ಲಾಕ್‌ಡೌನ್: ಯಡಿಯೂರಪ್ಪ ಸರ್ಕಾರ ಎಚ್ಚರವಹಿಸಬೇಕಾದ 10 ಅಂಶಗಳು

ಕೊರೊನಾ ವೈರಸ್‌ ಹರಡುವಿಕೆಯನ್ನು ನಿಯಂತ್ರಿಸಲುದೇಶಾದ್ಯಂತ 21 ದಿನಗಳ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ.ಈ ಮಧ್ಯೆ  ಲಾಕ್‌ಡೌನ್ ಏಪ್ರಿಲ್ 14 ರ ಬಳಿಕ ಮುಂದುವರಿಸಬೇಕೋ ಅಥವಾ ಹಂತಹಂತವಾಗಿ ತೆರವುಗೊಳಿಸಬೇಕೋ ಎಂಬ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿದ್ದು, ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪನವರು ಲಾಕ್‌ಡೌನ್‌ ಮುಂದುವರಿಯುವ ಸೂಚನೆ ನೀಡಿದ್ದಾರೆ. ಸರಿಯಾದ ವ್ಯವಸ್ಥೆ, ಯೋಜನಾ ಕಾರ್ಯಕ್ರಮಗಳ ಕೊರತೆಯಿಂದಾಗಿ ಅಲ್ಲಲ್ಲಿ ಲಾಕ್‌ಡೌನ್ ಉಲ್ಲಂಘನೆ ನಡೆಯುತ್ತಿದ್ದು, ಹಲವಾರು ಜನರು ತಮ್ಮೂರು ತಲುಪಲು ನಡೆದೇ ಹೋಗುತ್ತಿದ್ದಾರೆ. ಇಂದು ಬೆಂಗಳೂರಿನಿಂದ ಸಿಂಧನೂರಿಗೆ ನಡೆದೇ ಹೋಗುತ್ತಿದ್ದ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಮಹಿಳೆಯೊಬ್ಬರು ಹಸಿವಿನಿಂದ ಜೀವ ಕಳೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಸರ್ಕಾರವೂ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.  ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ಪ್ರಾಯೋಗಿಕವಾಗಿ ಸ್ಪಂದಿಸಬೇಕಾಗಿದೆ. ಸರ್ಕಾರ ಎಚ್ಚರವಹಿಸಬೇಕಾದ ಕೆಲವು ಅಂಶಗಳು ಹೀಗಿವೆ.

1. ಜನರಿಗೆ ಅಗತ್ಯ ಸಾಮಾಗ್ರಿಗಳ ಖರೀದಿಗೆ ಅಂಗಡಿಗಳನ್ನು ಹೆಚ್ಚು ಹಗಲು ಹೊತ್ತಿನಲ್ಲಿ ತೆರೆದಿಡಬೇಕು ಹಾಗೂ ಅಂಗಡಿಗಳಲ್ಲಿ ದಿನಸಿ ವಸ್ತುಗಳಿಗೆ ಯಾವುದೇ ಕೊರತೆ ಬಾರದ ಹಾಗೆ ನೋಡಿಕೊಳ್ಳಬೇಕು. ಪಂಚಾಯತಿಯಿಂದ ಅಗತ್ಯ ಸಾಮಗ್ರಿಗಳನ್ನು ಪ್ರತಿ ಹಳ್ಳಿಗಳಿಗೂ ತಲುಪಿಸುವ ವ್ಯವಸ್ಥೆಯಾಗಬೇಕು. ಇದರಿಂದ ಜನರು ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅಲ್ಲಲ್ಲಿ ಮುಗಿಬೀಳುವುದು ತಪ್ಪುತ್ತದೆ.

2. ಅನಗತ್ಯವಾಗಿ ಹೊರಗಡೆ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯ ವಸ್ತುಗಳಿಗಾಗಿ ಹೊರಬರುವವರ ಜನರಿಗೆ ವಿನಾಯಿತಿ ನೀಡಬೇಕು. ಇದನ್ನು ಸೂಕ್ತವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಪೊಲೀಸರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು.

3. ಸರ್ಕಾರ, ಪೊಲೀಸರು ಹಾಗೂ ಆಡಳಿತ ವಿಭಾಗ ಲಾಕ್‌ಡೌನ್ ಪರಿಸ್ಥಿತಿಯನ್ನು ಯಾಂತ್ರಿಕವಾಗಿ ಜಾರಿಗೆ ತರುವುದರ ಬದಲಾಗಿ ಪ್ರಾಯೋಗಿಕ ಮಟ್ಟದಲ್ಲಿ ಚಿಂತಿಸಿ ಜಾರಿಗೊಳಿಸಬೇಕು. ಹಾಗೂ ಅಡೆತಡೆಗಳನ್ನು ಗಮನಿಸಿ ಕೂಡಲೇ ಸರಿಪಡಿಸುವ ಕೆಲಸವನ್ನು ಮಾಡಬೇಕು.

4. ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವೈದ್ಯರು ಹಾಗೂ ಆಸ್ಪತ್ರೆಗಳ ಪಾತ್ರ ಬಹುಮುಖ್ಯವಾಗಿರುವುದರಿಂದ ಆಸ್ಪತ್ರೆಗಳಿಗೆ ಹಾಗೂ ವೈದ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಹಾಗೂ ಅದರಲ್ಲಿ ಯಾವುದೇ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು.

5. ನಗರ ಪ್ರದೇಶಗಳಿಗೆ ವಲಸೆ ಬಂದಿರುವ ವಿದ್ಯಾರ್ಥಿಗಳು, ಉದ್ಯೋಗಸ್ಥ ಯುವಕಜನರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಹಾರ ಪೂರೈಕೆ ಮಾಡಲು ಮೊಬೈಲ್‌ ಕ್ಯಾಂಟೀನ್‌ಗಳನ್ನು ಹಲವು ಪ್ರದೇಶಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು.

6. ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸರ್ವೇ ಮಾಡುವ ಸಂದರ್ಭದಲ್ಲಿ ವೃದ್ದರಿಗೆ ಅಗತ್ಯವಾಗಿ ಬೇಕಾಗಿರುವ ಔಷಧಿಗಳ ಮಾಹಿತಿ ಸಂಗ್ರಹಿಸಿ ಅದನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು.

7. ಲಾಕ್ ಡೌನ್ ಮುಗಿಯುತ್ತಿದ್ದಂತೆ ಜನರು ದೌಡಾಯಿಸುವುದು ಪ್ರಾರ್ಥನಾ ಮಂದಿರಗಳಿಗೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ತೆರವುಗೊಳಿಸುವ ಸಮಯದಲ್ಲಿ ಮಂದಿರ, ಮಸೀದಿ, ಚರ್ಚುಗಳಿಗೆ ಜನರು ದೌಡಾಯಿಸದಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಧಾರ್ಮಿಕ ಮುಖಂಡರುಗಳ ಜೊತೆಗೆ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿ ಇದ್ದು ಅವರಿಗೆ ಸೂಕ್ತ ಸಲಹೆ, ಸೂಚನೆಗಳನ್ನು ನೀಡುತ್ತಿರಬೇಕು.

8. ಲಾಕ್‌ಡೌನ್‌ ಇದ್ದರೂ ಕೆಲವೊಂದು ನಿರ್ಬಂಧಗಳನ್ನು ಮುಂದುವರಿಸಿ ಜನರಿಗೆ ಕೆಲಸ ಕಾರ್ಯಗಳಿಗೆ ಅವಕಾಶ ಕಲ್ಪಿಸಬೇಕಾಗಿದೆ. ಆದರೆ ಈ ಸಂದರ್ಭದಲ್ಲಿ ಕೈಗೊಳ್ಳಬೇಕಾಗಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

9. ಆಯಾ ಕ್ಷೇತ್ರಗಳ ಶಾಸಕರು, ಕಾರ್ಪೊರೇಟರ್ ಗಳು ಜನರಿಗೆ ಅಗತ್ಯ ವಸ್ತುಗಳನ್ನು‌ ಒದಗಿಸುವ ಕಾರ್ಯಕ್ಕೆ ನಾಯಕತ್ವ ವಹಿಸಬೇಕು. ಪಕ್ಷ, ಜಾತಿ, ಧರ್ಮ ಮರೆತು ಜನಪ್ರತಿನಿಧಿಗಳು ಕೆಲಸ ಕಾರ್ಯಗಳನ್ನು ಮಾಡಬೇಕು.

10. ಬಡವರು, ದಿನಗೂಲಿ ನೌಕರರು, ನಿರ್ಗತಿಕರ ಆದಾಯದ ಮೂಲವೇ ಇಲ್ಲವಾಗಿದೆ, ಅವರಿಗೆ ತಾತ್ಕಾಲಿಕವಾಗಿ ಉದ್ಯೋಗ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೂ, ಕೊರೊನಾ ಸಂಕಷ್ಟ ಮುಗಿಯುವವರೆಗೂ ಅಂತಹ ಜನರ ಅಗತ್ಯತೆಗಳನ್ನು ಪೂರೈಸಬೇಕು. ಅವರ ಜೀವನಕ್ಕೆ ಆಧಾರ ಕಲ್ಪಿಸಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights