ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಮುಟ್ಟಲೂ ಹೆದರುತ್ತಿದ್ದಾರೆ ಜನ!

ಕೊರೋನಾ ಭೀತಿಯಿಂದಾಗಿ ಜನರು ಪರದಾಡುತ್ತಿದ್ದಾರೆ. ಕೆಲವು ಜನರಲ್ಲಿ ಇನ್ನೂ ಕೊರೋನಾ ಜಾಗೃತಿ ಮೂಡದಿದ್ದರೂ ಹಲವು ಮಂದಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್​ ಕುರಿತು ಅರಿವು ಮೂಡಿದೆ. ಬಡವರು, ಕೂಲಿ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಹಣವಿಲ್ಲದೆ ಹಸಿವಿನಿಂದ ಪರಿತಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿಯೂ ಜನರು ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಮುಟ್ಟಲು ಹಿಂದೇಟು ಹಾಕುತ್ತಿದ್ದಾರೆ.

ಮಂಡ್ಯದಲ್ಲಿ ಕೊರೋನಾ ಭೀತಿ ಯಾವ ಮಟ್ಟಿಗೆ ಹೆಚ್ಚಾಗಿದೆಯೆಂದರೆ ರಸ್ತೆಯಲ್ಲಿ ಬಿದ್ದ ಸಾವಿರಾರು ರೂ. ಹಣವನ್ನು ಕೂಡ ಯಾರೂ ಮುಟ್ಟಲು ಹೋಗದೆ ಪೊಲೀಸರಿಗೆ ವಿಷಯ ತಿಳಿಸಿದ ಘಟನೆ ಜನರ ಆತಂಕ ಯಾವ ಮಟ್ಟಕ್ಕಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

‘ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ’ ಎಂಬ ಗಾದೆಮಾತಿದೆ. ಆದರೆ, ಮಂಡ್ಯದ ಪಾಂಡವಪುರ ಪಟ್ಟಣದ ಗಾಣಿಗರ ಬೀದಿಯಲ್ಲಿ ಬಿದ್ದಿದ್ದ 500 ರೂ. ಮುಖಬೆಲೆಯ 6 ನೋಟುಗಳು ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ರಸ್ತೆಯಲ್ಲಿ ಬಿದ್ದ 3 ಸಾವಿರ ರೂ. ಹಣವನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದ ಜನರು ಕೊರೋನಾ ಭೀತಿಯಿಂದ ಆ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಅನಾಥವಾಗಿ ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಕಂಡು ಆತಂಕಕ್ಕೊಳಗಾದ ಜನರು ಅದರ ಬಳಿಗೇ ಸುಳಿದಿಲ್ಲ. ನಂತರ ಸ್ಥಳಕ್ಕೆ ಬಂದ ಪೊಲೀಸರು ನೋಟುಗಳ ಮೇಲೆ ಸ್ಯಾನಿಟೈಸರ್ ಸಿಂಪಡಿಸಿ, ಗ್ಲೌಸ್​ ಧರಿಸಿ, ಆ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಯಾರಾದರೂ ಹಣ ಕಳೆದುಕೊಂಡಿದ್ದರೆ ಪೊಲೀಸ್ ಠಾಣೆಗೆ ಬಂದು ಹಣವನ್ನು ಪಡೆದುಕೊಂಡು ಹೋಗಲು ಸೂಚಿಸಲಾಗಿದೆ.

ಜನರು ಹಣವನ್ನು ಮುಟ್ಟಲು ಹಿಂದೇಟು ಹಾಕಲು ಕಾರಣವೂ ಇದೆ. ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹರಿದಾಡಿತ್ತು. ಆ ವಿಡಿಯೋದಲ್ಲಿ ಮುಸಲ್ಮಾನ್‌ ಯುವಕರು ನೋಟುಗಳಿಗೆ ಎಂಜಲು ಸವರುತ್ತಿರುವ ದೃಶ್ಯವಿತ್ತು. ಅವರು ಕೊರೊನಾ ಹರಡುವ ಉದ್ದೇಶದಿಂದ ಆ ರೀತಿ ಮಾಡಿದ್ದಾರೆ ಎಂದು ಹುಯಿಲೆಬ್ಬಿಸಲಾಗಿತ್ತು. ಆ ವಿಡಿಯೋ ಬಗ್ಗೆ ಫ್ಯಾಕ್ಟ್‌ ಚೆಕ್‌ ಮಾಡಿ, ಅದು ಫೇಕ್‌ ವಿಡಿಯೋ ಬಹಳ ತಿಂಗಳುಗಳ ಹಿಂದಿನದ್ದು ಎಂದು ಸತ್ಯ ಸಂಗತಿಯನ್ನು ಪತ್ತೆ ಹಚ್ಚಲಾಗಿತ್ತು.

ಆದರೆ, ಅಂತಹ ಫ್ಯಾಕ್ಟ್‌ ಚೆಕ್‌ಗಳು ಹೆಚ್ಚು ಜನರಿಗೆ ರೀಚ್‌ ಆಗುತ್ತಿಲ್ಲ. ಮಾಧ್ಯಮಗಳೂ ಅಂತಹ ಸತ್ಯಾಂಶವನ್ನು ಭಿತ್ತರಿಸುತ್ತಿಲ್ಲ. ಆ ಕಾರಣದಿಂದಾಗಿ ಜನರು ರಸ್ತೆಯಲ್ಲಿ ಬಿದ್ದಿದ್ದ ನೋಟುಗಳನ್ನು ಮುಟ್ಟುವುದಿರಲಿ. ಮುಸ್ಲೀಂ ವ್ಯಾಪಾರಿಗಳ ಬಳಿ ವ್ಯಾಪಾರ-ವ್ಯವಹಾರ ನಡೆಸಲೂ ಹಿಂದೇಟು ಹಾಕುವಂತಹ ಪರಿಸ್ಥಿತಿ ದೇಶಾದ್ಯಂತ ಹಬ್ಬಿದೆ. ಮಂಡ್ಯ ಇಂತಹ ಆತಂಕಕ್ಕೆ ಸಾಕ್ಷಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights