ವಲಸೆ ಕಾರ್ಮಿಕರ ದುಸ್ಥಿತಿಗೆ ಬಿಜೆಪಿ ಸರ್ಕಾರವೇ ಕಾರಣ: ಆಮ್ ಆದ್ಮಿ ಪಕ್ಷ
ವಲಸೆ ಕಾರ್ಮಿಕರ ಇಂದಿನ ದುಸ್ಥಿತಿಗೆ ಬಿಜೆಪಿ ಸರ್ಕಾರವೇ ಮೂಲ ಕಾರಣ ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ರಾಘವ್ ಚಂದಾ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್ ನಿಂದ ಜನರನ್ನು ರಕ್ಷಿಸಲು ಸರ್ಕಾರವು ಲಾಕ್ ಡೌನ್ ಘೋಷಿಸಿದ್ದು, ಕೆಲಸಕ್ಕಾಗಿ ಹಳ್ಳಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ವಲಸೆ ಬಂದಿದ್ದ ಕಾರ್ಮಿಕರು ಲಾಕ್ ಡೌನ್ ಪರಿಣಾಮವಾಗಿ ತಮ್ಮ ಹಳ್ಳಿಗಳಿಗೆ ತಲುಪಲು ಯಾವುದೇ ಸಾರಿಗೆ ವ್ಯವಸ್ಥೆ ಮಾಡದ ಕಾರಣ ತಮ್ಮ ಊರುಗಳಿಗೆ ತಲುಪಲು ಲಾರಿ, ಟ್ರಂಕ್ ಅಥವಾ ನಡೆದುಕೊಂಡೇ ಸಾಗಿದ್ದಾರೆ.
1947 ನಂತರ ಇದೇ ಮೊದಲ ಬಾರಿಗೆ ವಲಸೆ ಕಾರ್ಮಿಕರು ಈ ರೀತಿಯಲ್ಲಿ ವಲಸೆ ಹೊರಟಿದ್ದಾರೆ. ಕಾರ್ಮಿಕರು ತಮ್ಮ ರಾಜ್ಯಗಳಿಗೆ ತಲುಪಿಸಲು ಯಾವುದೇ ಸಾರಿಗೆ ವ್ಯವಸ್ಥೆಯನ್ನು ಮಾಡದೇ ಬಿಜೆಪಿ ಸರ್ಕಾರ ಬೇಜವಾಬ್ದಾರಿಯಾಗಿ ವರ್ತಿಸಿದೆ ಎಂದು ದೂಷಿಸಿದ್ದಾರೆ.
ಸರ್ಕಾರವು ಬಂಡಾವಾಳಷಾಹಿಗಳು, ಶ್ರೀಮಂತರನ್ನು ವಿದೇಶಗಳಿಂದ ಸ್ವದೇಶಗಳಿಗೆ ಕರೆಸಿಕೊಳ್ಳಲು ಐಶಾರಾಮಿ ಹಡಗುಗಳು ಮತ್ತು ವಿಮಾನಗಳ ವ್ಯವಸ್ಥೆ ಮಾಡಿದ್ದಾರೆ. ಆದರೆ ಬಡ ಜನರಾದ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಕಲ್ಪಿಸದೆ ಅನಾಗರಿಕವಾಗಿ ವರ್ತಿಸಿದೆ. ಈಗಾಲಾದರೂ ಸರ್ಕಾರವು ಈ ವಲಸೆ ಕಾರ್ಮಿಕರ ಬಗ್ಗೆ ಗಮನಹರಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಕೊರೊನಾ ವೈರಸ್ ಭೀತಿಯಿಂದ ದೇಶವನ್ನು ಮಾರ್ಚ್ 25 ರಿಂದ ಲಾಕ್ ಡೌನ್ ಮಾಡಲಾಗಿದ್ದು, ಇಲ್ಲಿಯವರೆಗೆ 90,000 ಮಂದಿಗೆ ಸೋಂಕು ತಗುಲಿದ್ದು, 2,800 ಮಂದಿಯನ್ನು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಆದರೆ, ಲಾಕ್ಡೌನ್ ಸಂಕಷ್ಟದಿಂದಾಗಿ ನಡೆದು ಹೊರಟಿದ್ದ 390ಕ್ಕೂ ಹೆಚ್ಚು ಕಾರ್ಮಿಕರು ರಸ್ತೆ ಮಧ್ಯದಲ್ಲೇ ಮೃತಪಟ್ಟಿದ್ದಾರೆ.

