ಒಲಿಂಪಿಕ್ಸ್‌ನಲ್ಲಿ ಅಬ್ಬರಿಸುತ್ತಿರುವ ಭಾರತೀಯ ವನಿತೆಯರು; ಮತ್ತೊಂದು ಪದಕ ತಂದ ಲವ್ಲಿನಾ!

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಮಹಿಳೆ ಸ್ಪರ್ಧಿಗಳು ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡುತ್ತಿದ್ದಾರೆ. ಈ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೂರು ಪದಕಗಳು ಸಂದಿವೆ. ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟರ್ಕಿಯ ಬುಸೆನಾಜ್ ಸರ್ಮೆನೆಲಿ ವಿರುದ್ಧ ಭಾರತದ ಲವ್ಲಿನಾ ಬೊರ್ಗೊಹೈನ್ 5-0 ಅಂತರದಿಂದ ಸೋಲನಪ್ಪಿದರೂ ಸಹ ಕಂಚಿನ ಪದಕ ಗೆದ್ದು ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ.

ಭಾರತದ ಬಹುತೇಕ ಪೋಷಕರಿಗೆ ಹೆಣ್ಣು ಮಕ್ಕಳೆಂದರೆ ತಾತ್ಸಾರ. ಹೆಚ್ಚುತ್ತಿರುವ ಹೆಣ್ಣು ಭ್ರೂಣ ಹತ್ಯೆಗಳು, ಮಹಿಳಾ ಲಿಂಗಾನುಪಾತ ಕಡಿಮೆ ಇರುವುದು ಈ ವಿದ್ಯಾಮಾನಕ್ಕೆ ಸಾಕ್ಷಿ. ಇಂತಹ ಮನಸ್ಥಿತಿಯ ಪೋಷಕರಿಗೆ ತಿಳಿಹೇಳುವಂತೆ, ಮತ್ತೊಮ್ಮೆ ಯೋಚಿಸಿ ಎಂದು ಆಗ್ರಹಿಸುವಂತೆ ಭಾರತದ ಮಹಿಳಾ ಕ್ರೀಡಾಪಟುಗಳು ಟೋಕಿಯೋ ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುತ್ತಿದ್ದಾರೆ.

ಈ ಬಾರಿಯ ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸಿನೊಂದಿಗೆ ಭಾರತವನ್ನು ಪ್ರತಿನಿಧಿಸಿ ಒಟ್ಟು 127 ಕ್ರೀಡಾಪಟುಗಳು ಟೋಕಿಯೋಗೆ ತೆರಳಿದ್ದರು. ವೆಯ್ಟ್ ಲಿಫ್ಟಿಂಗ್‌ನಲ್ಲಿ ಮಣಿಪುರದ ತಾರೆ ಮೀರಾಬಾಯಿ ಚಾನು ಬೆಳ್ಳಿ ಗೆದ್ದು ಮನೆಮಾತಾದ ಕೆಲವೇ ದಿನಗಳಲ್ಲಿ ಬ್ಯಾಡ್ಮಿಂಟನ್‌ ತಾರೆ ಪಿ.ವಿ ಸಿಂಧು ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾಳೆ. ಅಸ್ಸಾಂನ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಕೂಡ ಕ್ವಾಟರ್‌ಫೈನಲ್‌ನಲ್ಲಿ ಜಯಭೇರಿ ಭಾರಿಸುವ ಮೂಲಕ ಒಲಂಪಿಕ್‌ನಲ್ಲಿ ಪದಕ ತಂದುಕೊಟ್ಟ ಮೂರನೇ ಬಾಕ್ಸರ್ ಎಂಬ ಕೀರ್ತಿಗೆ ಪಾತ್ರವಾದರು.

ಇದನ್ನೂ ಓದಿ: ಒಲಿಂಪಿಕ್ಸ್‌; ಭಾರತಕ್ಕೆ ಮತ್ತೊಂದು ಪದಕ; ಕಂಚು ಗೆದ್ದ ಪಿವಿ ಸಿಂಧು!

ಪುಟ್ಟ ತೈವಾನ್ ದೇಶದ ಬಾಕ್ಸರ್ ನೀನ್-ಚಿನ್ ಚೆನ್ ಮಾಜಿ ವಿಶ್ವ ಚಾಂಪಿಯನ್. ಈ ಬಾರಿ ಒಲಂಪಿಕ್ಸ್ ಪದಕ ಗೆಲ್ಲುವ ನೆಚ್ಚಿನ ಕ್ರೀಡಾಪಟುಗಳಲ್ಲೊಬ್ಬರು. ಆಕೆಯೆದುರು ನಾಲ್ಕು ಬಾರಿ ಸೋಲುಂಡಿದ್ದ ಲವ್ಲಿನಾ ಬೊರ್ಗೊಹೈನ್ ವೆಲ್ಟರ್‌ವೈಟ್ (69 ಕೆಜಿ) ವಿಭಾಗದಲ್ಲಿ ಜುಲೈ 30 ರಂದು ನಡೆದ ಕ್ವಾಟರ್‌ ಫೈನಲ್‌ ಪಂದ್ಯದಲ್ಲಿ 4-1 ಅಂತರದಿಂದ ಭರ್ಜರಿ ಗೆಲವು ಸಾಧಿಸಿ ಸೆಮಿಫೈನಲ್ ತಲುಪಿದ್ದಳು.

ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬಾರಾಮುಖಿಯಾ ಎಂಬ ಹಳ್ಳಿಯಲ್ಲಿ ಬಡಮಧ್ಯಮ ವರ್ಗದ ಕುಟುಂಬದಲ್ಲಿ ಮೂರನೇ ಹೆಣ್ಣು ಮಗಳಾಗಿ 1997ರ ಅಕ್ಟೋಬರ್ 02 ರಂದು ಲವ್ಲಿನಾ ಜನಿಸಿದಳು. ಭಾರತದ ಬಹುತೇಕ ಪೋಷಕರ ಮನಸ್ಥಿತಿಗೆ ವಿರುದ್ಧವಾಗಿ ಲವ್ಲಿನಾ ಪೋಷಕರಾದ ಟಿಕೆನ್ ಮತ್ತು ಮಮೋನಿ ಹೆಣ್ಣು ಮಕ್ಕಳೆಂದು ಮೂಗು ಮುರಿಯದೆ ಪ್ರೀತಿಯಿಂದ ಬೆಳೆಸಿದರು. ತಮ್ಮ ಮೂರು ಹೆಣ್ಣು ಮಕ್ಕಳು ತಮಗಿಷ್ಟವಾದ ಕ್ರೀಡೆಯಲ್ಲಿ ಸಾಧನೆಗೈಯಲು ಆಸರೆಯಾದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌: ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನುಗೆ ರೈಲ್ವೇಯಿಂದ 2 ಕೋಟಿ ರೂ. ಉಡುಗೊಡೆ!

ಲವ್ಲಿನಾಳ ಅವಳಿ ಸಹೋದರಿಯರಾದ ಲಿಮಾ ಮತ್ತು ಲಿಚಾ ಮಾರ್ಷಲ್ ಆರ್ಟ್ಸ್ ಕಲಿತು ಕಿಕ್ ಬಾಕ್ಸಿಂಗ್‌ನಲ್ಲಿ ಪರಿಣಿತರಾದರು. ಅವರೀಗ CISF ಮತ್ತು BSF ನಲ್ಲಿ ಉದ್ಯೋಗಿಗಲಾಗಿದ್ದಾರೆ. ಅದೇ ಹಾದಿಯಲ್ಲಿ ಮುನ್ನಡೆದ ಲವ್ಲಿನಾ 2012 ರಿಂದ ಬಾಕ್ಸಿಂಗ್ ತರಬೇತು ಪಡೆದು ಮೊವಾಯಿ ಥಾಯ್ ಎಂಬ ಮಾರ್ಷಲ್ ಆರ್ಟ್ಸ್ ಪರಿಣಿತಳಾದಳು.

ಭಾರತೀಯ ಕ್ರೀಡಾ ಪ್ರಾಧೀಕಾರದ ತರಬೇತುದಾರರಾದ ಪದಮ್ ಬೊರೊ ಮಾರ್ಗದರ್ಶನದಲ್ಲಿ ಗೌಹಾತಿಯಲ್ಲಿ ಬಾಕ್ಸಿಂಗ್ ತರಬೇತಿ ಪಡೆದ ಲವ್ಲಿನಾ ಪ್ರಮುಖವಾಗಿ ವೆಲ್ಟರ್‌ವೈಟ್ ವಿಭಾಗದಲ್ಲಿ ನಾಲ್ಕು ಕಂಚಿನ ಪದಕ ಗೆದ್ದಿದ್ದಾರೆ. 2018ರ ದೆಹಲಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ ಮತ್ತು 2019 ರ ಉಲಾನ್-ಉಡೆ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದ ಈಕೆ 2017ರ ದುಬೈ ಮತ್ತು 2021ರ 2021 ದುಬೈ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿಯೂ ಕಂಚು ಗೆದ್ದಿದ್ದಾಳೆ. ಸೆರ್ಬಿಯಾದಲ್ಲಿ ನಡೆದ ನೇಷನ್ಸ್ ಕಪ್‌ನಲ್ಲಿ ಬೆಳ್ಳಿ ಪದಕ ಸೇರಿದಂತೆ ಹಲವಾರು ಗೆಲುವಿನ ನಗೆ ಬೀರಿದ್ದಾಳೆ. ಅವಳ ಒಟ್ಟಾರೆ ಸಾಧನೆ ಗುರುತಿಸಿ 2020ರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌: ಓಟದಲ್ಲಿ ಮುಗ್ಗರಿಸಿದ ದ್ಯುತಿ ಚಾಂದ್‌; ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲ!

ಕಳೆದ ವರ್ಷ ಏಷ್ಯನ್ ಕ್ವಾಲಿಫೈಯರ್ಸ್‌ ಜೋರ್ಡಾನ್‌ನಲ್ಲಿ ಅವರು ಟೋಕಿಯೋ ಒಲಂಪಿಕ್ಸ್‌ಗೆ ಅರ್ಹತೆ ಪಡೆದರು. ಆದರೆ ಲಾಕ್‌ಡೌನ್ ಕಾರಣಕ್ಕಾಗಿ ಹಲವು ತಿಂಗಳು ಮನೆಯಲ್ಲಿಯೇ ಕಳೆದರು. ಲವ್ಲಿನಾ ಪುಣೆಯಲ್ಲಿ ತರಬೇತಿ ಪಡೆಯುತ್ತಿದ್ದ ಸಮಯದಲ್ಲಿ ಅವರ ತಾಯಿ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅವರಿಗೆ ಕೋಲ್ಕತ್ತಾದಲ್ಲಿ ಆಪರೇಷನ್ ಮಾಡುವ ಸಂದರ್ಭದಲ್ಲಿ ಲವ್ಲಿನಾ ಅಲ್ಲಿದ್ದಳು. ಪಟಿಯಾಲದಲ್ಲಿ ಅವರು ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರ ತಾಯಿ ಕೋವಿಡ್‌ ಸೋಂಕಿಗೆ ತುತ್ತಾಗಿದ್ದರು. ಆಗಲೂ ಲವ್ಲಿನಾ ತನ್ನ ಸ್ವಗ್ರಾಮಕ್ಕೆ ತೆರಳಿ 11 ದಿನ ತಾಯಿಯೊಂದಿಗಿದ್ದು ಅವರನ್ನು ಉಪಚರಿಸಿ ನಂತರ ತರಬೇತಿಗೆ ಮರಳಿದ್ದಳು.

ಒಬ್ಬ ಮಗಳಾಗಿ ಹೆತ್ತವರ ಕಷ್ಟಕಾಲದಲ್ಲಿ ಜೊತೆಗಿದ್ದು ಬಹಳ ಪ್ರಬುದ್ಧವಾಗಿ ಲವ್ಲಿನಾ ತನ್ನ ಜವಾಬ್ದಾರಿ ನಿಭಾಯಿಸಿದ್ದಾಳೆ. ಒಬ್ಬ ಕ್ರೀಡಾಪಟುವಾಗಿ ಪದಕ ಗಳಿಸಿ ದೇಶಕ್ಕೆ ಹೆಮ್ಮೆ ಎನಿಸಿದ್ದಾಳೆ. ಏನೇ ಆಗಲಿ ಆಕೆ ಭಾರತದ ಮತ್ತೊಬ್ಬ ಮೇರಿ ಕೋಮ್ ಆಗಿ ಮಿಂಚುವುದಂತೂ ಗ್ಯಾರಂಟಿ..

ಈ ಟೋಕಿಯೋ ಒಲಂಪಿಕ್ಸ್ ಭಾರತದ ಬಹುತೇಕರ ಪುರುಷರ ಮನಸ್ಥಿತಿಯನ್ನು ಬದಲಿಸಿಕೊಳ್ಳಲು ಮತ್ತೊಂದು ಸುವರ್ಣ ಅವಕಾಶವಾಗಿದೆ. ಸ್ತ್ರೀ ಸಮಾನತೆ, ಸ್ತ್ರೀ ಬಲವರ್ಧನೆ ಎಂಬುದು ಕೇವಲ ಘೋಷಣೆಯಾಗದೇ ನಿಜವಾಗಿ ಆಚರಣೆ ತರಲು ಮೊದಲು ತಲೆಯಲ್ಲಿನ ಲಿಂಗತಾರತಮ್ಯ ದೃಷ್ಟಿಕೋನವನ್ನು ಬದಲಿಸಿಕೊಳ್ಳಬೇಕಿದೆ. ಲವ್ಲಿನಾ, ಮೀರಾಬಾಯಿ, ಸಿಂಧು ಈ ನಿಟ್ಟಿನಲ್ಲಿ ನಮಗೆ ಬಹುದೊಡ್ಡ ಪಾಠವಾಗಲಿ.. ಒಲಂಪಿಕ್ಸ್‌ನಲ್ಲಿ ಪದಕ ಜಯಿಸಿ ಭಾರತದ ಗೌರವ ಕಾಪಾಡುತ್ತಿರುವ ಈ ಹೆಣ್ಮಕ್ಕಳಿಗೆ ಅಭಿನಂದನೆಗಳು.

– ಮುತ್ತುರಾಜು

ಇದನ್ನೂ ಓದಿ: ಮುರಿದ ಹಾಕಿ ಸ್ಟಿಕ್‌ನಿಂದ ಒಲಿಂಪಿಕ್ಸ್‌ವರೆಗೆ; ಹಸಿವಿನಲ್ಲೂ ಕನಸು ಕಂಡ ಹಾಕಿ ತಂಡದ ನಾಯಕಿ ರಾಣಿ ರಂಪಾಲ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights