ಪಾಕಿಸ್ತಾನ: ಇಬ್ಬರು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ನಾಪತ್ತೆ

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಸೋಮವಾರ ವರದಿ ಮಾಡಿದೆ. ಬೆಳಿಗ್ಗೆ 8 ಗಂಟೆಯಿಂದ ಇವರಿಬ್ಬರು ನಾಪತ್ತೆಯಾಗಿದ್ದು, ನವದೆಹಲಿಯು ಪಾಕಿಸ್ತಾನ ಸರ್ಕಾರಕ್ಕೆ ಈ ಬಗ್ಗೆ ದೂರು ದಾಖಲಿಸಿದೆ.

ಕೆಲವೇ ದಿನಗಳ ಹಿಂದೆ ನವದೆಹಲಿ, ಪಾಕಿಸ್ತಾನಿ ಹೈಕಮಿಷನ್‌ನ ಇಬ್ಬರು ಪಾಕಿಸ್ತಾನಿ ಅಧಿಕಾರಿಗಳನ್ನು ಗೂಢಾಚರ್ಯೆ ಆರೋಪದ ಮೇಲೆ ಗಡಿಪಾರು ಮಾಡಿತ್ತು. ಅವರಿಬ್ಬರು ದೆಹಲಿಯ ವೀಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.

ಕಳೆದ ಹಲವಾರು ದಿನಗಳಿಂದ ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಭಾರತದ ಹಲವಾರು ಉನ್ನತ ರಾಜತಾಂತ್ರಿಕರನ್ನು  ಆಕ್ರಮಣಕಾರಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಮತ್ತು ವಿಪರೀತ ಕಣ್ಗಾವಲು ಇಡಲಾಗಿದೆ ಎಂದು ಭಾರತ ಪ್ರತಿಭಟನೆ ನಡೆಸಿದೆ.

ಭಾರತದ ಚಾರ್ಜ್ ಡಿ ಅಫೈರ್ಸ್ ಗೌರವ್ ಅಹ್ಲುವಾಲಿಯಾ ಅವರ ವಾಹನವನ್ನು ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಸದಸ್ಯ ಇತ್ತೀಚೆಗೆ ಬೆನ್ನಟ್ಟಿದ್ದರು. ಭಾರತದ ಅಧಿಕಾರಿಯ ಕಾರಿನ ಹಿಂದೆ ಬೈಕರ್ ಒಬ್ಬರು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ.

ಮಾರ್ಚ್‌ನಲ್ಲಿ ಪಾಕಿಸ್ತಾನದ ಭಾರತೀಯ ಹೈಕಮಿಷನ್ ತನ್ನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ವಿರೋಧಿಸಿ ಇಸ್ಲಾಮಾಬಾದ್‌ನ ವಿದೇಶಾಂಗ ಸಚಿವಾಲಯಕ್ಕೆ ಬಲವಾದ ಪ್ರತಿಭಟನಾ ವರದಿಯನ್ನು ಕಳುಹಿಸಿತ್ತು.

ವರದಿಯಲ್ಲಿ, ಮಾರ್ಚ್‌ ತಿಂಗಳೊಂದರಲ್ಲೇ 13 ನಿದರ್ಶನಗಳನ್ನು ಉಲ್ಲೇಖಿಸಿ ಅಂತಹ ಘಟನೆಗಳನ್ನು ಕೊನೆಗಾಣಿಸಲು ಪಾಕಿಸ್ತಾನವನ್ನು ಭಾರತವು ಆಗ್ರಹಿಸಿತ್ತು. “ಈ ಘಟನೆಗಳನ್ನು ತುರ್ತಾಗಿ ತನಿಖೆ ಮಾಡಿ ಮತ್ತು ಇದೇ ರೀತಿಯ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸಂಬಂಧಿತ ಏಜೆನ್ಸಿಗಳಿಗೆ ಸೂಚಿಸಿ” ಎಂದು  ಭಾರತ ತಿಳಿಸಿದ್ದಾಗಿ ಎಎನ್ಐ ವರದಿ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights