ವಸತಿ ಪ್ರದೇಶಗಳಲ್ಲಿ ಸ್ಥಳೀಯ ಅಂಗಡಿ ತೆರೆಯಲು ಅನುಮತಿ ನೀಡಿದ ಕೇಂದ್ರ ಸರ್ಕಾರ
ಕೊರೋನಾ ವೈರಸ್ ತಡೆಗೆ ಲಾಕ್ ಡೌನ್ ಮಾಡಿ ಒಂದು ತಿಂಗಳ ಬಳಿಕ ಜನರಿಗೆ ಮನಸ್ಸಿಗೆ ನಿರಾಳವಾಗುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ವಸತಿ ಸಮುಚ್ಚಯಗಳ ಅಕ್ಕಪಕ್ಕ ಇರುವ ಅಂಗಡಿಗಳನ್ನು, ಸ್ಥಳೀಯ ಅಂಗಡಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ತೆರೆಯಲು ಅವಕಾಶ ನೀಡಿದೆ.ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಆದರೆ ಜನನಿಬಿಡ ನಗರ ಪ್ರದೇಶಗಳ ಮಾರುಕಟ್ಟೆ ಪ್ರದೇಶಗಳಲ್ಲಿರುವ ಅಂಗಡಿಗಳು,ನಗರ ಪಾಲಿಕೆ ಪ್ರದೇಶಗಳಲ್ಲಿರುವ ಮಲ್ಟಿ ಬ್ರಾಂಡ್ ಮತ್ತು ಸಿಂಗಲ್ ಬ್ರಾಂಡ್ ಮಳಿಗೆಗಳಿಗೆ ಮೇ 3ರವರೆಗೆ ತೆರೆಯಲು ಅವಕಾಶವಿರುವುದಿಲ್ಲ.
ತನ್ನ ಕಳೆದ ಏಪ್ರಿಲ್ 15ರ ಆದೇಶಕ್ಕೆ ತಿದ್ದುಪಡಿ ಮಾಡಿರುವ ಕೇಂದ್ರ ಗೃಹ ಸಚಿವಾಲಯ, ಮನೆಗಳ ಅಕ್ಕಪಕ್ಕದಲ್ಲಿರುವ ಅಂಗಡಿಗಳು, ನಗರ ಪಾಲಿಕೆ ನಿಗಮಗಳು ಮತ್ತು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ವಸತಿ ಸಮುಚ್ಚಯ ಪ್ರದೇಶಗಳಲ್ಲಿರುವ ಅಂಗಡಿಗಳು, ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಅಂಗಡಿ ಮತ್ತು ವಸಾಹತುಗಳ ಕಾಯ್ದೆ ಅಡಿ ದಾಖಲಾಗಿರುವ ಅಂಗಡಿಗಳು ಲಾಕ್ ಡೌನ್ ಸಮಯದಲ್ಲಿ ತೆರೆಯಲು ಅವಕಾಶ ನೀಡಿದೆ. ಈ ಕುರಿತ ಆದೇಶವನ್ನು ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಬಲ್ಲಾ ನಿನ್ನೆ ರಾತ್ರಿ ಹೊರಡಿಸಿದ್ದಾರೆ. 
ಷರತ್ತು ಬದ್ಧವಾಗಿ ಅಂಗಡಿ ತೆರೆಯಲು ಅವಕಾಶ: ಲಾಕ್ ಡೌನ್ ಸಮಯದಲ್ಲಿ ವಸತಿ ಸಮುಚ್ಚಯಗಳು, ಜನವಿರಳ ಪ್ರದೇಶಗಳು, ಗ್ರಾಮಾಂತರ ಭಾಗಗಳ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿರುವ ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ. ಅಂಗಡಿಗಳಲ್ಲಿ ಶೇಕಡಾ 50ರಷ್ಟು ಮಾತ್ರ ಕೆಲಸಗಾರರಿರಬೇಕಾಗಿದ್ದು ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕಾಗುತ್ತದೆ.
ಈ ವಿನಾಯ್ತಿ ಕೊರೋನಾ ವೈರಸ್ ಹಾಟ್ ಸ್ಪಾಟ್ ಮತ್ತು ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ.ಅಲ್ಲಿ ಯಥಾಪ್ರಕಾರ ಲಾಕ್ ಡೌನ್ ನಿಯಮ ಮುಂದುವರಿಯುತ್ತದೆ.

