ಪಶ್ಚಿಮ ಬಂಗಾಳಕ್ಕಿಂತ ಅಸ್ಸಾಂ ಚುನಾವಣೆ ಷಾ-ಮೋದಿಗೆ ಅತ್ಯಂತ ನಿರ್ಣಾಯಕ!

2021ರ ಆರಂಭದೊಂದಿಗೆ ಜನರ ಚಿತ್ತ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯತ್ತ ಕೇಂದ್ರೀಕರಿಸಿದಂತೆ ಕಾಣುತ್ತಿದೆ. ಆದರೆ, ಬಿಜೆಪಿಗೆ ಅಸ್ಸಾಂ ಚುನಾವಣೆ ನಿರ್ಣಾಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರಾಜಕೀಯದ ಮತ್ತೊಂದು ಆಯಾಮವನ್ನು ತೋರಿಸಿದ್ದು ಅಸ್ಸಾಂ ಚುನಾವಣೆ. ಗೆಲುವನ್ನೇ ಕಾರಣ ಪ್ರದೇಶಗಳನ್ನೂ ಬಿಜೆಪಿ ಹೇಗೆ ವಶಪಡಿಸಿಕೊಳ್ಳುವುದನ್ನು ಕಲಿತಿದೆ ಎಂಬುದನ್ನು ಅಸ್ಸಾಂ ತೋರಿಸಿದೆ. ಇದು ಕೇವಲ ಚುನಾವಣಾ ದೃಷ್ಟಿಯಿಂದ ಮಾತ್ರವಲ್ಲ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿಯೂ ಹೌದು. ಪಶ್ಚಿಮ ಬಂಗಾಳದ ಫಲಿತಾಂಶವು ಒಂದು ರಾಜಕೀಯ ವಿದ್ಯಾಮಾನವಾಗಿ ಮುಗಿಯಲಿದೆ. ಆದರೆ, ಎರಡು ರೀತಿಯಲ್ಲಿ ಅಸ್ಸಾಂ ಚುನಾವಣೆ ಹೆಚ್ಚು ಆಕರ್ಷಕ ಮತ್ತು ನಿರ್ಣಾಯಕ ಚುನಾವಣಾ ಪ್ರಯೋಗವಾಗಿ ಉಳಿಯಲಿದೆ. ಅಸ್ಸಾಂನಲ್ಲಿಯೂ 2021ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ.

2016ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಸ್ಸಾಂನಲ್ಲಿ ಉತ್ತಮ ಸಾಧನೆ ತೋರಿತು. 126 ಸ್ಥಾನಗಳಲ್ಲಿ 60 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಅಲ್ಲದೆ, ಮಿತ್ರಪಕ್ಷಗಳಾದ ಅಸೋಮ್ ಗಣ ಪರಿಷತ್ (ಎಜಿಪಿ) ಮತ್ತು ಬೊಡೊಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಸಹಭಾಗಿತ್ವದಲ್ಲಿ 86 ಸ್ಥಾನಗಳೊಂದಿಗೆ ಅಧಿಕಾರ ರಚಿಸಿತು. ಇದು ಬಿಜೆಪಿಗೆ ಹೊಸ ಅಲೆಯನ್ನು ಕಾಣುವಂತೆ ಮಾಡಿತು. ತನ್ನ ಗುರುತೇ ಇಲ್ಲದ ಪ್ರದೇಶದಲ್ಲಿ ನುಗ್ಗಿದ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಯಿತು. 2016ರ ನಂತರದ ವರ್ಷಗಳಲ್ಲಿ ರಾಜಕೀಯವಾಗಿ ಮತ್ತು ಸಾಮಾಜಿಕ-ಸಾಂಸ್ಕೃತಿಕವಾಗಿ ರಾಜ್ಯದ ಮೇಲೆ ಬಿಜೆಪಿ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ.

ಬಿಜೆಪಿ ರಾಜಕೀಯವಾಗಿ ತನ್ನ ಪ್ರತಿಸ್ಪರ್ಧಿಗಳನ್ನು ರಾಜ್ಯದಲ್ಲಿ ಅಣಿಯಲು ಮುಂದಾಯಿತು. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ ಮತ್ತು ಎಜಿಪಿಯನ್ನು ರಾಜ್ಯದಲ್ಲಿ ಇಲ್ಲವಾಗಿಸುವ ಪ್ರಯತ್ನವನ್ನು ಮಾಡಿ, ಭಾಗಶಃ ಯಶಸ್ವಿಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡಿತು. ರಾಜ್ಯದಲ್ಲಿ ಪ್ರಧಾನ ಪಕ್ಷವಾಗಿದ್ದ ಕಾಂಗ್ರೆಸ್ ಕೇವಲ ಮೂರು ಸ್ಥಾನಗಳಿಗೆ ಇಳಿಯುವಂತೆ ಮಾಡಿತು. ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ, ಇದು ರಾಜ್ಯದಲ್ಲಿರುವ ದೀರ್ಘಕಾಲೀನ ‘ಜನಾಂಗೀಯ, ಜನಾಂಗೀಯೇತರ’ಸಮಸ್ಯೆಯನ್ನು ಖಚಿತಪಡಿಸಿದೆ. ಅಸ್ಸಾಂ ಬಿಜೆಪಿಗೆ ಹಣದಿಂದಾಗಿ ದೊರೆತದ್ದಲ್ಲ. ಬದಲಾಗಿ, ಹಿಂದೂ-ಮುಸ್ಲಿಂ ಮತ್ತು ‘ಭಾರತೀಯ-ಭಾರತೀಯೇತರ’ದ್ವೇಷ, ಅಸಹನೆ, ಅಸಹಿಷ್ಣುತೆಯಿಂದಾಗಿ ದೊರೆತದ್ದು.

ಇದನ್ನೂ ಓದಿ:  ಮಹಾರಾಷ್ಟ್ರದಲ್ಲಿ ಭವಿಷ್ಯ ಕಳೆದುಕೊಳ್ಳುತ್ತಿದೆ BJP: ಕೇಸರಿ ಪಕ್ಷದ ದೋಷಗಳು ಹೀಗಿವೆ!

ಬಿಜೆಪಿ ಮತ್ತೆ ಅಸ್ಸಾಂನಲ್ಲಿ ಗೆದ್ದರೆ, ಇದರರ್ಥ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರ ಪೌರತ್ವ (ತಿದ್ದುಪಡಿ) ಕಾಯ್ದೆಯ ಹೇರುವಿಕೆ ರಾಜ್ಯದಲ್ಲಿ ನೋವುಂಟು ಮಾಡಿಲ್ಲ ಎಂಬ ಸಂದೇಶವನ್ನು ಸಾರಿದೆ ಎಂದು ಬಿಜೆಪಿ ಸಮರ್ಥಿಸಿಕೊಳ್ಳಲು ಮುಂದಾಗುತ್ತದೆ.

ಆದರೆ ರಾಜ್ಯದಲ್ಲಿ ಬಿಜೆಪಿ ಸೋತರೆ, ಅದು ಪಕ್ಷದ ರಾಜಕೀಯದ ಸ್ಪಷ್ಟ ಮಿತಿಗಳನ್ನು ಮತ್ತು ಅದರ ನಿರಂತರ ಹುಚ್ಚಾಟದ ದಬ್ಬಾಳಿಕೆಯನ್ನು ಬಹಿರಂಗಪಡಿಸುತ್ತದೆ. ಆದ್ದರಿಂದ, ಅಸ್ಸಾಂ ಮೋದಿ-ಷಾ ಅವರ ರಾಜಕೀಯ ಮಾದರಿಯ ಯಶಸ್ಸನ್ನು ನಿರ್ಧರಿಸುವ ಸೂಕ್ಷ್ಮರೂಪವಾಗಿದೆ.

ಅಸ್ಸಾಂ ಮೇಲೆ ಬಿಜೆಪಿ ಹೇಗೆ ನಿಯಂತ್ರಣವನ್ನು ಸ್ಥಾಪಿಸಿತು?

ಅಸ್ಸಾಂ ಎಂದಿಗೂ ಬಿಜೆಪಿಯ ಸಾಂಪ್ರದಾಯಿಕ ನೆಲೆಯಾಗಿರಲಿಲ್ಲ. ಆದರೆ, ತಮ್ಮ ಸಂದೇಶವನ್ನು ಹರಡಲು ಮತ್ತು ಈಗಾಗಲೇ ರಾಜ್ಯದಲ್ಲಿ ಬೇರು ಬಿಟ್ಟಿದ್ದ ರಾಜಕೀಯ ಪಕ್ಷಗಳಿಂದ ನಾಯಕರನ್ನು ಸೆಳೆಯಲು ಬಿಜೆಪಿಯ ಸೈದ್ಧಾಂತಿಕ ಪೋಷಕರಾದ ಆರ್‌ಎಸ್‌ಎಸ್‌ ಮಾಡಿದ ಗ್ರೌಂಡ್-ಅಪ್ ವಿಧಾನವು ಕೇಸರಿ ಪಕ್ಷ ಅಸ್ಸಾಂನಲ್ಲಿ ನೆಲೆ ಕಾಣಲು ಸಾಧ್ಯವಾಯಿತು.

ಅಷ್ಟೇ ಮುಖ್ಯವಾಗಿ, ಪಕ್ಷದ ಬಂಡವಾಳವಾಗಿದ್ದ ಮೋದಿ ಬ್ರಾಂಡ್ ಕೂಡ ರಾಜ್ಯದಲ್ಲಿ ಕೆಲಸ ಮಾಡಿತು. ಆದರೆ, ‘ವಿದೇಶಿ’ಗನಂತಿದ್ದ ಗುಜರಾತ್ ಮುಖ್ಯಮಂತ್ರಿಗೆ ರಾಜ್ಯದೊಂದಿಗೆ ಯಾವುದೇ ಸಂಪರ್ಕವಿರಲಿಲ್ಲ.

ಕಳೆದ ದಶಕದವರೆಗೆ ಅಸ್ಸಾಂ ಮೂಲೆಗುಂಪಾದಂತೆ ಕಾಣುತ್ತಿತ್ತು. ಅದೃಷ್ಟಶಾಲಿ ರಾಜ್ಯಗಳಿಗೆ ಸಿಗುತ್ತಿದ್ದ ಸೌಕರ್ಯಗಳು ಈ ರಾಜ್ಯಕ್ಕಿರಲಿಲ್ಲ. ಹಾಗಾಗಿ ರಾಷ್ಟ್ರದ ಗಮನದ ಕೊರತೆ ಮತ್ತು ಸಮಸ್ಯೆಗಳು ದಂಗೆಯೊಂದಿಗೆ ರಾಷ್ಟ್ರೀಯ ಗಮನ ಸೆಳೆಯಲು ಬಯಸುತ್ತಿತ್ತು. ಈ ವೇಳೆಗೆ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಮೋದಿ-ಷಾ ಅಸ್ಸಾಂಅನ್ನು ದೂರದ ಮೂಲೆಯಂತೆ ನೋಡದೆ, ಹೆಚ್ಚು ಗಮನ ಹರಿಸಿದರು. ಬಿಜೆಪಿ ಸರ್ಕಾರ ತಮ್ಮ ಪ್ರಮುಖ ಯೋಜನೆಗಳ ಪ್ರಯೋಜನಗಳನ್ನು (ಉಜ್ವಲಾದಿಂದ ಗ್ರಾಮೀಣ ವಸತಿಗಳವರೆಗೆ) ಅಸ್ಸಾಂ ಜನರಿಗೆ ತಲುಪುವಂತೆ ನೋಡಿಕೊಂಡಿತು. ಅದೂ, ಉತ್ತರ ಪ್ರದೇಶ ಅಥವಾ ರಾಜಸ್ಥಾನದಲ್ಲಿ ತಲುಪುವಷ್ಟರ ಮಟ್ಟಿಗೆ. ಇದು ಜನರಲ್ಲಿ ಬಿಜೆಪಿಯ ಮೇಲೆ ಒಲವನ್ನು ತಂದುಕೊಟ್ಟಿತು.

ಇದನ್ನೂ ಓದಿ: BJPಯ ಮೇಲೆ RSS ಪಾತ್ರ ದುರ್ಬಲಗೊಂಡಿದೆಯೇ? ಪಕ್ಷದ ಪ್ರಮುಖ ಬದಲಾವಣೆಯಲ್ಲಿ ಸಂಘಕ್ಕಿಲ್ಲ ಪಾತ್ರ!

ಒಂದು ರೀತಿಯಲ್ಲಿ ಹೇಳುವುದಾದರೆ, ಇಷ್ಟು ರಾಜಕೀಯ ಬಂಡವಾಳವನ್ನು ರಾಜ್ಯಕ್ಕೆ ಹಾಕುವುದು ಮಾತ್ರವಲ್ಲದೆ, ಸ್ಥಳೀಯ ಅಸ್ಸಾಂಗಳು ವರ್ಸಸ್‌ ಹೊರಗಿನವರು ಎಂಬ ಒಡೆದು ಆಳುವ ನೀತಿಯನ್ನೂ ಬಿಜೆಪಿ-ಆಎಸ್‌ಎಸ್ ಅದೇ ಸಮಯದಲ್ಲಿ ಎಚ್ಚರಿಕೆಯಿಂದ ಎಣೆದವು. ಇದರ ಜೊತೆಗೆ ಹಿಂದೂ-ಮುಸ್ಲಿಂ ಅಥವಾ ‘ಇಂಡಿಯನ್ ವರ್ಸಸ್ ಹೊರಗಿನವರು’ ಎಂಬ ಬಿಜೆಪಿಯ ಹಳೇ ಮಾನದಂಡವು ಅಲ್ಲಿ ಮುನ್ನಲೆಗೆ ಬಂದಿತು. ಬಿಜೆಪಿಯ ಹಿಂದೂ-ಮುಸ್ಲಿಂ ರಾಜಕಾರಣವು ಅಸ್ಸಾಂನಲ್ಲಿ ಕೆಲಸ ಮಾಡಬಹುದೆಂದು ಎಂದಿಗೂ ಯೋಚಿಸಿರಲಿಲ್ಲ. ಆದರೆ, ಅದು ಅಲ್ಲಿ ಕೆಲಸ ಮಾಡಿತು.

ಇದೆಲ್ಲಕ್ಕೂ ನಾಯಕತ್ವ ನೀಡಲು, ರಾಜ್ಯದಲ್ಲಿದ್ದ ಪ್ರಮುಖ ನಾಯಕರನ್ನು ಬಿಜೆಪಿ ಸಳೆದುಕೊಂಡಿತು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್‌ನ ಮಾಜಿ ಅಧ್ಯಕ್ಷ ಮತ್ತು ‘ಜತಿಯಾ ನಾಯೋಕ್’ (ಜನಾಂಗದ ನಾಯಕ) ಸರ್ಬಾನಂದ ಸೋನೊವಾಲ್ ಅವರನ್ನು ಮತ್ತು ಹಿಮಂತ ಬಿಸ್ವಾ ಶರ್ಮಾ  ಅವರನ್ನು ಪಕ್ಷದ ಮುಖ್ಯ ಮುಖವಾಗಿ ಮಾಡಿತು. ಇದು ಬಿಜೆಪಿಗೆ ನೆಲೆ ಕಾಣುವಂತೆ ಮಾಡಿತು.

ಬಿಜೆಪಿಗೆ 2021ರ ಗೆಲುವು ಏಕೆ ಮಹತ್ವದ್ದಾಗಿದೆ?

2016 ರಲ್ಲಿ ಅಸ್ಸಾಂನಲ್ಲಿ ಜಯ ಮತ್ತು 2019 ರಲ್ಲಿ ದೃಢವಾದ ಸಾಧನೆಯೊಂದಿಗೆ, ಕಠಿಣ ಭೂಪ್ರದೇಶಗಳಲ್ಲಿ ವಿಜಯ ಸಾಧಿಸಲು ಅಗತ್ಯ ವಿಧಾನವನ್ನು ಸಿದ್ಧಪಡಿಸಬಹುದು ಎಂದು ಬಿಜೆಪಿ ತೋರಿಸಿದೆ.

ಅಸ್ಸಾಂನಲ್ಲಿ ಬಿಜೆಪಿ ಗೆದ್ದರೆ, ಅಸ್ಸಾಂ ನಂತರದ ಸಿಎಎ ಬಿಜೆಪಿಯ ರಾಜಕೀಯ ದಾಳವಾಗಿ ಮುಂದುವರೆಯಲಿದೆ. ಅಸ್ಸಾಂನಲ್ಲಿ ‘ಅಸ್ಸಾಮೀಸ್ ವರ್ಸಸ್ ಹೊರಗಿನರು’ ಎಂಬುದು ದಶಕಗಳ ಚರ್ಚೆಯಾಗಿದೆ.  ಹೊರಗಿನಿಂದ ಬಂದ ಹಿಂದೂಗಳಿಗೆ ಪೌರತ್ವವನ್ನು ನೀಡುವ ಕಾನೂನನ್ನು ಅಸ್ಸಾಂನಲ್ಲಿ ಹೇರಲಾಗುತ್ತಿದೆ. ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯ ವಿರುದ್ದ ಅಸ್ಸಾಮಿಯ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗಳ ಹೊರತಾಗಿಯೂ, ದೊಡ್ಡ ಜನಸಂಖ್ಯೆಯು ಬಿಜೆಪಿ ಮತ್ತು ಅದರ ನೀತಿಗಳನ್ನು ಬೆಂಬಲಿಸುತ್ತದೆ ಎಂದು ಬಿಜೆಪಿ ಭಾವಿಸಿದೆ. ಅದನ್ನು ಸಾಬೀತು ಮಾಡಲು 2021ರ ಚುನಾವಣೆ ಬಹುಮುಖ್ಯವಾಗಿದೆ.

ಬಿಜೆಪಿ ಅಸ್ಸಾಂ ಅನ್ನು ಕಳೆದುಕೊಂಡರೆ, ಇದರರ್ಥ ಮೋದಿ ಮತ್ತು ಷಾ ಅವರ ‘ಜನಾಂಗೀಯ, ಜನಾಂಗೀಯೇತರ’ ಒಡೆದು ಆಳುವ ನೀತಿಯಂತಹ  ಎಲ್ಲ ವಿಧಾನವು ಯಾವಾಗಲೂ ಕಾರ್ಯನಿರ್ವಹಿಸುವುದಿಲ್ಲ ಎಂದು ಅರಿತುಕೊಳ್ಳಬೇಕು.

2021ರ ಚುನಾವಣೆಯು ಅಸ್ಸಾಂನ ಇತರ ರಾಜಕೀಯ ಪಕ್ಷಗಳಿಗೂ ಅಷ್ಟೇ ನಿರ್ಣಾಯಕವಾಗಿದೆ. ಕಾಂಗ್ರೆಸ್‌ ಪಕ್ಷದ ನಾಯಕ ಮತ್ತು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ತರುಣ್ ಗೊಗೊಯ್ ಅವರ ನಿಧನದ ನಂತರ ಪಕ್ಷ ನಿರ್ಯವಾಗಿದೆ. ಎಜಿಪಿ, ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷಗಳಿಗೂ ಈ ಚುನಾವಣೆ ಉಳಿವಿನ ಪ್ರಶ್ನೆಯಾಗಿದೆ.

(ಅಭಿಪ್ರಾಯಗಳು ಲೇಖಕರವು)

ಕೃಪೆ: ದಿ ಪ್ರಿಂಟ್

ಲೇಖಕರು: ರೂಹಿ ತೆವಾರಿ

ಕನ್ನಡಕ್ಕೆ: ಸೋಮಶೇಖರ್ ಚಲ್ಯ


ಇದನ್ನೂ ಓದಿ: BJPಗೆ ಉತ್ತರದಲ್ಲಿ JDU, ದಕ್ಷಿಣದಲ್ಲಿ AIADMK ಖಡಕ್‌ ಎಚ್ಚರಿಕೆ ನೀಡಿವೆ: ಕಾರಣವೇನು ಗೊತ್ತಾ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights