ರಾಜ್ಯದ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ : ಮೈಸೂರಿನಲ್ಲಿ ವಿದೇಶಿಗರಿಗೆ ವಿಶೇಷ ಅರ್ಜಿ
ಕೊರೊನಾ ಭೀತಿಯಿಂದ ರಾಜ್ಯದ ಪ್ರವಾಸಿ ತಾಣಗಳ ಮೇಲೆ ನಿಗಾ ವಹಿಸಲಾಗಿದೆ. ಕೆಲವೊಂದು ಪ್ರವಾಸಿ ತಾಣಗಳಲ್ಲಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಇನ್ನೂ ಕೆಲ ಪ್ರವಾಸಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ.
ಹೌದು.. ಕೊರೋನಾ ಭೀತಿ ಹಿನ್ನೆಲೆ ಇಂದಿನಿಂದ 10 ದಿನಗಳ ಕಾಲ ನಂದಿಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದ್ದು, ಇತ್ತ ಮೈಸೂರಿನಲ್ಲಿ ಅರಮನೆಗೆ ಆಗಮಿಸುವ ವಿದೇಶಿಗರಿಗೆ ವಿಶೇಷ ಅರ್ಜಿ ಭರ್ತಿಯನ್ನು ಮಾಡಿಸಲಾಗುತ್ತಿದೆ. ಇನ್ನೂ ಕೆಲ ಕಡೆಗೆ ಮಾಸ್ಕ್ ಧರಿಸುವುದು, ಹ್ಯಾಂಡ್ ವಾಶ್ ಮಾಡುವುದು ಕಡ್ಡಾಯ ಮಾಡಲಾಗಿದೆ.
ವಿಶ್ವದಾದ್ಯಂತ ಆವರಿಸಿರುವ ಕೊರೊನಾ ವೈರಸ್ ಭೀತಿಯಿಂದಾಗಿ ಮಾರ್ಚ್ 14 ರಿಂದ ಮಾ.23ರ ಬೆಳಗ್ಗೆ 8 ಗಂಟೆಯವರೆಗೆ ಪ್ರವೇಶ ನಿಷೇಧಿಸಲಾಗಿದೆ. ರಾಜ್ಯದ ಇತರೆ ಪ್ರವಾಸಿ ತಾಣ, ಜಾತ್ರೆ, ರಥೋತ್ಸವ, ಚಿತ್ರಮಂದಿರ, ಉದ್ಯಾನವನಕ್ಕೂ ಕೂಡಾ ಪ್ರವೇಶ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಇನ್ನೂ ದೇಶದಲ್ಲಿ ವಿದೇಶಿಗರಿಂದಲೇ ಹೆಚ್ಚು ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಇದನ್ನ ತಡೆಯಲು ಮೈಸೂರು ಆಡಳಿತ ಮಂಡಳಿಯಿಂದ ಆರೋಗ್ಯ ತಪಾಸಣೆಗೆ ಆಧ್ಯತೆ ನೀಡಲಾಗಿದೆ. ಮೈಸೂರಿನಲ್ಲಿ ಅರಮನೆ ನೋಡಲು ಬರುವ ವಿದೇಶಿಗರಿಗೆ ಕೊರೊನಾ ಎಚ್ಚರಿಕೆ ನೀಡುವ ದೃಷ್ಟಿಯಿಂದ ಕೆಲವೊಂದು ಮುಂಜಾಗೃತ ಕ್ರಮಗಳನ್ನು ವಹಿಸಲಾಗಿದೆ. ಮೈಸೂರು ಆಡಳಿತ ಮಂಡಳಿ ಅರಮನೆ ನೋಡಲು ಬರುವ ವಿದೇಶಿಗರ ಆರೋಗ್ಯ ತಪಾಸಣೆಗೆ ಆಧ್ಯತೆಯನ್ನು ನೀಡಿದೆ. ಆ ಮೂಲಕ ವಿದೇಶಿಕರಿಗೆ ವಿಶೇಷ ಅರ್ಜಿ ಭರ್ತಿಗೆ ಸೂಚನೆ ನೀಡಲಾಗಿದೆ.
ಅರ್ಜಿಯಲ್ಲಿ ವಿದೇಶಿಗರು ಎಲ್ಲಿಂದ ಬಂದವರು..? ಯಾವಾಗ ಬಂದಿದ್ದಾರೆ..? ಎಲ್ಲಿಗೆ ಬಂದು ಮೈಸೂರಿಗೆ ಬಂದಿದ್ದಾರೆ…? ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ, ಸಂಪೂರ್ಣ ವಿಳಾಸ, ಮುಂದೆ ತೆರಳಲಿರುವ ಸ್ಥಳ ಹೀಗೆ ಪ್ರತಿಯೊಂದು ಮಾಹಿತಿಯನ್ನು ವಿದೇಶಿಗರಿಂದ ಕಲೆ ಹಾಕಲಾಗುತ್ತಿದೆ. ಇದರಿಂದ ಒಂದು ವೇಳೆ ಇವರಲ್ಲಿ ಸೋಂಕು ಇದ್ದು, ಆ ಸೋಂಕು ಹರಡಿದರೆ ಅದನ್ನ ತಡೆಯಲು ಮುಂಜಾಗೃತ ಕ್ರಮವಾಗಿ ಈ ಎಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಈ ರೀತಿ ಮಾಹಿತಿ ಸಂಗ್ರಹ ರಾಜ್ಯದಲ್ಲಿ ಎಲ್ಲಾ ಪ್ರಕ್ಷೇಣಿಯ ಸ್ಥಳಗಳಲ್ಲಿ ಕಲೆ ಹಾಕುವಂತಾದರೆ ಕೊರೊನಾ ತಡೆಗೆ ಸಹಾಯವಾಗಬಹುದು.
ಹೀಗಾಗಿ ನೀವು ರಜೆ ಇದೆ ಅಂತ ಪ್ರವಾಸಿ ತಾಣಗಳಿಗೆ ಹೋಗಬೇಕು ಅಂದುಕೊಂಡರೆ ಒಂದು ಬಾರಿ ಖಚಿತ ಮಾಹಿತಿ ಪಡೆದುಕೊಳ್ಳಿ. ಆದಷ್ಟು ಗುಂಪಾಗಿ ಸೇರುವುದರಿಂದ ದೂರವಿರಿ.

