ವಿಧಾನ ಪರಿಷತ್‌ ಚುನಾವಣೆ; ಮಹಾರಾಷ್ಟ್ರ ಮೈತ್ರಿ ಸರ್ಕಾರದಲ್ಲಿ ಭಿನ್ನಮತ

ವಿಧಾನ ಪರಿಷತ್ ಸ್ಥಾನಗಳ ಹಂಚಿಕೆಯಲ್ಲಿ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದಲ್ಲಿ ಭಿನ್ನಮತ ಹೊರಹೊಮ್ಮಿದೆ ಎಂದು ವರದಿಯಾಗಿದೆ.

ಮೈತ್ರಿಯಲ್ಲಿರುವ ಮೂರು ಪಕ್ಷಗಳಾದ – ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ – ಮಹಾರಾಷ್ಟ್ರ ರಾಜ್ಯ ವಿಧಾನಸಭೆಯ ಮೇಲ್ಮನೆಯಾದ ವಿಧಾನ ಪರಿಷತ್ತಿನ 12 ಸ್ಥಾನಗಳ ಪ್ರಮಾಣಾನುಗುಣ ಹಂಚಿಕೆಗೆ ಒಪ್ಪಿಕೊಂಡಿದ್ದವು. ಆದರೆ, ಇದೀಗ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಪ್ರಮಾಣಾನುಗುಣ ವಿತರಣಾ ವ್ಯವಸ್ಥೆಯ ಪ್ರಕಾರ, ಶಿವಸೇನೆ ಐದು ಸ್ಥಾನಗಳನ್ನು, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ನಾಲ್ಕು ಮತ್ತು ಕಾಂಗ್ರೆಸ್‌ಗೆ ಮೂರು ಸ್ಥಾನಗಳನ್ನು ಹಂಚಿಕೆ ಮಾಡುವುದಾಗಿತ್ತು. ಆದರೆ, ಕಾಂಗ್ರೆಸ್ ಈಗ 12 ಸ್ಥಾನಗಳ ಸಮಾನ ಹಂಚಿಕೆಯನ್ನು ಬಯಸಿದೆ, ಇದರಲ್ಲಿ ಮೂರು ಪಕ್ಷಗಳಿಗೂ ತಲಾ ನಾಲ್ಕು ಸ್ಥಾನಗಳನ್ನು ನೀಡಬೇಕು ಎಂದು ಒತ್ತಾಯಿಸಿದೆ.

ಹಾಗಾಗಿ ಕಾಂಗ್ರೆಸ್ ನಾಯಕರು ಇಂದು (ಜೂನ್ 15) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಅಶೋಕ್ ಚಾವಣ್ ಹೇಳಿದ್ದಾರೆ.

Ashok Chavan, Maharashtra Congress President

ಕಳೆದ ತಿಂಗಳು, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರು “ನಮ್ಮ ಪಕ್ಷವು ಮಹಾರಾಷ್ಟ್ರ ಸರ್ಕಾರದ ಆಡಳಿತದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಉದ್ದವ್ ಠಾಕ್ರೆ ನೇತೃತ್ವದ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಂದ ಪಕ್ಷವು ದೂರ ಇರುತ್ತದೆ” ಎಂದು ಹೇಳಿದ್ದರು.

“ಸರ್ಕಾರವನ್ನು ನಡೆಸುವುದು ಮತ್ತು ಅದನ್ನು ಬೆಂಬಲಿಸುವುದರ ನಡುವೆ ವ್ಯತ್ಯಾಸವಿದೆ. ನಾವು ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ಬೆಂಬಲಿಸುತ್ತಿದ್ದೇವೆ. ಆದರೆ ನಾವು ಅಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರಾಗಿರುವುದಿಲ್ಲ. ನಾವು ಪಂಜಾಬ್, ಛತ್ತೀಸ್‌ಘಡ್‌, ರಾಜಸ್ಥಾನ ಮತ್ತು ಪುದುಚೇರಿಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಳೆದ ತಿಂಗಳು, ಶರದ್ ಪವಾರ್ ಅವರು ರಾಜ್ಯಪಾಲ ಬಿ.ಎಸ್.ಕೊಶ್ಯರಿ ಮತ್ತು ಮುಖ್ಯಮಂತ್ರಿ ಠಾಕ್ರೆ ಅವರೊಂದಿಗೆ ಸಭೆ ನಡೆಸಿದ್ದರು. ಈ ಭೇಟಿಯ ನಂತರ ಎಂವಿಎ ಮೈತ್ರಿಯೊಳಗಿನ ಬಿರುಕು ಉಂಟಾಯಿತು. ಆದರೆ, ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ ಪವಾರ್ ಅವರು ಊಹಾಪೋಹಗಳಿಗೆ ಕಡಿವಾಣ ಹಾಕಿದ್ದರು.

ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಮೈತ್ರಿಕೂಟವು ಅಧಿಕಾರದ ಬಗ್ಗೆ ಮಾತ್ರ ಕಾಳಜಿ ವಹಿಸಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights