ಸುಗಂಧಿ ಬೇರು-4: ಮಧುರಚೆನ್ನರ ನೆನಪುಗಳು: ‘ನೀನೊಲಿಯೆ ಕೊರಡು ಕೊನರುವುದೆಂದೆ’

ಆಧುನಿಕ ಕನ್ನಡ ನಾಡಿನ ಸಾಹಿತ್ಯ ಲೋಕದಲ್ಲಿ ಬಿಜಾಪುರ ಸೀಮೆಯ ‘ಹಲಸಂಗಿ’ ಎಂಬ ಊರಿಗೆ ಒಂದು ವಿಶಷ್ಟ ಸ್ಥಾನವಿದೆ. ಈ ಊರಿನೊಂದಿಗೆ ಸಹಜವಾಗಿಯೇ ನೆನಪಾಗುವವರು, ಆಧುನಿಕ ಕನ್ನಡ ಕಾವ್ಯಕ್ಕೆ ಅನುಭಾವದ ನೆಲೆಗಟ್ಟನ್ನು ತಂದುಕೊಟ್ಟ ಮಧುರಚೆನ್ನರು; ಇವರು ‘ಹಲಸಂಗಿಯ ಗೆಳೆಯ’ರ ನೇತಾರರು. ಈ ಗೆಳೆಯರಲ್ಲಿ ತಮ್ಮ ಸೃಜನಶೀಲತೆಯನ್ನು ಕಂಡುಕೊಂಡ ಚಡಚಣದ ಸಿಂಪಿ ಲಿಂಗಣ್ಣನವರು ಮಧುರಚೆನ್ನರನ್ನು (1903-1953) ಕುರಿತು ‘ಶ್ರೀ ಮಧುರಚೆನ್ನರ ಸ್ಮೃತಿಗಳು’ ಎಂಬ ಕೃತಿಯನ್ನು ಬರೆದಿದ್ದಾರೆ. ಇದು ಹಲಸಂಗಿ ಗೆಳೆಯರಿಂದ ಆರಂಭವಾದ ‘ಅರವಿಂದ ಗ್ರಂಥಮಾಲೆ’ಯಿಂದ 1961ರಲ್ಲಿ ಪ್ರಕಟವಾಗಿದೆ. ಇದೇ ಕೃತಿಯು ಚನ್ನಬಸವಣ್ಣನವರ ಲೋಹಿಯಾ ಪ್ರಕಾಶನದಿಂದ 2000ರಲ್ಲಿ ಪುನರ್ ಮುದ್ರಣಗೊಂಡಿದೆ.

ಸಿಂಪಿ ಲಿಂಗಣ್ಣನವರ ‘ಶ್ರೀ ಮಧುರಚೆನ್ನರ ಸ್ಮೃತಿಗಳು’ ಕೃತಿಯು ಹಲವು ಕಾರಣಗಳಿಂದ ಮುಖ್ಯವಾಗಿದೆ. ಇದು ಮಧುರಚೆನ್ನರ ಬಹುಮುಖಿ ವ್ಯಕ್ತಿತ್ವವನ್ನು ಅತ್ಯಂತ ಪ್ರಾಮಾಣಿಕವಾಗಿ ತೆರೆದಿಟ್ಟಿದೆ. ಇದರಲ್ಲಿ ಸಾಧಕನ ಜೀವನವನ್ನು ಅತಿಯಾಗಿ ವೈಭವೀಕರಿಸಲು ಹೋಗಿಲ್ಲ; ಲೇಖಕರು ತಮ್ಮ ಅನುಭವಕ್ಕೆ ದಕ್ಕಿದ ಮಧುರಚೆನ್ನರನ್ನು ಅತ್ಯಂತ ಸಹಜವಾಗಿಯೇ ಚಿತ್ರಿಸಿದ್ದಾರೆ. ಮಧುರಚೆನ್ನರ ದೈಹಿಕ ಪ್ರಕೃತಿ ತುಂಬ ನಾಜೂಕಾದದ್ದು; ನೋಡಲು ಬಡಕಲಾಗಿದ್ದ ಅವರ ದೇಹವು ತೀವ್ರ ಅನಾರೋಗ್ಯಪೀಡಿತವೂ ಆಗಿತ್ತು. ಆದರೆ ಅವರ ಮನೋಸ್ಥೈರ್ಯ ಅಗಾಧವಾಗಿತ್ತು. ಆ ಕಾಲದ ಮುಲ್ಕಿ ಪರೀಕ್ಷೆಯವರೆಗೆ ಓದಿದ ಮಧುರಚೆನ್ನರಿಗೆ ಅಧ್ಯಾತ್ಮ, ಸಾಹಿತ್ಯ, ಇತಿಹಾಸ, ಭಾಷಾಶಾಸ್ತ್ರ, ಸಮಾಜಶಾಸ್ತ್ರ ಮತ್ತು ಸಂಶೋಧನೆಯಲ್ಲಿ ಅಭಿರುಚಿಯಿತ್ತು. ಇಂಗ್ಲಿಷ್ ಮತ್ತು ಬಂಗಾಳಿ ಭಾಷೆಗಳನ್ನು ಕಲಿಯುತ್ತಾರೆ. ಅವರದ್ದು ಸ್ವಪ್ರಯತ್ನಶೀಲ ಮನಸ್ಸು; ಸ್ವಅಧ್ಯಯನವಂತು ಅವರ ವ್ಯಕ್ತಿತ್ವದ ಭಾಗವೇ ಆಗಿತ್ತು. ಪತ್ರ ವ್ಯವಹಾರದ ಮೂಲಕ ಆರ್. ನರಸಿಂಹಾಚಾರ್ಯರಿಂದಲೇ ಅವರ ಗ್ರಂಥಗಳನ್ನು ತರಿಸಿಕೊಂಡು ಕನ್ನಡ ಶಾಸನಗಳನ್ನು ಓದುವುದನ್ನು ಅಭ್ಯಾಸ ಮಾಡುತ್ತಾರೆ. ಅವರಿಗೆ ಬಾಲ್ಯದಿಂದಲೇ ಅಧ್ಯಾತ್ಮದ ಸೆಳೆತವಿತ್ತು. ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಠಾಗೋರ್, ಟಾಲ್‍ಸ್ಟಾಯ್, ಅರವಿಂದ, ಶ್ರೀಮಾತಾರವರ ಆಧ್ಯಾತ್ಮಿಕ ಚಿಂತನೆಗಳಿಂದ ಪ್ರಭಾವಿತರಾಗುತ್ತಾರೆ; ಅದರಲ್ಲೂ ಮುಖ್ಯವಾಗಿ ಅರವಿಂದರ ಪರಮ ಆರಾಧಕರಾಗುತ್ತಾರೆ.

ಜೀವನ ಚರಿತ್ರೆ ಮತ್ತು ಸಾಹಿತ್ಯ ಚರಿತ್ರೆಯನ್ನು ಬರೆಯುವವರಲ್ಲಿ ಅನೇಕ ಸಾಮ್ಯತೆಗಳಿವೆ; ಒಬ್ಬರು ವ್ಯಕ್ತಿಯ ಜೀವನದ ಸಾಧನೆಗಳನ್ನು ದಾಖಲಿಸುತ್ತಾರೆ; ಇನ್ನೊಬ್ಬರು ಭಾಷಿಕ ಸಾಹಿತ್ಯದ ಸಾಧನೆಗಳನ್ನು ಕಟ್ಟುತ್ತಾರೆ. ಆದರೆ ವ್ಯಕ್ತಿಯೊಬ್ಬನ ಜೀವನ ಕಥನವನ್ನು ಚರಿತ್ರೆಯನ್ನಾಗಿಯೇ ಓದಬೇಕಾಗಿಲ್ಲ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವವರು ಕವಿ, ಕೃತಿ, ಕಾಲ, ಧರ್ಮಗಳ ಮೂಲಕವೇ ಸಾಹಿತ್ಯವನ್ನು ಅವಲೋಕಿಸಿದ್ದಾರೆ. ಇದೇ ಮಾದರಿಯಲ್ಲಿ ಸಾಹಿತ್ಯ ಚರಿತ್ರೆಯನ್ನು ಕಟ್ಟಿದ್ದಾರೆ. ಈ ಮಾದರಿಯಲ್ಲಿ ಪ್ರಧಾನವಾಗಿ ಕಾರಣ ಮತ್ತು ಪರಿಣಾಮ ಮೀಮಾಂಸೆಯ ಹುಡುಕಾಟವಿರುತ್ತದೆ. ಆಶಯ ಪ್ರಧಾನವಲ್ಲದ ಈ ಮಾದರಿಯಲ್ಲಿ ಅನೇಕ ಸಾಂಸ್ಕೃತಿಕ ಅಂಶಗಳೇ ಕಣ್ಮರೆಯಾಗುತ್ತವೆ. ಆಧುನಿಕ ಕನ್ನಡ ಸಾಹಿತ್ಯವನ್ನು ರೂಪಿಸುವುದರಲ್ಲಿ ನಗರಗಳ ಪಾತ್ರವೇ ಮುಖ್ಯವಾಗಿದೆ. ನಗರ ಕೇಂದ್ರಿತ ನೆಲೆಯಿಂದ ಸಾಹಿತ್ಯ-ಸಂಸ್ಕೃತಿಯನ್ನು ಅವಲೋಕಿಸಿದರೆ ಬಹುಮುಖಿ ಆಯಾಮಗಳು ಗೋಚರಿಸುತ್ತವೆ. ಈ ಹಿನ್ನೆಲೆಯಲ್ಲಿ 20ನೇ ಶತಮಾನದ ಪೂರ್ವಾರ್ಧದಲ್ಲಿಯೇ ಕನ್ನಡ ಸಾಹಿತ್ಯವನ್ನು ರೂಪಿಸಿದ ನಾಲ್ಕು ಸಾಂಸ್ಕೃತಿಕ ಕೇಂದ್ರಗಳೆಂದರೆ-ಮಹಾರಾಜರ ಆಳ್ವಿಕೆಯ ಮೈಸೂರು (ಬಿ.ಎಂ.ಶ್ರೀ, ಡಿವಿಜಿ, ಮಾಸ್ತಿ, ಪುತಿನ, ಕುವೆಂಪು, ಕೆ.ಎಸ್.ನ.); ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು (ಗೋವಿಂದ ಪೈ, ಪಂಜೆ ಮಂಗೇಶರಾಯ, ಕಡೆಂಗೋಡ್ಲು ಶಂಕರಭಟ್ಟ); ತಿರುಳ್ಗನ್ನಡದ ಧಾರವಾಡ (ದ.ರಾ. ಬೇಂದ್ರೆ, ವಿ.ಕೃ. ಗೋಕಾಕ, ಆನಂದಕಂದ, ರಂ.ಶ್ರೀ. ಮುಗಳಿ) ಮತ್ತು ಆದಿಲ್‍ಶಾಹಿಗಳ ಆಳ್ವಿಕೆಯ ಹಲಸಂಗಿ ಎಂದು ಸ್ಥೂಲವಾಗಿ ಗುರುತಿಸಬಹುದು. ಆದರೆ ಇವುಗಳಲ್ಲಿ ಹಲಸಂಗಿಯು ನಗರವಲ್ಲ; ಈ ಹಳ್ಳಿಯಲ್ಲಿ ಯಾವ ಆಧುನಿಕ ಸೌಕರ್ಯಗಳೂ ಇರಲಿಲ್ಲ. ಆದರೂ ಈ ಊರಿಗೆ ಒಂದು ಸಾಂಸ್ಕೃತಿಕ ಮಹತ್ವವಿದೆ. ಇದು ಸಾಹಿತ್ಯ ಚರಿತ್ರೆಯಲ್ಲಿ ದಾಖಲಾತಿಗಷ್ಟೇ ಸೀಮಿತವಾಗುತ್ತದೆ; ಒಂದು ಅತ್ಯುತ್ತಮ ಜೀವನ ಕಥನವು, ವ್ಯಕ್ತಿಯ ವ್ಯಕ್ತಿತ್ವದ ಜೊತೆಯಲ್ಲಿಯೇ ಒಂದು ಊರಿನ ಸಾಂಸ್ಕೃತಿಕ ವಿವರಗಳನ್ನು ಮುನ್ನಲೆಗೆ ತಂದುಬಿಡುತ್ತದೆ. ಈ ಕೆಲಸವನ್ನು ಸಿಂಪಿ ಲಿಂಗಣ್ಣನವರ ಕೃತಿಯು ಸಮರ್ಥವಾಗಿ ನಿರ್ವಹಿಸಿದೆ.

ಸಿಂಪಿ ಲಿಂಗಣ್ಣನವರ ಕೃತಿಯು ಮಧುರಚೆನ್ನರ ಬದುಕಿನ ಬಹುಮುಖಗಳನ್ನು ದರ್ಶಿಸುವುದರ ಜೊತೆಯಲ್ಲಿಯೇ, ‘ಹಲಸಂಗಿ’ ಕನ್ನಡ ನಾಡಿನ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡ ಬಗೆಯನ್ನು ಬಿಚ್ಚಿಡುತ್ತದೆ. ಮನುಷ್ಯರ ಹಾಗೆಯೇ ಊರಿಗೂ ಒಂದು ವ್ಯಕ್ತಿತ್ವವಿರುತ್ತದೆ; ಆದರೆ ಒಂದು ಊರಿನ ಪರಿಸರವೇ ಜನರ ಪ್ರಜ್ಞೆಯನ್ನು ರೂಪಿಸುತ್ತದೆಯೋ ಅಥವಾ ಮನುಷ್ಯ ಪ್ರಜ್ಞೆಯೇ ಅಲ್ಲಿಯ ಪರಿಸರವನ್ನು ರೂಪಿಸುತ್ತದೆಯೋ ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟವೇ. ಆದರೆ ಮಧುರಚೆನ್ನರ ವಿಷಯದಲ್ಲಿ ಪ್ರಜ್ಞೆ, ಪರಿಸರ, ಕಾವ್ಯ, ಊರು, ಅಧ್ಯಾತ್ಮ, ಗೆಳೆತನ-ಎಲ್ಲವೂ ಅವರೊಳಗೆ ಏಕೀಭವಿಸಿವೆ. ಅವರ ಸಾಹಿತ್ಯ ಮತ್ತು ಅಧ್ಯಾತ್ಮಿಕ ಸಾಧನೆಗಳು ಬರಿ ವೈಯಕ್ತಿಕ ಸಾಧನೆಗಳಾಗಿ ಉಳಿದಿಲ್ಲ; ಅವರೊಂದಿಗೆ ಹಲಸಂಗಿಯ ತಮ್ಮ ಗೆಳೆಯರ ಸಾಧನೆಯು ತಳುಕು ಹಾಕಿಕೊಂಡಿದೆ. ಮಧುರಚೆನ್ನರ ನೇತೃತ್ವದಲ್ಲಿ ಸಿಂಪಿ ಲಿಂಗಣ್ಣ, ಕಾಪಸೆ ರೇವಪ್ಪ, ಪಿ. ಧೂಲಾಸಾಹೇಬ, ಮಾದಣ್ಣ ಓಲೆಕಾರ, ಚೆನ್ನಪ್ಪ ಸರಸಂಬಿ-ಮೊದಲಾದವರು 1922 ರಿಂದ ‘ಹಲಸಂಗಿ ಗೆಳೆಯ’ರೆಂದೇ ಚಿರಪರಿಚಿತರಾದವರು. ಇವರಲ್ಲಿ ಮಾದಣ್ಣ ಓಲೆಕಾರ ಲಾವಣಿ ಹಾಡುಗಾರರಾಗಿದ್ದರು; ಕಾಪಸೆ ರೇವಪ್ಪ ಚಿತ್ರಕಲಾವಿದರಾಗಿದ್ದರು; ಸಿಂಪಿ ಲಿಂಗಣ್ಣನವರು ಜಾನಪದೀಯ ಲೇಖಕರಾಗಿ ಬೆಳೆದರು.

ಪಾಶ್ಚಿಮಾತ್ಯ ಸಾಹಿತ್ಯದ ಕಡೆಗೆ ಮುಖ ಮಾಡಿದ್ದ ಹೊತ್ತಿನಲ್ಲಿ ನಮ್ಮ ಅನಾಮಿಕ ಜನಸಮುದಾಯಗಳಿಂದ ಮೌಖಿಕವಾಗಿ ರಚನೆಯಾಗಿದ್ದ ಸಾಹಿತ್ಯವು ತೀವ್ರ ಅನಾದರಕ್ಕೆ ಒಳಗಾಗಿತ್ತು. ನಮ್ಮ ಸಾಹಿತ್ಯವೆಲ್ಲವನ್ನು ಕೀಳರಿಮೆಯಿಂದ ನೋಡುತ್ತಿದ್ದ ಸಂದರ್ಭದಲ್ಲಿ ಮಧುರಚೆನ್ನರು ಸಂಪಾದಿಸಿದ ‘ಗರತಿಯ ಹಾಡುಗಳು’ ಮತ್ತು ಕಾಪಸೆ ರೇವಪ್ಪನವರು ಸಂಪಾದಿಸಿದ ‘ಮಲ್ಲಿಗೆಯ ದಂಡೆ’ ಪುಸ್ತಕಗಳು ಮೌಖಿಕ ಪರಂಪರೆಯ ಸಾಹಿತ್ಯವನ್ನು ಬೆರಗಿನಿಂದ ನೋಡುವಂತೆ ಮಾಡಿತು. ಜನಸಮುದಾಯಗಳ ಜೀವಾಳವಾದ ಜಾನಪದ ಹಾಡು, ತ್ರಿಪದಿ, ಲಾವಣಿಗಳ ಸಂಗ್ರಹ ಮತ್ತು ಪುಸ್ತಕ ಪ್ರಕಟನೆಯಿಂದ ಕನ್ನಡಲ್ಲಿ ‘ಜಾನಪದ ಅಧ್ಯಯನ’ದ ಹೊಸ ಕಾರ್ಯಕ್ಷೇತ್ರವೇ ಆರಂಭವಾಯಿತು; ನಾಟಕಗಳ ರಚನೆ, ಪ್ರದರ್ಶನ, ಕೈಬರಹ ಪತ್ರಿಕೆ, ಗ್ರಂಥಗಳ ಪ್ರಕಟನೆಯಲ್ಲಿ ‘ಹಲಸಂಗಿ ಗೆಳೆಯರು’ ಹೊಸ ಹೆಜ್ಜೆಗಳನ್ನು ಇಟ್ಟರು. ನಗರ ಇದ್ದುಕೊಂಡು ಸಾಹಿತ್ಯಕ ವಾತಾವರಣವನ್ನು ನಿರ್ಮಾಣ ಮಾಡಿದ್ದು ಒಂದು ಸಾಹಸವೇ ಆಗಿದೆ.

ಕನ್ನಡ ಸಾಹಿತ್ಯದ ಮೇಲೆ ಠಾಗೋರ್ ಮತ್ತು ಅರವಿಂದರ ಪ್ರಭಾವದ ನಂಟಿದೆ. ಮಧುರಚೆನ್ನರಂತೆಯೇ ಬೇಂದ್ರೆಯವರಿಗೂ ಅರವಿಂದ ಮತ್ತು ಠಾಗೋರರ ಬಗ್ಗೆ ತೀವ್ರವಾದ ಆಕರ್ಷಣೆಯಿತ್ತು. ಧಾರವಾಡದ ‘ಗೆಳೆಯರ ಬಳಗ’ದವರಲ್ಲಿ ಅನೇಕರು ಕೊಲ್ಕತ್ತಾದ ಶಾಂತಿನಿಕೇತಕ್ಕೆ ಭೇಟಿ ಕೊಟ್ಟವರಾಗಿದ್ದಾರೆ. ಕುವೆಂಪು ಅವರಿಗೆ ಠಾಗೋರ್ ಮತ್ತು ಅರವಿದರ ಬಗ್ಗೆ ಗೌರವವಿತ್ತು; ಆದರೆ ಅವರೇನು ಆರಾಧಕರಾಗಿರಲಿಲ್ಲ. ಶಿವರಾಮ ಕಾರಂತರಿಗೆ ಪರಮಹಂಸರ ಬಗ್ಗೆ ವಿಶೇಷ ಒಲವು ಇತ್ತು; ಅವರನ್ನು ಕುರಿತ ಒಂದು ಪುಸ್ತಕವನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದಾರೆ; ಆದರೆ ಅವರಿಗೆ ಅರವಿಂದರ ಬಗ್ಗೆ ವಿಚಿತ್ರವಾದ ನಿರಾಕರಣೆಯಿತ್ತು; ಅದಕ್ಕಾಗಿಯೋ ಏನೋ ಅವರು ಅರವಿಂದರನ್ನು ಕೇಂದ್ರವಾಗಿಟ್ಟುಕೊಂಡು ‘ಸಂನ್ಯಾಸಿಯ ಬದುಕು’ ಎಂಬ ಕಾದಂಬರಿಯನ್ನು ಬರೆದಂತೆ ತೋರುತ್ತದೆ. ಆದರೆ ಮಧುರಚೆನ್ನರಿಗೆ ಆಧ್ಯಾತ್ಮಿಕ ಅನುಭೂತಿಯ ಪರಮೋಚ್ಛ ಶಿಖರವೇ ಅರವಿಂದರಾಗಿದ್ದರು; ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನೇ ತನ್ನ ಆತ್ಮಸಂಗಾತನೆಂದು ಹಗಲಿರುಳು ಹಂಬಲಿಸಿದಂತೆ, ಮೀರಾಬಾಯಿ ತನ್ನ ಅಂತರಂಗದ ಸಖನಾದ ಕೃಷ್ಣನನ್ನು ಅನವರತ ಧ್ಯಾನಿಸಿದಂತೆ, ಮಧುರಚೆನ್ನರು ತಮ್ಮ ಬಾಳಿನುದ್ದಕ್ಕೂ ಅರವಿಂದರ ದರ್ಶನಕ್ಕಾಗಿ ಕನವರಿಸಿದವರೇ. ಆಂತರಿಕ ಮನೋವಿಕಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವ ಅರವಿಂದರ ದರ್ಶನಕ್ಕೆ ಮಾರುಹೋದರು; ಅರವಿಂದರನ್ನು ಆವಾಹನೆ ಮಾಡಿಕೊಳ್ಳುತ್ತಲೇ ಭಾರತೀಯ ವೈದಿಕ ಮತ್ತು ಉಪನಿಷತ್ ಪರಂಪರೆಯ ಆಧ್ಯಾತ್ಮಿಕ ಸಾಧಕರಾಗಿ ರೂಪಾಂತರ ಹೊಂದಿದರು.

ಮಧುರಚೆನ್ನರು ತಮ್ಮ ಕಾವ್ಯವದಲ್ಲಿ ಆಧ್ಯಾತ್ಮಿಕ ಅನುಭೂತಿಯು ಒಡಮೂಡುವುದಕ್ಕಾಗಿ ದೀರ್ಘವಾಗಿ ಕಾಯುವ ಕ್ಷಮತೆಯನ್ನು ಪಡೆದುಕೊಂಡರು. ಅವರ ಪಾಲಿಗೆ ಕಾವ್ಯವೆಂದರೆ ದೈವೀಶಕ್ತಿಯೇ ಆಗಿತ್ತು. ಕೋಳಿವಾಡದ ನಾರಣಪ್ಪ ‘ಗದುಗಿನ ವೀರನಾರಾಯಣನೇ ಕವಿ; ಲಿಪಿಕಾರ ಕುಮಾರವ್ಯಾಸ’ನೆಂದು ಹೇಳಿಕೊಂಡಿದ್ದಾನೆ; ಕುಮಾರವ್ಯಾಸನಂತೆಯೇ ಮಧುರಚೆನ್ನರಿಗೂ ಕೂಡ ದೈವಿಶಕ್ತಿಯು ಕಾವ್ಯವನ್ನು ಮುನ್ನಡೆಸುತ್ತದೆ ಎನ್ನುವ ಗಾಢವಾದ ನಂಬಿಕೆಯಿತ್ತು. ಅವರಿಗೆ ಪ್ರತಿಭೆ ಮತ್ತು ಕಾಯುವಿಕೆಯಲ್ಲಿ ಅಗಾಧವಾದ ನಂಬಿಕೆಯು ಇತ್ತೆಂಬುದಕ್ಕೆ ಅವರ ‘ನನ್ನ ನಲ್ಲ’ ಕವನದ ‘ಏನಮ್ಮ ಪ್ರತಿಭೆ ನೀನೀಸುದಿನವೆಲ್ಲಿದ್ದಿ| ಮತ್ತೆ ಹೇಗಿಲ್ಲಿ ಮರಳಿ ಬಂದೆ| ದಾನಮ್ಮ ನೀನೊಲಿಯೆ ಕೊರಡು ಕೊನರುವುದೆಂದೆ| ಬರಡು ಹಯನಾಗಲೂ ಬಲ್ಲುದೆಂದೆ|’ ಎನ್ನುವ ಮೊದಲ ಸಾಲುಗಳೇ ಸಾಕ್ಷಿಯಾಗಿವೆ. ಅವರ ಆತ್ಮಕತೆಗಳು ಅನುಭಾವಿಯೊಬ್ಬನ ಆತ್ಮವಿಕಾಸದ ಹಂತಗಳನ್ನು ವಿವರಿಸುತ್ತವೆ; ಮೊದಲ ಆತ್ಮಕತೆ ‘ಪೂರ್ವರಂಗ’ದ ಆರಂಭದಲ್ಲಿ ‘ಅಧ್ಯಾತ್ಮವೆ ನಿಶಿತ ಪ್ರಯೋಜನ ಎನಗೆ’ ಎಂದು ಹೇಳಿಕೊಂಡಿದ್ದಾರೆ; ರತ್ನಾಕರವರ್ಣಿ ಕವಿಯ ‘ಭರತೇಶ ವೈಭವ’ ಕಾವ್ಯದಲ್ಲಿ ಉಲ್ಲೇಖವಾಗುವ ಮಾತಿದು. ಈ ಮಾತು ಮಧುರಚೆನ್ನರ ಜೀವನದ ಮೂಲಮಂತ್ರವೇ ಆಗಿದೆ. ಅವರ ಇನ್ನೆರೆಡು ಆತ್ಮಕತೆಗಳಾದ ‘ಕಾಳರಾತ್ರಿ’ ಮತ್ತು ‘ಬೆಳಗು’-ಇವುಗಳಲ್ಲಿಯೂ ಮಧುರಚೆನ್ನರ ಅಧ್ಯಾತ್ಮದ ಅನುಭವನ್ನು ನೋಡಬಹುದಾಗಿದೆ.

ಮಧುರಚೆನ್ನರು ಯಾವ ಕೆಲಸವನ್ನು ಕೈಗೊಂಡರೂ ಅದಕ್ಕೆ ಅರವಿಂದರ ಛಾಯೆ ಇದ್ದೇ ಇರುತ್ತಿತ್ತು. ಇವರು ಆರಂಭಿಸಿದ ‘ಅರವಿಂದ ಗ್ರಂಥಮಾಲೆ’ (1933) ಎಂಬ ಪ್ರಕಾಶನದಲ್ಲಿಯೂ ಅರವಿಂದರ ಹೆಸರಿದೆ. ಈ ಗ್ರಂಥಮಾಲೆಯು ಅನುವಾದಗಳ ಮೂಲಕ ಅತ್ಯುತ್ತಮ ಪುಸ್ತಕಗಳನ್ನು ನೀಡಿದೆ. ಸ್ವತಃ ಮಧುರಚೆನ್ನರು ಅರವಿಂದರ ಮತ್ತು ಶ್ರೀಮಾತೆಯವರ ಹಲವು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ; ಠಾಗೋರರ ‘ವಿಸರ್ಜನ’ ನಾಟಕವನ್ನು ಅನುವಾದಿಸಿದ್ದಾರೆ. ಟಾಲ್‍ಸ್ಟಾಯ್‍ರವರ ಆತ್ಮಕತೆಯನ್ನು ಸಿಂಪಿ ಲಿಂಗಣ್ಣನವರೊಂದಿಗೆ ಕನ್ನಡಕ್ಕೆ ಭಾಷಾಂತರಿಸಿ ‘ಬಾಳಿನಲ್ಲಿ ಬೆಳಕು’ ಎಂದು ಪ್ರಕಟಿಸಿದ್ದಾರೆ. ಆ ಕಾಲದಲ್ಲಿ ಈ ಗ್ರಂಥಮಾಲೆಯ ಪುಸ್ತಕಗಳಿಗೆ ಸುಮಾರು ಆರು ನೂರು ಜನರು ಚಂದಾದಾರರಿದ್ದರು. ಈ ಪ್ರಕಾಶನ ಮಾಲೆಯು ಮುಂದೆ ‘ಅರವಿಂದ ಮಂಡಳ’ವಾಗಿ ಮಾರ್ಪಡುತ್ತದೆ. ಮಧುರಚೆನ್ನರ ಮರಣದ ನಂತರದಲ್ಲಿ ಸಿಂಪಿ ಲಿಂಗಣ್ಣನವರ ನೇತೃತ್ವದಲ್ಲಿ ಈ ಗ್ರಂಥಮಾಲೆಯಿಂದ ನೂರು ಪುಸ್ತಕಗಳು ಪ್ರಕಟವಾಗಿವೆ. ಆ ಕಾಲದಲ್ಲಿ ಪುಸ್ತಕದ ಓದು, ಬರಹ, ಮುದ್ರಣ, ಮಾರಾಟಗಳು-ಇವುಗಳೆಲ್ಲ ತೀರ ವಿರಳವಾಗಿದ್ದವು. ಆರ್ಥಿಕ ಮುಗ್ಗಟ್ಟಿನಿಂದ ಕೆಲವು ವರ್ಷಗಳ ಕಾಲ ಈ ಗ್ರಂಥಮಾಲೆ ನಿಂತು ಹೋಗಿತ್ತು. ಈ ಹಿನ್ನೆಲೆಯಲ್ಲಿ ಗ್ರಂಥಗಳ ಪ್ರಕಟನೆ ಮತ್ತು ಸಾಹಿತ್ಯವನ್ನು ಓದುವ ಸಂಸ್ಕೃತಿಯ ಪರಿಚಾರಿಕೆಯಲ್ಲಿ ಈ ಗ್ರಂಥಮಾಲೆಯ ಕೊಡುಗೆ ಗಮನಾರ್ಹವಾಗಿದೆ.

‘ಶ್ರೀ ಮಧುರಚೆನ್ನರ ಸ್ಮೃತಿಗಳು’ ಪುಸ್ತಕದ ನಿರೂಪಣೆಯ ಭಾಷೆಯು ಉತ್ತರ ಕರ್ನಾಟಕದ ನುಡಿಗಟ್ಟನ್ನು ಸ್ವಾರಸ್ಯಕರವಾಗಿ ಬಳಸಿಕೊಂಡಿದೆ. ಹರಟೆಯ ಅನೇಕ ಹಾಸ್ಯಮಯ ಪ್ರಸಂಗಗಳಿವೆ; ಮಧುರಚೆನ್ನರು ಯಾರಿಗೂ ನಿಲುಕದ ವ್ಯಕ್ತಿಯೇನಲ್ಲ; ಅವರು ಅಧ್ಯಾತ್ಮಿಕವಾಗಿ ದೊಡ್ಡ ಸಾಧಕರೇ ಹೌದು; ಅರವಿಂದರಂತೆ ಅವರು ಆಶ್ರಮದೊಳಗೆ ಬಂಧಿಯಾಗಲಿಲ್ಲ; ಅವರು ಎಂತಹ ಸ್ನೇಹಜೀವಿಯಾಗಿದ್ದರು ಎಂಬುದಕ್ಕೆ ಅವರು ಹುಟ್ಟುಹಾಕಿದ ‘ಗೆಳೆಯರ ಗುಂಪು’ ನಿದರ್ಶನವಾಗಿದೆ. ಅವರದ್ದು ಜನಮುಖಿಯಾಗಿ ಎಲ್ಲರನ್ನು ಒಳಗೊಳ್ಳುವ ಸ್ವಭಾವವೇ ಆಗಿತ್ತು. ಬೇಂದ್ರೆ ಮತ್ತು ಮಧುರಚೆನ್ನರ ಸಖ್ಯವು ಅತ್ಯಂತ ನಿಕಟವಾಗಿತ್ತು. ಅವರಿಗೆ ಬೇಂದ್ರೆ ಗುರು ಸಮಾನರಾಗಿದ್ದರು; ಮಧುರಚೆನ್ನರ ಎಲ್ಲ ಕೃತಿಗಳಿಗೆ ಬೇಂದ್ರೆಯವರ ಮುನ್ನುಡಿಗಳಿವೆ. ಅವರಂತೆಯೇ ಸಿಂಪಿ ಲಿಂಗಣ್ಣನವರು ಮಧುರಚೆನ್ನರನ್ನು ತಮ್ಮ ಆಪ್ತ ಗೆಳೆಯರನ್ನಾಗಿ ಮತ್ತು ಗುರು ಸಮಾನರನ್ನಾಗಿ ಸ್ವೀಕರಿಸಿದ್ದರು; ಸಿಂಪಿ ಲಿಂಗಣ್ಣನವರ ಬಹುತೇಕ ಕೃತಿಗಳಿಗೆ ಮಧುರಚೆನ್ನರ ಮುನ್ನುಡಿಗಳಿವೆ; ಇವುಗಳಿಗೂ ಸ್ನೇಹ ಮತ್ತು ಗೌರವದ ಸ್ಪರ್ಶವಿದೆ. ಈ ಮುನ್ನುಡಿಗಳು ಸಾಹಿತ್ಯವನ್ನು ಪ್ರೋತ್ಸಾಹಿಸುವ ಇರಾದೆಯನ್ನು ಹೊಂದಿದ್ದವು.

ಜೀವನ ಚರಿತ್ರೆಯನ್ನು ಬರೆಯುವುದು ತುಂಬ ಸವಾಲಿನ ಕೆಲಸವಾಗಿದೆ. ಕೇವಲ ವ್ಯಕ್ತಿಯೊಬ್ಬನ ಸಾಧನೆಗಳನ್ನೇ ದಾಖಲು ಮಾಡಿದರೆ ಚರಿತ್ರೆಯ ಶುಷ್ಕ ಪುಸ್ತಕವಾಗಿಬಿಡುವ ಅಪಾಯವೂ ಇರುತ್ತದೆ. ಒಂದು ವೇಳೆ ಲೇಖಕ ಆ ಸಾಧಕನ ಆಪ್ತ ಒಡನಾಡಿಯಾಗಿದ್ದರೆ ಅಥವಾ ಶಿಷ್ಯನಾಗಿದ್ದರೆ ಒಂದು ರೀತಿಯಲ್ಲಿ ಅಭಿಮಾನವಿರುತ್ತದೆ; ಅದರ ಜೊತೆಯಲ್ಲಿ ಗುರುಭಾವವೂ ಸೇರಿಕೊಂಡು ಆರಾಧನಾಭಾವವು ಬೆಳೆದಿರುತ್ತದೆ. ಸಿಂಪಿ ಲಿಂಗಣ್ಣನವರು ಮಧುರಚೆನ್ನರ ಬಾಲ್ಯದ ಒಡನಾಡಿಗಳು; ಅವರ ಸ್ನೇಹ ಸಂಬಂಧವು ನಾಲ್ಕು ದಶಕಗಳಿಗೂ ಮೀರಿದ್ದು. ಸಿಂಪಿ ಲಿಂಗಣ್ಣನವರು ಮಧುರಚೆನ್ನರ ಮರಣದ ನಂತರದಲ್ಲಿ ತಮ್ಮ ನೆನಪುಗಳನ್ನು ತೋಡಿಕೊಂಡಿದ್ದಾರೆ. ಆದರೂ ಅವರು ಮಧುರಚೆನ್ನರನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡವರಾಗಿರಲಿಲ್ಲ. ಅವರ ಬಗ್ಗೆ ಇಷ್ಟವಾಗದ ಸಂಗತಿಗಳನ್ನು ನೇರವಾಗಿ ಹೇಳಬಲ್ಲವರಾಗಿದ್ದರು; ಸಮಯ ಸಿಕ್ಕಾಗಲೆಲ್ಲ ಅವರ ಅತಿರೇಕಗಳನ್ನು ತಮಾಷೆ ಮಾಡುವಷ್ಟು ಸ್ವಾತಂತ್ರ್ಯವನ್ನೂ ಉಳಿಸಿಕೊಂಡಿದ್ದರು.

ಈ ಕೃತಿಯು ಪರೋಕ್ಷವಾಗಿ ಲಿಂಗಣ್ಣನವರ ಬದುಕಿನ ಕಷ್ಟಕಾರ್ಪಣ್ಯಗಳನ್ನು ಕೂಡ ಅನಾವರಣ ಮಾಡುತ್ತದೆ. ಸೀರೆಗಳಿಗೆ ಪ್ರಸಿದ್ಧಿಯಾದ ‘ಚಡಚಣ’ ಎಂಬ ಊರಿನವರಾದ ಸಿಂಪಿ ಲಿಂಗಣ್ಣನವರು ಸೀರೆಯ ನೂಲಿಗೆ ಬಣ್ಣ ಹಾಕುವ ಸಮುದಾಯದಿಂದ ಬಂದವರು. ಮಧುರಚೆನ್ನರಂತೆಯೇ ಮುಲ್ಕಿ ಪರೀಕ್ಷೆಯಲ್ಲಿ ಪಾಸಾದವರು; ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ತಮ್ಮ ಊರಿನಲ್ಲಿಯು ಗ್ರಂಥಾಲಯ ಆರಂಭಿಸಿ ಓದುವ ಸಂಸ್ಕೃತಿಯನ್ನು ಬೆಳೆಸಿದವರು.

  • ಸುಭಾಷ್ ರಾಜಮಾನೆ, ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ  ಕೆಲಸ ನಿರ್ವಹಿಸುತ್ತಿರುವ ಸುಭಾಷ್ ಅವರು ಮೂಲತಃ ಬೆಳಗಾವಿಯವರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಕನ್ನಡ ವಿಮರ್ಶೆಯಲ್ಲಿ ಜಾತಿ ಆಯಾಮಗಳ ಕುರಿತು ಅಧ್ಯಯನ ನಡೆಸಿ ಪಿಎಚ್.ಡಿ.ಪದವಿ ಗಳಿಸಿದ್ದಾರೆ. ಕನ್ನಡ ಇಂಗ್ಲಿಷ್‌, ಮರಾಠಿ, ಹಿಂದಿ ಭಾಷೆಗಳನ್ನು ಬಲ್ಲ ಸುಭಾಷ್ ಅವರು ಸಿನೆಮಾ ವಿಮರ್ಶೆಗಳನ್ನು ಬರೆದಿದ್ದಾರೆ. ಅನುವಾದದಲ್ಲಿ ವಿಶೇಷ ಆಸಕ್ತಿ ಹೊಂದಿರುವ  ಅವರು ದಿ ಆರ್ಟಿಸ್ಟ್‌ ಸಿನಿಮಾದ ಚಿತ್ರಕತೆಯನ್ನು,  ವಿಕ್ಟರ್‌ ಫ್ರಾಂಕ್‌ಲ್ ನ ಮ್ಯಾನ್ ಸರ್ಚ್ ಫಾರ್ ಮೀನಿಂಗ್ ಕೃತಿಯನ್ನು ’ಬದುಕಿನ ಅರ್ಥವನು ಹುಡುಕುತ್ತ..’ಶೀರ್ಷಿಕೆಯ ಅಡಿಯಲ್ಲಿ, ಗ್ರೀಕ್ ಪಿಲಾಸಫರ್ ಎಪಿಕ್ಟೆಟಸ್ ಬರಹಗಳನ್ನು ಮತ್ತು ತಿಚ್ ನ್ಹಾತ್ ಹಾನ್ ನ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಳೆಯ, ಅಪರೂಪದ ಪುಸ್ತಕಗಳನ್ನು ಸಂಗ್ರಹಿಸಿ ಅವುಗಳ ಸಾಂಸ್ಕೃತಿಕ ಮಹತ್ವಗಳನ್ನು ಚರ್ಚಿಸುವುದು ಕೂಡ ಸುಭಾಷ್ ಅವರ ನೆಚ್ಚಿನ ಹವ್ಯಾಸ.
  • ನಿಮ್ಮ ಪ್ರತಿಕ್ರಿಯೆಗಳನ್ನು [email protected][email protected]ಇಲ್ಲಿಗೆ ಬರೆಯಿರಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights