ಫ್ಯಾಕ್ಟ್‌ಚೆಕ್: ಎಮರ್ಜೆನ್ಸಿ ಬಾಗಿಲು ತೆರೆದ ಸಂಸದ ತೇಜಸ್ವಿ ಸೂರ್ಯನನ್ನು ಸಹ ಪ್ರಯಾಣಿಕರು ಥಳಿಸಿದರೆ?

ತೇಜಸ್ವಿ ಸೂರ್ಯ ಅವರು ತಮಿಳುನಾಡು ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ ಜೊತೆ ಡಿಸೆಂಬರ್‌ 10ರಂದು ಚೆನ್ನೈನಿಂದ ತಿರುಚಿನಾಪಳ್ಳಿಗೆ ಹೊರಡಲು ವಿಮಾನ ಏರಿದ್ದರು. ಈ ವೇಳೆ ತುರ್ತು ನಿರ್ಗಮನ ದ್ವಾರದ ‘ಲಿವರ್‌’ ಎಳೆದಿದ್ದರು. ಕ್ಷಮಾಪಣಾ ಪತ್ರ ನೀಡಿದ ಬಳಿಕ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವರಿಗೆ ಅನುವು ಮಾಡಿಕೊಡಲಾಗಿತ್ತು.

ಈ ಘಟನೆ ನಡೆದು ತಿಂಗಳೂಗಳೇ ಕಳೆದಿದ್ದು,  ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಬಹಿರಂಗಗೊಳ್ಳುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ವೈರಲ್ ವಿಡಿಯೋದಲ್ಲಿ ಇವ ಯಾರು ಅಂತ ಹೇಳುವಿರಾ? ಬೆಂಗಳೂರು ಸೌತ್ ಎಂಪಿ ತೇಜಸ್ವೀ ಸೂರ್ಯ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಟೇಕ್‌ಆಫ್‌ ವೇಳೆ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆಯಲು ಯತ್ನಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ವಿಮಾನದಲ್ಲಿದ್ದ ಪ್ರಯಾಣಿಕರು ನೆಲಕ್ಕೆ ಹಾಕಿ ತುಳಿಯುತ್ತಿರುವ ವಿಡಿಯೋ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ತೇಜಸ್ವಿ ಸೂರ್ಯ ಇಂಡಿಗೋ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಟೇಕಾಫ್ ಮಾಡುವ ಮೊದಲು ತೆರೆದಿದ್ದಾರೆ ಎಂಬ ಸುದ್ದಿ ವರದಿಗಳ ನಂತರ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ.  ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ ಪೋಸ್ಟ್‌ನಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಎಮರ್ಜನ್ಸಿ ಬಾಗಿಲನ್ನು ತೆರೆದ ಕಾರಣಕ್ಕೆ ಸಹಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ವಿಡಿಯೋ ಎಂಬುದು ನಿಜವೇ ಎಂದು ಪರಿಶೀಲಿಸಿದಾಗ,  ವೈರಲ್ ವಿಡಿಯೊ ಯೂಟ್ಯೂಬ್‌ನಲ್ಲಿ ಇನ್‌ಸೈಡ್ ಎಡಿಷನ್‌ನಿಂದ ಪ್ರಕಟವಾದ ವೀಡಿಯೊ ಸುದ್ದಿ ವರದಿಯನ್ನು ನೀಡಿದೆ.

ಜೂನ್ 2021 ರ ವೀಡಿಯೊದ ಪ್ರಕಾರ, ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದ ಘಟನೆಯಿಂದ ಬಂದಿದೆ. ಸ್ಟೀಫನ್ ಜಮರ್ ಡಂಕನ್ ಎಂಬ ಹೆಸರಿನ ಆಫ್ ಡ್ಯೂಟಿ ಫ್ಲೈಟ್ ಅಟೆಂಡೆಂಟ್ ಪ್ರಯಾಣದ ವೇಳೆ ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿ, ಬೆದರಿಕೆ ಮಾತುಗಳನ್ನು ಆಡಿದ್ದಾನೆ ಎಂದು ಹೇಳಲಾಗಿದೆ. ಆತನನ್ನು ಸಹ ಪ್ರಯಾಣಿಕರು ನೆಲಕ್ಕೆ ಉರುಳಿಸಿ ತುಳಿದಿದ್ದಾರೆ ಎಂದು ವರದಿಯಾಗಿದೆ.

ವಿಮಾನ ಬಾಗಿಲು ತೆರೆಯಲು ಪ್ರಯತ್ನಿಸಿದ ಡಂಕನ್ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದನು ಎಂದು ನಂತರದ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ವರದಿಯಾಗಿದೆ. ಈ ವೀಡಿಯೊದಲ್ಲಿ ಕೆಲವು ಇತರ ಸುದ್ದಿ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂಯಾ ಅವರು ಕಳೆದ ತಿಂಗಳು ಇಂಡಿಗೋ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ಸುದ್ದಿ ಮಾಧ್ಯಮಗಳು ತೇಜಸ್ವಿ ಸೂರ್ಯ ಅವರ ಹೆಸರನ್ನು ಉಲ್ಲೇಖಿಸಿದೆ ಪ್ರಯಾಣಿಕ ಎಂದಷ್ಟೆ ವರದಿ ಮಾಡಿದ್ದವು. ಕನ್ನಡ ಪ್ರಭ ಸುದ್ದಿಯ ಪ್ರಕಾರ, ಇಂಡಿಗೋ ಈ ಘಟನೆಯ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ ಆದರೆ ತೇಜಸ್ವಿ ಸೂರ್ಯ ಉಲ್ಲೇಖ ಮಾಡಿರಲಿಲ್ಲ.

ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟುಮಾಡಿದ, ಅವರ ಜೀವದ ಜೊತೆ ಚೆಲ್ಲಾಟವಾಡಿದ್ದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಏಕೆ? ಅಧಿಕಾರಿಗಳು ಈ ವಿಚಾರವನ್ನು ಒಂದು ತಿಂಗಳವರೆಗೂ ಗೌಪ್ಯವಾಗಿ ಇಟ್ಟಿದ್ದರ ಹಿಂದಿನ ಉದ್ದೇಶವೇನು ಎಂದು ವಿಮಾನಯಾನ ತಜ್ಞರು ‍ಪ್ರಶ್ನಿಸಿದ್ದಾರೆ. ತುರ್ತು ನಿರ್ಗಮನ ದ್ವಾರ ತೆರೆದಿದ್ದವರ ವಿರುದ್ಧ ಈ ಹಿಂದೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು ಎಂದೂ ಹೇಳಿದ್ದಾರೆ.

ವಿಮಾನಯಾನ ನಿಯಮಾವಳಿಗಳ ಅನುಸಾರ ತುರ್ತು ನಿರ್ಗಮನ ದ್ವಾರ ತೆರೆಯುವುದು ಶಿಕ್ಷಾರ್ಹ ಅಪರಾಧ. ಹೀಗಿದ್ದರೂ ತೇಜಸ್ವಿ ವಿಚಾರದಲ್ಲಿ ಇಂಡಿಗೊ ಹಾಗೂ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮೃದುಧೋರಣೆ ತಳೆದಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, 2021 ರಲ್ಲಿ ಡೆಲ್ಟಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದ ಘಟನೆಯಿಂದ ಬಂದಿದೆ. ವಿಮಾನದಲ್ಲಿ ಪ್ರಯಾಣಿಕರ ನಡುವಿನ ಜಗಳದ ಹಳೆಯ ವೀಡಿಯೊವನ್ನು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದ ತೇಜಸ್ವಿ ಸೂರ್ಯನನ್ನು ಸಹ ಪ್ರಯಾಣಿಕರು ನೆಲಕ್ಕೆ ಹಾಕಿ ತುಳಿಯುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಬ್ರಿಟನ್ ಪ್ರಧಾನಿ ರಿಷಿ ಸುನಕ್ ತಮ್ಮ ಕಚೇರಿ ಸಿಬ್ಬಂದಿಗೆ ಪೊಂಗಲ್ ಔತಣಕೂಟ ಆಯೋಜಿಸಿದ್ದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.