ರೈಲ್ವೇ ನಿಲ್ದಾಣದಲ್ಲಿ ಕೊನೆಯುಸಿರೆಳೆದ ಮಗುವಿನ ತಾಯಿ; ನಿಲ್ದಾಣದಲ್ಲಿ ಮಲಗಿದ್ದಾಳೆ ನನ್ನವ್ವ! ಕವನ
ಬಿಹಾರದ ಮುಜಾಫರ್ ಪುರ್ ರೈಲ್ವೇ ನಿಲ್ದಾಣದಲ್ಲಿ ಇಬ್ಬರು ಪುಟ್ಟ ಕಂದಮ್ಮಗಳ ತಾಯಿ ಹಸಿವು ಬಳಲಿಕೆಯಿಂದ ಅಸುನೀಗಿದ್ದರು. ಆಕೆಯ ಒಂದು ತಾಯಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದರೆ, ಮೊತ್ತೊಂದು ಮಗು ಆಕೆಯ ಸೆರಗು ಹಿಡಿದು ಆಡುತ್ತಿತ್ತು. ಈ ವಿಡಿಯೋ ದೇಶಾದ್ಯಂತ ವೈರಲ್ ಆಗಿದ್ದು, ಆ ದೃಶ್ಯಗಳು ಎಲ್ಲರ ಮನ ಕಲಕಿದ್ದವು. ಆ ಕಂದಮ್ಮಗಳ ಮುಗ್ಧ ಸ್ಥಿತಿಯನ್ನು ನೋಡಿ ವರದರಾಜ್ ಬಿರ್ತಿಯವರು ಕವನ ಬರೆದಿದ್ದಾರೆ. ಅದೇ …….
ನಿಲ್ದಾಣದಲ್ಲಿ ಮಲಗಿದ್ದಾಳೆ ನನ್ನವ್ವ…
ನಡಿಗೆ ನಿಲ್ಲಿಸಿ ಮಲಗಿದೆಯೇಕೆ
ನನ್ನವ್ವ…
ನಿದ್ದೆಗೆ ಜಾರಿದೆಯ
ಹೊದ್ದ ಚಾದರ ಎಳೆದರೂ
ಎದ್ದು ಬರಲಾರೆಯ
ಇಲ್ಲಾ..
ಬಿದ್ದೋರ ನೋಡದ ನಿಲ್ದಾಣದಲ್ಲಿ
ಗೆದ್ದೋರ ಕಾಯುತ್ತಿರುವೆಯ
ಹಳಿಯ ಮೇಲೆ ಗುಡುಗುವ ರೈಲು ಸದ್ದಿಗೆ
ನಿನ್ನ ಈ ಹಸಿವಿನ ಹಳೆಯ ಹಾಡು
ಕೇಳಿಸದು ನನ್ನವ್ವ
ಎದ್ದೇಳು,ರೋಗ ಅಂಟಿದ ನೆಲದಿಂದ
ದೂರ ಹೋಗೋಣ..
ಒಡೆದ ಪಾದ,ಸೀಳು ಗಾಯದಲ್ಲಿ
ನೆತ್ತರು ತೊಟ್ಟಿಕ್ಕುತ್ತಿದೆ
ಮನೆಯ ದಾರಿ,ಬಿಡದೆ ಕಾಡಿದ ಪರಿ
ಮನಕೆ ಮರೆಯಾಗುತ್ತಿದೆ
ಹಳಿಯ ಮೇಲಿನ ರೊಟ್ಟಿಚೂರು ಹಳಸಿದೆ
ರೋಗಿ ಯಾರು ?
ರೋಗ ಯಾವುದು ?
ತಿಳಿಯದಾಗಿದೆ..
ಹೊತ್ತು ಸಾಗಿದ ನಿನ್ನ ಕೈಯೇಕೆ
ಮೆತ್ತಗಾಗಿದೆ…
ಹೊಟ್ಟೆ ಹಸಿದಿದೆ ನನ್ನವ್ವ..
ಎದ್ದೇಳು ,ತುತ್ತು ಕೊಡದ ನೆಲದಲ್ಲಿ
ಮುತ್ತಾದರೂ ಕೊಡು ಬಾ
ಬಿದ್ದು ನರಳುವ ನಿನ್ನ ನೆರಳು
ಬೀಗ ಜಡಿದ ಗುಡಿಯವರೆಗೆ
ಸಾಗದಾಗಿದೆ…
ಕದ್ದವರು ಮೆದ್ದವರು
ಅಂತರದಲ್ಲಿ ಕುಂತಿದ್ದಾರೆ
ಎದ್ದೇಳು ನನ್ನವ್ವ…
ಹಸಿವಿನ ಹಾಡನ್ನು ನನಗಾಗಿ
ಇನ್ನೊಮ್ಮೆ ಹಾಡು
ಕೊನೆಯ ಬಾರಿ
ಮುಚ್ಚಿದ ಚಾದರದೊಳಗೆ
ಬತ್ತಿದ ಒಡಲ ನಾನೂ ಬಂದು
ಸೇರುತ್ತೇನೆ
ಹಸಿವು ಅಂತ್ಯವಾಗಲಿ
ನಮ್ಮೊಂದಿಗೆ…
ವರದರಾಜ್ ಬಿರ್ತಿ

