ರಿಸರ್ವ್ ಬ್ಯಾಂಕ್ ಮೀಸಲು ನಿಧಿಗೆ ಸರಕಾರದ ಕನ್ನ!! ಎತ್ತ ಸಾಗುತಿದೆ ದೇಶದ ಅರ್ಥ ವ್ಯವಸ್ಥೆ…

ದೇಶದ ಅತ್ಯುನ್ನತ ಬ್ಯಾಂಕ್ ಆಗಿರುವ ರಿಸರ್ವ್ ಬ್ಯಾಂಕಿನಿಂದ ಒಂದು ಲಕ್ಷ ಇಪ್ಪತ್ತಮೂರು ಸಾವಿರ ಕೋಟಿ ರೂ.ಗಳ ಭಾರಿ ಮೊತ್ತದ ಲಾಭಾಂಶ (ಡಿವಿಡೆಂಟ್) ಪಡೆದಿರುವುದರ ಹೊರತಾಗಿಯೂ, ಬ್ಯಾಂಕಿನ ಮೀಸಲು ನಿಧಿಗೆ ಕನ್ನಹಾಕಿರುವ ಕೇಂದ್ರ ಸರಕಾರವು ನಿಧಿಯ 52,640 ಕೋಟಿ ರೂ.ಗಳನ್ನು ತನ್ನದಾಗಿಸಿಕೊಂಡಿದೆ. ರಿಸರ್ವ್ ಬ್ಯಾಂಕ್ 28,000 ಕೋಟಿ ರೂ. ಡಿವಿಡೆಂಟನ್ನು ಮುಂಚಿತವಾಗಿಯೇ ಫೆಬ್ರವರಿಯಲ್ಲಿ ಪಾವತಿ ಮಾಡಿತ್ತು. ಜನಸಾಮಾನ್ಯರಿಗೆ ಈ ಮೊತ್ತದ ಅಗಾಧತೆ ಗೊತ್ತಾಗಲು ಕಾಗದದಲ್ಲಿ ಬರೆದೇ ನೋಡಬೇಕಷ್ಟೆ.

ಈ ಸಲದ ಬಜೆಟ್‌ನಲ್ಲಿ ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ (ಟ್ರಿಲಿಯನ್ ಎಂದರೆ ಒಂದು ಲಕ್ಷ ಕೋಟಿ)ಯಾಗುವ ಬೊಗಳೆ ಬಿಟ್ಟಿರುವ ಸರಕಾರವು, ಈ ಕ್ರಮಕ್ಕೆ ಮುಂದಾಗಿರುವುದನ್ನು ನೋಡಿದರೆ ಒಂದು ಮಾತು ಸ್ಪಷ್ಟವಾಗಿ ಗೊತ್ತಾಗುತ್ತದೆ. ಅದೆಂದರೆ, ಆರ್ಥಿಕ ಹಿಂಜರಿತದ ಮಾತುಗಳು ಮತ್ತು ಆರ್ಥಿಕ ಕುಸಿತದ ಭಯ-ಎರಡೂ ನಿಜ ಎಂಬುದು. ಇದನ್ನು ಸಾಬೀತುಪಡಿಸುವ ಅಗತ್ಯವೇ ಇರಲಿಲ್ಲ. ಬಜೆಟಿನಲ್ಲಿಯೇ ಸಾರ್ವಜನಿಕ ರಂಗದ ಉದ್ದಿಮೆಗಳಲ್ಲಿ ಇರುವ ಶೇರುಗಳನ್ನು ಮಾರಿ ಖಾಸಗಿಯವರಿಗೆ ತಟ್ಟೆಯಲ್ಲಿಟ್ಟು ದಾನ ಮಾಡಿ ಹಣ ಸಂಗ್ರಹಿಸುವ ಸರಕಾರದ ಉದ್ದೇಶದಿಂದಲೇ ಈ ಆರ್ಥಿಕ ಮುಗ್ಗಟ್ಟಿನ ಸುಳಿವು ಸಿಕ್ಕಿತ್ತು. ಅದನ್ನು ಸಾಬೀತುಪಡಿಸುವಂತೆ, ಅಟೋಮೊಬೈಲ್, ಜವಳಿ, ನಿರ್ಮಾಣ ಸೇರಿದಂತೆ ಹಲವಾರು ಉದ್ದಿಮೆಗಳು ಭಾರೀ ನಷ್ಟ ಅನುಭವಿಸುತ್ತಿದ್ದು, ಉದ್ಯೋಗ ಕಡಿತ ಮಾಡುತ್ತಿವೆ.

ಕಾರ್ಮಿಕರು ಮತ್ತು ನೌಕರರು ದಿನವೂ ಸಾವಿರ ಸಾವಿರ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಂಡು ಮನೆಗೆ ಹೋಗುತ್ತಿದ್ದರೂ, ಅದನ್ನು ಕಾಟಾಚಾರಕ್ಕೆಂಬಂತೆ ವರದಿ ಮಾಡುವ ಅಥವಾ ವರದಿ ಮಾಡದೆಯೇ ಇರುವ ಸರಕಾರಿ ಕೃಪಾಪೋಷಿತ ಭಟ್ಟಂಗಿ ಮಾಧ್ಯಮಗಳು, ಅದರಲ್ಲೂ ದೃಶ್ಯ ಮಾಧ್ಯಮಗಳು, ಸರಕಾರದ ಈ ಕ್ರಮವನ್ನು ಭಾರೀ ಕ್ರಾಂತಿಕಾರಿ ಕ್ರಮವೆಂದು ಬಣ್ಣಿಸುತ್ತಾ, ಇದು ಭಾರತದ ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಿ, ಪವಾಡವನ್ನು ಸಾಧಿಸುತ್ತದೆ ಎಂಬಂತೆ ಬಣ್ಣಿಸುತ್ತಾ, ಪರೋಕ್ಷವಾಗಿ ಗೊತ್ತಿದ್ದೋ, ಗೊತ್ತಿಲ್ಲದೆಯೋ, ಸಮಸ್ಯೆ ಇರುವುದು ನಿಜ ಎಂದು ಒಪ್ಪಿಕೊಳ್ಳುತ್ತಿವೆ. ಎಲ್ಲೆಲ್ಲೂ ‘ಚಿಪ್ಪು’ ಅರ್ಥಶಾಸ್ತ್ರಜ್ಞರು ಗಟ್ಟಿದನಿಯಲ್ಲಿ ಅರಚುತ್ತಿದ್ದಾರೆ.

ವಾಸ್ತವವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್, ಭಾರತೀಯ ಚುನಾವಣಾ ಆಯೋಗದಂತೆಯೇ ಒಂದು ಸ್ವಾಯತ್ತ ಸಂಸ್ಥೆ. ಅದರ ವ್ಯವಹಾರಗಳಲ್ಲಿ ಸರಕಾರ ನೇರವಾಗಿ ಕೈಹಾಕುವಂತಿಲ್ಲ. ಸರಕಾರವು ರಿಸರ್ವ್ ಬ್ಯಾಂಕಿನನ ಮೀಸಲು ನಿಧಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವಿದೆ ಎಂದು ಪ್ರತಿಪಾದಿಸುತ್ತಾ, ಅದರ ಮೇಲೆ ಹಿಂದಿನಿಂದಲೇ ಕಣ್ಣಿಟ್ಟಿತ್ತು. ಕಳೆದ ಡಿಸೆಂಬರ್‌ನಲ್ಲಿ ಊರ್ಜಿತ್ ಪಟೇಲ್ ಅವರು ರಾಜೀನಾಮೆ ನೀಡಿದ್ದು ಇದೇ ಕಾರಣಕ್ಕಾಗಿ. ಇದೀಗ ತಮಗೆ ಬೇಕಾದವರನ್ನು ನೇಮಿಸಿ, ಮಾಜಿ ಗವರ್ನರ್ ಬಿಮಲ್ ಜಲಾನ್ ನೇತೃತ್ವದ ಸಮಿತಿಯ ಮೂಲಕ ಈ ಕೆಲಸ ಮಾಡಿಸಿ, ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಗೂ ಧಕ್ಕೆ ಮಾಡಲಾಗಿದೆ.

ವಾಸ್ತವವಾಗಿ ಇಡೀ ವಿದ್ಯಮಾನವನ್ನು ಅರ್ಥ ಮಾಡಿಕೊಳ್ಳಲು ಆರ್ಥಿಕ ತಜ್ಞರಾಗಬೇಕಾದ ಅಗತ್ಯವಿಲ್ಲ. ಮೂಲಭೂತ ಮತ್ತು ಸಾಮಾನ್ಯ ಜನಜೀವನದ ಜ್ಞಾನ ಇದ್ದರೆ ಸಾಕಾಗುತ್ತದೆ. ಕಬ್ಬಿಣದ ಕಡಲೆಯಂತಹ ಹೆಸರುಗಳಿರುವ ಪರಿಕಲ್ಪನೆಗಳ ಅಗತ್ಯವೂ ಇಲ್ಲ. ಇವುಗಳನ್ನು ಸಾಮಾನ್ಯವಾಗಿ ಬಂಡವಾಳಶಾಹಿ ಅರ್ಥಶಾಸ್ತ್ರಜ್ಞರು ಜನರಲ್ಲಿ ಗೊಂದಲ ಉಂಟುಮಾಡಲು ಬಳಸುವುದೂ ಉಂಟು- ಈಗ ಇದೇ ಮೀಸಲು (reserve) ನಿಧಿಯನ್ನು ‘ಹೆಚ್ಚುವರಿ’ (surplus) ನಿಧಿ ಎಂದು ಕರೆದು ದಾರಿತಪ್ಪಿಸಲಾಗುತ್ತಿದೆ.

‘ಮನೆಯಲಿ ಇದ್ದರೆ ಚಿನ್ನ ಚಿಂತೆ ಯಾಕೆ ಅಣ್ಣ?’ ಇದು ಚಿನ್ನ ಅಡವಿಟ್ಟು ಸಾಲ ನೀಡುವ ಹಣಕಾಸು ಸಂಸ್ಥೆಯೊಂದರ ಸ್ಲೋಗನ್. ಈ ಸಂಸ್ಥೆ ಪ್ರಪಂಚದ ಹಲವಾರು ದೇಶಗಳು ಹೊಂದಿರುವುದಕ್ಕಿಂತ ಹೆಚ್ಚು ಚಿನ್ನದ ದಾಸ್ತಾನು ಹೊಂದಿದೆ. ಸಾಮಾನ್ಯವಾಗಿ ಹಿರಿಯರು ಮುಂದಿನ ಪೀಳಿಗೆಯ ಭದ್ರತೆಗಾಗಿ ಚಿನ್ನವನ್ನು ಕೂಡಿಡುತ್ತಾರೆ. ಯಾವುದೇ ‘ಚಿಂತೆ’ ಇಲ್ಲದೇ ಹೆಂಡತಿ ಮಕ್ಕಳ ಚಿನ್ನವನ್ನು ಅಡವಿಟ್ಟು, ಮಾರಿ ಶೋಕಿ ಮಾಡುವ ‘ಅಣ್ಣಂದಿರ’ ಖಯಾಲಿಯನ್ನೇ ಸರಕಾರದ ಈ ಕ್ರಮ ಅನುಸರಿಸುತ್ತಿವೆ.

ಯಾಕೆಂದರೆ, ರಿಸರ್ವ್ ಬ್ಯಾಂಕ್ ಪ್ರತೀ ವರ್ಷ ತನ್ನ ಲಾಭಾಂಶದ ಪಾಲನ್ನು (ಡಿವಿಡೆಂಟ್) ಸರಕಾರಕ್ಕೆ ಸಲ್ಲಿಸುತ್ತದೆ. ಆದರೆ, ಮೀಸಲು ನಿಧಿಯು ಹಿರಿಯರ ಚಿನ್ನದಂತೆ ಜನತೆ ಹಿತಾಸಕ್ತಿಗಳ ಭದ್ರತೆಗಾಗಿ ಇರುತ್ತದೆ. ಸರಕಾರಿ ಬಾಂಡ್‌ಗಳು, ಜನರು ಬ್ಯಾಂಕುಗಳಲ್ಲಿ ಉಳಿಸಿರುವ ಮತ್ತು ಠೇವಣಿ ಇರಿಸಿರುವ ಹಣಕ್ಕೆ ಭದ್ರತೆ ಒದಗಿಸುವುದು ಇದೇ ನಿಧಿ. ನಾವು ನಮ್ಮ ಕೈಯಲ್ಲಿರುವ ಕಾಗದದ ನೋಟುಗಳನ್ನು ನಂಬುತ್ತಿರುವುದೇ ರಿಸರ್ವ್ ಬ್ಯಾಂಕಿನ ಖಾತರಿಯಿಂದ. ಅದರಲ್ಲಿ I promise to pay… ಎಂದು ಗವರ್ನರರ ಸಹಿ ಇರುತ್ತದೆ!  ಸರಕಾರ ಅದಕ್ಕೂ ಮೊತ್ತ ಮೊದಲ ಬಾರಿಗೆ ಕೈ ಹಾಕಿದೆ. ಹಿಂದೊಮ್ಮೆ 1991ರಲ್ಲಿ ಚಂದ್ರಶೇಖರ್ ಸರಕಾರ ಬ್ಯಾಂಕ್ ಆಫ್ ಇಂಗ್ಲೆಂಡ್‌ನಲ್ಲಿ ಭಾರತದ ಮೀಸಲು ಚಿನ್ನವನ್ನು ಅಡವಿಟ್ಟು ಸಾಲಪಡೆದುದನ್ನು ಬಿಟ್ಟರೆ, ಯಾವ ಸರಕಾರವೂ ಇಂತಹಾ ಕೆಲಸಕ್ಕೆ ಕೈಹಾಕಿರಲಿಲ್ಲ. ಆ ಚಿನ್ನವನ್ನು ಬಿಡಿಸಿತಂದದ್ದು ಮನಮೋಹನ್ ಸಿಂಗ್ ಅವಧಿಯಲ್ಲಿ.

ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರುನೋಡುತ್ತಿರುವ ಸಂದರ್ಭದಲ್ಲಿ ಸರಕಾರವು ಲಕ್ಷಾಂತರ ಕೋಟಿಯ ಪ್ರಮಾಣದಲ್ಲಿ ಬ್ಯಾಂಕುಗಳ ದುಡಿಯದ ಆಸ್ತಿ (NPA-ವಾಸ್ತವವಾಗಿ ಭಾರೀ ಕುಳಗಳು ಮುಳುಗಿಸಿ, ವಸೂಲು ಮಾಡಲಾಗದ ಸಾಲ)ಯನ್ನು ಮನ್ನಾ ಮಾಡಿ, ಹೆಚ್ಚುವರಿಯಾಗಿ ಕೆಲವು ಲಕ್ಷ ಕೋಟಿ ರೂ.ಗಳ ಹೊಸ ಬಂಡವಾಳ ಒದಗಿಸಿದರೂ, ಹೆಚ್ಚಿನ ಬ್ಯಾಂಕುಗಳು ನಷ್ಟದಲ್ಲಿವೆ. ಎಟಿಎಂಗಳಲ್ಲಿ ಹಣವಿಲ್ಲ; ಹಣವಿಲ್ಲ, ನಾಳೆಬನ್ನಿ ಎಂದು ಕೆಲವು ಬ್ಯಾಂಕ್ ಶಾಖೆಗಳು ಗ್ರಾಹಕರನ್ನು ಹಿಂದೆ ಕಳಿಸುತ್ತಿರುವ ವರದಿಗಳೂ ಚದರಿದಂತೆ ಬರುತ್ತಿವೆ. ಈ ಬಾರಿಯ ಬಜೆಟ್‌ನಲ್ಲಿ ಭಾರೀ ಹಣಕಾಸು ಕೊರತೆ ಇದ್ದು, ಅದನ್ನು ಜಿಡಿಪಿಯ 3.3 ಶೇಕಡಾದ ಮಟ್ಟದಲ್ಲಿ ಉಳಿಸಿಕೊಳ್ಳಲು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಹೆಣಗುತ್ತಿದ್ದಾರೆ. ಆರ್ಥಿಕ ಬೆಳವಣಿಗೆಯ ದರ ಕಳೆದ ಐದು ವರ್ಷಗಳಲ್ಲೇ ತಳಮಟ್ಟದಲ್ಲಿದೆ. ಚಿಕ್ಕ ಕೈಗಾರಿಕೆಗಳು ನಷ್ಟ ಅನುಭವಿಸುತ್ತಿರುವುದರಿಂದ ಬಜೆಟ್‌ನಲ್ಲಿ ತೋರಿಸಲಾಗಿರುವಷ್ಟು ತೆರಿಗೆ ಸಂಗ್ರಹವಾಗದು ಎಂಬ ಭಯವೂ ಸರಕಾರವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ 70,000 ಕೋಟಿ ರೂ. ಹೊಸ ಬಂಡವಾಳ ಒದಗಿಸುವ ಮಾತನ್ನು ನಿರ್ಮಲಾ ಸೀತಾರಾಮನ್ ಈಗಾಗಲೇ ಆಡಿದ್ದಾರೆ.

ಜನಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ, ರಿಸರ್ವ್ ಬ್ಯಾಂಕಿನ ಮೀಸಲು ನಿಧಿಯಿಂದ ಹಣ ತೆಗೆಯುವ ಸರಕಾರದ ಕ್ರಮವು, ಜನರ ಸಾಮೂಹಿಕ ಹಣವನ್ನು ಬ್ಯಾಂಕುಗಳ ಮೂಲಕ ಶ್ರೀಮಂತ ಉದ್ಯಮಿಗಳಿಗೆ ಒದಗಿಸುವ ಕ್ರಮವಲ್ಲದೇ ಬೇರೇನಲ್ಲ. ಸರಕಾರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ)ದ ಹೆಚ್ಚಳಕ್ಕೆ ಗಮನಹರಿಸಿದೆಯೇ ಹೊರತು ಅದರ ನ್ಯಾಯಬದ್ಧ ಹಂಚಿಕೆಯ ಬಗ್ಗೆ ಅಲ್ಲ. ಜಿಡಿಪಿ ಹೆಚ್ಚಳದ ಅಂಕಿ ಅಂಶದಿಂದ ದೇಶವು ಪ್ರಗತಿಯಲ್ಲಿದೆ ಎಂಬ ಭ್ರಮೆಯನ್ನು ಹುಟ್ಟಿಸಲು ಸಾಧ್ಯವಿದೆ. ಆದರೆ, ಜಿಡಿಪಿ ದೇಶದ ಸರ್ವಾಂಗೀಣ ಪ್ರಗತಿಗೆ ಮಾನದಂಡವಲ್ಲ ಎಂದು ಹಲವಾರು ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ್ದಾರೆ.

ಇದನ್ನು ಸರಳವಾಗಿ ಹೀಗೆ ವಿವರಿಸಬಹುದು. ನೂರು ಕುಟುಂಬಗಳ ಒಂದು ಹಳ್ಳಿಯನ್ನು ಊಹಿಸಿಕೊಳ್ಳೋಣ. ಅವುಗಳ ಒಟ್ಟು ಉತ್ಪನ್ನ (ಆದಾಯ)ವೇ ಅಲ್ಲಿನ ಜಿಡಿಪಿ. ಇದರಲ್ಲಿ ಒಂದು ಕುಟುಂಬ ಶೇಕಡಾ 20ರಷ್ಟು ಆದಾಯ ಹೊಂದಿದೆ. ಉಳಿದ ಒಂಭತ್ತು ಕುಟುಂಬಗಳು ಇನ್ನೂ 20 ಶೇಕಡಾ ಆದಾಯ ಹೊಂದಿವೆ ಎನ್ನೋಣ. ಉಳಿದ 60 ಶೇಕಡಾ ಆದಾಯ ಉಳಿದ 90 ಕುಟುಂಬಗಳಲ್ಲಿ ಬೇರೆಬೇರೆ ಪ್ರಮಾಣದಲ್ಲಿ ಹಂಚಿಕೆಯಾಬೇಕು. ಮೊದಲಿನ ಹತ್ತು ಕುಟುಂಬಗಳ ಆದಾಯ ಹೆಚ್ಚಾದರೂ ಜಿಡಿಪಿ ಏರುತ್ತದೆ. ಇದರ ಲಾಭ ಉಳಿದ 90 ಕುಟುಂಬಗಳಿಗೆ ಸಿಗವುದಿಲ್ಲ. ವಾಸ್ತವವಾಗಿ ಹಣದುಬ್ಬರದಿಂದ ಅವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ. ಇದುವೇ ಬಂಡವಾಳಶಾಹಿ ವ್ಯವಸ್ಥೆ ಮತ್ತು ಇದುವೇ ಭಾರತದ ಸ್ಥಿತಿ.

ಇಂತಹ ಆರ್ಥಿಕ ವೈಫಲ್ಯಗಳನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆಡೆ ಸೆಳೆಯುವ ಸಲುವಾಗಿಯೇ ಅಯೋಧ್ಯೆ, ಕಾಶ್ಮೀರ, ಪಾಕಿಸ್ತಾನ, ಗಡಿ, ಗೋವು, ಮುಸ್ಲಿಮರು, ಹಿಂದೂತ್ವ ಇತ್ಯಾದಿ ಭಾವನಾತ್ಮಕ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಮತ್ತು ಜನರ ಸಮಸ್ಯೆಗಳನ್ನೆತ್ತಿ ಸರಕಾರವನ್ನು ಟೀಕಿಸುವವರಿಗೆ ದೇಶದ್ರೋಹಿ ಪಟ್ಟಕಟ್ಟಲಾಗುತ್ತದೆ.

ನಿಖಿಲ್ ಕೋಲ್ಪೆ 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights