BSNL ಹೊಣೆ ಕೇಂದ್ರ ಸರ್ಕಾರದ್ದು! ದೇಶದ್ರೊಹಿಗಳಾಗಬೇಕಾದವರು ಯಾರು?

70 ವರ್ಷಗಳ ಭಾರತ ರಾಷ್ಟ್ರ ನಿರ್ಮಾಣದ ಇತಿಹಾಸದಲ್ಲಿ BSNL ಗೆ ತನ್ನದೇ ಆದ ಮಹತ್ವದ ಪಾತ್ರವಿದೆ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದ್ದು ಮಾತ್ರವಲ್ಲದೆ, ದೇಶದ ಒಟ್ಟಾರೆ ಆರ್ಥಿಕ ವಾಣಿಜ್ಯ ವಹಿವಾಟುಗಳಿಗೆ ಬಿಸ್ಸೆನ್ನೆಲ್ ನೀಡಿದ ಕೊಡುಗೆ ಅಪಾರವಾದದ್ದು. ಮೂಲೆಮೂಲೆಯ ಹಳ್ಳಿಗಾಡುಗಳನ್ನೂ ಒಳಗೊಂಡು ಇಡೀ ದೇಶಕ್ಕೆ ಸಂಪರ್ಕ ಸೇತುವಾಗಿ ದುಡಿದ ಸಂಸ್ಥೆಯ ಸೇವೆಯನ್ನು ರೂಪಾಯಿಗಳಲ್ಲಿ ಲೆಕ್ಕ ಹಾಕಲಾಗದು. ಇಂಥಾ ಸಂಸ್ಥೆಯನ್ನು ಮಣ್ಣುಗೂಡಿಸಲು ಇದೀಗ ರಂಗ ಸಜ್ಜಾಗಿದೆ.

ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ : ಅನಂತ್ ಕುಮಾರ್ ಹೆಗಡೆ.

ಮೊನ್ನೆ ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗಡೆ “ಬಿಎಸ್‌ಎನ್‌ನಲ್ಲಿ ಬರೀ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ. ಹಾಗಾಗಿ ಹಂತ ಹಂತವಾಗಿ ಅವರನ್ನು ಕೆಲಸದಿಂದ ತೆಗೆದುಹಾಕುವ ಮೂಲಕ ಖಾಸಗೀಕರಣ ಮಾಡುತ್ತೇವೆ. ಬಿಎಸ್‌ಎನ್‌ಎಲ್‌ ಎಷ್ಟು ಜಿಡ್ಡು ಹಿಡಿದು ಹೋಗಿದೆ ಎಂದರೆ ನಮ್ಮ ಸರ್ಕಾರಕ್ಕೂ ಅದನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಹಾಗಾಗಿ ಹೂಡಿಕೆ ಹಿಂತೆಗೆತದ ಮೂಲಕ ಅದನ್ನು ಮುಚ್ಚಿ ಆ ಜಾಗದಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ದೆಹಲಿಯ ನನ್ನ ಮನೆಯಲ್ಲಿಯೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಬರುವುದಿಲ್ಲ. ಈ ವಿಚಾರದಲ್ಲಿ ಬೆಂಗಳೂರಿಗೆ ಹೋಲಿಸಿಕೊಂಡರೆ ಉತ್ತರ ಕನ್ನಡವೇ ಬೆಸ್ಟ್. ಅಲ್ಲಿರುವವರು ಅಧಿಕಾರಿಗಳಲ್ಲ, ಕೇವಲ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ. ನಾನು ಬಳಸುವು ಭಾಷೆಯಲ್ಲಿ ನಿಖರತೆಯಿದೆ. ಹಾಗಾಗಿ ಹೂಡಿಕೆ ಹಿಂತೆಗೆತ ಮೂಲಕ ಬಿಎಸ್‌ಎನ್‌ಎಲ್‌ ಮುಗಿಸುತ್ತೇವೆ ಎಂದು ಅನಂತ್‌ ಕುಮಾರ್ ಹೆಗಡೆ ಹೇಳಿದ್ದಾರೆ.

BSNL ಮುಳುಗಿಸಿದ್ದು ಯಾರು?

BSNL‌ ಕುಸಿತ ದಿಢೀರ್ ಸಂಭವಿಸಿದ್ದಲ್ಲ. ಬಹಳ ವ್ಯವಸ್ಥಿತವಾಗಿ ಹಂತಹಂತವಾಗಿ ನಡೆಸಿದ ಷಡ್ಯಂತ್ರ. ಖಾಸಗಿ ಕಂಪನಿಗಳು 4ಜಿ, 5ಜಿ ಸೇವೆ ಒದಗಿಸುತ್ತಿರುವ ಸಂದರ್ಭದಲ್ಲಿ ಬಿಎಸ್ಸೆನ್ನೆಲ್‍ಗೆ ಹಲವು ವರ್ಷಗಳ ಕಾಲ 4ಜಿ ಸ್ಪೆಕ್ಟ್ರಮ್ ಮಂಜೂರಾತಿಯೇ ಸಿಗಲಿಲ್ಲವೆಂದರೆ ನಿಮಗೆ ಆಶ್ಚರ್ಯ ಎನಿಸಬಹುದು. ಕುಸಿಯುತ್ತಿರುವ ಸಂಸ್ಥೆಯನ್ನು ಉಳಿಸಿಕೊಳ್ಳಲು ಬಿಸ್ಸೆನ್ನೆಲ್ ನೌಕರರು ಹಲವು ಬಾರಿ ಮುಷ್ಕರ ಹೂಡಿದ್ದಾರೆ. ಮುಷ್ಕರ ಎಂದರೆ ಸಂಬಳ ಭತ್ಯೆ ಜಾಸ್ತಿ ಮಾಡಿ ಎಂದು ಕೇಳುವುದು ಮಾಮೂಲಿ. ಆದರೆ ಬಿಸ್ಸೆನ್ನೆಲ್ ನೌಕರರ ಪ್ರಧಾನ ಬೇಡಿಕೆ ‘4ಜಿ ಸ್ಪೆಕ್ಟ್ರಮ್ ಹಂಚಿಕೆ ಮಾಡಿ – ಬಿಸ್ಸೆನ್ನೆಲ್ ಉಳಿಸಿ’ ಎಂಬುದಾಗಿತ್ತು. ಮುಷ್ಕರ ತೀವ್ರಗೊಂಡ ಸಂದರ್ಭದಲ್ಲಿ ಕೇಂದ್ರದ ಮಂತ್ರಿಗಳು ಹಾಜರಾಗಿ 4ಜಿ ಕೊಡುವುದಾಗಿ ಭರವಸೆ ನೀಡಿದ್ದು, ನಂತರದಲ್ಲಿ ಬೇಡಿಕೆಯನ್ನು ಕಸದಬುಟ್ಟಿಗೆ ಹಾಕಿದ್ದು ಹಳೆ ಸಂಗತಿ.

ಈಗ 5ಜಿ ಟೆಕ್ನಾಲಜಿ ಅಳವಡಿಕೆಗೆ ರಂಗ ಸಜ್ಜಾಗಿರುವ ಹೊತ್ತಿನಲ್ಲಿ ಬಿಸ್ಸೆನ್ನೆಲ್‌ಗೆ ಕಾಡಿ ಬೇಡಿ 4ಜಿ ಕೊಡಲಾಗಿದೆ. ಆದರೂ ಅದರ ವೇಗ ಇನ್ನೂ ಓಬೀರಾಯನ ಕಾಲದಲ್ಲೇ ಇದೆ. ಪರಿಣಾಮವಾಗಿ ಸಂಸ್ಥೆಗೆ ಹೊಸ ಗ್ರಾಹಕರು ಸೇರುವುದಿರಲಿ, ಇದ್ದ ಗ್ರಾಹಕರೇ ದೂರಾಗುವಂತಹ ಸನ್ನಿವೇಶ ನಿರ್ಮಿಸಲಾಗಿದೆ. ಇತ್ತೀಚೆಗೆ ಜಿಯೋ ದರ ಸಮರಕ್ಕೆ ಇಳಿದ ಮೇಲಂತೂ ಬಿಸ್ಸೆನ್ನೆಲ್ ಅಸ್ತಿತ್ವವೇ ಪ್ರಶ್ನಾರ್ಹ. ಇತಿಹಾಸದಲ್ಲಿ ಮೊದಲ ಬಾರಿಗೆ ಈಗ ಬಿಸ್ಸೆನ್ನೆಲ್ ಬಳಿ ವೇತನ ಕೊಡಲೂ ಕಾಸಿಲ್ಲ. ಈಗ 50 ವರ್ಷ ಮೇಲ್ಪಟ್ಟ ನೌಕರರ ಸ್ವಯಂನಿವೃತ್ತಿ ಘೋಷಿಸಲಾಗಿದೆ. ನಿವೃತ್ತಿ ವಯಸ್ಸನ್ನು 60 ರಿಂದ 58ಕ್ಕೆ ಇಳಿಸಲಾಗಿದೆ. ಪರಿಣಾಮವಾಗಿ ಲಕ್ಷಾಂತರ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

‘ನಷ್ಟದಲ್ಲಿರುವ ಸಂಸ್ಥೆಗೆ ಹಣ ಯಾಕೆ ಕೊಡಬೇಕು?’ ‘ತೆರಿಗೆದಾರರ ಜೇಬಿಗೆ ಕತ್ತರಿ’ ಇತ್ಯಾದಿ ಪಾಂಡಿತ್ಯಪೂರ್ಣ ವಾದಗಳು, ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ, ಟಿವಿ ಪ್ಯಾನೆಲ್ ಚರ್ಚೆಗಳು ನಡೆದಿವೆ. ಜನಮಾನಸದಲ್ಲಿ ಬಿಸ್ಸೆನ್ನೆಲ್ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಜಾಲವೊಂದು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಲವು ಕಟುಸತ್ಯಗಳನ್ನು ನಾವು ನೆನಪಿನಲ್ಲಿಡಬೇಕು. 2004-05ರಲ್ಲಿ ಇದೇ ಬಿಸ್ಸೆನ್ನೆಲ್ 10,000 ಕೋಟಿ ನಿವ್ವಳ ಲಾಭ ಗಳಿಸಿತ್ತು. ಆನಂತರ ಸರ್ಕಾರಗಳ ಮುನ್ನೋಟದ ಕೊರತೆ, ಮೂಲಭೂತ ಸೌಲಭ್ಯಗಳ ಕಡೆಗಣನೆ, ಟೆಂಡರ್ ವಿಳಂಬ, ಹಸ್ತಕ್ಷೇಪ ಭ್ರಷ್ಟಾಚಾರದಿಂದಾಗಿ ಬಿಎಸ್‌ಎನ್‌ಎಲ್‌ ಕುಸಿಯುತ್ತಾ ಸಾಗಿದರೆ ಖಾಸಗಿ ಕಂಪನಿಗಳು ಬೆಳೆಯುತ್ತಾ ಹೋದವು.

ಇಂತಹ ಸಮುಯದಲ್ಲಿ 2016ರಲ್ಲಿ ಜಿಯೋ ಮಾರುಕಟ್ಟೆ ಪ್ರವೇಶಿಸಿತು. ಸಾಕ್ಷಾತ್ ಭಾರತದ ಪ್ರಧಾನಿಗಳು ಮುಂದೆ ನಿಂತು ಬಿಟ್ಟು ಜಾಹಿರಾತು ನೀಡಿ ಅದನ್ನು ಪ್ರಮೋಟ್ ಮಾಡಿದರು. ಈ ಮಧ್ಯೆ 2017ರಲ್ಲಿ ಬಿಎಸ್ಸೆನ್ನೆಲ್ ನೆಟ್‍ವರ್ಕ್ ಮೇಲೆ ಸೈಬರ್ ದಾಳಿ ನಡೆದು ಲಕ್ಷಾಂತರ ಸಂಪರ್ಕಗಳಿಗೆ ಹಾನಿಯಾಯಿತು. ಇಲ್ಲಿ ಕಾಣದ ಕೈಗಳು ಕೆಲಸ ಮಾಡಿರುವುದು ಸ್ಪಷ್ಟ. ಯಾವಾಗ ಜಿಯೋ ಅಟ್ಟಹಾಸದಿಂದ ಟೆಲಿಕಾಂ ಪ್ರವೇಶಿಸಿ ದರ ಸಮರಕ್ಕಿಳಿಯಿತೋ ಆಗ ಮೊದಲೇ 4ಜಿ ತಂತ್ರಜ್ಞಾನವಿಲ್ಲದೆ ದುರ್ಬಲವಾಗಿದ್ದ ಸಂಸ್ಥೆ ಕುಸಿದುಹೋಯ್ತು. 2015-16ರಲ್ಲಿ ಬಿಎಸ್ಎನ್ಎಲ್ ನಿಗಮ 4,859 ಕೋಟಿ, 2016-17ರಲ್ಲಿ 4,793 ಕೋಟಿ, 2017-18ರಲ್ಲಿ 1,993 ಕೋಟಿ, 2018-19ರಲ್ಲಿ 14,202 ಕೋಟಿ ನಷ್ಟ ಹೊಂದಿದೆ ಎಂದು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯೇ ಸಂಸತ್ ಅಧಿವೇಶನದಲ್ಲಿ ಮಾಹಿತಿ ನೀಡಿದೆ. ಇದು ಕೇವಲ ಬಿಸ್ಸೆನ್ನೆಲ್‍ಗೆ ಮಾತ್ರ ಅನ್ವಯಿಸುವಂತದ್ದಲ್ಲ, ವೊಡಾಫೋನ್ ಹಾಗೂ ಏರ್ಟೆಲ್‍ನಂತಹ ಖಾಸಗಿ ಕಂಪನಿಗಳೂ ಕೂಡ ಈ ಅವಧಿಯಲ್ಲಿ ನಷ್ಟ ಅನುಭವಿಸಿವೆ ಎಂಬುದನ್ನು ನಾವು ನೆನಪಿಡಬೇಕು.

ತಮಾಷೆಯೆಂದರೆ ‘ಅಧಿಕ ಸ್ಪೀಡ್ ಮತ್ತು ಕಡಿಮೆ ದರ’ ಎಂಬುದು ಜಿಯೋದ ತಂತ್ರವಾಗಿದ್ದಾಗಲೇ ಬಿಸ್ಸೆನ್ನೆಲ್‍ನ ಆಡಳಿತ ಮಂಡಳಿ ದರಗಳನ್ನು ಏರಿಸಿಬಿಟ್ಟಿತು. ಈ ಕ್ರಮ ಕೂಡ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ತಂತ್ರವೆಂದೇ ವಿಶ್ಲೇಷಿಸಲಾಗುತ್ತಿದೆ. ಮೋದಿ ಸರ್ಕಾರ ತಮ್ಮ ನೆಚ್ಚಿನ ಖಾಸಗಿ ಕೂಟದೊಂದಿಗೆ ಸೇರಿ ನಡೆಸಿದ ಷಡ್ಯಂತ್ರದ ಫಲ ಇದು.

ಕಳೆದ ಏಪ್ರಿಲ್‍ನಲ್ಲಿ ಬಿಎಸ್ಸೆನ್ನೆಲ್ ನೌಕರರ ಸಂಘ ಬಿಡುಗಡೆ ಮಾಡಿದ ಅಂಕಿಅಂಶಗಳು ನಮ್ಮನ್ನು ಬೆಚ್ಚಿಬೀಳಿಸುತ್ತವೆ. ಈಗ ಜಿಯೋ ತನ್ನ 5ಜಿ ಸೇವೆಯ ಗಿಗಾಫೈಬರ್ ಹೆಸರಿನ ಬ್ರಾಡ್ ಬ್ಯಾಂಡ್ ಬಿಡುಗಡೆಗೆ ನಿಂತಿದೆ. ಅಲ್ಲಿಗೆ ಬಿ.ಎಸ್.ಎನ್.ಎಲ್ ಕಥೆ ಏನು? ಜೊತೆಗೆ ತನ್ನ ಖರ್ಚುವೆಚ್ಚಗಳಿಗೆ ಹಾಗೂ ಬಂಡವಾಳ ಹೂಡಿಕೆಗೆ ಬಿಎಸ್ಸೆನ್ನೆಲ್ ಸಾಲ ಪಡೆದುಕೊಳ್ಳಲಾರದಂತೆ ಸರ್ಕಾರ ನಿರ್ಬಂಧಿಸಿದೆಯಂತೆ. ಕಳೆದ ಮಾರ್ಚ್‍ನ ಲೆಕ್ಕಪತ್ರಗಳ ಪ್ರಕಾರ ಟೆಲಿಕಾಂ ವ್ಯವಹಾರದಲ್ಲಿರುವ ಖಾಸಗಿ ಕಂಪನಿಗಳು ಬಿಎಸ್ಸೆನ್ನೆಲ್‍ಗೆ ಹೋಲಿಸಿದರೆ ಭಾರೀ ಸಾಲದಲ್ಲಿದ್ದವು. ವೊಡಾಫೋನ್ ಐಡಿಯಾದ ಸಾಲ 1,20,000 ಕೋಟಿ! ಏರ್ಟೆಲ್‍ನ ಸಾಲ 1,13,000 ಕೋಟಿ! ಇನ್ನೂ ಜಿಯೋದ ಸಾಲ 2 ಲಕ್ಷ ಕೋಟಿಗಳು!! ಬಿಸ್ಸೆನ್ನೆಲ್‍ನ ಸಾಲ 13,900 ಕೋಟಿಗಳು ಮಾತ್ರ. ಆದರೂ ಬಿಎಸ್‌ಎನ್ಎಲ್‌ಗೆ ಸರ್ಕಾರದ ಅಸಡ್ಡೆ ಮತ್ತು ಬ್ಯಾಂಕುಗಳಿಂದ ಸಾಲ ನೀಡಲಾಗುವುದಿಲ್ಲ ಏಕೆ?

ಬಿಸ್ಸೆನ್ನೆಲ್ ಆಸ್ತಿ-ಪಾಸ್ತಿಗಳು ದೇಶದ ಮೂಲೆಮೂಲೆಗಳಲ್ಲೂ ಸಾವಿರಾರು ನಗರ, ಪಟ್ಟಣಗಳಲ್ಲಿ ಹರಡಿಕೊಂಡಿವೆ. ದೇಶಾದ್ಯಂತ ಟವರ್‌ಗಳು ಮತ್ತು ಕೇಬಲ್ ಜಾಲವಿದೆ. 2016ರ ಅಧಿಕೃತ ಅಂದಾಜಿನ ಪ್ರಕಾರವೇ ಬಿಸೆನ್ನೆಲ್‍ನ ಮೌಲ್ಯ 70,746 ಕೋಟಿಗಳು. ವಾಸ್ತವದಲ್ಲಿ ಅದರ ಆಸ್ತಿ ಪಾಸ್ತಿಯ ಮಾರುಕಟ್ಟೆ ಮೌಲ್ಯ ಅದಕ್ಕಿಂತ ಎಷ್ಟೋ ಪಟ್ಟು ಅಧಿಕವಿರುತ್ತದೆ. ಇಂಥಾ ಅನುಕೂಲತೆ ಯಾವುದೇ ಖಾಸಗಿ ಕಂಪನಿಗೂ ಇಲ್ಲ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಬಂಡವಾಳವನ್ನು ಖದೀಮ ಕಾರ್ಪೊರೇಟ್‍ಗಳ ಬಾಯಿಗೆ ಹಾಕುತ್ತಿರುವ ಸರ್ಕಾರ ಬಿಸ್ಸೆನ್ನೆಲ್‍ಗೆ ಸಾಲ ಪಡೆಯಲು ಅನುಮತಿಯನ್ನೇ ಕೊಡಲಿಲ್ಲ!

ಬಿಎಸ್‌ಎನ್‌ಎಲ್‌ ಮುಚ್ಚಲು ಅವೈಜ್ಞಾನಿಕ ನೀತಿಗಳ ಮೂಲಕ ಸರ್ಕಾರದ ಖಾಸಗೀಕರಣದ ಹುನ್ನಾರ ನಡೆಸಿದೆ ಎಂಬುದು ನಿರಾಕರಿಸಲಾಗದ ಸತ್ಯ. ಇದರ ನಡುವೆಯೂ ಬಿಎಸ್‌ಎನ್‌ಎಲ್‌ ನೌಕರರು ಸಂಸ್ಥೆಯನ್ನು ಉಳಿಸಲು ಪಣ ತೊಟ್ಟಿದ್ದಾರೆ. ಬಿಎಸ್ಎನ್ಎಲ್ ಉದ್ಯೋಗಿಗಳು ಸೇವೆಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸಲು ‘ಕಸ್ಟಮರ್ ಡಿಲೈಟ್ ಯಿಯರ್, ಸರ್ವೀಸ್ ವಿತ್ ಎ ಸ್ಮೈಲ್, ನಿಮ್ಮ ಮನೆ ಬಾಗಿಲಿಗಿ ಬಿಎಸ್‌ಎನ್‌ಎಲ್’ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬಿಎಸ್‌ಎನ್‌ಎಲ್ ಉದ್ಯೋಗಿಗಳನ್ನು ದೇಶದ್ರೋಹಿಗಳೆಂದ ಅನಂತ್‌ಕುಮಾರ್ ಹೆಗಡೆಯ ಹೇಳಿಕೆಯು ಬಿಎಸ್‌ಎನ್‌ಎಲ್ ಮತ್ತು ಅದರ ಉದ್ಯೋಗಿಗಳ ಬಗ್ಗೆ ಅವರ ಅಜ್ಞಾನವನ್ನು ಮಾತ್ರ ತೋರಿಸುತ್ತ ಎಂದು ಬಿಎಸ್‌ಎನ್‌ಎಲ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ. ಅಭಿಮನ್ಯು ಹೇಳಿದ್ದಾರೆ.

BSNL ನೌಕರರು ಬಿಎಸ್ಎನ್ಎಲ್ ಒಳಗೆ ವಿವಿಧ ವೇದಿಕೆಗಳಲ್ಲಿ ಪ್ರಶ್ನೆ ಎತ್ತಿದ್ದಾರೆ. ಅನೇಕ ಪ್ರತಿಭಟನೆಗಳನ್ನು ನಡೆಸಿದ್ದಾರೆ. 4 ಜಿ ಸೇವೆಗಳನ್ನು ಹೊರತರುವುದು ಅದರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಸರಣಿ ಪ್ರತಿಭಟನೆಯ ನಂತರ, ಅಕ್ಟೋಬರ್ 23, 2019 ರಂದು ಕೇಂದ್ರ ಸರ್ಕಾರ ರೂ. ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಾಗಿ 69,000 ಕೋಟಿ ಪುನರುಜ್ಜೀನವ ಪ್ಯಾಕೇಜ್ ಘೋಷಿಸಿತು. ವಿಆರ್‌ಎಸ್‌ ಅನುಷ್ಠಾನವನ್ನು ಹೊರತುಪಡಿಸಿ ಪುನರುಜ್ಜೀವನ ಪ್ಯಾಕೇಜ್‌ನಲ್ಲಿರುವ ಯಾವುದೇ ಭರವಸೆಯನ್ನು ಜಾರಿಗೆ ತರಲಾಗಿಲ್ಲ ಎಂದು ಅವರು ದೂರಿದ್ದಾರೆ.

ಸದ್ಯದಲ್ಲೇ ನಮ್ಮ ಈ ಅಮೂಲ್ಯ ಉದ್ದಿಮೆ ಸಂಸ್ಥೆ BSNL ರಕ್ಕಸ ಕಾರ್ಪೊರೇಟ್‍ಗಳ ಬಾಯಿಗೆ ಬೀಳಲಿದೆ. ಬಿಎಸ್ಸೆನ್ನೆಲ್ ಕಬಳಿಸುವ ಈ ಖಾಸಗಿ ದೇಶದ್ರೋಹವನ್ನು ಮರೆಮಾಚಿ ಬಹುಪರಾಕ್ ಹಾಕಲು ಮಾಧ್ಯಮಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ವಂದಿಮಾಗಧರೂ ಈಗಾಗಲೇ ಸಜ್ಜಾಗಿದ್ದಾರೆ. ಅದರ ಭಾಗವಾಗಿಯೇ ಅನಂತ್ ಕುಮಾರ್ ಹೆಗಡೆ ದೇಶಗ್ರೋಹದ ಮಾತುಗಳನ್ನಾಡುತ್ತಾರೆ ಹೊರತು ಮತ್ತೇನಿಲ್ಲ..


Read Also: BSNL ದೇಶದ್ರೋಹಿಗಳ ಅಡ್ಡ: jio ದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆಯೇ? 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights