ಕೊರೊನಾ ಅಬ್ಬರ: ಬೆಂಗಳೂರಿನಲ್ಲಿ ಏಪ್ರಿಲ್ 20ರ ವರೆಗೆ ನಿಷೇಧಾಜ್ಞೆ ಜಾರಿ!
ರಾಜ್ಯ ಹಾಗೂ ದೇಶದಲ್ಲಿ ಕೊರೊನಾದ ಅಬ್ಬರ ಮತ್ತೆ ಹೆಚ್ಚಾಗಿದೆ. ದೇಶದಲ್ಲಿ ಹಿಂದೆದೂ ದಾಖಲಾಗದಷ್ಟು ಪ್ರಮಾಣದಲ್ಲಿ ಹೊಸ ಕೋವಿಡ್ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿಯೂ ಕೊರೊನಾ ಆಕ್ರಮಣ ಹೆಚ್ಚಾಗಿದ್ದು, ಸೋಂಕು ಹರಡುವಿಕೆಯ ನಿಯಂತ್ರಣಕ್ಕಾಗಿ ನಗರದಾದ್ಯಂತ ಏಪ್ರಿಲ್ 20ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್, ಸೋಂಕು ಹರಡುವಿಕೆಯ ನಿಯಂತ್ರಣಕ್ಕಾಗಿ ಕೋವಿಡ್ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ನಿಷೇಧಾಜ್ಷೆಯನ್ನೂ ಜಾರಿಯಲ್ಲಿರುವ ದಿನಗಳಲ್ಲಿ ನಗರದಲ್ಲಿ ಯಾವುದೇ ಗುಂಪು ಅಥವಾ ಸಂಘಟನೆಗಳು ಪ್ರತಿಭಟನೆ, ಧರಣಿ, ರ‍್ಯಾಲಿ, ಮುಷ್ಕರ ನಡೆಸುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ, ಧಾರ್ಮಿಕ ಸ್ಥಳಗಳಲ್ಲಿ ಗುಂಪು ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಕಾರ್ಯಕ್ರಮಗಳಲ್ಲೂ ಹೆಚ್ಚು ಜನ ಸೇರುವಂತಿಲ್ಲ. ಈಜು ಕೊಳ ಹಾಗೂ ಜಿಮ್‌ಗಳಲ್ಲಿ ಶೇ. 50 ಮಂದಿಯೊಂದಿಗೆ ಕಾರ್ಯನಿರ್ವಹಿಸಬೇಕು. ಪಬ್, ಬಾರ್, ಕ್ಲಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಮಂದಿಗೆ ಆಸನ ವ್ಯವಸ್ಥೆ ಇರಬೇಕು.
ಇನ್ನು, ಮಾಲ್, ಮಾರುಕಟ್ಟೆ, ಕಿರಾಣಿ ಅಂಗಡಿಗಳು ಸೇರಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಸೇರಿ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಅಂತಹ ಸ್ಥಳಗಳನ್ನು ಮುಚ್ಚಲಾಗುವುದು ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೂಚಿತ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 188ರಡಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.
Read Also: ಸಿಡಿ ಪ್ರಕರಣ: ಜಾರಕಿಹೊಳಿ ವಿರುದ್ಧ FIR ದಾಖಲಿಸದ ಕಮಲ್ ಪಂತ್ ವಿರುದ್ಧ ದಾಖಲಾಯ್ತು ಖಾಸಗೀ ದೂರು!