ರಾಜ್ಯ ವನ್ಯಜೀವಿ ಮಂಡಳಿ ಸದಸ್ಯತ್ವಕ್ಕೆ ಸೌಮ್ಯರೆಡ್ಡಿ ರಾಜೀನಾಮೆ

ಕಳೆದ ಬಾರಿ ಬಿಜೆಪಿ ಅಧಿಕಾರದಲ್ಲಿದ್ದಾಗಿನಿಂದಲೂ ಹಲವಾರು ವರ್ಷಗಳಿಂದ ಕರಾವಳಿ ಕರ್ನಾಟಕ ಭಾಗದಲ್ಲಿ ಚರ್ಚೆಗೆ ಗ್ರಾಸ್ತವಾಗಿದ್ದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ರಾಜ್ಯ ವನ್ಯಜೀವಿ ಮಂಡಳಿ ರೈಲು ಯೋಜನೆಗೆ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯನಗರ ವಿಧಾನಸಭಾ ಶಾಸಕಿ ಸೌಮ್ಯರೆಡ್ಡಿಯವರು ರಾಜ್ಯ ವನ್ಯಜೀವಿ ಮಂಡಳಿಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ರೈಲು ಮಾರ್ಗ ಯೋಜನೆ ಅನುಮತಿ ನೀಡಲಾಗಿದೆ. ಈ ಯೋಜನೆಯಿಂದಾಗಿ ಮರಗಳ ಮಾರಣಹೋಮ ನಡೆಯಲಿದೆ. ಇದರಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಿರಲಿದೆ ಎಂದು ಹೇಳಿರುವ ಸೌಮ್ಯರೆಡ್ಡಿಯವರು ಮಂಡಳಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಸಂಪರ್ಕ ಸಾಧಿಸಲು ಅನುಕೂಲವಾಲಿದೆ. ಕೈಗಾರಿಕೆಗೆ ಪ್ರಗತಿಯನ್ನು ಸಾಧಿಸಲು ಪೂರಕವಾಗಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಜನೋಪಯೋಗಿಯಾಗಿದೆ ಎಂದು ಬಿಜೆಪಿ ಶಾಸಕರು ಮತ್ತು ಸಂಸದರು ವಾದ ಮಾಡುತ್ತಲೇ ಇದ್ದರು.

ಆದರೆ, ಈ ರೈಲುಮಾರ್ಗ ಪಶ್ವಿಮಘಟ್ಟಗಳನ್ನು ಸೀಳಿಕೊಂಡು ಹಾದುಹೋಗುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ವನ್ಯಜೀವಿಗಳ ಅಳಿವಿಗೂ ಈ ಯೋಜನೆ ಕಾರಣವಾಗುತ್ತದೆ ಎಂದು ಪರಿಸರವಾದಿಗಳು ವಾದ ವಿರೋಧ ವ್ಯಕ್ತಪಡಿಸಿದ್ದರು. ಹಿಂದಿನ ಎರಡೂ ಸರ್ಕಾರಗಳ ಅವಧಿಯಲ್ಲಿ ನೆನೆಗುದಿಗೆ ಬಿದ್ದದ್ದ ಯೋಜನೆಗೆ ಈಗ ಮುನ್ನೆಲೆಗೆ ಬಂದಿದ್ದು, ಅನುಮತಿಯನ್ನೂ ಪಡೆದುಕೊಂಡಿದೆ.

ಕರಾವಳಿ ಮತ್ತು ಉತ್ತರಕರ್ನಾಟಕ ಸಂಪರ್ಕಕ್ಕೆ ಪರ್ಯಾಯ ಮಾರ್ಗಗಳಿವೆ, ಆದರೆ, ಉದ್ದೇಶಪೂರ್ವಕವಾಗಿ ಬಿಜೆಪಿ ಸರ್ಕಾರ ಅಪಾರ ಅರಣ್ಯ ನಾಶದ ಈ ಯೋಜನೆಗೆ ಪಟ್ಟು ಹಿಡಿದಿರುವುದರ ಹಿಂದೆ ಸಾವಿರಾರು ಕೋಟಿ ಮೌಲ್ಯದ ಅರಣ್ಯ ಸಂಪತ್ತು ನಾಶ ಮತ್ತು ಲೂಟಿಯ ಸಂಚಿದೆ, ಗುತ್ತಿಗೆದಾರರ ಲಾಬಿ ಮತ್ತು ಪ್ರಮುಖವಾಗಿ ಬಳ್ಳಾರಿ ಗಣಿ ಲಾಬಿ ಕೆಲಸ ಮಾಡುತ್ತಿದೆ ಎಂದು ಸ್ಥಳೀಯ ಪರಿಸರವಾದಿಗಳು ಆರೋಪಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights