ಬಿಜೆಪಿ ಸರ್ಕಾರಕ್ಕೆ ಅವಿಶ್ವಾಸದ ಬಿಕ್ಕಟ್ಟು: ಶಾಸಕರಿಗೆ ವಿಪ್ ಜಾರಿ ಮಾಡಿದ ಯಡಿಯೂರಪ್ಪ!

ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್‌ ಮುಂದಾಗಿದೆ. ಬಿಜೆಪಿ ಬಹುಮತ ಸಾಬೀತು ಪಡಿಸುವ ವಿಶ್ವಾಸ ಹೊಂದಿದ್ದರೂ, ಒಂದಷ್ಟು ಆತಂಕ, ಇಕ್ಕಟ್ಟು ಇದ್ದೇ ಇದೆ. ತಮ್ಮ ಸರ್ಕಾರ ಸುರಕ್ಷಿತವಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಬೇಕಾದ ಪರೀಕ್ಷೆಗೆ  ಸಿಎಂ ಯಡಿಯೂರಪ್ಪ ಸಿದ್ದರಾಗಿದ್ದಾರೆ.

ಈಗಾಗಲೇ ಸಚಿವ ಸ್ಥಾನದ ವಿಚಾರವಾಗಿ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಿರುವ ಭಿನ್ನಾಭಿಪ್ರಾಯಗಳು ಸದನದಲ್ಲಿ ಸ್ಪೋಟಿಸುವ ಆತಂಕ ಬಿಜೆಪಿಗೆ ಎದುರಾಗಿದ್ದು, ಅದಕ್ಕಾಗಿ ಇಂದಿನ ಅಧಿವೇಶನದಲ್ಲಿ ಬಿಜೆಪಿಯ ಎಲ್ಲಾ ಶಾಸಕರೂ ಭಾಗಿಯಾಗಬೇಕು ಎಂದು ಬಿಜೆಪಿ ವಿಪ್‌ ನೀಡಿದೆ.

ನಿನ್ನೆ(ಶುಕ್ರವಾರ) ಸಂಜೆ ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕಾಂಗ ಸಭೆ ನಡೆದಿದೆ. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಚರ್ಚೆ ನಡೆಸಿದ್ದು, ಕಾಂಗ್ರೆಸ್​ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದರ ಕುರಿತು ಬಿಜೆಪಿ ನಾಯಕರು ಚರ್ಚಿಸಿದ್ದಾರೆ.

ಅವಿಶ್ವಾಸ ಮಂಡನೆಯಾಗುತ್ತಿರುವ ಹಿನ್ನಲೆ ಎಲ್ಲಾ ಬಿಜೆಪಿ ಶಾಸಕರು ಸದನಕ್ಕೆ ಕಡ್ಡಾಯವಾಗಿ ಹಾಜರಿರಬೇಕು.  ಬೆಳಗ್ಗೆಯಿಂದ ಸಂಜೆವರೆಗೂ ಸದನದಲ್ಲಿ ಹಾಜರಿರಬೇಕು. ಯಾರು ಗೈರಾಗಬಾರದು ಎಂದು ಸಿಎಂ ಯಡಿಯೂರಪ್ಪ ವಿಪ್​ ಜಾರಿಮಾಡಿದ್ದಾರೆ.

ರಾಜ್ಯ ಸರ್ಕಾರದ ಮಂತ್ರಿ ಮಂಡಲದ ಮೇಲೆ ನಮಗೆ ನಂಬಿಕೆಯಿಲ್ಲ. ನಮಗೆ ಅವಿಶ್ವಾಸ ಮಂಡನೆಗೆ ಅವಕಾಶ ಕೊಡಬೇಕು ಎಂದು ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವೀಕರ್​ಗೆ ಮನವಿ ಮಾಡಿದ್ದಾರೆ. ಇದಕ್ಕೆ ಅನುಮತಿ ನೀಡಿರುವ ಸಭಾಧ್ಯಕ್ಷರು ಅವಿಶ್ವಾಸ ಮಂಡನೆಗೆ ಅನುಮತಿ ನೀಡಲಿದ್ದಾರೆ.

ಕಾಂಗ್ರೆಸ್​ಗಿಂತ ಬಿಜೆಪಿ ಸದಸ್ಯರು ಹೆಚ್ಚಿದ್ದರೂ ಕೊರೋನಾ ಹಿನ್ನಲೆ ಸರ್ಕಾರದ ಅನೇಕ ಸಚಿವರು, ಶಾಸಕರು ಹಾಜರಾಗುತ್ತಿಲ್ಲ. ಈ ಹಿನ್ನಲೆ ಸರ್ಕಾರ ವಿಪ್​ ಜಾರಿ ಮಾಡಿದೆ.

ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿಯವರು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರನ್ನು ಕಳೆದ 15 ದಿನಗಳಲ್ಲಿ ಮೂರು ಬಾರಿ ಗೌಪ್ಯವಾಗಿ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ, ಕಾಂಗ್ರೆಸ್‌ನ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲಿ ಭಾಗವಹಿಸದಿರಲು ಜೆಡಿಎಸ್ ನಿರ್ಧರಿಸಿದೆ.


ಇದನ್ನೂ ಓದಿ: 6 ತಿಂಗಳಿಗೊಮ್ಮೆ ಕಾಂಗ್ರೆಸ್‌ ಅವಿಶ್ವಾಸ ಮಂಡಿಸಲಿ; ಸರ್ಕಾರಕ್ಕೂ ವಿಶ್ವಾಸ ಹೆಚ್ಚಾಗುತ್ತೆ: ಬಿಎಸ್‌ವೈ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights