ಕೇರಳ ಚುನಾವಣೆ: LDF ವಿರುದ್ದ ಕಾಂಗ್ರೆಸ್‌-BJP ಒಳಮೈತ್ರಿ? CPI(M) ಗಂಭೀರ ಆರೋಪದ ಹಿಂದಿವೆ ಹಲವು ಪ್ರಶ್ನೆಗಳು!

ಕೇರಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. 140 ಕ್ಷೇತ್ರಗಳ ಈ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳಲ್ಲಿ ಗೆಲ್ಲಲು ತ್ರಿಕೋನ ಸ್ಪರ್ಧೆಯಲ್ಲಿರುವ LDF, UDF ಮತ್ತು NDA ಮೈತ್ರಿಗಳು ಭಾರೀ ಪ್ರಚಾರವನ್ನು ನಡೆಸುತ್ತಿವೆ.

ಇವುಗಳ ಮಧ್ಯೆ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನೇತೃತ್ವದ ಎಡ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಮೈತ್ರಿಕೂಟವು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ವಿರುದ್ಧ ಗಂಭೀರ ಆರೋಪವನ್ನು ಮಾಡಿದೆ. ಯುಡಿಎಫ್‌ ಮೈತ್ರಿಕೂಟವು ರಾಜ್ಯದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆಸಿದೆ ಎಂದು ಎಲ್‌ಡಿಎಫ್‌ ಆರೋಪಿಸಿದೆ. ಮೂವರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರವನ್ನು ತಿರಸ್ಕರಿಸುವುದು. ಅದೂ ಬಿಜೆಪಿ ಯೋಗ್ಯವಾದ ಮತಗಳನ್ನು ಹೊಂದಿರುವ ಕ್ಷೇತ್ರಗಳಲ್ಲಿ. ಇದು ಎಲ್‌ಡಿಎಫ್‌ ಮಾಡಿರುವ ಆರೋಪಕ್ಕೆ ಸಾಕ್ಷಿಯಂತಿದೆ.

ಗುರುವಾಯೂರ್, ತಲಶೇರಿ ಮತ್ತು ದೇವಿಕುಲಂನಲ್ಲಿ ಮೂವರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ. ಗುರುವಾಯೂರ್ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ನಿವೇದಿದಾ ಸುಬ್ರಮಣ್ಯಂ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರ ಸಹಿಯನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಅವರ ನಾಮಪತ್ರ ತಿರಸ್ಕರಿಸಲಾಗಿದೆ.

ತಲಶೇರಿ ಕ್ಷೇತ್ರದಲ್ಲಿ, ಬಿಜೆಪಿಯ ಕಣ್ಣೂರು ಅಧ್ಯಕ್ಷ ಎನ್ ಹರಿದಾಸ್ ಅಭ್ಯರ್ಥಿಯಾಗಿದ್ದರು ಮತ್ತು ಅವರ ನಾಮಪತ್ರವನ್ನು ಇದೇ ಕಾರಣಕ್ಕೆ ತಿರಸ್ಕರಿಸಲಾಯಿತು. ಇಡುಕ್ಕಿಯ ದೇವಿಕುಲಂನಲ್ಲಿ, ಎಐಎಡಿಎಂಕೆ ಅಭ್ಯರ್ಥಿ ಧನಲಕ್ಷ್ಮಿ ಎನ್‌ಡಿಎಯನ್ನು ಪ್ರತಿನಿಧಿಸುತ್ತಿದ್ದರು ಮತ್ತು ಅವರು ಸಲ್ಲಿಸಿದ್ದ ನಾಮಪತ್ರವು  ಅಪೂರ್ಣವಾಗಿದೆ ಎಂಬ ಕಾರಣದಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ.

ಇದನ್ನೂ ಓದಿ: ಉತ್ತಮ ಆಡಳಿತದಲ್ಲಿ ನಂ.1 ರಾಜ್ಯ ಕೇರಳ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ!

ಎನ್‌ಡಿಎ ಮತ್ತು ಬಿಜೆಪಿಯ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ತಿರಸ್ಕರಿಸಿದ ಒಂದು ದಿನದ ನಂತರ ಮಾರ್ಚ್ 21 ರಂದು ಕೇರಳ ಹೈಕೋರ್ಟ್‌ ಮೊರೆಹೊಗಿದ್ದಾರೆ. ಆದರೂ, ಸಂವಿಧಾನದ 329 ಬಿ ವಿಧಿ ಪ್ರಕಾರ ಚುನಾವಣಾ ಅಧಿಸೂಚನೆಯ ನಂತರ ಚುನಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಂಗ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

ನಾಮಪತ್ರ ತಿರಸ್ಕಾರದ ನಂತರ, ದೇವಿಕುಲಂ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದಿರುವ ಸ್ವತಂತ್ರ ಅಭ್ಯರ್ಥಿಯನ್ನು ತನ್ನ ಎನ್‌ಡಿಎ ಅಭ್ಯರ್ಥಿಯಾಗಿ ಬೆಂಬಲಿಸಲು ಬಿಜೆಪಿ ನಿರ್ಧರಿಸಿದೆ. ತಲಶೇರಿ ಮತ್ತು ಗುರುವಾಯೂರ್ ಕ್ಷೇತ್ರಗಳಲ್ಲಿ ಎನ್‌ಡಿಎ ಯಾರನ್ನೂ ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಈ ಎರಡೂ ಕ್ಷೇತ್ರಗಳಲ್ಲಿ ಎನ್‌ಡಿಎ ತನ್ನ ಅಭ್ಯರ್ಥಿಗಳಿಲ್ಲದೆ ಸ್ಪರ್ಧೆಯಲ್ಲಿದೆ.

ಈ ಕ್ಷೇತ್ರಗಳಲ್ಲಿ, ಚುನಾಯಿತ ಪ್ರತಿನಿಧಿಗಳ ಮೇಲೆ ಬಿಜೆಪಿ ಗಮನಾರ್ಹ ಮತಗಳನ್ನು ಹೊಂದಿದೆ. ಇದು ಹಿಂದಿನ ಚುನಾವಣೆಯ ಫಲಿತಾಂಶದಿಂದ ತಿಳಿಯುತ್ತದೆ. ಅದರೂ, ಈ ಮೂರು ಕ್ಷೇತ್ರಗಳಲ್ಲಿಯೂ ಪ್ರಸ್ತುತ ಸಿಪಿಐ(ಎಂ) ಶಾಸಕರನ್ನು ಹೊಂದಿದೆ. ಈ ಪೈಕಿ ಬಿಜೆಪಿ ಕೆಲವು ವರ್ಷಗಳಿಂದ ತಲಶೇರಿ ಕ್ಷೇತ್ರದ ಮೇಲೆ ಗಮನ ಹರಿಸುತ್ತಿದೆ ಎಂದು ವರದಿಯಾಗಿದೆ.

ದೇವಿಕುಲಂನಲ್ಲಿ ಸಿಪಿಐ(ಎಂ) ನ ಎಸ್ ರಾಜೇಂದ್ರನ್ ಅವರು 2016 ರಲ್ಲಿ ಕಾಂಗ್ರೆಸ್ ನ ಎಕೆ ಮೋನಿ ವಿರುದ್ಧ 6,232 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಎನ್‌ಡಿಎ ಪರ ಸ್ಪರ್ಧಿಸಿದ್ದ ಎಐಎಡಿಎಂಕೆ ಆರ್‌ಎಂ ಧನಲಕ್ಷ್ಮಿ 11,613 ಮತಗಳನ್ನು ಗಳಿಸಿದ್ದರು. 2016 ರಲ್ಲಿ ಬಿಜೆಪಿಯ ಮತ ಪಾಲು ಗೆಲುವಿನ ಅಂತರಕ್ಕಿಂತ ಹೆಚ್ಚಿನದಾಗಿದೆ. ಈ ಮತಗಳು ಯುಡಿಎಫ್‌ಗೆ ಬದಲಾದರೆ, ಅದು ಈ ಬಾರಿ ಚುನಾವಣಾ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತದೆ. ಈ ಬಾರಿ ಸಿಪಿಐ(ಎಂ) ನ ರಾಜಾ ಅವರು ಎಲ್‌ಡಿಎಫ್ ಪರವಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಡಿ ಕುಮಾರ್ ಅವರು ಯುಡಿಎಫ್ ಪರವಾಗಿ ಸ್ಪರ್ಧಿಸುತ್ತಿದ್ದಾರೆ. ಎನ್‌ಡಿಎ ಇಲ್ಲಿ ಸ್ವತಂತ್ರ ಅಭ್ಯರ್ಥಿ ಜಿ ಗಣೇಶನ್ ಅವರನ್ನು ಬೆಂಬಲಿಸಿದ್ದರೂ, ಕ್ಷೇತ್ರದಲ್ಲಿ ಬಿಜೆಪಿಯೊಂದಿಗೆ ಕಾಂಗ್ರೆಸ್ ಮಾತುಕತೆಯಲ್ಲಿದೆ ಎಂದು ಎಲ್‌ಡಿಎಫ್ ಆರೋಪಿಸುತ್ತಿದೆ.

ಇದನ್ನೂ ಓದಿ: ಕೇರಳ ಅಸೆಂಬ್ಲಿ ಚುನಾವಣೆ; ಎಡರಂಗ ಮತ್ತು ಯುಡಿಎಫ್ ಮಧ್ಯೆ ಫೈಟ್‌; BJP ಕತೆಯೇನು ಗೊತ್ತೇ?

ತಲಶೇರಿಯಲ್ಲಿ, ಸಿಪಿಐ(ಎಂ) ನ ಎಎನ್ ಶಮ್ಸೀರ್ ಅವರು 2016 ರಲ್ಲಿ 34,117 ಮತಗಳ ಅಂತರದಿಂದ ಜಯ ಸಾಧಿಸಿದ್ದರು. ಕಾಂಗ್ರೆಸ್ 36,324 ಮತಗಳನ್ನು ಮತ್ತು ಬಿಜೆಪಿ 22,125 ಮತಗಳನ್ನು ಪಡೆದಿದೆ. ಎಲ್‌ಡಿಎಫ್‌ನ ಗೆಲುವಿನ ಅಂತರವು 2016 ರಲ್ಲಿ ಬಿಜೆಪಿಯ ಮತ ಪಾಲುಗಿಂತ ಹೆಚ್ಚಿನದಾಗಿದ್ದರೂ, ಇಲ್ಲಿಯೂ ಎಲ್‌ಡಿಎಫ್ ಅನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತುಕತೆ ನಡೆದಿದೆ ಎಂಬ ಆರೋಪಗಳಿವೆ. ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಎ.ಎನ್.ಶಮ್ಸೀರ್ ಈ ಬಾರಿ ಎಲ್‌ಡಿಎಫ್ ಅನ್ನು ಪ್ರತಿನಿಧಿಸುತ್ತಿದ್ದಾರೆ.

ಎಡಪಂಥೀಯರನ್ನು ಸೋಲಿಸಲು ಬಿಜೆಪಿ-ಕಾಂಗ್ರೆಸ್ ಮಾತುಕತೆಯಲ್ಲಿವೆ ಎಂದು ಟೀಕಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, 2016 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೆಮೊಮ್ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವು ಈ ಒಪ್ಪಂದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ನೆರೆಯ ಕ್ಷೇತ್ರದ ಯುಡಿಎಫ್ ಅಭ್ಯರ್ಥಿಗಳಿಗೆ ಇದೇ ರೀತಿಯ ಸಹಾಯಕ್ಕಾಗಿ ಪ್ರತಿಯಾಗಿ ನೆಮೊಮ್‌ ಕ್ಷೇತ್ರದಲ್ಲಿ ಗೆಲ್ಲಲು ಬಿಜೆಪಿಗೆ ಕಾಂಗ್ರೆಸ್ ಸಹಾಯ ಮಾಡುತ್ತದೆ ಎಂದು ಒಪ್ಪಂದವಾಗಿತ್ತು. ಈ ಮತ ವ್ಯಾಪಾರದಿಂದ ಬಲಿಯಾದ ಯುಡಿಎಫ್‌ನ ವಿ.ಸುರೇಂದ್ರನ್ ಪಿಳ್ಳೈ ಅವರು ಈ ಬಗ್ಗೆ ಬಹಿರಂಗಪಡಿಸಿದ್ದಾರೆ. ಅದು ಕಾಂಗ್ರೆಸ್‌-ಬಿಜೆಪಿ ನಡುವಿನ ಈ ಒಪ್ಪಂದವನ್ನು ಸಾಬೀತುಪಡಿಸಿದೆ”ಎಂದು ಪಿಣರಾಯಿ ವಿಜಯನ್‌ ಹೇಳಿದ್ದಾರೆ.

2016 ರಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿದ್ದ ಓ ರಾಜಗೋಪಾಲ್ ತಿರುವನಂತಪುರದ ನೆಮೊಮ್ ಕ್ಷೇತ್ರದಲ್ಲಿ ಗೆದ್ದಿದ್ದರು. ಇದು ಕೇರಳ ವಿಧಾನಸಭೆಗೆ ಬಿಜೆಪಿಯ ಮೊದಲ ಪ್ರವೇಶವಾಗಿತ್ತು.

2006 ರಿಂದ 2016 ರವರೆಗೆ ನೆಮೊಮ್ ಅಸೆಂಬ್ಲಿ ಫಲಿತಾಂಶಗಳು (ಮತಪಾಲು) ಹೀಗಿವೆ: 

2006 ರಲ್ಲಿ ಕಾಂಗ್ರೆಸ್ 60,884 ಮತಗಳನ್ನು ಹೊಂದಿದ್ದ ನೆಮೊಮ್‌ನಲ್ಲಿ, 2016 ರಲ್ಲಿ ಅವರ ಮತಗಳ ಪಾಲು ಕೇವಲ 13,860 ಕ್ಕೆ ಕುಸಿದಿತ್ತು. 2016 ರಲ್ಲಿ ಜನತಾದಳ (ಯುನೈಟೆಡ್)ನ ವಿ ಸುರೇಂದ್ರನ್ ಪಿಳ್ಳೈ ಯುಡಿಎಫ್ ಮೈತ್ರಿಕೂಟದ ಪರವಾಗಿ ಸ್ಪರ್ಧಿಸಿದ್ದರು.

2016ರ ಚುನಾವಣೆಯಲ್ಲಿ ನೆಮೊಮ್‌ ಕ್ಷೇತ್ರಕ್ಕೆ ಯುಡಿಎಫ್ ಅಭ್ಯರ್ಥಿಯಾಗಿದ್ದ ಸುರೇಂದ್ರನ್ ಪಿಳ್ಳೈ, ಆ ಚುನಾವಣೆಯಲ್ಲಿ ನೆಮೊಮ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಪ್ಪಂದವನ್ನು ಸ್ವತಃ ಒಪ್ಪಿಕೊಂಡಿದ್ದರು. ಕಾಂಗ್ರೆಸ್ ಬಿಜೆಪಿಗೆ ಮತಗಳನ್ನು ವ್ಯಾಪಾರ ಮಾಡಿದೆ ಎಂದು ಅವರು ಆರೋಪಿಸಿದರು. ಈ ಮತ ವ್ಯಾಪಾರದ ಬಗ್ಗೆ ಹೈಕಮಾಂಡ್‌ಗೆ ನಾಯಕತ್ವಕ್ಕೆ ತಿಳಿದಿದೆ ಎಂದು ಅವರು ಹೇಳಿದ್ದರು. ಮತದಾನದ ಎರಡು ದಿನಗಳ ಮೊದಲು ಮತ ವ್ಯಾಪಾರದ ಬಗ್ಗೆ ತಮಗೆ ಮಾಹಿತಿ ಸಿಕ್ಕಿದೆ ಎಂದು ಅವರು ಹೇಳಿದ್ದರು.

“ಕಾಂಗ್ರೆಸ್ ತನ್ನ ಮಿತ್ರಪಕ್ಷಗಳಿಗೆ ಸ್ಥಾನಗಳನ್ನು ನೀಡುವ ಮತ್ತು ನಂತರ ವಿರುದ್ಧ ಪಕ್ಷಕ್ಕೆ ಮತಗಳನ್ನು ಚಲಾಯಿಸುವ ಸಂಪ್ರದಾಯವನ್ನು ಹೊಂದಿದೆ. 2011 ರಲ್ಲಿ ಚರೂಪರ ರವಿ ಸ್ಪರ್ಧಿಸಿದಾಗ ನೆಮೊಮ್‌ನಲ್ಲಿ ಈ ರೀತಿಯೇ ನಡೆದಿತ್ತು. ಈ ವಿಚಾರದಲ್ಲಿ ವ್ಯವಹರಿಸಿರುವ ಏಕೈಕ ನಾಯಕ ಮಾಜಿ ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್. ನಾನು ಸೋತ ನಂತರ, ನಾವು ವಿಚಾರಣೆ ನಡೆಸಬೇಕು ಎಂದು ಬೇಡಿಕೆ ಇಟ್ಟಿದ್ದೆವು. ವಿಚಾರಣಾ ವರದಿಯು ಐವರು ಕಾಂಗ್ರೆಸ್ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿತು. ಆದರೆ ಇಂದಿಗೂ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಈಗ ನೆಮೊಮ್‌ನಿಂದ ಗೆದ್ದ ಬಿಜೆಪಿ ಅಭ್ಯರ್ಥಿ ಒ.ರಾಜಗೋಪಾಲ್ ಕೂಡ ಈ ಒಪ್ಪಂದವನ್ನು ದೃಢಪಡಿಸಿದ್ದಾರೆ” ಎಂದು ಪಿಳ್ಳೈ ಹೇಳಿದ್ದಾರೆ.

ಕುತೂಹಲಕಾರಿ ಸಂಗತಿಯೆಂದರೆ, ಕಳೆದ ವಾರ ವಿಧಾನಸಭೆಯಲ್ಲಿ ಬಿಜೆಪಿಯ ಏಕೈಕ ಸದಸ್ಯ ಓ ರಾಜಗೋಪಾಲ್, ಕಾಂಗ್ರೆಸ್ ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಈ ಹಿಂದೆ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಹೇಳಿದರು. ಕಾಂಗ್ರೆಸ್- ಐಯುಎಂಎಲ್-ಬಿಜೆಪಿ ಒಪ್ಪಂದವನ್ನು ಕೋಲಿಬೆ ಮೈತ್ರಿ ಎಂದು ಕರೆಯಲಾಗುತ್ತದೆ. ಎಡಪಂಥೀಯರ ವಿರುದ್ಧ ಕೋಲಿಬೆ ಮೈತ್ರಿ 1991 ರಲ್ಲಿ ಪ್ರಾರಂಭವಾಯಿತು ಎಂದು ವರದಿಯಾಗಿದೆ.

ಇದನ್ನೂ ಓದಿ:  ಚುನಾವಣೆಗೂ ಮುನ್ನವೇ BJP ಮಿತ್ರಪಕ್ಷ ವಿಭಜನೆ: ಕೇರಳದಲ್ಲಿ ಸೋಲುಲು ಸಿದ್ದವಾಗಿದೆ ಕೇಸರಿ ಪಡೆ!

1991 ರ ಚುನಾವಣೆಯಲ್ಲಿ, ಬೇಪೂರ್ ವಿಧಾನಸಭಾ ಕ್ಷೇತ್ರ ಮತ್ತು ವಡಕಾರ ಲೋಕಸಭಾ ಕ್ಷೇತ್ರಗಳಲ್ಲಿ ಎಡಪಂಥೀಯರ ವಿರುದ್ಧ ಇಂತಹ ರಾಜಕೀಯ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಅಂದಿನ ಬೇಪೂರ್‌ ಚುನಾವಣೆಯಲ್ಲಿ ಸಿಪಿಐ(ಎಂ) ನ ಟಿ. ಕೆ ಹಮ್ಜಾ ವಿರುದ್ಧ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ದಿವಂಗತ ಕೆ. ಮಾಧವಂಕುಟ್ಟಿ ಅವರು ಮೈತ್ರಿಕೂಟದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ, ಈ ಮೈತ್ರಿ ವಿರುದ್ಧ ಚುನಾವಣೆಯಲ್ಲಿ ಸಿಪಿಐ(ಎಂ) ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಡಕಾರದಲ್ಲಿ, ಮಾಜಿ ಅಡ್ವೊಕೇಟ್ ಜನರಲ್ ದಿವಂಗತ ಎಂ. ರತ್ನ ಸಿಂಗ್ ಅವರು “ಮೈತ್ರಿಕೂಟದ” ಸ್ವತಂತ್ರ ಅಭ್ಯರ್ಥಿಯಾಗಿದ್ದರು. ಆದರೆ ಅವರು ಕೆ.ಪಿ.ಉನ್ನಿಕೃಷ್ಣನ್ ವಿರುದ್ಧ ಸೋತರು. 2014 ರಲ್ಲಿ ರತ್ನ ಸಿಂಗ್ ಅವರು 1991 ರಲ್ಲಿ ಎಡಪಂಥೀಯರ ವಿರುದ್ಧ ಇಂತಹ ಮೈತ್ರಿಯನ್ನು ಮಾಡಿಕೊಳ್ಳಲಾಗಿತ್ತು ಎಂದು ಒಪ್ಪಿಕೊಂಡಿದ್ದರು.

“ನಾವು ಸ್ಪರ್ಧಿಸಲು ಸಾಧ್ಯವಾಗದಿದ್ದಾಗ ಮತ್ತೊಂದು ಪಕ್ಷದಿಂದ ನಮಗೆ ಬೆಂಬಲ ಸಿಗುತ್ತಿದ್ದರೆ, ಅಂತಹ ಹೊಂದಾಣಿಕೆಗಳನ್ನು ನಾವು ಮಾಡುತ್ತೇವೆ. ಅದು ವ್ಯವಹಾರವಲ್ಲವೇ? ರಾಜಕೀಯವು ಹೇಗೆ ಕಾರ್ಯನಿರ್ವಹಿಸುತ್ತದೆ? ಆದಾಗ್ಯೂ, ಈ ಹೊಂದಾಣಿಕೆ ತಮಗೆ ಅನುಕೂಲಕರವಾಗಲಿದೆ ಎಂದು ಇತರ ಪಕ್ಷವೂ ಭಾವಿಸಬೇಕು” ಎಂದು ರಾಜಗೋಪಾಲ್ ಅವರು ಮಲಯಾಳಂ ನ್ಯೂಸ್ ಚಾನೆಲ್‌ ಏಷ್ಯನೆಟ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ರಾಜಗೋಪಾಲ್ ಅವರ ಪ್ರಕಾರ, ರಾಜ್ಯ ನಾಯಕತ್ವದ ಒಪ್ಪಿಗೆ ಮತ್ತು ಅವರ ಅರಿವಿನೊಂದಿಗೆ ಸ್ಥಳೀಯ ಮಟ್ಟದಲ್ಲಿ ಇಂತಹ ಹೊಂದಾಣಿಕೆಗಳು ನಡೆಯುತ್ತವೆ. “ಇಂತಹ ಸ್ಥಳೀಯ ಮಟ್ಟದ ಹೊಂದಾಣಿಕೆಗಳನ್ನು ಈ ಹಿಂದೆಯೂ ಮಾಡಲಾಗಿದೆ. ಅಂತಹ ಚುನಾವಣೆಗಳಲ್ಲಿ ಬಿಜೆಪಿಯು ತನ್ನ ಮತ ಪಾಲನ್ನು ಹೆಚ್ಚಿಸಿರ್ಕಳ್ಳಲು ಸಮರ್ಥವಾಗಿದೆ”ಎಂದು ಅವರು ಹೇಳಿದರು.

ಆದರೆ, ವರದಿಗಳ ಪ್ರಕಾರ, ವಟ್ಟಿಯೂರ್ಕಾವ್ ಸೇರಿದಂತೆ ಆಯ್ದ ಕ್ಷೇತ್ರಗಳಲ್ಲಿ ನೆಮೊಮ್ ಮಾದರಿ ಪ್ರಯೋಗವನ್ನು ನಡೆಸಬೇಕಾಗಿದೆ. ಅಲ್ಲಿ ಅಂತಹ ಪ್ರಯತ್ನಗಳು ನಡೆಯುತ್ತಿವೆ ಎಂದು ಎಲ್‌ಡಿಎಫ್‌ ಶಾಸಕ ವಿಕೆ ಪ್ರಸಾಂತ್ ಹೇಳಿದ್ದಾರೆ.

ಕೃಪೆ: ನ್ಯೂಸ್‌ ಕ್ಲಿಕ್‌

ಕನ್ನಡಕ್ಕೆ: ಸೋಮಶೇಖರ್‌ ಚಲ್ಯ


ಇದನ್ನೂ ಓದಿ: BJPಗೆ ಹಿನ್ನೆಡೆ: ಕೇರಳದ ಹಲವು BJP ಅಭ್ಯರ್ಥಿಗಳ ನಾಮಪತ್ರ ತಿರಸ್ಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights