ಬಸವಕಲ್ಯಾಣದಲ್ಲಿ ಮುಸ್ಲೀಂ ಅಭ್ಯರ್ಥಿ‌: ಮುಸ್ಲಿಂ ರಕ್ಷಕ ಯಾರೆಂದು JDS-ಕಾಂಗ್ರೆಸ್‌ ಜಟಾಪಟಿ!

ಕರ್ನಾಟಕದಲ್ಲಿ ಒಂದು ಲೋಕಸಭಾ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ  ನಡೆಯುತ್ತಿದೆ. ಈ ಪೈಕಿ ಬಸವಕಲ್ಯಾಣ ವಿಧಾನಸಭಾ ಉಪಚುನಾವಣೆ ಮುಸ್ಲೀಂ ವಿಚಾರದಲ್ಲಿ ಜೆಡಿಎಸ್‌-ಕಾಂಗ್ರೆಸ್‌ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.

ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಶರಣು ಸಲಗಾರ್, ಕಾಂಗ್ರೆಸ್‌ನಿಂದ ಮಲ್ಲಮ್ಮ ಮತ್ತು ಜೆಡಿಎಸ್‌ನಿಂದ ಸೈಯದ್ ಅಶ್ರಬ್ ಅಲಿಖಾನ್ ಸ್ಪರ್ಧಿಸಲಿದ್ದಾರೆ. ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ, ಕಾಂಗ್ರೆಸ್‌ ಮುಸ್ಲಿಂ ರಕ್ಷಕರು ನಾವೇ ಎಂದು ಹೇಳಿಕೊಂಡು ಚುನಾವಣಾ ಪ್ರಚಾರಕ್ಕೆ ಇಳಿಯುತ್ತಿದೆ.

ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಸಿಎಎ ಪ್ರತಿಭಟನೆ ವೇಳೆ ಹೆಣಗಳು ಬಿದ್ದು, ಅಲ್ಪಸಂಖ್ಯಾತರು ಆತಂಕದಲ್ಲಿದ್ದಾಗ ಕಾಂಗ್ರೆಸ್‌ ನಾಯಕರು ಬಿಲ ಸೇರಿದ್ದರು. ಅಂದು ಮುಸ್ಲಿಮರ ಬೆಂಬಲಕ್ಕೆ ನಿಂತಿದ್ದು ಜೆಡಿಎಸ್‌. ಇಂದು ಬಸವಕಲ್ಯಾಣದಲ್ಲಿ ನಾವು ಮುಸ್ಲಿಂ ಅಭ್ಯರ್ಥಿಯನ್ನು ಹಾಕುತ್ತಲೇ ಕಾಂಗ್ರೆಸ್‌ ತಾನು ಮುಸ್ಲಿಮರ ರಕ್ಷಕ ಎಂದು ಎದೆತಟ್ಟಿಕೊಂಡು ಮುಂದೆ ಬಂದಿದೆ ಎಂದು ಹೆಚ್‌ಡಿಕೆ ಟ್ವೀಟ್‌ ಮಾಡಿದ್ದಾರೆ.

ನಮ್ಮ ರಾಜ್ಯ, ನಮ್ಮ ನೆಲ, ನಮ್ಮ ಪಕ್ಷ, ನಮ್ಮ ಅಭ್ಯರ್ಥಿ. ಇದರಲ್ಲಿ ಜೆಡಿಎಸ್‌ ಯಾರ ಅಪ್ಪಣೆಗೆ ಕಾಯಬೇಕು? ಯಾವ ದೊಣ್ಣೆ ನಾಯಕನ ಆಜ್ಞೆ ಆಗಬೇಕು ನಮಗೆ. ಜನರಿಗೆ ಬೇಕಾದ ಅಭ್ಯರ್ಥಿಗಳನ್ನು ನಾವು ಹಾಕುತ್ತೇವೆ. ಅದರಲ್ಲಿ ನಮಗೆ ಧರ್ಮ ನಗಣ್ಯ. ಪ್ರತಿಯೊಂದರಲ್ಲೂ ಹಿಂದೂ-ಮುಸ್ಲಿಂ ಎಂದು ಹುಡುಕುವವರಿಗೆ ಜನ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಬೇಕು.

ಮುಸ್ಲಿಮರನ್ನು ಮತಗಳಾಗಿ ನೋಡುವುದು ಕಾಂಗ್ರೆಸ್‌ನ ಐತಿಹಾಸಿಕ ದುರಭ್ಯಾಸ. ಅದಕ್ಕಾಗಿಯೇ ಮುಸ್ಲಿಮರನ್ನು ಕಾಂಗ್ರೆಸ್‌ ನಮ್ಮ ಮತ ಎನ್ನುತ್ತದೆ. ನಮ್ಮವರು ಅನ್ನುವುದಿಲ್ಲ. ಕಾಂಗ್ರೆಸ್‌ನ ಇಂಥ ತಪ್ಪುಗಳಿಂದಲೇ ಬಿಜೆಪಿ ಈ ಹಂತಕ್ಕೆ ಬೆಳೆದಿದೆ. ದೇಶದಲ್ಲಿ ಕೋಮು ಭಾವನೆಗಳು ಈ ಮಟ್ಟಕ್ಕೆ ಕೆರಳಿರುವುದರ ಹಿಂದೆ ಕಾಂಗ್ರೆಸ್‌ನ ಪ್ರಮಾದಗಳಿವೆ.

ಬಸವಕಲ್ಯಾಣದಲ್ಲಿ ಜೆಡಿಎಸ್‌ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ‘ಮಹಾನ್‌ನಾಯಕ’ರು ಹೇಳಿದ್ದಾರೆ. ಪ್ರತಿಯೊಂದಕ್ಕೂ ಒಳ ಒಪ್ಪಂದ, ಒಳಸಂಚು ಮಾಡಿದವರಿಗಷ್ಟೇ ಒಳ ಒಪ್ಪಂದದ ಕನವರಿಕೆ. ಆಪರೇಷನ್‌ ಕಮಲದಲ್ಲಿ, ಮೈತ್ರಿ ಸರ್ಕಾರ ಉರುಳಿದ್ದರಲ್ಲಿ ಅಂಥ ಒಳಒಪ್ಪಂದಗಳು ಈಗಾಗಲೇ ಬಯಲಾಗಿವೆ. ಜೆಡಿಎಸ್‌ಗೆ ಇಂಥ ದುರ್ಬುದ್ಧಿ ಇಲ್ಲ.

ನಮ್ಮ ಆಯ್ಕೆ, ನಿರ್ಧಾರಗಳ ಬಗ್ಗೆ ಮಾತನಾಡುವುದನ್ನು ಕಾಂಗ್ರೆಸ್‌ನ ಮಹಾನ್‌ ನಾಯಕರು ನಿಲ್ಲಿಸಿದರೆ ಉತ್ತಮ. ಇಲ್ಲವಾದಲ್ಲಿ ಜಾತ್ಯತೀತವಾದಿ ಮುಖವಾಡ ಧರಿಸಿರುವ ಅವರ ಕೋಮುವಾದಿ ಮುಖವನ್ನು ಬಯಲು ಮಾಡಬೇಕಾಗುತ್ತದೆ. ಶತಮಾನಗಳಿಂದ ವೀರನಾಗಿ ಮಲಗಿದ್ದ ಟಿಪ್ಪು ಸುಲ್ತಾನನ್ನು ದೇಶದ್ರೋಹಿಯನ್ನಾಗಿ ಮಾಡಿದ ಮಹಾನ್‌ ನಾಯಕರು ತೆಪ್ಪಗಿದ್ದರೆ ಸರಿ.

ಇದನ್ನೂ ಓದಿ: ಕರ್ನಾಟಕ 03 ಉಪಚುನಾವಣೆ: ಅಖಾಡದಲ್ಲಿ ಸತೀಶ್‌ ಜಾರಕಿಹೊಳಿ; 03 ಪಕ್ಷಗಳ ಅಭ್ಯರ್ಥಿಗಳ ಪಟ್ಟಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights