ಸಚಿವ ಸಂಪುಟ ವಿಸ್ತರಣೆ : ಶುರುವಾದ ಖಾತೆ ಖ್ಯಾತೆ – ಆರಂಭಗೊಂಡ ಅಸಲಿ ಆಟ

ಆಪರೇಷನ್ ಕಮಲ ಮುಗಿತು. ಉಪಚುನಾವಣೆ ಕೂಡ ಮುಗಿತು. ಅನರ್ಹರಾಗಿದ್ದ ಶಾಸಕರಿಗೆ ಜನ ಅರ್ಹತೆ ಕೂಡ ಕೊಟ್ಟಾಯ್ತು. ನಿರೀಕ್ಷೆಯಂತೆ 12 ಕ್ಷೇತ್ರಗಳಲ್ಲಿ ಶಾಸಕರು ಗೆಲವು ಕೂಡ ಸಾಧಿಸಿದ್ದಾರೆ. ಇನ್ನೇನು ಬಿಜೆಪಿ ಸರ್ಕಾರ ಸುಭದ್ರ ಎನ್ನುವ ಹೊತ್ತಿಗೆ ಮತ್ತೊಂದು ತಲೆ ಬಿಸಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ಶುರುವಾಗಿದೆ.

ಹೌದು… ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಜೆಡಿಎಸ್ ಹಾಗೂ ಕಾಂಗ್ರೆಸ್ ತೊರೆದ ಶಾಸಕರು ಉಪಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಎದುರು ನೋಡುತ್ತಿದ್ದಾರೆ. ಇತ್ತಾ ಬಿಜೆಪಿಯ ಮೂಲ ಶಾಸಕರು ಸಚಿವ ಸ್ಥಾನದ ಆಕಾಂಕ್ಷೆಗಳಾಗಿರದೇ ಇಂಥದ್ದೇ ಖಾತೆಯನ್ನು ಬಯಸಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿಗೆ ಡಜನ್ ಗೂ ಅಧಿಕವಿರುವ ಶಾಸಕರಲ್ಲಿ ಎಷ್ಟು ಜನರಿಗೆ ಬಿಎಸ್ ವೈ ಸಚಿವ ಸ್ಥಾನ ನೀಡ್ತಾರೆ..? ಯಾರಿಗೆ ಯಾವೆಲ್ಲಾ ಖಾತೆ ಸಿಗಲಿದೆ? ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರಿಗೆ ಯಾವ ಖಾತೆ? ತಮಗೆ ನೀಡಲಾಗುವ ಖಾತೆಗಳಿಗೆ ಶಾಸಕರು ತೃಪ್ತರಾಗ್ತಾರ? ಅಥವಾ ಬಿಎಸ್ ವೈ ಅವರ ಈ ನಡೆಯಿಂದ ಮೂಲ ಬಿಜೆಪಿ ಬಂಡಾಯ ಏಳ್ತಾರ? ರಾಜ್ಯ ರಾಜಕಾರಣದ ಭವಿಷ್ಯ ಕುರಿತು ಹೀಗೆ ಏಳುತ್ತಿರುವ ಸಾಲು ಸಾಲು ಪ್ರಶ್ನೆಗಳು ಇದೀಗ ಕುತೂಹಲದ ಕೇಂದ್ರ ಬಿಂದುವಾಗಿದೆ.

ಸಚಿವ ಸ್ಥಾನಕ್ಕಾಗಿಯೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿ ಇದೀಗ ಚುನಾವಣೆಯಲ್ಲಿ ಮತ್ತೆ ಅರ್ಹತೆ ಗಿಟ್ಟಿಸಿರುವ ಎಲ್ಲಾ 12 ಶಾಸಕರಿಗೂ ಸಚಿವ ಸ್ಥಾನ ನೀಡಲೇಬೇಕಾದ ಸಂದಿಗ್ಧತೆ ಬಿಎಸ್​ವೈ ಮುಂದಿದೆ.  ಇದಲ್ಲದೆ, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಸೋಲನುಭವಿಸಿರುವ ಎಂಟಿಬಿ ನಾಗರಾಜ್ ಅವರನ್ನು ಸಮಾಧಾನಪಡಿಸಲು ವಿಧಾನ ಪರಿಷತ್​ಗೆ ನಾಮನಿರ್ದೇಶನ ಮಾಡಿ ಸಚಿವ ಸ್ಥಾನ ನೀಡುವ ಸಾಧ್ಯತೆಯೂ ಇದೆ. ಈಗಾಗಲೇ ಸೋಲಿನಿಂದ ಮುನಿಸಿಕೊಂಡಿರುವ ಎಂಟಿಬಿ ನಾಗರಾಜ್ ಅವರನ್ನು ಬಿಎಸ್​ವೈ ಸಚಿವ ಸ್ಥಾನ ನೀಡಿ ಸಮಾಧಾನಪಡಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಇದೀಗ ನೂತನವಾಗಿ ಗೆದ್ದಿರುವ ಮೂವರು ಶಾಸಕರ ಜೊತೆಗೆ ಮತ್ತಿಬ್ಬರು ಪಕ್ಷದ ಹಿರಿಯ ಮುಖಂಡರಿಗೆ ಸಚಿವ ಸ್ಥಾನ ನೀಡಲು ಒತ್ತಡ ಸಿಎಂ ಮೇಲೆ ಹೆಚ್ಚಾಗಿದೆ. ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ಮೊದಲು ರಚನೆಯಾದ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಉಮೇಶ್ ಕತ್ತಿ ಭಾರೀ ಅಸಮಾಧಾನಗೊಂಡಿದ್ದರು. ಇದೀಗ ವಿಸ್ತರಣೆಯಾಗುವ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇಬೇಕು ಎಂದು ಕತ್ತಿ ಪಟ್ಟು ಹಿಡಿದಿದ್ದಾರೆ. ಜೊತೆಗೆ ಆ ಭಾಗದ ಮತ್ತೊಬ್ಬ ಪ್ರಬಲ ನಾಯಕರಾಗಿರುವ ಬಾಲಚಂದ್ರ ಜಾರಕಿಹೊಳಿ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿ, ಉಪಚುನಾವಣೆಯಲ್ಲಿ ಗೆದ್ದಿರುವ ಬೆಳಗಾವಿ ಭಾಗದ ರಮೇಶ್​ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರಿಗೆ ಸಚಿವ ಸ್ಥಾನ ನೀಡಲೇಬೇಕಿದೆ. ಇವರ ಜೊತೆಗೆ ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೂ ಸ್ಥಾನ ಕಲ್ಪಿಸಿಕೊಡಬೇಕಾದ ಅನಿವಾರ್ಯತೆ ಸಿಎಂಗೆ ಎದುರಾಗಿದೆ. ಈಗಾಗಲೇ ಇದೇ ಜಿಲ್ಲೆಯ ಅಥಣಿ ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಲಕ್ಷ್ಣಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಜೊತೆಗೆ ಸಚಿವ ಸ್ಥಾನವನ್ನು ನೀಡಲಾಗಿದೆ. ಇದೀಗ ಮತ್ತೆ ಅದೇ ಭಾಗದ ಐವರು ಶಾಸಕರಿಗೆ ಸಚಿವ ಸ್ಥಾನ ನೀಡದರೆ, ಒಟ್ಟು ಆರು ಸ್ಥಾನಗಳು ಬೆಳಗಾವಿಗೆ ಸಿಂಹಪಾಲು ನೀಡಿದಂತಾಗುತ್ತದೆ. ಇದು ಪಕ್ಷದಲ್ಲಿ ಪ್ರಾದೇಶಿಕ ಅಸಮಾಧಾನಗೂ ಕಾರಣವಾಗಬಹುದು. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಯಲ್ಲಿ ಬೆಳಗಾವಿಗೆ ಎಷ್ಟು‌ ಸಚಿವ ಸ್ಥಾನ ಕೊಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿ ಆ ಭಾಗದ ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ವಿಸ್ತರಣೆಗೂ ಮೊದಲೇ ಲಾಭದಾಯಕ ಖಾತೆಗಳ ಮೇಲೆ ಕಣ್ಣಿಟ್ಟಿರುವ ನೂತನ ಶಾಸಕರು ಮತ್ತು ಹಾಲಿ ಸಚಿವರು ಅದಕ್ಕಾಗಿ ತೀವ್ರ ಲಾಬಿ ನಡೆಸಿದ್ದು, ಎಲ್ಲರನ್ನೂ ಸಮಾಧಾಮನಪಡಿಸಿ ಸರ್ಕಾರ ಮುನ್ನಡೆಸಬೇಕಾದ ಸಂಕಷ್ಟಕ್ಕೆ ಮುಖ್ಯಮಂತ್ರಿ ಬಿ.ಎಸ್.ವೈ ಗಿದೆ.

ಚುನಾವಣೆಯಲ್ಲಿ ಗೆದ್ದಿರುವ 12 ಶಾಸಕರಲ್ಲಿ 11 ಮಂದಿಗೆ ಸಚಿವ ಸ್ಥಾನಖಾತರಿಯಾಗಿದ್ದರೂ, ಕೆಲವರು ಲಾಭ ತರುವ ಖಾತೆಗಳೇ ಬೇಕೆಂದು ಹಟ ಹಿಡಿದಿದ್ದಾರೆ. ಈ ಹಿಂದೆ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿದ್ದ ಉಮೇಶ್ ಕತ್ತಿ, ಎ.ರಾಮದಾಸ್, ಜಿ.ಎಚ್.ತಿಪ್ಪಾರೆಡ್ಡಿ, ಸಿ.ಪಿ. ಯೋಗೇಶ್ವರ್ ಮುಂತಾದ ಆಕಾಂಕ್ಷಿಗಳು ಮತ್ತೆ ಲಾಬಿ ಆರಂಭಿಸಿದ್ದಾರೆ.

ಹೀಗಾಗಿ ಮುಖ್ಯಮಂತ್ರಿ ಮತ್ತು ವಿವಿಧ ಸಚಿವರ ಬಳಿ ಹೆಚ್ಚುವರಿಯಾಗಿ ಇರುವ ಖಾತೆಗಳನ್ನು ಸಂಪುಟ ವಿಸ್ತರಣೆ ಬಳಿಕ ಮರು ಹಂಚಿಕೆ ಮಾಡಬೇಕಾಗಿದೆ. ಬೆಂಗಳೂರು ಅಭಿವೃದ್ಧಿ, ಇಂಧನ, ನೀರಾವರಿ, ಲೋಕೋಪಯೋಗಿ, ಗೃಹ, ಸಾರಿಗೆ , ಕಂದಾಯಗಳಂತಹ ಲಾಭದಾಯಕ ಖಾತೆಗಳಿಗೆ ಹೊಸದಾಗಿ ಆಯ್ಕೆ ಆಗಿರುವ ಶಾಸಕರು ಪಟ್ಟು ಹಿಡಿಯುವ ಸಾಧ್ಯತೆ ಇದೆ. ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್, ರಮೇಶ್ ಜಾರಕಿಹೊಳಿ ಪ್ರಭಾವಿ ಖಾತೆಗಳ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ, ಕೆಲವು ಸಚಿವರಿಗೆ ಪ್ರಮುಖ ಖಾತೆಗಳ ತ್ಯಾಗಕ್ಕೆ ಸಿದ್ಧರಾಗಲು ಮುಖ್ಯಮಂತ್ರಿ ಸೂಚಿಸಿದ್ದಾರೆ ಎನ್ನಲಾಗಿದ್ದು, ಯಾರಿಗೆ ಯಾವ ಖಾತೆ ನೀಡಲಾಗುತ್ತದೆ ಅನ್ನೋದು ಮಾತ್ರ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ಒಟ್ಟಿನಲ್ಲಿ ಬಿಎಸ್ ಯಡಿಯೂರಪ್ಪ ಯಶಸ್ವಿಯಾಗಿ ಸಚಿವ ಸಂಪುಟ ವಿಸ್ತರಣೆ ಮಾಡ್ತಾರಾ..? ಅಥವಾ ಆತಂಕ ಗದ್ದಲು ಸೃಷ್ಟಿಯಾಗುತ್ತಾ..? ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights