ಸುಳ್ವಾಡಿ ವಿಷ ಪ್ರಸಾದ ಪ್ರಕರಣಕ್ಕೆ ಒಂದು ವರ್ಷ : ವಿಷ ತಿಂದವರಷ್ಟು ಹಿಂಸೆ ವಿಷ ಕೊಟ್ಟವರಿಗಿಲ್ಲ!

ಕಳೆದೇ ವರ್ಷ 2018 ಇದೇ ಡಿಸೆಂಬರ್ ತಿಂಗಳು ದಿನಾಂಕ 14 ರಂದು ನಿಮ್ಮ ಏನ್ ಸುದ್ದಿ ವೆಬ್ ಮೂಲಕ ಸುಳ್ವಾಡಿ ಗ್ರಾಮದ ವಿಷ ಪ್ರಸಾದದ ಇಂಚಿಂಚು ಮಾಹಿತಿಯನ್ನ ನಿಮ್ಮಂದಿಡಲಾಗಿತ್ತು. ಇವತ್ತು ಈ ಪ್ರಕರಣ ನಡೆದು ಒಂದು ವರ್ಷ ಕಳೆದಿವೆ. ಆದರೆ ವಿಷ ತಿಂದವರಷ್ಟು ಹಿಂಸೆ ವಿಷ ಕೊಟ್ಟವರಿಗೆ ಯಾಕಿಲ್ಲ ಅಂತ ಜನ ಹಿಡಿ ಶಾಪ ಹಾಕ್ತಿದ್ದಾರೆ.

ಹೌದು.. ಯಾರೂ ಕೂಡ ಊಹಿಸಿಕೊಳ್ಳಲಾಗದಂತ ಕಲ್ಪನೆಗೂ ಮೀರಿದ ಪ್ರಕರಣ ಅಂದರೆ ಅದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಸೇವಿನೆ ದುರಂತ. ಕಾಡಂಚಿನಲ್ಲಿದ್ದ ದೇಗುಲವನ್ನು ತಮ್ಮ ಹಿಡಿತಕ್ಕೆ ತಂದುಕೊಳ್ಳಲು ಮಾಡಿದ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಸಾಲೂರು ಬೃಹನ್ಮಠದ ಕಿರಿಯ ಇಮ್ಮಡಿ ಮಹದೇವಸ್ವಾಮೀಜಿಯ ಕೃತ್ಯ. ಈ ರೀತಿ ಶಕ್ತಿ ದೇವತೆಯ ದೇವಾಲಯದ ಟ್ರಸ್ಟಿಗಳ ನಡುವಿನ ದ್ವೇಷಾಗ್ನಿಯ ಕಿಚ್ಚು ಈ ಮಟ್ಟಕ್ಕೆ ಹೊತ್ತಿ ಉರಿಯಬಹುದೆಂದು ಯಾರೂ ಊಹಿಸಿರಲಿಲ್ಲ.

ಈ ರೀತಿ ಧಾರ್ಮಿಕ ನಂಬಿಕೆ ಮೇಲೆ ವಿಷ ಹಾಕಿ ಅಮಾಯಕರನ್ನ ಬಲಿ ಪಡೆದ ಪಾಪಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ದೇವರ ಪ್ರಸಾದ ಎಂದು ಕಣ್ಣಿಗೆ ಒತ್ತಿಕೊಂಡು ತಿಂದ ಆಹಾರ ಬರೋಬ್ಬರಿ 17 ಜನರನ್ನ ಬಲಿಪಡೆದುಕೊಂಡಿತ್ತು. ಅದ್ಯಾವ ಪುಣ್ಯವೋ ಏನೋ ಇವರಲ್ಲಿ 129 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರಿಗೆ ತಾವು ಯಾಕಾಗಿ ಬದುಕಿದ್ದೇವೆ ಎನ್ನಿಸುವಷ್ಟು ಜೀವನ ಬೇಡವಾಗಿ ಹೋಗಿದೆ.   ಪ್ರಾಣ ಕಳೆದುಕೊಂಡವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಆದರೆ ಆರೋಪಿಗಳು ಅಪರಾಧಿಗಳು ಎಂದು ಸಾಭೀತಾಗಿಲ್ಲ. ಅವರಿಗೆ ಶಿಕ್ಷೆ ಆಗಿಲ್ಲ.

ಇದು ನಮ್ಮ ದೇಶದ ಕಾನೂನು ಸೂವ್ಯವಸ್ಥೆ. ನಮ್ಮ ಸಮಾಜದಲ್ಲಿ ಕಾನೂನಿನ ಬಗ್ಗೆ ಜನರಲ್ಲಿ ಅಸಡ್ಡೆ ಮೂಡಿರುವುದು ಇದೇ ಕಾರಣಕ್ಕೆ ಇರಬೇಕು. ಆರೋಪಿಗಳಿಗೆ ಶಿಕ್ಷೆ ಸಿಗುವುದಕ್ಕಿಂತ ಏನೂ ತಪ್ಪು ಮಾಡದ ಅಮಾಯಕರು ವಿಷ ಪ್ರಸಾದವನ್ನ ಸೇವಿಸಿ ಬದುಕಿ ನಾನಾ ರೋಗಗಳನ್ನ ಮೈಗಂಡಿಸಿಕೊಂಡು ಚಿಕಿತ್ಸೆಗಾಗಿ ಅಲೆದಾಡುತ್ತಿರುವುದು ಇದೆಂಥ ನ್ಯಾಯ. ವಿಷ ಪ್ರಸಾದ ಸೇವಿಸಿ ಸಾವಿಗೀಡಾದವರ ಮನೆಗೆ ಪರಿಹಾರ ಇರಲಿ. ಅಪ್ಪಿತಪ್ಪಿ ಆಕಡೆ ತಲೆ ಹಾಕಿ ಕೂಡ ಯಾವ ರಾಜಕಾರಣಿಗಳು ನೋಡಿಲ್ಲ. ತಿಂಗಳಿಗೊಂಡು ಸರ್ಕಾರ ಬಂದರೆ ಯಾರ್ ತಾನೇ ಬರುತ್ತಾರೆ. ಪರಿಹಾರ ಕೊಡ್ತೀವಿ ಅಂತ ಹೇಳುವಾಗ ಒಬ್ಬ ಸಿಎಂ. ಪರಿಹಾರಿ ಕೊಟ್ಟಿಲ್ಲ ಯಾಕೆ ಅಂದರೆ ಈಗಿರೋ ಸಿಎಂ ಬೇರೆ.

ವಿಷ ಪ್ರಸಾದ ಸೇವಿಸಿದ ಸುಳ್ವಾಡಿ ಗ್ರಾಮದ ಜನ ವಿವಿಧ ಖಾಯಿಲೆಗಳಿಗೆ ಒಳಗಾಗಿ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟವನ್ನ ಯಾರಿಗೇಳೋದು..? ಅಮಾಯಕರಿಗೆ ಯಾಕೆ ಇಂಥ ಕಷ್ಟಗಳು ಬರುತ್ತವೆ. ತಪ್ಪಿಲ್ಲದೇ ಮೈಗೆ ಸುತ್ತಿಕೊಳ್ಳುವ ಕಷ್ಟಗಳಿಂದು ಜನ ಹೊರಬರೋದು ಹೇಗೆ..? ಇದಕ್ಕೆ ಉತ್ತರ ಕಾನೂನು ಸೂವ್ಯವಸ್ಥೆಯಲ್ಲೇ ಸಿಗಬೇಕು. ಅಪರಾಧಿಗಳಿಗೆ ಶಿಕ್ಷೆ ಆಗದೇ ಹೋದರೇ ಸಮಾಜದಲ್ಲಿ ಕಾನೂನು ವ್ಯವಸ್ಥೆ ಮೇಲಿದ್ದ ನಂಬಿಕೆ ಕ್ಷಿಣಿಸುತ್ತಾ ಹೋಗಬಹುದು.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights