ಉತ್ತಮ ಆಡಳಿತದಲ್ಲಿ ನಂ.1 ರಾಜ್ಯ ಕೇರಳ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ!

ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಅಗ್ರಸ್ಥಾನ ಪಡೆದುಕೊಂಡಿದ್ದು, ಉತ್ತರ ಪ್ರದೇಶ ಕೊನೆಯ ಸ್ಥಾನ ಪಡೆದುಕೊಂಡು ಕಳಪೆ ಆಡಳಿತದ ಅಣೆಪಟ್ಟಿ ಕಟ್ಟಿಕೊಂಡಿದೆ.

ಸಾರ್ವಜನಿಕ ವ್ಯವಹಾರಗಳ ಕೇಂದ್ರ(ಪಿಎಸಿ)ವು ಬಿಡುಗಡೆಗೊಳಿಸಿರುವ ದೇಶದ ಉತ್ತಮ ಆಡಳತ ನೀಡುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ದೊಡ್ಡರಾಜ್ಯಗಳ ಪೈಕಿ ಉತ್ತಮ ಆಡಳಿತ ನೀಡುತ್ತಿರುವ ರಾಜ್ಯವೆಂದು ಕೇರಳ ಮೊದಲ ಸ್ಥಾನ ಪಡೆದುಕೊಂಡರೆ, ಸಣ್ಣ ರಾಜ್ಯಗಳ ಪೈಕಿ ಗೋವಾ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಸಾರ್ವಜನಿಕ ವ್ಯವಹಾರಗಳ ಕೇಂದ್ರ(ಪಿಎಸಿ)ವು ದೊಡ್ಡ ರಾಜ್ಯಗಳು, ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಂದು ಮೂರು ವಿಭಾಗಗಳನ್ನು ಗುರುತಿಸಿ ಪಟ್ಟಿ ಬಿಡುಗಡೆ ಮಾಡಿದೆ. ಆ ಪೈಕಿ ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ನಾಲ್ಕು ರಾಜ್ಯಗಳು ಅಗ್ರಸ್ಥಾನವನ್ನು ಪಡೆದುಕೊಂಡಿವೆ. ಉತ್ತರ ಪ್ರದೇಶ, ಬಿಹಾರ ಮತ್ತು ಒಡಿಶಾ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡು ಅಭಿವೃದ್ಧಿಯಲ್ಲಿ ಹಿಂದುಳಿದ ರಾಜ್ಯಗಳ ಪಟ್ಟಿಗೆ ಸೇರಿದೆ.

ಸಾರ್ವಜನಿಕ ವ್ಯವಹಾರಗಳ ಕೇಂದ್ರವು ತನ್ನ ವಾರ್ಷಿಕ ವರದಿಯಲ್ಲಿ ಉತ್ತಮ ಆಡಳಿತ ನೀಡುವ ರಾಜ್ಯಗಳ ಪಟ್ಟಿಯನ್ನು ಆಯ್ಕೆ ಮಾಡಿರುವುದರ ಕುರಿತು ತಿಳಿಸಿದ್ದು, ರಾಜ್ಯಗಳ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರಗಳು ನೀಡುವ ಆಡಳಿತದ ಕಾರ್ಯಕ್ಷಮತೆಯನ್ನು ಆಧರಿಸಿ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ ಕಸ್ತೂರಿ ರಂಗನ್ ತಿಳಿಸಿದ್ದಾರೆ.

ಪಿಎಸಿ ಶ್ರೇಯಾಂಕದ ಪ್ರಕಾರ ಉತ್ತಮ ಆಡಳಿತ ನೀಡುವ ಮೊದಲ ನಾಲ್ಕು ರಾಜ್ಯಗಳಾದ ಕೇರಳ(1.308), ತಮಿಳುನಾಡು(0.912), ಆಂಧ್ರಪ್ರದೇಶ(0.531) ಮತ್ತು ಕರ್ನಾಟಕ(0.468) ಅಂಕವನ್ನು ಪಡೆದು ಟಾಪ್‌ ಫೋರ್ ಸ್ಥಾನದಲ್ಲಿವೆ. ವಿಶೇಷ ಅಂದರೆ ಮೊದಲ ನಾಲ್ಕು ಸ್ಥಾನ ಪಡೆದ ಎಲ್ಲಾ ರಾಜ್ಯಗಳು ದಕ್ಷಿಣ ಭಾರತದ ರಾಜ್ಯಗಳಾಗಿವೆ.

ಅತೀ ಕಡಿಮೆ ಅಂಕ ಗಳಿಸಿ ಉತ್ತಮ ಆಡಳಿತ ನೀಡುವ ರಾಜ್ಯಗಳ ಪೈಕಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಉತ್ತರ ಪ್ರದೇಶ, ಒಡಿಶಾ ಮತ್ತು ಬಿಹಾರ ರಾಜ್ಯಗಳು ಕ್ರಮವಾಗಿ 1.461, -1.201 ಮತ್ತು -1.158 ಅಂಕಗಳಿಗೆ ತೃಪ್ತಿಪಟ್ಟುಕೊಂಡಿವೆ.

ಸಣ್ಣ ರಾಜ್ಯಗಳ ಪೈಕಿ ಗೋವಾ (1.745), ಮೇಘಾಲಯ (0.797) ಹಾಗೂ ಹಿಮಾಚಲಪ್ರದೇಶ (0.725) ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ಮಣಿಪುರ (-0.363), ದೆಹಲಿ (-0.289) ಹಾಗೂ ಉತ್ತರಾಖಂಡ (-0.277) ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.


ಇದನ್ನೂ ಓದಿ: ದೇಶಕ್ಕೆ ಮೊದಲು: ತರಕಾರಿಗೆ ಬೆಂಬಲ ಬೆಲೆ ಘೋಷಿಸಿದ ಕೇರಳ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights