ವಿಶ್ವ ಪರಿಸರ ದಿನ ವಿಶೇಷ: ನೀವು ಓದಲೇಬೇಕಾದ ಕನ್ನಡದ ಐದು ಲೇಖಕರು

ಜಾಗತಿಕ ತಾಪಮಾನ, ಮಾಲಿನ್ಯ, ಜನಸಂಖ್ಯಾ ಸ್ಪೋಟ ಮುಂದಾದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಸುಸ್ಥಿರ ಜೀವನದ ಬಗ್ಗೆ ತಿಳುವಳಿಕೆ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 5 ನೇ ತಾರೀಕು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆಕೊಟ್ಟಿದೆ. ಪ್ರಸಕ್ತ ವರ್ಷದಲ್ಲಿ ಜೀವ ವೈವಿಧ್ಯದ ವಿಷಯವನ್ನು ಕೇಂದ್ರವಾಗಿರಿಸಿಕೊಂಡು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತಿದೆ.

ಕನ್ನಡದ ಹಲವು ಲೇಖಕರು ಪರಿಸರ – ಜೀವವೈವಿಧ್ಯದ ಜೊತೆಗೆ ಕರಳುಬಳ್ಳಿ ಸಂಬಂಧ ಉಳಿಸಿಕೊಂಡೇ ಸಾಹಿತ್ಯ ರಚಿಸಿದವರು. ಅಂತಹ ಲೇಖಕರಲ್ಲಿ ಪರಿಸರ ಕಾಳಜಿಯನ್ನು ತಮ್ಮ ಸೃಜಶೀಲ ಮತ್ತು ಸೃಜನೇತರ ಬರಹದ ಪ್ರಧಾನ ವಸ್ತು ಮಾಡಿಕೊಂಡಿದ್ದ ಐದು ಜನ ಲೇಖಕರನ್ನು ನೆನಪಿಸಿಕೊಳ್ಳಲು ಮತ್ತು ಓದಲು ಇವತ್ತು ಪ್ರಶಸ್ತವಾದ ದಿನ.

  1. ಪೂರ್ಣಚಂದ್ರ ತೇಜಸ್ವಿ : ಕನ್ನಡದ ಯುವಮನಸ್ಸುಗಳಿಗೆ ಅತಿ ಹೆಚ್ಚು ತಲುಪಿ ಪ್ರಭಾವಿಸಿರುವ ಲೇಖಕ ಪೂಚಂತೇ. ನವಿರು ಹಾಸ್ಯದ ಲೇಪನವಿರುವ ಅವರ ಸೃಜನಶೀಲ ಕಾದಂಬರಿ ಮತ್ತು ಕಥೆಗಳು ಅದೇ ಸಮಯದಲ್ಲಿ ಗಂಭೀರ ವಿಷಯದ ಅನ್ವೇಷಣೆಯಲ್ಲಿಯೂ ತೊಡಗಿರುತ್ತವೆ. ಅಲ್ಲದೆ ಅವರ ಕಥೆ ಕಾದಂಬರಿಗಳಲ್ಲಿ ಕಾಡು, ಪ್ರಾಣಿಗಳು, ಪಕ್ಷಿಗಳು ಮತ್ತು ಮರಗಿಡಗಳು ಹಾಸುಹೊಕ್ಕಾಗಿವೆ. ಪೂಚಂತೇ ಅವರ ‘ಕರ್ವಾಲೋ’ ಕಾದಂಬರಿಯಲ್ಲಿ ಬರುವ ಹಾರುವ ಓತಿಕ್ಯಾತ ಹುಡುಕಲು ಎಷ್ಟು ಜನ ಕಾಡಿಗೆ ಹೋಗಿಲ್ಲ! ಅದೇ ‘ಕರ್ವಾಲೋ’ ಕಾದಂಬರಿ ಜೇನು ಹುಳುಗಳ ಬಗ್ಗೆ ಜೇನು ಸಾಕಾಣೆಯ ಬಗ್ಗೆ ಕೂಡ ಕುತೂಹಲ ಮಾಹಿತಿಗಳನ್ನು ಅಡಗಿಸಿಕೊಂಡಿದೆ. ಹಲವು ಪರಿಸರ ಸಂಬಂಧಿ ಪ್ರಬಂಧಗಳನ್ನು ಒಳಗೊಂಡಿರುವ ‘ಪರಿಸರದ ಕತೆ’ ಪುಸ್ತಕ ಕನ್ನಡ ಮಕ್ಕಳಿಗೆ ಪರಿಸರದ ಬಗ್ಗೆ ಆಸಕ್ತಿ ಹುಟ್ಟಿಸುವ ಕುತೂಹಲಕಾರಿ ಮತ್ತು ಚೇತೋಹಾರಿ ಗ್ರಂಥ. ಪಕ್ಷಿಗಳ ಬಗ್ಗೆಯೇ ಬರೆದ ‘ಹಕ್ಕಿ-ಪುಕ್ಕ’, ‘ಮಿಂಚುಳ್ಳಿ’, ‘ಹೆಜ್ಜೆ ಮೂಡದ ಹಾದಿ’ ಪುಸ್ತಕಗಳನ್ನು ಗಮನಿಸಿದರೆ ನಿಮ್ಮನ್ನು ಪಕ್ಷಿವೀಕ್ಷಣೆ ಹವ್ಯಾಸಕ್ಕೆ ಹಚ್ಚದೆ ಬಿಡವು. ‘ಅಲೆಮಾರಿಯ ಅಂಡಮಾನ್…’ ಪ್ರವಾಸ ಕಥನ ನಮಗೆ ಮತ್ತೊಂದು ನಿಗೂಢ ಲೋಕವನ್ನೇ ತೆರೆದಿಡುತ್ತದೆ. ಫೋಟೋಗ್ರಫಿಯಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದವರು ಪೂಚಂತೆ. ‘ಮಾಯೆಯ ಮುಖಗಳು’ ಎಂಬ ವರ್ಣರಂಜಿತ ಪುಸ್ತಕದಲ್ಲಿ ಅವರು ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಪ್ರಕಟಿಸಲಾಗಿದೆ.

ಪೂಚಂತೇ ಅವರ ಹಲವು ಕತೆಗಳು ಸಿನೆಮಾ ಕೂಡ ಆಗಿವೆ. ಒಟ್ಟಿನಲ್ಲಿ ವಿಶ್ವ ಪರಿಸರ ದಿನಕ್ಕೆ ಯಾರಿಗಾದರೂ ಗೆಳೆಯರಿಗೆ ಉಡುಗೊರೆ ನೀಡುವುದಿದ್ದರೆ ನಿಮಗೆ ತೇಜಸ್ವಿ ತಟ್ಟನೆ ಹೊಳೆಯಬೇಕು.

ಪ್ರಮುಖ ಪುಸ್ತಕಗಳು: ಕರ್ವಾಲೋ, ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ, ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಪಾಕಕ್ರಾಂತಿ ಮತ್ತು ಇತರ ಕತೆಗಳು, ಅಣ್ಣನ ನೆನಪು

  1. ಶಿವರಾಮ ಕಾರಂತ: ‘ಆಡು ಮುಟ್ಟದ ಸೊಪ್ಪಿಲ್ಲ ಕಾರಂತರು ಬರೆಯದ ವಿಷಯವಿಲ್ಲ’ ಎಂಬುದು ಕಾರಂತರ ಬಗ್ಗೆ ಇರುವ ಒಂದು ಜನಪ್ರಿಯ ಮಾತು. ಕಡಲ ತೀರದ ಭಾರ್ಗವ ಕಾರಂತರ ಹಲವು ಕಾದಂಬರಿಗಲಲ್ಲಿ ಸಮುದ್ರವೂ ಒಂದು ಪಾತ್ರವಾಗಿ ಬರುತ್ತದೆ. ಮೂಕಜ್ಜಿಯ ಕನಸುಗಳು ಕೃತಿ ಮಾನವಶಾಸ್ತ್ರದ ಅನ್ವೇಷಣೆಗೆ ತೊಡಗಿದರೆ, ಇನ್ನೂ ಹಲವು ಕೃತಿಗಳಲ್ಲಿ ಪ್ರಧಾನ ಪಾತ್ರಗಳು ನೆಲದ ಜೊತೆಗೆ ತಮ್ಮ ಬೇರನ್ನು ಹುಡುಕಿಕೊಳ್ಳುವ ಮುಖ್ಯ ಚರ್ಚೆಯನ್ನು ಹೊಂದಿವೆ. ದಕ್ಷಿಣ ಕನ್ನಡದಲ್ಲಿ ಅಣು ಸ್ಥಾವರ ಸ್ಥಾಪನೆಯನ್ನು ವಿರೋಧಿಸಿ ತಾವೇ ದೊಡ್ಡ ಚಳವಳಿ ಹುಟ್ಟುಹಾಕಿದ್ದ ಕಾರಂತರು ಮಕ್ಕಳ ಕುತೂಹಲಕ್ಕೆ ‘ಪಕ್ಷಿಪ್ರಪಂಚ’, ‘ಪ್ರಾಣಿ ಪ್ರಪಂಚದ ವಿಸ್ಮಯಗಳು’ ಎಂಬ ಪುಸ್ತಕಗಳನ್ನೂ ರಚಿಸಿದವರು. ಮಕ್ಕಳಿಗೆ ವಿಜ್ಞಾನ, ಪರಿಸರ ಮುಂತಾದ ವಿಷಯಗಳ ಕಥೆ ಹೇಳಲು ಬಾಲಪ್ರಪಂಚವನ್ನು ಹುಟ್ಟುಹಾಕಿದವರು.

ಶಿವರಾಮ ಕಾರಂತರು ತಮ್ಮ ಪ್ರಯೋಗಗಳನ್ನೆಲ್ಲ ತಮ್ಮ ಆತ್ಮಕತೆ ‘ಹುಚ್ಚು ಮನಸ್ಸಿನ ಹತ್ತು ಹತ್ತು ಮುಖಗಳು’ ಪುಸ್ತಕದಲ್ಲಿ ದಾಖಲು ಮಾಡಿದ್ದಾರೆ. ಅದರ ಜೊತೆಗೆ ಕಾರಂತರ ಎಲ್ಲ ಕಾದಂಬರಿಗಳನ್ನು ಮತ್ತು ಪ್ರಬಂಧಗಳನ್ನು ಓದಿದರೆ ಪರಿಸರದ ಬಗ್ಗೆ ನಮ್ಮ ತಿಳಿವು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಶಿವರಾಮ ಕಾರಂತರ ಪುತ್ರ ಉಲ್ಲಾಸ್ ಕಾರಂತ್ ಅವರು ಕೂಡ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು. ‘ಹುಲಿರಾಯನ ಆಕಾಶವಾಣಿ’ ಎಂಬ ಪುಸ್ತಕ ಬರೆದಿರುವ ಅವರು ಹುಲಿ ಸಂರಕ್ಷಣೆಗಾಗಿ ಹಲವು ಸಂಶೋಧನೆ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಮುಖ ಪುಸ್ತಕಗಳು: ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಧರ್ಮರಾಯನ ಸಂಸಾರ, ಬೆಟ್ಟದ ಜೀವ, ಅಳಿದ ಮೇಲೆ, ಸರಸಮ್ಮನ ಸಮಾಧಿ, ಚೋಮನ ದುಡಿ, ಜಗದೋದ್ಧಾರ ನಾ, ಮೈಮನಗಳ ಸುಳಿಯಲ್ಲಿ

  1. ಬಿಜಿಎಲ್ ಸ್ವಾಮಿ: ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕಾದಂಬರಿ ‘ಹಸಿರು ಹೊನ್ನು’ ಕನ್ನಡ ಸಾಹಿತ್ಯಲೋಕದ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಸಸ್ಯಶಾಸ್ತ್ರಜ್ಞರಾಗಿದ್ದ ಬಿಜಿಎಲ್ ಸ್ವಾಮಿ ಸಸ್ಯಗಳ ಬಗ್ಗೆ ತಾವು ನಡೆಸುತ್ತಿದ್ದ ಸಂಶೋಧನೆಯನ್ನು ಕಾದಂಬರಿಯ ವಸ್ತುವನ್ನಾಗಿಸಿ ಹಾಸ್ಯ ಶೈಲಿಯಲ್ಲಿ ಬರೆದಿದ್ದಾರೆ. ಸಂಗೀತ, ಕಾರ್ಟೂನ್ ಹೀಗೆ ಹಲವು ಹವ್ಯಾಸಗಳಿದ್ದ ಬಿಜಿಎಲ್ ಸ್ವಾಮಿ ಅವರು ಪ್ರಾಧ್ಯಾಪಕರಾಗಿ ಕೆಲಸ ಮಾಡಿದವರು. ಪ್ರಾಧ್ಯಾಪಕನಾಗಿ ಕೆಲಸ ಮಾಡಿದ ಅನುಭಗಳನ್ನು ಕಾಲೇಜು ರಂಗ, ಕಾಲೇಜು ತರಂಗ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.

ಮಾದಕ ಸಸ್ಯಗಳ ಬಗ್ಗೆ ಲೇಖನಗಳ ಸಂಗ್ರಹ ‘ಸಾಕ್ಷಾತ್ಕಾರದ ದಾರಿಯಲ್ಲಿ’, ಭಾರತಕ್ಕೆ ವಿದೇಶಗಳಿಂದ ಬಂದ ಸಸ್ಯ ತರಕಾರಿಗಳ ಮೇಲೆ ಬರೆದ ‘ನನ್ನ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ’ ಸ್ವಾಮಿಯವರ ಎರಡು ಸೃಜನೇತರ ಜನಪ್ರಿಯ ಪುಸ್ತಕಗಳು. ಬಿಜಿಎಲ್ ಸ್ವಾಮಿಯವರ ನೆನಪಿನಲ್ಲಿ ಈಚಲ ಪ್ರಬೇಧದ ಒಂದು ಗಿಡಕ್ಕೆ ‘ಸೈಕಸ್ ಸ್ವಾಮಿ’ ಎಂದು ನಾಮಕರಣ ಮಾಡಲಾಗಿದೆ. ಕಾವೇರಿ ನದಿಯ ಬಗ್ಗೆ ಒಂದು ತಮಿಳು ಪುಸ್ತಕ ವನ್ನು “ನಡೆದಿಹೆ ಬಾಳೌ ಕಾವೇರಿ” ಹೆಸರಿನಲ್ಲಿ ಅನುವಾದಿಸಿದ್ದಾರೆ.

ಪ್ರಮುಖ ಪುಸ್ತಕಗಳು: ಹಸಿರು ಹೊನ್ನು, ಪಂಚಕಲಶಗೋಪುರ, ಕಾಲೇಜು ರಂಗ, ಕಾಲೇಜು ತರಂಗ, ನನ್ನ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ, ತಮಿಳು ತಲೆಗಳ ನಡುವೆ

 

  1. ಕೃಷ್ಣಾನಂದ ಕಾಮತ್: ವಿಜ್ಞಾನಿ, ಛಾಯಾಚಿತ್ರಕಾರ, ಪರಿಸರವಾದಿ ಕೃಷ್ಣಾನಂದ ಕಾಮತ್ ಅವರ ಬರಹಗಳು ಮತ್ತು ಪುಸ್ತಕಗಳು ಮೇಲಿನ ಮೂರು ಲೇಖಕರಷ್ಟು ಚಿರಪರಿಚಿತವಲ್ಲ. ಆದರೆ ಎಲೆಮರೆಯ ಕಾಯಿಯಂತೆ ವನ್ಯಜೀವಿಗಳು, ಗಿಡಮರಗಳು, ಬುಡಕಟ್ಟುಗಳು ಮತ್ತು ಜನಪದ ವೈವಿಧ್ಯದ ಮೇಲೆ ಬಹಳ ಆಸಕ್ತಿಯಿಂದ ಕೆಲಸ ಮಾಡಿದವರು ಕಾಮತ್. ಅವರ ಪುಸ್ತಕ ‘ಸಸ್ಯ ಪರಿಸರ’ ಗಿಡ, ಮರ ಕಾಡುಗಳ ಬಗ್ಗೆ ವಿಷಿಷ್ಟತೆಗಳ ಆಗರ. ‘ಅಮೆರಿಕಕ್ಕೆ ಹೋಗಿದ್ದೆ’, ‘ವಂಗದರ್ಶನ’ ಇವರ ಕೆಲವು ಪ್ರವಾಸ ಕಥನಗಳು.

‘ಕಾಗೆಯ ಕಾಯಕ’ ಎಂಬ ಹೆಸರಿನಲ್ಲಿ ಕಾಗೆಯ ಬಗ್ಗೆ ವಿಶಿಷ್ಟ ಪುಸ್ತಕ ಬರೆದಿರುವ ಕಾಮತ್ ಅವರು ‘ಪ್ರಾಣಿ ಪರಿಸರ’, ‘ಪಶುಪಕ್ಷಿ ಪ್ರಪಂಚ’, ‘ಕೀಟ ಜಗತ್ತು’, ‘ಸಸ್ಯಪ್ರಪಂಚ’, ‘ಇರುವೆಯ ಇರವು’, ‘ಸರ್ಪ ಸಂಕುಲ’ ಹೀಗೆ ಜೀವ ವೈವಿಧ್ಯದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಕಾಮತ್ ಪಾಟ್ ಪುರಿ ಎಂಬ ವೆಬ್ ತಾಣದಲ್ಲಿ ಕೃಷ್ಣಾನಂದ ಕಾಮತ್ ಅವರು ಕ್ಲಿಕ್ಕಿಸಿರುವ ಹಲವು ಫೋಟೋಗಳ ಭಂಡಾರವೇ ಅಡಗಿದೆ. ಕಾಮತ್ ಅವರು ಕೊಂಕಣಿಯಲ್ಲಿಯೂ ಪುಸ್ತಕಗಳನ್ನು ಬರೆದಿರುವುದು ವಿಶೇಷ.

ಪ್ರಮುಖ ಪುಸ್ತಕಗಳು : ವಂಗ ದರ್ಶನ, ನಾ ರಾಜಾಸ್ಥಾನದಲ್ಲಿ, ಪ್ರೇಯಸಿಗೆ ಪತ್ರಗಳು, ಭಗ್ನಸ್ವಪ್ನ, ಪಶುಪಕ್ಷಿ ಪ್ರಪಂಚ, ಸಸ್ಯಪ್ರಪಂಚ, ಸಸ್ಯ ಪರಿಸರ, ಇರುವೆಯ ಇರವು, ಕಾಗೆಯ ಕಾಯಕ, ಸರ್ಪ ಸಂಕುಲ

 

  1. ಕುವೆಂಪು: ಕುವೆಂಪು ಎಂಬ ಕಾವ್ಯನಾಮದಿಂದ ಪರಿಚಿತರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರು ನಾಡಗೀತೆಯಿಂದಲಾದರೂ ಕನ್ನಡ ನಾಡಿಗೆಲ್ಲಾ ಚಿರಪರಿಚಿತ. ಪರಿಸರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಪುಸ್ತಕಗಳನ್ನು ರಚಿಸದೆ ಹೋದರೂ, ಕುವೆಂಪು ಅವರ ಪ್ರತಿ ಸೃಜನಶೀಲ ಬರವಣಿಗೆಯಲ್ಲಿ ಪರಿಸರ ಮತ್ತು ಪರಿಸರದ ಜೊತೆಗೆ ಮನುಷ್ಯನ ಸಬಂಧ ಗಾಢವಾಗಿ ಅಡಗಿದೆ. ಕುವೆಂಪು ಅವರ ಮೇರು ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ವಿನಲ್ಲಿ ಮಲೆನಾಡಿನ ಗಾಢ ಪ್ರಾಕೃತಿಕ ಸೌಂದರ್ಯ ಕಣ್ಣಮುಂದೆ ಬರುವದಷ್ಟೇ ಅಲ್ಲ, ಗುತ್ತಿ ಅಂತಹ ಪ್ರಧಾನ ಪಾತ್ರಗಳು ಆ ಪ್ರಕೃತಿಯೊಂದಿಗೆ ಹೇಗೆ ವಿಲೀನರಾಗಿದ್ದರು ಎಂಬ ಚಿತ್ರಣ ನಮ್ಮ ಕಣ್ಣಿಗೆ ಕಟ್ಟುತ್ತದೆ. ಕುವೆಂಪು ಅವರ ಮಹಾಕಾವ್ಯ ‘ಶ್ರೀರಾಮಾಯಣದರ್ಶನಂ’ ಕೂಡ ಕಾಡಿನ ಪ್ರಾಕೃತಿಕ ಚಿತ್ರಣವನ್ನು, ಚೆಲುವನ್ನು, ರೌದ್ರ ಅವತಾರವನ್ನು ಪ್ರಧಾನವಾಗಿ ಒಳಗೊಂಡಿದೆ.

ಕುವೆಂಪು ಅವರ ವೈಚಾರಿಕ ದೃಷ್ಟಿಕೋನ ನಾಡಿಗೆಲ್ಲಾ ಮಾದರಿಯಾಗಿದ್ದರೆ ಅವರ ಆಧ್ಯಾತ್ಮಿಕ ದೃಷ್ಟಿಕೋನಕ್ಕೂ ಅಷ್ಟೇ ತೂಕ. ಕುವೆಂಪು ಅವರ ಆಧ್ಯಾತ್ಮಿಕತೆ ಇದ್ದಿದ್ದೇ ಪರಿಸರದ ಜೊತೆಗೆ ಮಾನವನ ಸಂಬಂಧದಲ್ಲಿ ಎಂದು ಹಲವು ವಿಮರ್ಶಕರು ಗುರುತಿಸುತ್ತಾರೆ. ಕುವೆಂಪು ಕವನಗಳಿಂದಲೇ ಸ್ಪೂರ್ತಿಗೊಂದು ನವಿಲುಕಲ್ಲಿನ ಸೂರ್ಯೋದಯ ನೊಡಲು ವರ್ಷ ವರ್ಷ ಸಾವಿರಾರು ಮಂದಿ ಕುಪ್ಪಳ್ಳಿಗೆ ತೆರಳುತ್ತಾರೆ. ಸೂರ್ಯೋದಯವಷ್ಟೇ ಅಲ್ಲ, ಸಗಣಿಯನ್ನು ಸಣ್ಣ ಸಣ್ಣ ಉಂಡೆ ಮಾಡಿ ತಳ್ಳಿಕೊಂಡು ಹೋಗುವ ಸಗಣಿ ಹುಳು ಕೂಡ ಕುವೆಂಪು ಅವರಿಗೆ ಅಷ್ಟೇ ಮುಖ್ಯ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಅವರು ಹೇಳುವಂತೆ “ಇಲ್ಲಿ ಯಾರೂ ಮುಖ್ಯರಲ್ಲ, ಇಲ್ಲಿ ಯಾರೂ ಅಮುಖ್ಯರಲ್ಲ” ಎಂಬ ಮಾತು, ಭೂಮಿಗೆ ಮತ್ತು ಪ್ರಕೃತಿಗೆ ಹೇಳಿ ಮಾಡಿಸಿ’ದಂತಿದೆ. ನಮ್ಮ ಬೇರುಗಳನ್ನು ಗಟ್ಟಿ ಮಾಡಿಕೊಳ್ಳುತ್ತಲೇ, ವಿಶ್ವಮಾನವರಾಗಬೇಕೆಂದು ತಮ್ಮ ಅಪಾರ ಸಾಹಿತ್ಯದ ಮೂಲಕ ಕರೆ ಕೊಟ್ಟ ಕುವೆಂಪು ಅವರ ಬರವಣಿಗೆಯನ್ನು ವಿಶ್ವ ಪರಿಸರ ದಿನದಂದು ನೆನಪಿಸಿಕೊಳ್ಳಲೇಬೇಕು.

ಪ್ರಮುಖ ಕೃತಿಗಳು: ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ, ಕೊಳಲು, ವಿಚಾರ ಕ್ರಾಂತಿಗೆ ಆಹ್ವಾನ, ಜಲಗಾರ, ಶೂದ್ರ ತಪಸ್ವಿ, ಶ್ರೀರಾಮಾಯಣ ದರ್ಶನಂ, ಪ್ರೇತಕ್ಯೂ, ನೆನಪಿನ ದೋಣಿಯಲ್ಲಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights