ಚುನಾವಣೆಗೂ ಮುನ್ನವೇ BJP ಮಿತ್ರಪಕ್ಷ ವಿಭಜನೆ: ಕೇರಳದಲ್ಲಿ ಸೋಲುಲು ಸಿದ್ದವಾಗಿದೆ ಕೇಸರಿ ಪಡೆ!

ಕೇರಳದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಲ್‌ಡಿಎಫ್‌ ಜೊತೆ ಬಿಜೆಪಿ ರಹಸ್ಯ ಒಪ್ಪಂದ ಮಾಡಿಕೊಂಡಿದೆ ಎಂದು ಹಲವು ನಾಯಕರು ಆರೋಪಿಸಿದ್ದು, ಕೇರಳದ ಎನ್‌ಡಿಎಯಲ್ಲಿ ಮಿತ್ರ ಪಕ್ಷವಾಗಿರುವ ಭಾರತ್ ಧರ್ಮ ಜನಸೇನೆ (ಬಿಡಿಜೆಎಸ್) ಪಕ್ಷವು ವಿಭಜನೆಯಾಗಿದೆ. ಹಲವು ನಾಯಕರು ಪಕ್ಷ ತೊರೆದಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯ ಎದ್ದು ಬಿಡಿಜೆಎಸ್‌ ಪಕ್ಷ ತೊರೆದಿರುವ ನಾಯಕರು ಹೊಸ ಪಕ್ಷವನ್ನು ಆರಂಭಿಸಲು ನಿರ್ಧರಿಸಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಜೊತೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.

ಬಂಡಾಯ ಮುಖಂಡರು ಭಾರತೀಯ ಜನಸೇನೆ (ಬಿಜೆಎಸ್) ಪಕ್ಷವನ್ನು ಆರಂಭಿಸಿದ್ದು, ಇದರ ನಾಯಕರಾದ ವಿ ಗೋಪಕುಮಾರ್ ಮತ್ತು ಎನ್.ಕೆ.ಲೀಲಕಂದನ್, ಎಲ್‌ಡಿಎಫ್ ಸರ್ಕಾರವು ಮುಟ್ಟಿನ ವಯಸ್ಸಿನ ಮಹಿಳೆಯರನ್ನು ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ಹಿಂದೂಗಳ ಭಾವನೆಗಳನ್ನು ತೀವ್ರವಾಗಿ ನೋಯಿಸಿದೆ ಎಂದು ಹೇಳಿದ್ದಾರೆ. (ಸರ್ಕಾರವು 2018 ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಮಹಿಳೆಯರಿಗೆ ಪ್ರವೇಶ ಕಲ್ಪಿಸಿದೆ).

“ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ಪ್ರತಿಭಟನೆ ನಡೆಸಿದಾಗ ಬಿಡಿಜೆಎಸ್ ಕಾರ್ಯಕರ್ತರು ಸೇರಿದಂತೆ ಸಾವಿರಾರು ನಿಷ್ಠಾವಂತರು ಬಂಧನಕ್ಕೆ ಒಳಗಾಗಿದ್ದರು. ಈಗ, ಕಾಂಗ್ರೆಸ್ ಮುಕ್ತ ಕೇರಳವನ್ನು ಜಾರಿಗೆ ತರುವ ಭಾಗವಾಗಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್‌ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದು ಬಿಜೆಪಿ ಬಯಸಿದೆ. ಎಲ್‌ಡಿಎಫ್ ಗೆಲ್ಲಲು ಬಿಜೆಪಿ ಪಿತೂರಿ ನಡೆಸಿದ್ದು, ಇದನ್ನು ಹಿಂದೂ ನಿಷ್ಠಾವಂತರು ಒಪ್ಪಲು ಸಾಧ್ಯವಿಲ್ಲ ”ಎಂದು ಗೋಪಕುಮಾರ್ ಹೇಳಿದರು.

ಪರಿಶಿಷ್ಟ ಜಾತಿಯಾದ ಪುಲಯ ಸಮುದಾಯದ ಸಂಘಟನೆಯಾದ ಕೇರಳ ಪುಲಯ ಮಹಾ ಸಭೆಯ (ಕೆಪಿಎಂಎಸ್) ಪ್ರಮುಖ ನಾಯಕರಾಗಿರುವ ನೀಲಕಂದನ್, ಬಿಡಿಜೆಎಸ್‌ನ 14 ಜಿಲ್ಲಾ ಸಮಿತಿಗಳಲ್ಲಿ 11 ರಲ್ಲಿ ತಮ್ಮ ಪ್ರಾಬಲ್ಯವಿದೆ ಎಂದು ಹೇಳಿದ್ದಾರೆ.  “ಹೊಸದಾಗಿ ರೂಪುಗೊಂಡ ಬಿಜೆಎಸ್ ಯಾವುದೇ ಷರತ್ತುಗಳಿಲ್ಲದೆ ಯುಡಿಎಫ್ ಅನ್ನು ಬೆಂಬಲಿಸುತ್ತದೆ. ನಾವು ಈಗಾಗಲೇ ಯುಡಿಎಫ್ ನಾಯಕರೊಂದಿಗೆ ಚರ್ಚಿಸಿದ್ದೇವೆ. ನಮಗೆ ಹೇಗೆ ಸ್ಥಳಾವಕಾಶ ಕಲ್ಪಿಸಬೇಕು ಎಂಬುದನ್ನು ನಿರ್ಧರಿಸುವುದು ಯುಡಿಎಫ್‌ಗೆ ಬಿಟ್ಟದ್ದು” ಎಂದು ಹೇಳಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಎಲ್ಡಿಎಫ್ ವಿಜಯ ಸಾಧಿಸುವಂತೆ ಮಾಡುವ ಉದ್ದೇಶದಿಂದ ಬಿಜೆಪಿ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮೌನವಾಗಿ ಸೂಚನೆ ನೀಡುತ್ತಿದ್ದಾರೆ. “ಅವರು (ಬಿಜೆಪಿ) ಚಿನ್ನದ ಕಳ್ಳಸಾಗಣೆ ಪ್ರಕರಣದ ಬಗ್ಗೆ ಇದ್ದಕ್ಕಿದ್ದಂತೆ ಮೌನವಾಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಸ್ಸಾಂ ಗೆಲ್ಲಲು 03 ತಂತ್ರ ಎಣೆದ BJP: ಮುಸ್ಲಿಮರನ್ನು ಸೆಳೆಯುತ್ತಿರುವ ಕೇಸರಿ ಪಡೆಯ ತಂತ್ರಗಳೇನು? ಡೀಟೇಲ್ಸ್‌

ಬಂಡಾಯ ನಾಯಕರ ಪ್ರಕಾರ ಮತ್ತೊಂದು ಅಂಶವೆಂದರೆ, ಎನ್‌ಡಿಎಯಲ್ಲಿ ಬಿಡಿಜೆಎಸ್‌ಗೆ ಅರ್ಹವಾದ ಸ್ಥಳ ಸಿಕ್ಕಿಲ್ಲ. ಕಳೆದ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಅನೇಕ ಜಿಲ್ಲಾ ಸಮಿತಿಗಳು ಎನ್‌ಡಿಎಯಿಂದ ಹೊರಬರಲು ಬಯಸಿದ್ದವು ಎಂದು ಅವರು ಹೇಳಿದರು. ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ಬಿಜೆಎಸ್‌ ಅಭ್ಯರ್ಥಿಗಳಿಗೆ ಬಿಜೆಪಿ ಸಹಾಯ ಮಾಡಲಿಲ್ಲ, ಬದಲಾಗಿ ಪಕ್ಷದ ಅಭ್ಯರ್ಥಿಗಳ ವಿರುದ್ದ ಬಿಜೆಪಿ ತನ್ನದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ’ ಎಂದು ಅವರು ಹೇಳಿದರು.

ಆದರೂ, ಬಿಡಿಜೆಎಸ್ ಅಧ್ಯಕ್ಷ ತುಷಾರ್ ವೆಲ್ಲಪ್ಪಲ್ಲಿ ಅವರು ಎನ್‌ಡಿಎಯೊಂದಿಗೆ ಮುಂದುವರಿಯಲು ಬಯಸಿದ್ದಾರೆ ಎಂದು ಅವರು ಹೇಳಿದರು.

ತಮಗೆ ಹೆಚ್ಚಿನ ಬಿಡಿಜೆಎಸ್ ಜಿಲ್ಲಾ ಸಮಿತಿಗಳ ಬೆಂಬಲವಿದೆ ಎಂದು ಬಂಡಾಯ ನಾಯಕರು ಹೇಳಿರುವುದನ್ನು ತುಷರ್ ನಿರಾಕರಿಸಿದ್ದಾರೆ. “ಆ ನಾಯಕರು ಸಂಸತ್ತಿನ ಕನಸುಗಳೊಂದಿಗೆ ಪಕ್ಷವನ್ನು ತೊರೆದಿದ್ದಾರೆ. ಬಿಡಿಜೆಎಸ್ ಸ್ಪಷ್ಟ ರಾಜಕೀಯ ಕಾರ್ಯಸೂಚಿಯನ್ನು ಹೊಂದಿರುವ ಪಕ್ಷವಾಗಿದ್ದು, ಇದು ಎನ್‌ಡಿಎಯೊಂದಿಗೆ ಮುಂದುವರಿಯುತ್ತದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ತಮ್ಮ ಪಕ್ಷದ ಸಚಿವರನ್ನೇ ಮುಜುಗರಕ್ಕೆ ಸಿಕ್ಕಿಸಿದ ಬಿಜೆಪಿ ಶಾಸಕರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights