ಸಂಪುಟ ವಿಸ್ತರಣೆ ವಿಳಂಬಕ್ಕೆ ಅತೃಪ್ತಿ, ಶಾ ನಡೆಗೆ ತೀವ್ರ ಆಕ್ರೋಶ….

ಸಂಪುಟ ವಿಸ್ತರಣೆ ಮತ್ತೆ ವಿಳಂಬವಾರಗಿರುವುದಕ್ಕೆ ಹಾಗೂ ಆಯ್ದ ಕೆಲವರಿಗಷ್ಟೇ ಮಂತ್ರಿಭಾಗ್ಯ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರಕಾರದ ಅಸ್ತತ್ವಕ್ಕೆ ಮುಖ್ಯ ಕಾರಣರಾಗಿರುವ ಮಾಜಿ ಅನರ್ಹ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸರಕಾರ ಅಸ್ತಿತ್ವದಲ್ಲಿರುವುದೇ ನಮ್ಮಿಂದ ಎಂಬುದು ನೆನಪಿರಲಿ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿರುವ ಪಕ್ಷಾಂತರಿಗಳು ತಮ್ಮ ಪೈಕಿ ಎಲ್ಲರಿಗೂ ಮಂತ್ರಿ ಸ್ಥಾನ ನೀಡಲೇಬೇಕು ಎಂಬ ಬೇಡಿಕೆಯನ್ನು ಪುನಸುಚ್ಛರಿಸಿದ್ದಾರೆ.

ನಾವು 17 ಜನ ಶಾಸಕರು ನಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ನಂತರ ಅನರ್ಹಗೊಂಡು ಮಾಡಿದ ತ್ಯಾಗದಿಂದಾಗಿಯೇ ಈ ಸರಕಾರ ಅಧಿಕಾರದಲ್ಲಿದೆ. ಹೀಗಾಗಿ ಕೊಟ್ಟ ಮಾತಿನಂತೆ ನಮ್ಮೆಲ್ಲರಿಗೂ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಮಾಜಿ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

ಇದೇ ವೇಳೆ ಉಪಚುನಾವಣೆಯಲ್ಲಿ ಗೆದ್ದ ಅನರ್ಹ ಶಾಸಕರಲ್ಲಿ ಆಯ್ದ ಕೆಲವರಿಗೆ ಮಾತ್ರ ಮಂತ್ರಿಗಿರಿ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಆರ್‍ ಪೇಟೆ ಶಾಸಕ ನಾರಾಯಣ ಗೌಡ, ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಂಬ ನಂಬಿಕೆ ಇದೆ, ನೋಡೋಣ ಎಂದಿದ್ದಾರೆ.

ಬಿಜೆಪಿಯಲ್ಲಿ ಏನೇ ಶುಭ ಕಾರ್‍ಯ ಮಾಡಬೇಕಾದರೂ ತಿಥಿ, ನಕ್ಷತ್ರ, ಮುಹೂರ್ತ ನೋಡಿ ಮಾಡ್ತಾರೆ. ಹಾಗೇ ಸಂಪುಟ ವಿಸ್ತರಣೆ ಸಹ ಆಗಬೇಕಾದ ಮೂಹೂರ್ತಕ್ಕೆ ಆಗುತ್ತದೇನೋ ಕಾದು ನೋಡೋಣ ಎಂದು ಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.

ಈ ಮಧ್ಯೆ ಶನಿವಾರ ಹುಬ್ಬಳ್ಳಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಲು ನಿರಾಕರಿಸಿರುವುದು ಪಕ್ಷಾಂತರಿಗಳಲ್ಲಿ ಅತೃಪ್ತಿಯನ್ನು ತೀವ್ರವಾಗಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights