ಕೇರಳದ 90% ಜನರು ವಿದ್ಯಾವಂತರು-ಅವರು ಯೋಚಿಸುತ್ತಾರೆ; ಹಾಗಾಗಿ ಪಕ್ಷ ಬೆಳೆದಿಲ್ಲ: BJP ಏಕೈಕ ಶಾಸಕ
ಕೇರಳ ಚುನಾವಣೆ ಗರಿಗೆದರಿದೆ. ಕೇರಳದಲ್ಲಿ ಬುಧವಾರ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನಾನಾ ಭರವಸೆಗಳನ್ನು ಬೀಡಿದೆ. ಈ ಮಧ್ಯೆ ಪಕ್ಷದ ಬೆಳವಣಿಗೆಯ ಬಗ್ಗೆ ಅಲ್ಲಿನ ಏಕೈಕ ಬಿಜೆಪಿ ಶಾಸಕ ಒ. ರಾಜಗೋಪಾಲ್, ಕೇರಳದಲ್ಲಿ 90% ಸಾಕ್ಷಾರತೆ ಇದೆ. ಇಲ್ಲಿನ ಜನರು ಯೋಚಿಸುವ ಸಾಮರ್ಥವನ್ನು ಹೊಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಬೆಳೆಯುತ್ತಿಲ್ಲ ಎಂದು ಹೇಳಿದ್ದಾರೆ.
“ಕೇರಳವು ಬೇರೆಯೆ ರೀತಿಯ ರಾಜ್ಯವಾಗಿದೆ. ಇಲ್ಲಿ ಎರಡು-ಮೂರು ವಿಭಿನ್ನ ಅಂಶಗಳಿವೆ. ಕೇರಳದ ಸಾಕ್ಷರತೆಯ ಪ್ರಮಾಣ 90% ಆಗಿದ್ದು, ಅವರು ಯೋಚಿಸುತ್ತಾರೆ ಮತ್ತು ಸಂವಹನ ನಡೆಸುತ್ತಾರೆ. ಇವು ವಿದ್ಯಾವಂತರ ಅಭ್ಯಾಸಗಳಾಗಿದ್ದು, ಅದೂ ಒಂದು ಸಮಸ್ಯೆಯಾಗಿದೆ’’ ಎಂದು ಅವರು ಹೇಳಿದ್ದಾರೆ.
“ಎರಡನೇ ವಿಷಯವೆಂದರೆ ರಾಜ್ಯದಲ್ಲಿ 55% ಹಿಂದೂಗಳು ಮತ್ತು 45% ರಷ್ಟು ಅಲ್ಪಸಂಖ್ಯಾತರು ಇದ್ದಾರೆ. ಅದಕ್ಕಾಗಿಯೇ ಕೇರಳವನ್ನು ಬೇರೆ ಯಾವುದೇ ರಾಜ್ಯದೊಂದಿಗೆ ಹೋಲಿಸಲಾಗುವುದಿಲ್ಲ. ಇಲ್ಲಿನ ಪರಿಸ್ಥಿತಿ ವಿಭಿನ್ನವಾಗಿದೆ ಆದರೆ ನಾವು ನಿಧಾನವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿದ್ದೇವೆ” ಎಂದು ಅವರು ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ತಿರುವನಂತಪುರದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಮೋದಿ ಜೊತೆ ಹೊಸ ಕೇರಳ” ಎಂಬ ಶೀರ್ಷಿಕೆಯೊಂದಿಗೆ ಹಲವಾರು ಯೋಜನೆಗಳ ಭರವಸೆಯನ್ನು ಘೋಷಿಸಿದ್ದಾರೆ.
ಕೇರಳದಲ್ಲಿ ಎನ್ಡಿಎ ಅಧಿಕಾರಕ್ಕೆ ಬಂದರೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ ಪ್ರತಿ ವರ್ಷವೂ 06 ಎಲ್ಪಿಚಿ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುವುದು. ಕಲ್ಯಾಣ ಪಿಂಚಿಣಿಯನ್ನು 3,500 ರೂಗೆ ಏರಿಸುತ್ತೇವೆ ಎಂದು ಭರವಸೆ ನೀಡಿದೆ.
ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್. ಕುಟುಂಬದ ಒಬ್ಬರಿಗೆ ಉದ್ಯೋಗ, ಭೂಮಿ ಇರದ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿಗೆ ಭೂಮಿಯನ್ನೂ ನೀಡಲಾಗುವುದು ಎಂದು ಕೇಸರಿ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
ಅಲ್ಲದೆ, ಶಬರಿಮಲೆ ಆಚರಣೆಯನ್ನು ರಕ್ಷಿಸಲಾಗುವುದು. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಬಿಜೆಪಿ ಹೇಳಿದೆ.
Read Also: ಕೇರಳ ಚುನಾವಣೆ: LDF ವಿರುದ್ದ ಕಾಂಗ್ರೆಸ್-BJP ಒಳಮೈತ್ರಿ? CPI(M) ಗಂಭೀರ ಆರೋಪದ ಹಿಂದಿವೆ ಹಲವು ಪ್ರಶ್ನೆಗಳು!

