ಸರ್ಕಾರಿ ಭೂಮಿಯಲ್ಲಿರುವ ಖಾಸಗಿ ಆಸ್ಪತ್ರೆಗಳು ಉಚಿತ ಚಿಕಿತ್ಸೆ ಏಕೆ ನೀಡುವುದಿಲ್ಲ; ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಬಾರದೇಕೆ? ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಕೇಂದ್ರವು ಪ್ರತಿಕ್ರಿಯೆ ನೀಡಬೇಕು ಎಂದು ಕೇಳಿರುವುದಾಗಿ ಕಾನೂನು ಸುದ್ದಿ ವೆಬ್‌ಸೈಟ್ BarandBench.com ವರದಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ.ಎಸ್ ಬೋಪಣ್ಣ ಮತ್ತು ಹೃಷಿಕೇಶ ರಾಯ್ ಅವರ ನ್ಯಾಯಪೀಠವು ಕೊರೊನಾ ಸೋಂಕಿತರಿಗೆ ಉಚಿತವಾಗಿ ಅಥವಾ ಅತ್ಯಲ್ಪ ವೆಚ್ಚದಲ್ಲಿ ಚಿಕಿತ್ಸೆ ನೀಡಬಹುದಾದ ಖಾಸಗಿ ಆಸ್ಪತ್ರೆಗಳನ್ನು ಗುರುತಿಸುವಂತೆ ಕೇಂದ್ರವನ್ನು ಕೇಳಿದ್ದು, ಒಂದು ವಾರದೊಳಗೆ ಪ್ರತಿಕ್ರಿಯಿಸುವಂತೆ ತಿಳಿಸಿದೆ.

ಖಾಸಗಿ / ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಚಿಕಿತ್ಸೆಗಾಗಿ ವಕೀಲ ಸಚಿನ್ ಜೈನ್ ಅವರು ಸಲ್ಲಿಸಿದ ಅರ್ಜಿಯಲ್ಲಿ “ವೆಚ್ಚ ಸಂಬಂಧಿತ ನಿಯಮಗಳ” ಬಗ್ಗೆ ಕೇಳಲಾಗಿತ್ತು.

ಖಾಸಗಿ ಆಸ್ಪತ್ರೆಗಳು ಚಿಕಿತ್ಸಾ ಶುಲ್ಕವನ್ನು ಹೆಚ್ಚಿಸಿವೆ ಎಂದು ಆರೋಪಿಸಿರುವ ಸುದ್ದಿ ವರದಿಗಳನ್ನು ಜೈನ್ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

“ರಾಷ್ಟ್ರವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವಾಗ, ಸರ್ಕಾರದ ಜಮೀನಿನಲ್ಲಿ (ರಿಯಾಯಿತಿ ದರದಲ್ಲಿ ನಿಗದಿಪಡಿಸಲಾಗಿದೆ) ಅಥವಾ ದತ್ತಿ ಸಂಸ್ಥೆಗಳಿಂದ ನಡೆಯುತ್ತಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಪರಿಶೀಲಿಸಿ,  ಕೊರೊನಾ ಸೋಂಕಿತ ರೋಗಿಗಳಿಗೆ ಲಾಭರಹಿತ ಆಧಾರದ ಮೇಲೆ ಚಿಕಿತ್ಸೆ ಒದಗಿಸಬೇಕು” ಎಂದು ಜೈನ್ ಉಲ್ಲೇಖಿಸಿದ್ದಾರೆ.

ಇತರ ಖಾಸಗಿ ಆಸ್ಪತ್ರೆಗಳ ಶುಲ್ಕವನ್ನು ಸರ್ಕಾರವು “ನಿಗದಿತ ವೆಚ್ಚದ ಆಧಾರದ ಮೇಲೆ” ನಿಯಂತ್ರಿಸಬೇಕು ಎಂದು ಅರ್ಜಿಯಲ್ಲಿ ನಮೂದಿಸಲಾಗಿದೆ.

ದೇಶದ ರಾಜಧಾನಿ ದೆಹಲಿಯ ವಿವಿಧ ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಪ್ರಯೋಜನ ಪಡೆದಿದ್ದರೂ ಅವು ಸಾಮಾಜಿಕ ಬದ್ಧತೆಗಳಿಗೆ ಬದ್ದವಾಗಿಲ್ಲ ಎಂದು 2007ರಲ್ಲಿ ದೆಹಲಿ ಹೈಕೋರ್ಟ್‌ ಖಂಡಿಸಿತ್ತು. ಆ ತೀರ್ಪಿನ್ನು ಅವಲಂಬಿಸಿ ಜೈನ್ ಮನವಿ ಸಲ್ಲಿಸಿದ್ದಾರೆ.

“ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸಂಪನ್ಮೂಲಗಳನ್ನು ಗಮನಿಸಿದರೆ, ಸರ್ಕಾರ ಅಥವಾ ಸಾರ್ವಜನಿಕ ಆರೋಗ್ಯ ಕ್ಷೇತ್ರದಿಂದ ಮಾತ್ರ ಕೊರೊನಾ ಸೋಂಕನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಖಾಸಗಿ ಆರೋಗ್ಯ ಕ್ಷೇತ್ರದ ಭಾಗವಹಿಸುವಿಕೆ ಅಗತ್ಯವಾಗಿದೆ” ಎಂದು ಅವರು ಮನವಿಯಲ್ಲಿ ಹೇಳಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights