ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು: ಒಬ್ಬರು ಸಂವಿಧಾನಿಕ, ಮತ್ತೊಬ್ಬರು ಅಸಂವಿಧಾನಿಕ: ಸಿದ್ದರಾಮಯ್ಯ ಟೀಕೆ

ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಅವರಲ್ಲಿ ಯಡಿಯೂರಪ್ಪ ಸಂವಿಧಾನಿಕ ಮುಖ್ಯಮಂತ್ರಿ ಹಾಗೂ ವಿಯಯೇಂದ್ರ ಅಸಂವಿಧಾನಿಕ ಮುಖ್ಯಮಂತ್ರಿಯಾಗಿದ್ದಾರೆ. ಅದರಿಂದಾಗಿ ಬಿಜೆಪಿಯಲ್ಲಿ ಅಸಮಧಾನ/ಆಕ್ರೋಶ, ಭಿನ್ನಮತ ಬುಗಿಲೆದ್ದಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಬಿಜೆಪಿ ಶಾಸಕರಿಗೆ ನೀಡಲಾದ ಅನುದಾನವನ್ನೇ ವಾಪಸ್ ತೆಗೆದುಕೊಂಡಿದ್ದಾರೆ. ಮತ್ತೆ ಪ್ರತ್ಯೇಕ ಅನುದಾನವನ್ನೂ ಕೊಟ್ಟಿಲ್ಲ. ಹಾಗಾಗೇ ಶಾಸಕರು ಬಂಡಾಯ ಹೇಳುತ್ತಿದ್ದಾರೆ.

ಯಡಿಯೂರಪ್ಪ ನಮ್ಮ ನಾಯಕ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟಾಧ್ಯಕ್ಷ ಜೆ ಪಿ ನಡ್ಡಾ ನಮ್ಮ ನಾಯಕರು ಎಂದು ಯತ್ನಾಳ್ ಎಂದಿದ್ದಾರೆ. ಹಾಗಾಗಿ ಬಿಜೆಪಿ ಭಿನ್ನಮತದಲ್ಲಿ ನಾವು ಕೈಹಾಕಲ್ಲ. ಅವರಾಗೇ ಬಿಜೆಪಿ ಸರ್ಕಾರ ಬಿದ್ದರೇ ನಾವು ಜವಾಬ್ದಾರರಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಹಾಳಾಗಲು ಸಿದ್ದರಾಮಯ್ಯ ಕಾರಣ ಎಂಬ ಸಚಿವ ಸೋಮಣ್ಣರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಹೇಳುವ ಅವರಿಗೆ ಹಣಕಾಸಿನ ಬಗ್ಗೆ ಅಜ್ಞಾನ ಇದೆ.‌ ಹಾಗಾಗಿ ದುರುದ್ದೇಶ ಪೂರಕವಾಗಿ ಮಾಡಿದ್ದಾರೆ ಎಂದಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ, ನಮ್ಮ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ಕರ್ನಾಟಕ ಸರ್ಕಾರ ಮೊದಲನೇ ಸ್ಥಾನದಲ್ಲಿತ್ತು. ಆರ್​ಬಿಐ ಸೇರಿದಂತೆ ಹಲವು ಸಮೀಕ್ಷೆಗಳು ಹೇಳಿವೆ. ಅಲ್ಲದೇ ಮನಮೋಹನ್ ಸಿಂಗ್ ದೇಶ ಕಂಡ ಅತ್ಯುತ್ತಮ ಆರ್ಥಿಕ ತಜ್ಞ. ಅವರು ಕೂಡಾ ಹೇಳಿದ್ದರೂ ಸೋಮಣ್ಣ ಯಾವ ಆರ್ಥಿಕ ತಜ್ಞ ಎಂದು ತಿರುಗೇಟು ನೀಡಿದ್ದಾರೆ.

ವಲಸೆ ಕಾರ್ಮಿಕರಿಗೆ ಬಸ್, ರೈಲು ವ್ಯವಸ್ಥೆ ಮಾಡಿಲ್ಲ. ಊಟ ನೀಡಲಿಲ್ಲ. ಉದ್ಯೋಗ ಕೊಡಲಿಲ್ಲ. 6 ಲಕ್ಷಕ್ಕೂ ಹೆಚ್ಚು ಜನ ವಲಸೆ ಹೋಗಿದ್ದಾರೆ. ಹೀಗಾಗಿ ಪ್ರತಿಯೊಬ್ಬ. ವಲಸೆ ಕಾರ್ಮಿಕರಿಗೆ  10 ಸಾವಿರ ಕೊಡುವಂತೆ ತಿಳಿಸಿದ್ದೆ. ಆದರೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.

ಮಕ್ಕಳಿಂದ ಕೊರೋನಾ ಹರಡತ್ತಿದೆ. ಶಾಲೆ ಆರಂಭಿಸಲು ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇನ್ನೂ ಎರಡು ತಿಂಗಳು ಶಾಲೆಗಳನ್ನು ಆರಂಭಿಸಬಾರದು. ಬಳಿಕ ಪೂರ್ವಸಿದ್ಧತೆ ಕೈಗೊಳ್ಳಬೇಕು. ಮಕ್ಕಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಬೇಕು. ದೂರ ದೂರ ಕೂರಿಸಬೇಕು. ಎಚ್ಚರಿಕೆ ವಹಿಸಿದರೇ, ಸಾಮಾಜಿಕ ಅಂತರ ಕಾಪಾಡಿದರೇ ಕೊರೋನಾ ಹರಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights