ಕಾರ್ಪೋರೇಟ್‌ ಲಾಭಿಗೆ ಮಣಿದು ಬಿಜೆಪಿ ಭೂಸುಧಾರಣಾ ಕಾಯ್ದೆ ತಿದ್ದುಪಡಿ ತಂದಿದೆ! ಸಿದ್ದರಾಮಯ್ಯ

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯ ಹಿಂದೆ ಕಾರ್ಪೋರೇಟ್ ಕಂಪನಿಗಳ ಲಾಭಿ ಇದೆ. ಲಂಚದ ಕಾರಣ ನೀಡಿ ಜನಪರ ವ್ಯವಸ್ಥೆಯ್ನನ್ನೇ ರದ್ದು ಮಾಡಲು ಮುಂದಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಯ ಬಗ್ಗೆ ವಿಧಾನಸಭೆಯ ಚರ್ಚೆಯಲ್ಲಿ ಮಾತನಾಡಿದ ಅವರು, ಭೂಸುಧಾರಣಾ ಕಾಯ್ದೆ 1961ಕ್ಕೆ ಆತುರವಾಗಿ ತಿದ್ದುಪಡಿ ತಂದಿದ್ದಾರೆ. ಈ‌ ತಿದ್ದುಪಡಿ ರೈತರ ಪಾಲಿಗೆ ಮರಣ ಶಾಸನ‌ ಎಂದು ಕಾಂಗ್ರೆಸ್‌ ಮಾತ್ರವೇ ಹೇಳುತ್ತಿಲ್ಲ. ರೈತ ಸಂಘಟನೆಗಳು, ಕಾರ್ಮಿಕ, ದಲಿತ ಸಂಘಟನೆಗಳು ಹೇಳಿವೆ. ಹಾಗಾಗಿಯೇ ಮಸೂದೆಯನ್ನು ವಿರೋಧಿಸಿ ಬೀದಿಗಳಿದಿವೆ ಎಂದು ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಜೊತೆಗಿನ ರೈತ ನಾಯಕರ ಸಭೆಯೂ ವಿಫಲವಾಗಿದೆ. ಮಸೂದೆಯು ರೈತ ವಿರೋಧಿಯಾಗಿದೆ ಮಸೂದೆಯನ್ನು ಹಿಂಪಡೆಯಬೇಕು ಎಂದು ಸಂಘಟನೆಗಳು ಸೂಚಿಸಿವೆ. ಸರ್ಕಾರ ರೈತ ನಾಯಕರ ಮಾತನ್ನು ನಿರಾಕಸಿದೆ. ಹಾಗಾಗಿ ರೈತ ಸಂಘಟನೆಗಳು ಸೋಮವಾರ ಬಂದ್‌ಗೆ ಕರೆ ಕೂಡ ನೀಡಿವೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷಗಳ, ರೈತ ನಾಯಕರ, ತಜ್ಷರ ಜೊತೆಗೆ ಸಮಾಲೋಚನೆ ನಡೆಸದೇ, ಚರ್ಚಿಸದೇ, ಸಲಹೆ ಪಡೆಯದೇ ಕ್ಯಾಬಿನೆಟ್‌ ಸುಗ್ರೀವಾಜ್ಞೆ ಹೊರಡಿಸಿದೆ. ಕಾಂಗ್ರೆಸ್‌ ಇದಕ್ಕೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದೆವು. ಇದು ರೈತರ ವಿಚಾರ, ರೈತರ ಉಳಿವಿನ ವಿಚಾರ, ಇದರಲ್ಲಿ ರಾಜಕೀಯ ಮಾಡಬಾರದು. ಇದು ಕಾಯ್ದೆಯಾಗಲು ಅವಕಾಶ ಬೇಡ, ಮಸೂದೆಯನ್ನು ಹಿಂಪಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ನೀರಿಗಾಗಿ ರೈತರ ಪ್ರತಿಭಟನೆ | Prajavani

ಸರ್ವೇ ವರದಿಗಳು ತಿದ್ದುಪಡಿಯ ವಿರುದ್ಧವಾಗಿದೆ. ಸರ್ವೇಯಲ್ಲಿ ಭಾಗವಹಿಸಿರುವ 60% ರೈತರು ಮಸೂದೆಯನ್ನು ವಿರೋಧಿಸಿದ್ದಾರೆ. ಕರ್ನಾಟಕ ಏಕೀಕರಣದ ಬಳಿಕ 1957ರಲ್ಲಿ ರಚನೆಯಾದ ಸಮಿತಿ ಶಿಫಾರಸು ಆಧಾರದ ಮೇಲೆ 1961 ಭೂಸುಧಾರಣಾ ಕಾಯ್ದೆ ರಚನೆ ಆಗಿದೆ. ಅದು ರೈತರ ಪರವಾಗಿತ್ತು. ಗೇಣಿದಾರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ 1961 ಕಾಯ್ದೆ ಜಾರಿಗೆ ಬಂದಿತ್ತು ಎಂದು ತಿಳಿಸಿದ್ದಾರೆ.

ದೇವರಾಜ್ ಅರಸ್ ಕಾಲದಲ್ಲಿ ಸೆಕ್ಷನ್ 63 ಭೂ ಒಡೆತನದ ಮಿತಿ 10 ಯುನಿಟ್ ( 54 ಎಕರೆ ) ಇರಬೇಕು. ಐದು ಸದಸ್ಯರಿರುವ ಕುಟುಂಬವು 20 ಯುನಿಟ್ಸ್‌ಗಿಂತ ಹೆಚ್ಚು ಭೂ ಒಡೆತನ ಹೊಂದಿಕೊಳ್ಳಲು ಅವಕಾಶ ಇರಲಿಲ್ಲ. ಇದರಿಂದ ರೈತರು ಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಿತ್ತು. ಆದರೆ, ಇವಾಗ ತಿದ್ದುಪಡಿಯ ಮೂಲಕ ಭೂ ಒಡೆತನದ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಉಳುವವನೇ ಭೂಮಿಯ ಒಡೆಯ ಮರೆಯಾಗಿ, ಉಳ್ಳವನೇ (ಶ್ರೀಮಂತನೇ) ಭೂಮಿಯ ಒಡೆಯನಾಗುವಂತೆ ಸರ್ಕಾರ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಭೂಸುಧಾರಣೆಯ ಆತ್ಮವನ್ನು ಕಿತ್ತು ಹಾಕಿದ್ದಾರೆ. ಗೇಣಿದಾರರನ್ನು ಮಾಲಿಕರನ್ನಾಗಿ ಮಾಡಿದ ಕಾನೂನನ್ನು ನಿರ್ಜೀವವಾಗಿದೆ. ಹಾಗಾಗಿ ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯ ಇಲ್ಲ. ಲಂಚ ಕಾರಣ ನೀಡಿ ಜನಪರ ವ್ಯವಸ್ಥೆ ರದ್ದು ಮಾಡಲು ಸಾಧ್ಯನಾ? ಇದು ಜನ ವಿರೋಧಿ ಧೋರಣೆ ಹಾಗೂ ಸರ್ಕಾರದ ಅಸಮರ್ಥತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯ ಹಿಂದೆ ಕಾರ್ಪೊರೇಟ್ ಲಾಬಿ ಹಾಗೂ ಹೌಸಿಂಗ್ ಸೊಸೈಟಿ ಒತ್ತಡ ಇದೆ. ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ. ಅಲ್ಲದೇ ತಿದ್ದುಪಡಿಯಿಂದ ಕೃಷಿ ಹೊರತಾಗಿ ರೈತರ ಜಮೀನನ್ನು ಬೇರೆ ಕಾರಣಗಳಿಗೆ (ಮೋಜು ಮಸ್ತಿಗೆ) ಉಪಯೋಗ ಮಾಡಬಹುದು ಎಂದು ಆರೋಪಿಸಿದ್ದಾರೆ.

ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಆಹಾರ ಉತ್ಪಾದನೆ 138 ಲಕ್ಷ ಟನ್ ಇದೆ. ಕಾಯ್ದೆ ತಿದ್ದುಪಡಿಯಿಂದ ಆಹಾರ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಆಹಾರ ಉತ್ಪಾದನೆ ಸ್ವಾವಲಂಬನೆ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಕಾಯ್ದೆ ತಿದ್ದುಪಡಿಯಲ್ಲಿ ಯಾವ ಸದುದ್ದೇಶ ಇಲ್ಲ, ಕಾರ್ಪೊರೇಟ್ ಒತ್ತಡಕ್ಕೆ ಮಣಿದು ರೈತ ಸಮುದಾಯದ ನಾಶ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ವಿರೋಧಕ್ಕೆ ಹೆದರಿರುವ ಸರ್ಕಾರ, ಕೊರೊನಾ ಸಂದರ್ಭದಲ್ಲಿ ಜನರು ಬೀದಿಗಿಳಿಯದೇ ಇರುವ, ಗುಂಪುಗೂಡದೇ ಇರುವ, ಕೋವಿಡ್‌ ಮಾರ್ಗಸೂಚಿಯ ಪ್ರಕಾರ ಜನರ ಒಟ್ಟುಗೂಡುವಿಕೆಗೆ ನಿಯಂತ್ರಣ ಹೇರಿರುವ ಸಂದರ್ಭವನ್ನು ಬಳಿಸಿಕೊಂಡು ಸುಗ್ರೀವಾಜ್ಞೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ ಅವಿಶ್ವಾಸದ ಬಿಕ್ಕಟ್ಟು: ಶಾಸಕರಿಗೆ ವಿಪ್ ಜಾರಿ ಮಾಡಿದ ಯಡಿಯೂರಪ್ಪ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights