ವೈರಸ್ ಹರಡಿ ಫೇಸ್ಬುಕ್ ಪೋಸ್ಟ್: ಇನ್ಫೋಸಿಸ್ ಸಿಬ್ಬಂದಿ ಬಂಧನ; ಉದ್ಯೋಗಿಯನ್ನು ವಜಾ ಮಾಡಿದ ಸಂಸ್ಥೆ
ಹೊರಗೆ ಹೋಗಿ ಸೀನಿ ಕೊರೊನ ವೈರಸ್ ಹರಡಿ ಎಂದು ಫೇಸ್ಬುಕ್ ಪೋಸ್ಟ್ ಬರೆದಿದ್ದ ಇನ್ಫೋಸಿಸ್ ಸಿಬ್ಬಂದಿಯೊಬ್ಬರನ್ನು ಬೆಂಗಳೂರು ನಗರ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.
“ಬನ್ನಿ ಎಲ್ಲರೂ ಕೈಜೋಡಿಸೋಣ. ಹೊರಗೆ ಹೋಗೋಣ ಮತ್ತು ಬಾಯಿ ತೆರೆದು ಸೀನಿ ವೈರಾಣು ಹರಡೋಣ” ಎಂದು ಇನ್ಫೋಸಿಸ್ ಸಿಬ್ಬಂದಿ ಮುಜೀಬ್ ಮೊಹಮದ್ ಅವರು ಫೇಸ್ಬುಕ್ ನಲ್ಲಿ ಬರೆದಿದ್ದರು ಎಂದು ಆರೋಪಿಸಲಾಗಿತ್ತು.
“ಇವರು 25 ವರ್ಷಗಳಿಂದ ಬೆಂಗಳೂರು ನಿವಾಸಿಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರು ಹೀಗೇಕೆ ಮಾಡಿದರು ಎಂಬುದನ್ನು ತನಿಖೆ ಮಾಡಬೇಕಿದೆ” ಎಂಡು ಕ್ರೈಂ ಬ್ರಾಂಚ್ ನ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ಹೇಳಿರುವುದಾಗಿ ದ ಪ್ರಿಂಟ್ ವರದಿ ಮಾಡಿದೆ.
ಸಿಸಿಬಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಅಲ್ಲದೆ, ಐಪಿಸಿ 269 ಮತ್ತು 270ರಡಿ ಸಮಾಜದಲ್ಲಿ ಭಯ ಮತ್ತು ಆತಂಕ ಹರಡುತ್ತಿರುವ ಆರೋಪದ ಮೇರೆಗೆ ಮೊಹಮದ್ ವಿರುದ್ಧ ಪ್ರಕರಣ ದಾಖಲಿಸಿದೆ.
ಇನ್ಫೋಸಿಸ್ ಸಂಸ್ಥೆ ಇದರ ಬಗ್ಗೆ ಪ್ರತಿಕ್ರಿಯಿಸಿದ್ದು ಆರೋಪಿತ ಉದ್ಯೋಗಿಯನ್ನು ಕೆಲಸದಿಂದ ವಜಾ ಮಾಡಿರುವುದಾಗಿ ತಿಳಿಸಿದೆ.
Infosys has completed its investigation on the social media post by one of its employees and we believe that this is not a case of mistaken identity. (1/2)
— Infosys (@Infosys) March 27, 2020
ಕೊರೊನ ಬಿಕ್ಕಟ್ಟು ವಿಶ್ವದಾದ್ಯಂತ ತನ್ನ ಹಿಡಿತವನ್ನು ಸಾಧಿಸುತ್ತಿರುವ ಸಮಯದಲ್ಲಿ ನಾಗರಿಕರು ಎಚ್ಚರಿಕೆಯಿಂದ ವರ್ತಿಸಿ, ಉಪಯುಕ್ತವಾದ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಕಿದೆ.

