್ತಿದ್ದೇವೆ ಎಂದು ಅರ್ಥಮಾಡಿಕೊಳ್ಳಿ; ನಾವೆಲ್ಲರೂ ಗಾಂಧಿಯ ಮಕ್ಕಳು… ನಿಮ್ಮ ಜಾತಿಯಿಂದ ನನಗೆ ಕನಿಷ್ಠ 50 ಸ್ನೇಹಿತರಿದ್ದಾರೆ ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದು ಬುಂಡೆಲೆ ಆರೋಪಿಸುತ್ತಾರೆ.

“ನಿಮ್ಮ ವಿರುದ್ಧ ನಮಗೆ ಯಾವುದೇ ದ್ವೇಷವಿಲ್ಲ. ಹಿಂದೂ-ಮುಸ್ಲಿಂ ಗಲಭೆ ನಡೆದಾಗಲೆಲ್ಲಾ ಪೊಲೀಸರು ಯಾವಾಗಲೂ ಹಿಂದೂಗಳನ್ನು ಬೆಂಬಲಿಸುತ್ತಾರೆ; ಮುಸ್ಲಿಮರಿಗೂ ಇದು ತಿಳಿದಿದೆ. ಆದರೆ ಅಜ್ಞಾನದಿಂದಾಗಿ ಅಂದು ನಡೆದ ಘಟನೆಯಿಂದ ಬೇಸರವಾಗಿದೆ” ಎಂದು ಪೊಲೀಸರು ಹೇಳುತ್ತಾರೆ.

“ನೀವು ಉದ್ದನೆಯ ಗಡ್ಡವನ್ನು ಹೊಂದಿದ್ದೀರಿ. ಆ ಪೊಲೀಸ್‌ (ನಿಮ್ಮ ಮೇಲೆ ಹಲ್ಲೆ ಮಾಡಿದವನು) ಒಬ್ಬ ಕಟ್ಟರ್ (ಕಟ್ಟಾ) ಹಿಂದೂ… ಹಿಂದೂ-ಮುಸ್ಲಿಂ ಗಲಭೆಗಳಲ್ಲಿ ಮುಸ್ಲಿಂನನ್ನು ಬಂಧಿಸಿದಾಗಲೆಲ್ಲಾ ಅವನು ಅವರನ್ನು ಯಾವಾಗಲೂ ಕ್ರೂರವಾಗಿ ಹೊಡೆಯುತ್ತಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಿಂದ ಬುಂಡೆಲೆ ಮತ್ತಷ್ಟು ಚಿಂತಿತರಾಗಿದ್ದು, ಯಾವುದೇ ಕಾರಣಕ್ಕೂ ದೂರ ಹಿಂಪಡೆಯದಿರಲು ನಿರ್ಧರಿಸಿದ್ದಾರೆ. ಆದರೆ ಈ ಪ್ರಕರಣದ ವಿರುದ್ಧ ಇನ್ನೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ. “ಪೊಲೀಸ್ ಅಧಿಕಾರಿಗಳು ಕ್ಷಮೆಯಾಚಿಸಿದ ರೀತಿಗೆ ನಾನು ಆಘಾತಕ್ಕೊಳಗಾಗಿದ್ದೆ. ನಾನು ಮುಸ್ಲಿಮನಾಗಿದ್ದರೂ, ಯಾವುದೇ ಕಾರಣವಿಲ್ಲದೆ ನನ್ನ ಮೇಲೆ ಹಲ್ಲೆ ನಡೆಸಲು ಪೊಲೀಸರಿಗೆ ಯಾವುದೇ ಹಕ್ಕಿಲ್ಲ” ಎಂದಿದ್ದಾರೆ.

ಇದಿಷ್ಟು ನಡೆದ ಘಟನೆಯಾಗಿದೆ. ಇಲ್ಲಿ ಮಧ್ಯಪ್ರದೇಶದ ಪೊಲೀಸರು ಪಕ್ಷಪಾತಿಯಂತೆ ವರ್ತಿಸಿದ್ದಾರೆ. ಅಧಿಕಾರ ದುರಪಯೋಗಪಡಿಸಿಕೊಂಡಿದ್ದಾರೆ. ಒಂದು ಧರ್ಮದ ವಿರುದ್ಧ ಕೆಲಸ ಮಾಡಿದ್ದಾರೆ. ಅಂದರೆ ತಪ್ಪುಗಳ ಮೇಲೆ ತಪ್ಪು ಮಾಡಿದ್ದಾರೆ. ಸಂತ್ರಸ್ತ ವ್ಯಕ್ತಿ ವಕೀಲನಾಗಿರದಿದ್ದರೆ ಪೊಲೀಸರು ಎಂದೋ ಈ ಕೇಸನ್ನು ಮುಚ್ಚಿಹಾಕಿರುತ್ತಿದ್ದರು ಎಂಬುದರಲ್ಲಿ ಸಂದೇಹವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಕೃಪೆ: ದಿ ವೈರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights