ಮೇ 03 ರ ನಂತರವೂ ಲಾಕ್‌ಡೌನ್‌ ಮುಂದುವರೆಸಬೇಕು ಎನ್ನುತ್ತಿವೆ 5 ರಾಜ್ಯಗಳು

ದೇಶಾದ್ಯಂತ ಕೊರೋನಾ ಆಕ್ರಮಣ ಹೆಚ್ಚುತ್ತಿದ್ದು, ಮೇ.03ರ ನಂತರವೂ ಲಾಕ್ ಡೌನ್ ಮುಂದುವರೆಸುವ ಸಂಬಂಧ ಕೈಗೊಳ್ಳಲಾಗುವ ನಿರ್ಧಾರ ಕೊರೋನಾ ತಡೆಗೆ ನಿರ್ಣಾಯಕವಾಗಿರಲಿದೆ.

ಏ.27 ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದು, ಇದಕ್ಕೂ ಮುನ್ನವೇ 5 ರಾಜ್ಯಗಳು ಲಾಕ್ ಡೌನ್ ಮುಂದುವರೆಸುವುದರ ಪರವಾಗಿ ನಿಂತಿವೆ.

ಮಹಾರಾಷ್ಟ್ರದಲ್ಲಿ ಕೊರೋನ ವೈರಸ್ ಪ್ರಕರಣಗಳು ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಂಜಾಬ್, ಒಡಿಶಾ ರಾಜ್ಯಗಳು ಮೇ.03 ರ ನಂತರವೂ ಲಾಕ್ ಡೌನ್ ಮುಂದುವರೆಸಬೇಕೆಂಬ ಅಭಿಪ್ರಾಯ ಹೊಂದಿವೆ. ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರ್ಯಾಣ, ಹಿಮಾಚಲ ಪ್ರದೇಶ, ಕರ್ನಾಟಕ ರಾಜ್ಯಗಳು ಕೇಂದ್ರದ ನಿರ್ದೇಶನದ ಪ್ರಕಾರ ನಿರ್ಧಾರ ಕೈಗೊಳ್ಳಲಿವೆ. ಇನ್ನು ಅಸ್ಸಾಂ, ಕೇರಳ, ಬಿಹಾರ ರಾಜ್ಯಗಳು ಏ.27 ರಂದು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಸಭೆ ನಡೆದ ಬಳಿಕ ಲಾಕ್ ಡೌನ್ ಮುಂದುವರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಿವೆ. ತೆಲಂಗಾಣ ಈಗಾಗಲೇ ಲಾಕ್ ಡೌನ್ ಅವಧಿಯನ್ನು ಮೇ.07 ವರೆಗೆ ವಿಸ್ತರಿಸಿದ್ದು, ಮೇ.05 ರಂದು ಮುಂದಿನ ನಿರ್ಧಾರ ಪ್ರಕಟಿಸಲಿವೆ.

ಸ್ಥಳೀಯ ಅಂಗಡಿಗಳನ್ನು ತೆರೆಯುವ, 11 ಮಾದರಿಯ ಕೈಗಾರಿಕೆಗಳಲ್ಲಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿರುವ ಕೇಂದ್ರದ ನಿರ್ದೇಶನವನ್ನು ಪಾಲಿಸಲು ಉತ್ತರ ಪ್ರದೇಶವೂ ಹಿಂದೇಟು ಹಾಕಿದೆ. ಈ ಸಂದರ್ಭದಲ್ಲಿ ನಾವು ಯಾವುದೇ ಅಂಗಡಿಗಳನ್ನು ತೆರೆಯುವುದಕ್ಕೆ ಅನುಮತಿ ನೀಡುವುದಿಲ್ಲ ಎಂದು ಉತ್ತರ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೊರೋನಾ ವೈರಸ್ ಹಾಟ್ ಸ್ಪಾಟ್ ಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕೆಂಬ ಅಭಿಪ್ರಾಯವನ್ನು 5 ರಾಜ್ಯಗಳು ಹೊಂದಿವೆ.  ರಾಷ್ಟ್ರ ರಾಜಧಾನಿ ದೆಹಲಿಯೂ ಈಗಾಗಲೇ ಲಾಕ್ ಡೌನ್ ವಿಸ್ತರಿಸುವ ಮಾತನ್ನಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights