ಫ್ಯಾಕ್ಟ್‌ಚೆಕ್: ಶುಭಮನ್ ಗಿಲ್ ಮತ್ತು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್‌ಗೆ ನಿಶ್ಚಿತಾರ್ಥವಾಗಿದೆಯೇ?

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಬಳಿಕ ಶುಭಮನ್ ಗಿಲ್‌ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೆಂಡ್‌ ಆಗಿದ್ದಾರೆ. 23 ವರ್ಷದ ಗಿಲ್‌ ಏಕದಿನ ಮಾದರಿ ದ್ವಿಶತಕ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಭಾರತದ ಪರ ದ್ವಿಶತಕ ಸಿಡಿಸಿದ 5ನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್ ದ್ವಿಶತಕದ ಸಾಧನೆ ಮಾಡಿದ್ದರು.

ಇದರ ಬೆನ್ನಲ್ಲೇ, ಟ್ವಿಟ್ಟರ್ ಬಳಕೆದಾರರಾದ ಹರ್ಷ್ ಎಂಬುವವರು ಟ್ವೀಟ್‌ ಮಾಡಿದ್ದು, ಸಚಿನ್ ತೆಂಡೂಲ್ಕರ್ ಅವರು ತಮ್ಮ ಪುತ್ರಿ ಸಾರಾ ತೆಂಡೂಲ್ಕರ್ ಅವರ ನಿಶ್ಚಿತಾರ್ಥವನ್ನು ಶುಭಮನ್ ಗಿಲ್ ಅವರೊಂದಿಗೆ ಘೋಷಿಸಿದ್ದಾರೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಇದೇ ಪ್ರತಿಪಾದನೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಶುಭಮನ್ ಗಿಲ್‌ ಮತ್ತು ಸಚಿನ್ ತೆಂಡೂಲ್ಕರ್‌ ಪುತ್ರಿ  ಸಾರಾ ತೆಂಡೂಲ್ಕರ್ ನಡುವೆ ನಿಶ್ಚಿತಾರ್ಥ ಪ್ರಸ್ಥಾಪದ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಚಿನ್ ತೆಂಡೂಲ್ಕರ್ ಅವರ ಮಗಳ ನಿಶ್ಚಿತಾರ್ಥವನ್ನು ಶುಭಮನ್ ಗಿಲ್‌ ಅವರೊಂದಿಗೆ ಎಂದು ಸಚಿನ್ ಘೋಷಿಸಿದ್ದಾರೆಯೇ ಎಂದು ಪರಿಶೀಲಿಸಿದಾಗ ಅಂತಹ ಯಾವುದೇ ವರದಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ನಂತರ ಕೀವರ್ಡ್ ಸಹಾಯದಿಂದ ಮತ್ತಷ್ಟು ಸರ್ಚ್ ಮಾಡಿದಾಗ ಯಾವುದೇ ವರದಿಗಳು ಕಂಡುಬಂದಿಲ್ಲ. ಸಚಿನ್ ತೆಂಡೂಲ್ಕರ್ ಅಂತಹ ಯಾವುದೇ ಘೋಷಣೆ ಮಾಡಿದ್ದರೆ, ಮುಖ್ಯ ವಾಹಿನಿ ಸುದ್ದಿ ಮಾಧ್ಯಮಗಳು ಅದನ್ನು ವರದಿ ಮಾಡುತ್ತಿದ್ದವು.

ಮುಂದುವರೆದು ಸಚಿನ್ ತೆಂಡೂಲ್ಕರ್, ಸಾರಾ ತೆಂಡೂಲ್ಕರ್ ಮತ್ತು ಶುಬ್ಮನ್ ಗಿಲ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಚ್ ಮಾಡಿದಾಗಲೂ ನಮಗೆ ಅಂತಹ ಯಾವುದೇ ಪ್ರಕಟಣೆ ಕಂಡುಬಂದಿಲ್ಲ. ಇದಲ್ಲದೆ, ನಿಶ್ಚಿತಾರ್ಥ ಎಂದು ಪೋಸ್ಟ್‌ ಮಾಡಿದ್ದ 6 ಗಂಟೆಯ ಅಂತರದಲ್ಲಿ ಹರ್ಷ್ ಅವರು ಹಿಂದಿನ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದು “ಇದು ವಿಡಂಬನಾತ್ಮಕ ಟ್ವೀಟ್ ಗೆಳೆಯರೇ! ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ” ಎಂದು ರೀ ಟ್ವೀಟ್ ಮಾಡಿದ್ದಾರೆ.

ನಿಶ್ಚಿತಾರ್ಥ ಗಾಸಿಪ್ ಗೆ ಕಾರಣವೇನು?

ನ್ಯೂಜಿಲೆಂಡ್‌ ತಂಡದ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್ ವೇಳೆ ಒಂದು ಅಚ್ಚರಿ ಸಂಗತಿಯೊಂದು ನಡೆದಿತ್ತು. ಪಂದ್ಯದ ವೇಳೆ ಇದು ಅಷ್ಟೊಂದು ಟ್ರೆಂಡ್‌ ಆಗಿರಲಿಲ್ಲ. ಆದರೆ, ಪಂದ್ಯ ಮುಗಿದ ಒಂದು ದಿನದ ಬಳಿಕ ಈ ವಿಡಿಯೋ ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಂದಹಾಗೆ ಈ ಘಟನೆ ಏನಿರಬಹುದು?

350 ರನ್‌ ಗುರಿ ಹಿಂಬಾಲಿಸಿದ್ದ ನ್ಯೂಜಿಲೆಂಡ್‌ ತಂಡದ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್‌ ಬೌಂಡರಿ ಸಮೀಪ ಫೀಲ್ಡಿಂಗ್‌ನಲ್ಲಿ ತೊಡಗಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಕೆಲ ಪ್ರೇಕ್ಷಕರು, ಸಾರಾ.. ಸಾರಾ..ಸಾರಾ..ಸಾರಾ.. ಎಂದು ಶುಭಮನ್ ಗಿಲ್ ಅವರನ್ನು ನೋಡಿ ಜೋರಾಗಿ ಕೂಗುತ್ತಿದ್ದರು. ಆ ಮೂಲಕ ಯುವ ಆಟಗಾರನಿಗೆ ರೇಗಿಸಿದ್ದರು. ಇದಕ್ಕೆ ಗಿಲ್‌ ಯಾವುದೇ ಪ್ರತಿಕ್ರಿಯೆ ನೀಡದೆ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿದ್ದರು.

ಶುಭಮನ್‌ ಗಿಲ್‌ ಹಾಗೂ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರಿ ಸಾರಾ ತೆಂಡೂಲ್ಕರ್‌ ಇಬ್ಬರೂ ಈ ಹಿಂದೆ ಡೇಟ್‌ ಮಾಡಿದ್ದರು ಎಂದು ವರದಿಯಾಗಿತ್ತು. ಮತ್ತೊಂದೆಡೆ ಇತ್ತೀಚೆಗೆ ಶುಭಮನ್ ಗಿಲ್‌ ಅವರು ರೆಸ್ಟೋರೆಂಟ್‌ವೊಂದರಲ್ಲಿ ಬಾಲಿವುಡ್‌ ನಟಿ ಸಾರಾ ಅಲಿ ಖಾನ್ ಅವರ ಜೊತೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಗಿಲ್‌, ಬಾಲಿವುಡ್‌ ನಟಿ ಜೊತೆ ಡೇಟ್‌ ಮಾಡುತ್ತಿದ್ದಾರೆಂದು ವರದಿಯಾಗಿತ್ತು. ಈ ಕಾರಣದಿಂದಾಗಿ ಪಂದ್ಯದ ವೇಳೆ ಪ್ರೇಕ್ಷಕರು ಸಾರಾ..ಸಾರಾ ಎಂದು ಕೂಗಿದ್ದರು. ಆದರೆ, ಯಾವ ಸಾರಾ ಎಂದು ಇಲ್ಲಿ ಪ್ರೇಕ್ಷಕರು ಉಲ್ಲೇಖಿಸಿಲ್ಲ. ಇದೂ ಕೂಡ ಸೋಶಿಯಲ್ ಮೀಡಿಯಾ ಟ್ರೆಂಡ್‌ಗೆ ಕಾರಣವಿರಬಹುದು.

ಈ ಹಿನ್ನಲೆಯಲ್ಲಿ, ಸಚಿನ್‌ ತೆಂಡೂಲ್ಕರ್‌ ಅವರ ಪುತ್ರಿ ಸಾರಾ ತೆಂಡೂಲ್ಕರ್‌ ಮತ್ತು ಶುಭಮನ್‌ ಗಿಲ್‌ ನಡುವೆ ನಿಶ್ಚಿತಾರ್ಥ ನಡೆಯಲಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಗಾಳಿಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆದರೆ ನಿಶ್ಚಿತಾರ್ಥದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಎಮರ್ಜೆನ್ಸಿ ಬಾಗಿಲು ತೆರೆದ ಸಂಸದ ತೇಜಸ್ವಿ ಸೂರ್ಯನನ್ನು ಸಹ ಪ್ರಯಾಣಿಕರು ಥಳಿಸಿದರೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights