ಜಿಎಸ್‌ಟಿ ಸಂಗ್ರಹ: ಲಾಕ್‌ಡೌನ್‌ ನಂತರ ಮೊದಲ ಬಾರಿಗೆ 1.05 ಕೋಟಿ ರೂ ಸಂಗ್ರಹ

ಲಾಕ್‌ಡೌನ್‌ ನಂತರದಲ್ಲಿ ದೇಶದಲ್ಲಿನ ಜಿಎಸ್‌ಟಿ ಸಂಗ್ರಹ ಮೊದಲ ಬಾರಿಗೆ ಗರಿಷ್ಟ ಮಟ್ಟ ತಲುಪಿದೆ. ಅಕ್ಟೋಬರ್‌ ತಿಂಗಳಿನಲ್ಲಿ 1.05 ಲಕ್ಷ ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿದ್ದು, ಈ ವರ್ಷದ ಫೆಬ್ರವರಿಯ ನಂತರ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ 1 ಲಕ್ಷ ಕೋಟಿ ರೂ.ಗಳನ್ನು ದಾಟಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

2020 ರ ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,05,155 ಕೋಟಿ ರೂ. ಆಗಿದ್ದು, ಇದರಲ್ಲಿ ಸಿಜಿಎಸ್‌ಟಿ 19,193 ಕೋಟಿ ರೂ., ಎಸ್‌ಜಿಎಸ್‌ಟಿ 5,411 ಕೋಟಿ ರೂ., ಐಜಿಎಸ್‌ಟಿ 52,540 ಕೋಟಿ ರೂ. (ಸರಕುಗಳ ಆಮದಿನಲ್ಲಿ ಸಂಗ್ರಹಿಸಿದ 23,375 ಕೋಟಿ ರೂ.) ಮತ್ತು ಸೆಸ್ 8,011 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 932 ಕೋಟಿ ರೂ. ಸೇರಿದಂತೆ) ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ 95,379 ಕೋಟಿ ರೂ.ಗಳಿಗಿಂತ ಈ ತಿಂಗಳ ಆದಾಯವು ಶೇಕಡಾ 10 ರಷ್ಟು ಹೆಚ್ಚಾಗಿದೆ. ಕೊರೊನಾ ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಕುಸಿದಿತ್ತು.

ಆರ್ಥಿಕ ಕುಸಿತದ ಕಾರಣದಿಂದ ಈ ವರ್ಷ ರಾಜ್ಯಗಳಿಗೆ ಜಿಎಸ್‌ಟಿ ಪಾಲು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಜೊತೆಗೆ ಇದು “ದೇವರ ಕ್ರಿಯೆ” ಎಂದು ಹೇಳಿ ವ್ಯಾಪಕ ಟೀಕೆ ಮತ್ತು ವ್ಯಂಗ್ಯಕ್ಕೆ ಗುಡಿiಯಾಗಿದ್ದರು. ಬಿಜೆಪಿಯೇತರ ರಾಜ್ಯ ಸರ್ಕಾರಗಳು ತಮ್ಮ ಜಿಎಸ್‌ಟಿ ಪಾಲು ನೀಡುವಂತೆ ಪ್ರತಿಭಟಿಸುತ್ತಿದ್ದವು. ಕೇರಳ ಒಂದು ಹೆಜ್ಜೆ ಮುಂದೆ ಹೋಗಿ ಸುಪ್ರೀಂ ಮೆಟ್ಟಿಲೇರುವುದಾಗಿ ಎಚ್ಚರಿಸಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ -23 ರಷ್ಟು ಕುಸಿದಿತ್ತು. ಇದು ಪುನಃ ಚೇತರಿಸಿಕೊಳ್ಳಲು ಕೆಲವು ವರ್ಷಗಳೆ ಬೇಕಾಗಬಹುದು ಎಂದು ಆರ್‌ಬಿಐ ಉಪ ಗವರ್ನರ್‌ ಹೇಳಿದ್ದರು. ಕಳೆದವಾರ ನಿರ್ಮಲಾ ಸೀತಾರಾಮನ್, ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿಯೂ ಜಿಡಿಪಿ ಋಣಾತ್ಮಕವಾಗಿಯೇ ಇರಲಿದೆ ಎಂದು ಹೇಳಿದ್ದರು.

ಇದೀಗ ಅಕ್ಟೋಬರ್‌ ತಿಂಗಳಿನಲ್ಲಿ ಜಿಎಸ್‌ಟಿ ದೊಡ್ಡಮೊತ್ತದಲ್ಲಿ ಸಂಗ್ರಹವಾಗಿದೆ. ಈಗಲಾದರೂ ರಾಜ್ಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಜಿಎಸ್‌ಟಿ ಪಾಲು ಸಿಗಲಿದೆಯೇ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: ಉತ್ತಮ ಆಡಳಿತದಲ್ಲಿ ನಂ.1 ರಾಜ್ಯ ಕೇರಳ: ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights