ಸರ್ಕಾರದ ಆಟ; ಪೊಲೀಸರಿಗೆ ಪ್ರಾಣ ಸಂಕಟ: 100 ಪೊಲೀಸರು ಕ್ವಾರಂಟೈನ್‌ಗೆ

ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆ ಮಾಡಿದ್ದ ಆರೋಪ ಹೊತ್ತಿರುವ ಆರೋಪಿಗಳನ್ನು ಬೆಂಗಳೂರಿನಿಂದ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ತಂದಿರಿಸಲಾಗಿತ್ತು. ಆರೋಪಿಗಳನ್ನು ರಾಮನಗರಕ್ಕೆ ಶಿಫ್ಟ್‌ ಮಾಡಿದ್ದವು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಸಮರ್ಥಿಸಿಕೊಂಡು, ಅಗತ್ಯಕ್ಕೆ ತಕ್ಕಂತೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಈಗ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಬಂಧಿಸಿಡಲಾಗಿದ್ದ ಪಾದರಾಯನಪುರ ಗಲಭೆ ಆರೋಪಿಗಳ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದಾಗಿ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ 100ಕ್ಕೂ ಹೆಚ್ಚು ಪೊಲೀಸ್‌ ಪೇದೆಗಳು ಮತ್ತು ನಗರ ಸಭೆ ಸಿಬ್ಬಂದಿಗಳನ್ನು ಕ್ವಾರಂಟೈನ್‌ ನಲ್ಲಿಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕಳೆದ ವಾರ ಚಾಮರಾಜಪೇಟೆ ಕ್ಷೇತ್ರದ ಪಾದರಾಯನಪುರದಲ್ಲಿ ದೊಡ್ಡ ಗಲಭೆ ನಡೆದಿತ್ತು. ಆರೋಗ್ಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾದ ಮತ್ತು ಅನವಶ್ಯಕ ಗಲಭೆಗೆ ಕಾರಣವಾಗಿದ್ದ 120ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದರು. ಅಲ್ಲದೆ, ಮಾಜಿ ಸಿಎಂ ಹೆಚ್‌ಡಿಕೆ ಸೇರಿದಂತೆ ಹಲವರ ವಿರೋಧದ ನಡುವೆಯೂ ಈ ಎಲ್ಲಾ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಆದರೆ, ಪರೀಕ್ಷೆ ವೇಳೆ ಹೀಗೆ ಸ್ಥಳಾಂತರಿಸಲ್ಪಟ್ಟ ಪಾದರಾಯನಪುರ ಆರೋಪಿಗಳ ಪೈಕಿ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ನಿನ್ನೆಯೇ ಎಲ್ಲಾ ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿದೆ. ಆರೋಪಿಗಳು ಬೆಂಗಳೂರಿಗೆ ಶಿಫ್ಟ್ ಆಗಿದ್ದರೂ ಸಹ ಕಾರಾಗೃಹದ ಸಿಬ್ಬಂದಿಗಳಿಗೆ ಮಾತ್ರ ನಿರಾಳತೆ ಎಂಬುದು ದೂರದ ಮಾತಾಗಿದೆ.

 

ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ 100ಕ್ಕೂ ಅಧಿಕ ಪೊಲೀಸರು:

ಪಾದರಾಯನಪುರ ಗಲಭೆ ಆರೋಪಿಗಳಲ್ಲಿ ಕೊರೋನಾ ಪತ್ತೆಯಾದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ಆರೋಪಿಗಳ ಜೊತೆಗೆ ನಿಕಟವಾಗಿ ಕಾಣಿಸಿಕೊಂಡಿರುವ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲು ಜಿಲ್ಲಾಡಳಿತ ಮುಂದಾಗಿದೆ.

ಹೀಗಾಗಿ ಆರೋಪಿಗಳನ್ನ ಕರೆತಂದಾಗ ಮಾಡಿರುವ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದೆ. ಈಗಾಗಲೇ ವಿಡಿಯೋ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು 35 ಜನ ಪೊಲೀಸ್‌ ಪೇದೆಗಳು ಹಾಗೂ ಮೊನ್ನೆ ಬೆಳಿಗ್ಗೆ ಜೈಲಿನಲ್ಲಿ ಸ್ಯಾನಿಟೈಸರ್, ಮಾಸ್ಕ್ ವಿತರಣೆ ಮಾಡಿದ್ದ ನಗರಸಭೆಯ 7 ಜನ ಸಿಬ್ಬಂದಿಗಳನ್ನು ಕ್ವಾರೆಂಟೈನ್ ಮಾಡಿದ್ದಾರೆ.

ಅಲ್ಲದೆ, ಇದೀಗ ಯಾರನ್ನೆಲ್ಲಾ ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಚಿಂತನೆ ನಡೆಸಿದ್ದಾರೆ. ಒಂದು ಅಂದಾಜಿನ ಪ್ರಕಾರ 100ಕ್ಕೂ ಅಧಿಕ ಜನ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights