ಅಸ್ಸಾಂ ಗೆಲ್ಲಲು 03 ತಂತ್ರ ಎಣೆದ BJP: ಮುಸ್ಲಿಮರನ್ನು ಸೆಳೆಯುತ್ತಿರುವ ಕೇಸರಿ ಪಡೆಯ ತಂತ್ರಗಳೇನು? ಡೀಟೇಲ್ಸ್
ಅಸ್ಸಾಂ ರಾಜ್ಯವು ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಆಡಳಿತಾರೂ BJP ತನ್ನ ಭದ್ರಕೋಟೆಯಾಗಿರುವ ಅಸ್ಸಾಂನಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಮೂರು ಮುಖಗಳ ಕಾರ್ಯತಂತ್ರವನ್ನು ರೂಪಿಸುತ್ತಿದೆ. 1. ಬಾಂಗ್ಲಾದೇಶದಿಂದ ಬಂದ ಮುಸ್ಲಿಮರನ್ನು ನಿರಾಕರಿಸಿ; ಅಸ್ಸಾಂ ಮೂಲದವರು ಮಾತ್ರ ಮತ ಚಲಾಯಿಸುವಂತೆ ಕೇಳುವ ಮೂಲಕ ಮುಸ್ಲಿಮರಲ್ಲಿ ವಿಭಜನೆಯನ್ನು ಉಂಟುಮಾಡುವುದು. 2. ಮೋದಿ-ಷಾ ಮತ್ತು ನಿರ್ಮಲಾ ಸೀತಾರಾಮನ್ ಅವರ ರಾಜ್ಯ ಭೇಟಿಗಳಿಂದ ರಾಜಕೀಯ ಲಾಭವನ್ನು ಹೆಚ್ಚಿಸಿಕೊಳ್ಳುವುದು. ಮತ್ತು 3. NRC (ರಾಷ್ಟ್ರೀಯ ಪೌರತ್ವ ನೊಂದಣಿ) ಮರು ಪರಿಶೀಲನೆ ಮಾಡುವಲ್ಲಿ ದೊಡ್ಡ ಪ್ರಮಾಣದ ವೈಪರೀತ್ಯಗಳು ಕಂಡುಬಂದರೆ, NRC ಪಟ್ಟಿಗಳನ್ನು ಮತ್ತೆ ಹೊಸದಾಗಿ ರೂಪಿಸಲು ಮುಂದಾಗುವುದು.
ಫೆಬ್ರವರಿ 6 ರಂದು ಅಸ್ಸಾಂನ ಚಹಾ ತೋಟಗಳಿಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿ ನೀಡಲಿದ್ದಾರೆ. ನೇರ ಲಾಭ ವರ್ಗಾವಣೆಯ ಮೂಲಕ 8 ಲಕ್ಷಕ್ಕೂ ಹೆಚ್ಚು ಚಹಾ ಕಾರ್ಮಿಕರಿಗೆ ತಲಾ 3000 ರೂ.ಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ. ಅಸ್ಸಾಂನ ಬಿಜೆಪಿಗೆ ನಿರ್ಣಾಯಕ ಬೆಂಬಲ ಕೇಂದ್ರವಾದ ಚಹಾ ಬುಡಕಟ್ಟು ಜನಾಂಗದವರನ್ನು ಆಕರ್ಷಿಸುವುದು ಅವರಿಗೆ ಮುಖ್ಯವಾಗಿದೆ. ಕನಿಷ್ಠ 30 ಅಸೆಂಬ್ಲಿ ಸ್ಥಾನಗಳಲ್ಲಿ ಟೀ ಕಾರ್ಮಿಕರು ನಿರ್ಣಯಾಕ ಪಾತ್ರ ವಹಿಸಿಲಾಗಿದ್ದಾರೆ. ಬ್ರಹ್ಮಪುತ್ರ ಮತ್ತು ಬರಾಕ್ ಕಣಿವೆಯ ಟೀ ಬೆಲ್ಟ್‌ಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ.
ಅಂತೆಯೇ, ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 7 ರಂದು ಧೆಕಿಯಾಜುಲಿಗೆ ಭೇಟಿ ನೀಡಿ ಎರಡು ವೈದ್ಯಕೀಯ ಕಾಲೇಜುಗಳ ಶಂಕು ಸ್ಥಾಪನೆ ಮಾಡಲಿದ್ದಾರೆ. ಅಲ್ಲದೆ, ಅಸ್ಸಾಂ ಮಾಲಾ ಅಡಿಯಲ್ಲಿ ರಸ್ತೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಸ್ಥಳವು ಬ್ರಹ್ಮಪುತ್ರದ ಉತ್ತರ ದಂಡೆಯಲ್ಲಿ ಚಹಾ ಉತ್ಪಾದಿಸುವ ಪ್ರದೇಶವಾಗಿದೆ.
ಬಿಜೆಪಿ 2016 ರ ಚುನಾವಣಾಯಲ್ಲಿ, ಅಸ್ಸಾಂನ ಅಹೋಮ್ ಸೈನ್ಯವು ಮೊಘಲರನ್ನು ಸೋಲಿಸಿದ 1671 ರ ಯುದ್ಧವನ್ನು ಸಾರೈಘಾಟ್‌ನ ಕೊನೆಯ ಯುದ್ಧ ಎಂದು ಉಲ್ಲೇಖಿಸಿ ಪ್ರಚಾರ ನಡೆಸಿತ್ತು. ಈ ಬಾರಿ ಬಿಜೆಪಿಯು ಸ್ಥಳೀಯ ಪಟ್ಟಿಗಳ ಮೇಲೆ ಗಮನ ಹರಿಸುತ್ತಿದೆ.
ಮಿಯಾ ಮುಸ್ಲಿಮರನ್ನು ನಿರ್ಲಕ್ಷ್ಯ:
ಬಂಗಾಳಿ ಮಾತನಾಡುವ ಮಿಯಾ ಮುಸ್ಲಿಮರು ಕೋಮುವಾದಿಗಳು ಮತ್ತು ಅವರ ಸಂಸ್ಕೃತಿ ಅಸ್ಸಾಮಿಗಳ ಸಂಸ್ಕೃತಿಗೆ ಭಿನ್ನವಾಗಿದೆ ಎಂದು ಆರೋಪಿಸುತ್ತಿರುವ ಬಿಜೆಪಿ, ಅವರ ಮತಗಳ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದೆ.
ಈ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಜಂಟಿಯಾಗಿ ಕಣಕ್ಕಿಳಿಯುತ್ತಿರುವ ಕಾಂಗ್ರೆಸ್ ಮತ್ತು ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಗೆ ಈ ಸಮುದಾಯವು ಬೆಂಬಲ ನೀಡುವ ಸಾಧ್ಯತೆಯಿದೆ. ಅವರು ಈ ಹಿಂದೆಯೂ ಕಾಂಗ್ರೆಸ್ ಮತ್ತು ಎಐಯುಡಿಎಫ್ ಅನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಕೇಂದ್ರದಲ್ಲಿ BJP ಮತ್ತೆ ಅಧಿಕಾರಕ್ಕೆ ಬಂದರೆ 3,500 ಮಸೀದಿಗಳು ನೆಲಸಮ: ಅಸ್ಸಾಂ ಸಂಸದ
ಅಸ್ಸಾಂನ ಮುಸ್ಲಿಮರು ತಮ್ಮ ಸಾಮಾಜಿಕ ಮತ್ತು ಭಾಷಾ ಹಿನ್ನೆಲೆಯ ಆಧಾರದ ಮೇಲೆ ವಿಭಿನ್ನ ನೆಲೆಗಳನ್ನು ಹೊಂದಿದ್ದಾರೆ – ಬಂಗಾಳಿ ಮಾತನಾಡುವ ಮುಸ್ಲಿಮರನ್ನು ‘ಮಿಯಾಸ್’ ಎಂದು ಕರೆಯಲಾಗುತ್ತದೆ.
ಸ್ಥಳೀಯ ಮುಸ್ಲಿಂ ಸಮುದಾಯಗಳಲ್ಲಿ ಗೋರಿಯಾಸ್, ಮೊರಿಯಾಸ್, ದೇಶಿಸ್ ಮತ್ತು ಜೋಲಾಸ್ಗಳು ಸೇರಿದ್ದಾರೆ.
ಅಸ್ಸಾಂನ 3.12 ಕೋಟಿ ಜನಸಂಖ್ಯೆಯ 34% ಮುಸ್ಲಿಮರು ಇರುವುದರಿಂದಾಗಿ ಬಿಜೆಪಿಯ ನಿಲುವು ನಿರ್ಣಾಯಕವಾಗಿದೆ. ಅದರಲ್ಲಿ 4% ಸ್ಥಳೀಯ ಅಸ್ಸಾಮೀ ಮುಸ್ಲಿಮರು ಮತ್ತು ಉಳಿದವರು ಹೆಚ್ಚಾಗಿ ಬಂಗಾಳಿ ಮಾತನಾಡುವ ಮುಸ್ಲಿಮರು. ಕನಿಷ್ಠ 30-35 ವಿಧಾನಸಭಾ ಸ್ಥಾನಗಳಲ್ಲಿ ಮುಸ್ಲಿಂ ಮತಗಳು ನಿರ್ಣಾಯಕ ಅಂಶವಾಗಿದೆ.
ಅಸ್ಸಾಂ ಹಣಕಾಸು ಸಚಿವ ಹಿಮಂತ ಬಿಸ್ವಾ ಶರ್ಮಾ ಅವರು ಮಿಯಾ ಮುಸ್ಲಿಮರ ವಿರುದ್ಧ ತಮ್ಮ ನಿಲುವಿನ ಬಗ್ಗೆ ತೀವ್ರವಾಗಿ ಧ್ವನಿ ಎತ್ತಿದ್ದಾರೆ. ಅಸ್ಸಾಂನ ಮಿಯಾ ಮುಸ್ಲಿಮರಿಗೆ ಬಿಜೆಪಿ ಪಕ್ಷದ ಟಿಕೆಟ್ ನೀಡುವುದಿಲ್ಲ ಎಂದು ಹೇಳಿರುವ ಅವರು, ಮಿಯಾಗಳಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಅನ್ನು ಸಹ ಕೇಳಿದ್ದಾರೆ.
“ಅಸ್ಸಾಂನಲ್ಲಿ ಮುಸ್ಲಿಮರನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಒಬ್ಬರು ಸ್ಥಳೀಯರು ಮತ್ತು ಇನ್ನೊಬ್ಬರು ಬಾಂಗ್ಲಾದೇಶದಿಂದ ವಿವಿಧ ಸಮಯಗಳಲ್ಲಿ ಬಂದಿದ್ದಾರೆ. ಅವರು ತಮ್ಮನ್ನು ಮಿಯಾಸ್ ಎಂದು ಗುರುತಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಅವರು ಬಹಳ ಕೋಮು ಮತ್ತು ಮೂಲಭೂತವಾದಿಗಳು. ಅವರು ಅಸ್ಸಾಮೀ ಸಂಸ್ಕೃತಿ ಮತ್ತು ಭಾಷೆಯನ್ನು ವಿರೂಪಗೊಳಿಸಲು ವಿವಿಧ ಚಟುವಟಿಕೆಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ನೈತಿಕವಾಗಿ, ಅವರು ನಮಗೆ ಮತ ಹಾಕಿದರೆ ನಾನು ವಿಧಾನಸಭೆಯಲ್ಲಿ ನಿಲ್ಲಲು ಸಾಧ್ಯವಿಲ್ಲ. ನೀವು ನಿಮ್ಮನ್ನು ಮಿಯಾ ಮುಸ್ಲಿಮರು ಎಂದು ಗುರುತಿಸಿಕೊಳ್ಳುವುದಾದರೆ ನಮಗೆ ಮತ ನೀಡಬೇಡಿ, ನೀವು ನಿಮ್ಮನ್ನು ಅಸ್ಸಾಮೀ ಮುಸ್ಲಿಮರೆಂದು ಗುರುತಿಸಿದರೆ, ದಯವಿಟ್ಟು ನಮಗೆ ಮತ ನೀಡಿ” ಎಂದು ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳಕ್ಕಿಂತ ಅಸ್ಸಾಂ ಚುನಾವಣೆ ಷಾ-ಮೋದಿಗೆ ಅತ್ಯಂತ ನಿರ್ಣಾಯಕ!
“ನಾವು ಮುಸ್ಲಿಮರಿಗೆ ಪಕ್ಷದ ಟಿಕೆಟ್ ನೀಡುತ್ತೇವೆ. ಆದರೆ, ತಮ್ಮನ್ನು ಮಿಯಾ ಮುಸ್ಲಿಂ ಎಂದು ಗುರುತಿಸಿಕೊಳ್ಳುವವರಿಗೆ ಟಿಕೆಟ್ ನೀಡುವುದಿಲ್ಲ. ಅಸ್ಸಾಂನಲ್ಲಿ, ಮಿಯಾ ಎಂಬ ಪದವನ್ನು ನಮ್ಮ ಗುರುತು ಮತ್ತು ಸಂಸ್ಕೃತಿಯನ್ನು ನಿರ್ದಿಷ್ಟ ಸೂಕ್ಷ್ಮ ವಿಭಾಗದ ಮುಸ್ಲಿಮರಿಂದ ಪ್ರಶ್ನಿಸಲು ಬಳಸಲಾಗುತ್ತದೆ. ನಾವು ಅವರಿಗೆ ಟಿಕೆಟ್ ನೀಡುವುದಿಲ್ಲ. ಅವರು ತಪ್ಪಾಗಿಯೂ ನಮಗೆ ಮತ ಚಲಾಯಿಸದಂತೆ ನಾನು ಅವರನ್ನು ಕೈಮುಗಿದು ವಿನಂತಿಸುತ್ತೇನೆ. ಆದರೆ ಭಾರತ ಮತ್ತು ಅಸ್ಸಾಂ ಅನ್ನು ನಮ್ಮ ತಾಯಿ ಭೂಮಿ ಎಂದು ಭಾವಿಸುವ ಮುಸ್ಲಿಮರು ನಮಗೆ ಮತ ಹಾಕುತ್ತಾರೆ. ಮಿಯಾಗಳು ಪ್ರವರ್ಧಮಾನಕ್ಕೆ ಬರಬಾರದು. ಹಾಗಾಗಿ ಅವರಿಗೆ ಟಿಕೆಟ್ ನೀಡಬಾರದು ಎಂದು ನಾನು ಕಾಂಗ್ರೆಸ್‌ಗೆ ವಿನಂತಿಸುತ್ತಿದ್ದೇನೆ” ಎಂದೂ ಅವರು ಹೇಳಿದ್ದಾರೆ.
ಈ ಮೂಲಕ ಅಸ್ಸಾಂನ ಮೂಲ ನಿವಾಸಿಗಳಾಗಿರುವ ಮುಸ್ಲೀಮರ ಮತಗಳನ್ನು ಬಿಜೆಪಿ ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ.
ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡಿದ್ದು, “ಅಸ್ಸಾಂನ ಗುರುತು, ಸಂಸ್ಕೃತಿ ಮತ್ತು ಭಾಷೆಯು ಬಿಜೆಪಿಯ ಆಡಳಿತದಲ್ಲಿ ಅಪಾಯದಲ್ಲಿದೆ. ಜನರನ್ನು ವಿಭಜಿಸಲು ಮಾತ್ರ ಬಿಜೆಪಿ ಬಯಸುತ್ತಿದೆ ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಸ್ಸಾಂನ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೊಂದಣಿ)
ಅಂತಿಮ ಎನ್‌ಆರ್‌ಸಿ ಪಟ್ಟಿ ಬಿಜೆಪಿಗೆ ಭಾರೀ ತೊಡಕಾಗುವ ಸಾಧ್ಯತೆಯಿದೆ. 2019 ರಲ್ಲಿ ಪ್ರಕಟವಾದ ಎನ್‌ಆರ್‌ಸಿ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಮತ್ತು ಎಐಯುಡಿಎಫ್ ತೃಪ್ತಿ ಹೊಂದಿದ್ದರೂ, ಬಿಜೆಪಿ ಅಲ್ಲ. ಆಗಸ್ಟ್ 31, 2019 ರಂದು ಪ್ರಕಟವಾದ ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿ, 31.9 ದಶಲಕ್ಷಕ್ಕೂ ಹೆಚ್ಚು ಜನರು ನೋಂದಾವಣೆಯಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿದ್ದಾರೆ. ಅಲ್ಲದೆ, 1.9 ದಶಲಕ್ಷಕ್ಕೂ ಹೆಚ್ಚಿನ ಜನರನ್ನು ಪಟ್ಟಿಯಿಂದ ಹೊರಗಿಟ್ಟಿದೆ.
ಅಸ್ಸಾಂ ಸರ್ಕಾರ ಮತ್ತು ಕೇಂದ್ರ ಸರ್ಕಾರವು ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಎನ್‌ಆರ್‌ಸಿ ಕರಡಿನಲ್ಲಿ 20% ಮಾದರಿಗಳ ಪುನರ್ ಪರಿಶೀಲನೆ ಮತ್ತು ಉಳಿದ ಜಿಲ್ಲೆಗಳಲ್ಲಿ 10% ಮಾದರಿಗಳ ಪುನರ್ ಪರಿಶೀಲನೆಗೆ ಕೋರಿತ್ತು. ಆದರೆ, ಎನ್‌ಆರ್‌ಸಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಿರುವ ಸುಪ್ರೀಂ ಕೋರ್ಟ್ ಈ ಮನವಿಯನ್ನು ತಿರಸ್ಕರಿಸಿದೆ.
“ಮರು ಪರಿಶೀಲನೆಯ ನಂತರ ವೈಪರೀತ್ಯಗಳು ಕಂಡುಬಂದಲ್ಲಿ ನಾವು ಎನ್‌ಆರ್‌ಸಿಯನ್ನು ಮತ್ತೆ ಮಾಡಬೇಕಾಗುತ್ತದೆ” ಎಂದು ಬಿಜೆಪಿಯ ಶರ್ಮಾ ಹೇಳಿದ್ದಾರೆ.
“ಅಸ್ಸಾಂ ಅನ್ನು ಒಳನುಸುಳುವಿಕೆಯಿಂದ ರಕ್ಷಿಸಲಾಗುವುದು, ಸರಿಯಾದ ಎನ್‌ಆರ್‌ಸಿ, ಗಡಿ ನಿರ್ವಹಣೆಯ ಮೂಲಕ ವಿದೇಶಿಯರನ್ನು ಗಡಿಪಾರು ಮಾಡಲಾಗುತ್ತದೆ. ಮುಂದಿನ ಐದು ವರ್ಷಗಳಲ್ಲಿ ಅಸ್ಸಾಂ ಒಳನುಸುಳುವಿಕೆಯಿಂದ ಮುಕ್ತವಾಗಲಿದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ 2019ರಲ್ಲಿ ಘೋಷಿಸಿದ್ದರು.
ಮೂಲ: ದಿ ಎಕನಾಮಿಕ್ಸ್ ಟೈಮ್ಸ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ
ಇದನ್ನೂ ಓದಿ: ಅಸ್ಸಾಂ ಸ್ಥಳೀಯ ಚುನಾವಣೆಯಲ್ಲಿ BJPಗೆ ಮುಖಭಂಗ; ಆದರೂ, ಆಡಳಿತ ರಚಿಸಲು ಮುಂದಾದ ಬಿಜೆಪಿ!