ಹಳ್ಳಿ ಮಾತು-12: ಶಾಲಾ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳ ವಲಸೆ – ತೀವ್ರಗೊಂಡ ಅಸಮಾನತೆ; ಇದು ಗ್ರಾಮೀಣ ಭಾರತದ ಕಥೆ-ವ್ಯಥೆ

ಜನಸಂಖ್ಯೆ ನಿಯಂತ್ರಣದ ಆರೋಗ್ಯ ಇಲಾಖೆ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆ ಮಾಡುತ್ತಿದೆ ಎಂದರೆ ಅಶ್ಚರ್ಯವಾಗಬಹುದು. ಭಾರತೀಯ ಕೈಗಾರಿಕೋದ್ಯಮಿ ಹಾಗೂ ವಾಣೀಜ್ಯೋದ್ಯಮಿಗಳ ಸಂಘಟನೆ (ಅಸೋಚಾಂ) ಅಧ್ಯಯನ ಪ್ರಕಾರ ಶಿಕ್ಷಣ ದುಬಾರಿಯಾಗಿರುವುದು ಜನಸಂಖ್ಯೆ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜಾಗತೀಕರಣ ಧೋರಣೆಗಳಿಂದ ಗ್ರಾಮೀಣ ಭಾರತದಲ್ಲಿ ತೀವ್ರ ಪಲ್ಲಟ, ತಲ್ಲಣ ಕಂಡಿರುವ ಕ್ಷೇತ್ರವೆಂದರೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವಲಯ.

ಜಾಗತೀಕರಣ ಕಾಲಕ್ಕಿಂತ ಹಿಂದೆ ಗ್ರಾಮದ ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದೇ ವಿಧ್ಯಾಭ್ಯಾಸ ಮುಂದುವರೆಸುತ್ತಿದ್ದರು. ಆದರೆ ಈ ಕಾಲಾವಧಿಯ ವಿದ್ಯಾರ್ಥಿ ವಯಸ್ಸಿನವರಲ್ಲಿ ಸುಮಾರು ಆರ್ಧದಷ್ಟೂ ಜನ ಸರ್ಕಾರಿ ಶಾಲೆಗಳ ಸಂಪರ್ಕ ಇಲ್ಲದೇ ತಮ್ಮ ಪ್ರೌಢ ಶಿಕ್ಷಣ ಮುಗಿಸುತ್ತಿದ್ದಾರೆ. ಕುಟುಂಬಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿ ಹೇಗೆ ಇರಲಿ, ಖಾಸಗಿ ಶಿಕ್ಷಣ ಹಾಗೂ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮಾತ್ರ ಬಲವಾಗಿ ಹಿಡಿದಪ್ಪಿಕೊಂಡಿದೆ.

ಮಹಾನಗರಗಳ ಹೋಟೆಲ್ ಗಳಲ್ಲಿ ಆದಾಯಕ್ಕೆ ಅನುಗುಣವಾದ ಹಲವು ಶ್ರೇಣಿ ಹೋಟೆಲ್ ಗಳಿರುವಂತೆ ಇಲ್ಲೂ ಕೂಡ ಹಲವು ಶ್ರೇಣಿ ಖಾಸಗಿ ಶಿಕ್ಷಣ ಗಳಿವೆ. ಇವೆಲ್ಲದರ ಮಧ್ಯೆ ಸರ್ಕಾರಿ ಶಾಲೆಗಳು ಯಾವುದೇ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲದೇ ಸೊರಗುತ್ತಿವೆ.

ಇಲ್ಲೊಂದು ಉದಾಹರಣೆ ನೋಡಿ; ಶ್ರೀರಂಗಪಟ್ಟಣ ತಾಲ್ಲೂಕಿನ ದೊಡ್ಡಪಾಳ್ಯದ ಸರ್ಕಾರಿ ಶಾಲೆ ಶಿಥಿಲವಾಗಿದೆ. ಆ ಕಟ್ಟಡ ಬಳಕೆಗೆ ಯೋಗ್ಯ ಅಲ್ಲ. ಯಾವ ಕ್ಷಣದಲ್ಲಿ ಬೇಕಾದರೂ ಕುಸಿಯಬಹುದು ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗಳು ವರದಿ ನೀಡಿದ್ದಾರೆ. ಈ ವರದಿ ಇಟ್ಟುಕೊಂಡು ಶಿಕ್ಷಣ ಇಲಾಖೆಯವರು ಕಟ್ಟಡ ನೆಲಸಮ ಮಾಡಿಕೊಡುವಂತೆ ದಾನಿಗಳನ್ನು ಹುಡುಕುತ್ತಿದ್ದಾರೆ. ಹೇಗೋ ದಾನಿಗಳನ್ನು ಹುಡುಕಿ ಕಟ್ಟಡ ಕೆಡವಬಹುದು. ಮತ್ತೆ ಶಾಲೆ ನಿರ್ಮಾಣಕ್ಕೆ ಏನು ಮಾಡುವುದು? ಶಾಸಕ-ಸಂಸದರ ಅನುದಾನದಿಂದ ಕಾಂಪೌಂಡ್ ಮಾತ್ರ ನಿರ್ಮಿಸಬಹುದು ಅಷ್ಟೇ.

BIAL transforms lives of govt school students- The New Indian Express

ಶಿಕ್ಷಣ ಪಡೆಯಲು ಎಲ್ಲವನ್ನೂ ಒದಗಿಸಿದ್ದೇವೆ ಎನ್ನುವ ಸರ್ಕಾರಗಳ ನಿಜ ಹೂರಣ ಇದು. ಜಿಲ್ಲೆಯ ಬಹುತೇಕ ಶಾಲಾ ಕಟ್ಟಡಗಳು ಮರ ಮತ್ತು ಹೆಂಚು ಬಳಸಿ ಸುಮಾರು 50 ವರ್ಷ ಹಿಂದೆ ನಿರ್ಮಿಸಿರುವಂತಹವು. ಕೆಲವಕ್ಕೆ ನೂರು ವರ್ಷಗಳೂ ಕೂಡ ಆಗಿದೆ. ಈ ಶಾಲೆಗಳ ಜಾಗ ಸಮುದಾಯ ಹಿತದ ಮನಸ್ಸಿನ ದಾನಿಗಳ ಕೊಡುಗೆ. ಈ ಎಲ್ಲಾ ಕಟ್ಟಡಗಳು ಹೊಸದಾಗಿ ನಿರ್ಮಿಸುವ ಅಥವಾ ಗಂಭೀರ ರಿಪೇರಿಗೆ ಒಳಗಾಗುವ ಸ್ಥಿತಿಯಲ್ಲೇ ಇವೆ. ಮೇಲಾಗಿ ಗೋವಿಂದೇಗೌಡರು ಶಿಕ್ಷಣ ಸಚಿವರಾಗಿದ್ದಾಗ ಮಾಡಿದ ಶಿಕ್ಷಕರ ನೇಮಕಾತಿಯೇ ಕೊನೆ. ಅಲ್ಲಿಂದ ನೇಮಕಾತಿ ಆ ಪ್ರಮಾಣದಲ್ಲಿ ಆಗಿಲ್ಲ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರದ್ದೇ ಪಾಠ-ಪ್ರವಚನ ಎಂಬಂತಾಗಿದೆ. ಇದು ಶಿಕ್ಷಣಕ್ಕೆ ನೀಡುತ್ತಿದ್ದ ಅನುದಾನ ತೀವ್ರಗತಿಯಲ್ಲಿ ಇಳಿಕೆಯಾಗಿರುವುದರ ಫಲಶೃತಿ.

ಯಾರಾದರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ, ಬಹುತೇಕರು “ನಿನ್ನ ಮಕ್ಕಳಿಗೆ ಏಕೆ ಇಂತಹ ಅನ್ಯಾಯ ಮಾಡುತ್ತಿದ್ದೀಯಾ” ಎಂದು ಮುಗಿಬೀಳುವುದು ಸರ್ವೆ ಸಾಮಾನ್ಯವಾಗಿದೆ. ಆದರೆ ಈಗ ಈ ಮಂಜಿನ ಪರದೆಗೆ ಗಂಭೀರ ಹಾನಿಯಾಗಿದೆ.

“ಎಲ್ ಕೆ ಜಿ ಯಿಂದ 12 ನೇ ತರಗತಿಯವರೆಗೆ ಕಾನ್ವೆಂಟ್ ಗಳಲ್ಲಿ ಇಂಗ್ಲಿಷ್ ಮಾಧ್ಯಮದ ವಿದ್ಯಾಭ್ಯಾಸ ಪಡೆದವರಲ್ಲಿ ಬಹುತೇಕರಿಗೆ ಇತ್ತ ಕನ್ನಡವೂ ಬರುವುದಿಲ್ಲ ಅತ್ತ ಇಂಗ್ಲಿಷೂ ತಿಳಿಯುವುದಿಲ್ಲ ಎಂಬಂತಿರುವುದು ಎಲ್ಲರ ಅನುಭವಕ್ಕೆ ಬರುತ್ತಿದೆ” ಎನ್ನುತ್ತಾರೆ ತೊರೆಶೆಟ್ಟಹಳ್ಳಿ ಗ್ರಾಮದ ಸುನೀಲ್ ಕುಮಾರ್ .

ಗ್ರಾಮಗಳಲ್ಲಿ ವಿವಿಧ ಸಾಮಾಜಿಕ-ಆರ್ಥಿಕ ಸಮೂಹಗಳಿರುವಂತೆ ಶಿಕ್ಷಣದಲ್ಲೂ ವಿವಿಧ ಸಾಮಾಜಿಕ -ಆರ್ಥಿಕ ವಿಭಾಗಗಳ ಕೊಳ್ಳುವ ಶಕ್ತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಗಳು ನೆಲೆ ಕಂಡುಕೊಂಡಿವೆ.

ಗ್ರಾಮದ ಜನಸಂಖ್ಯೆಯ ಅನುಪಾತಕ್ಕೆ ಹೋಲಿಸಿದರೆ ಸುಮಾರು ಎರಡು ಪಟ್ಟು ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಸರ್ಕಾರಿ ಶಾಲೆಗಳು ಈ ಶ್ರೇಣಿ ಶಿಕ್ಷಣದ ಕೆಳಗಿವೆ. ಆ ನಂತರದ ಅಷ್ಟೇನೂ ಸುರಕ್ಷಿತವಲ್ಲದ ಮೂರು ಚಕ್ರದ ಆಟೋಗಳನ್ನೇ ನಾಲ್ಕು ಚಕ್ರದ ವ್ಯಾನುಗಳಾಗಿ ಮಾರ್ಪಡಿಸಿರುವ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವ ಕಾನ್ವೆಂಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ಹಾಗೂ ದೈಹಿಕ ದುಡಿಮೆಗಾರ ಕುಟುಂಬಗಳನ್ನು ಆಕರ್ಷಿಸಿದರೆ, ವಾಣಿಜ್ಯ, ವ್ಯಾಪಾರ, ಸರ್ಕಾರಿ ಉದ್ಯೋಗ ಮುಂತಾದವುಗಳಿಂದ ಆದಾಯ ಹೊಂದಿರುವ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಾಂತರ ಬಂಡವಾಳ ಹೂಡಿ ಕಟ್ಟಿರುವ ನಗರದ ಹೊರ ವಲಯಗಳ ಗ್ರಾಮೀಣ ಪ್ರದೇಶಗಳಲ್ಲಿ ತಲೆ ಎತ್ತಿರುವ ಬೃಹತ್ ಕಟ್ಟಡ ಸೇರಿ ಮೊದಲಾದ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಇಂಟರ್ ನ್ಯಾಷನಲ್ ಶಾಲೆಗಳನ್ನು ಆಶ್ರಯಿಸಿವೆ. ಈ ಶಾಲೆಗಳು ಶ್ರೇಣಿ ಶಿಕ್ಷಣದ ತುದಿಯಲ್ಲಿದ್ದು ವಾರ್ಷಿಕ ಶಾಲಾ ಶುಲ್ಕ ಎಲ್ ಕೆ ಜಿ ಗೆ 50 ಸಾವಿರದಿಂದ ಎರಡು ಲಕ್ಷದ ತನಕ ಇದೆ. ಇಂತಹ ಶಾಲೆಗಳೇ ತೊರೆಶೆಟ್ಟಹಳ್ಳಿ ಸುತ್ತ ಮೂವತ್ತು ಕಿ.ಮೀ ಅಂತರದಲ್ಲಿ 4-5 ಇವೆ.

private school: ಈ ವರ್ಷ ಖಾಸಗಿ ಶಾಲೆಗಳು ಫೀಸ್‌ ...

ಶಾಲಾ ಶಿಕ್ಷಣಕ್ಕಾಗಿ ವಲಸೆ ಜಾಗತೀಕರಣ ಕಾಲದ ಒಂದು ಮುಖ್ಯ ವಿದ್ಯಮಾನವಾಗಿದೆ. ಗ್ರಾಮೀಣ ಕುಟುಂಬಗಳು ಹತ್ತಿರದ ಪಟ್ಟಣ-ನಗರಗಳಿಗೆ ಬಾಡಿಗೆ ಮನೆ ಹಿಡಿದು ಸ್ಥಳಾಂತರಗೊಳ್ಳುವುದು ಪ್ರತಿನಿತ್ಯ ಅಲ್ಲಿಂದ ಬಂದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಒಂದು ರೀತಿಯದ್ದಾದರೆ, ದುಬಾರಿ ಶುಲ್ಕ ಭರಿಸಿಯೂ ತಮ್ಮ ಮಕ್ಕಳ ವಿಧ್ಯಾಭ್ಯಾಸದಲ್ಲಿ ಮುನ್ನಡೆ ಕಾಣದೇ ಒಂದೇ ವರ್ಷದಲ್ಲಿ ಮೂರು ಶಾಲೆಗಳನ್ನು ಬದಲಾಯಿಸಿರುವುದೂ ಇದೆ. ಶಾಲೆಯಿಂದ ಶಾಲೆಗೆ ವಲಸೆ, ಪ್ರದೇಶದಿಂದ ಪ್ರದೇಶಕ್ಕೆ ವಲಸೆ ಪ್ರವೃತ್ತಿ ಗಣನೀಯ ಪ್ರಮಾಣದಲ್ಲಿ ಇದೆ.

ಗ್ರಾಮೀಣ ಪ್ರದೇಶದಲ್ಲಿ ನೆಲೆಗೊಂಡಿರುವ ಇಂತಹ ಖಾಸಗಿ ಶಾಲೆಯಲ್ಲಿ ಓದುತ್ತಿರುವ ಟಿ.ವೈ ಯುಗಾಂತರಿ “ಪ್ರತಿವರ್ಷ ನನ್ನ ಸಹಪಾಠಿಗಳಲ್ಲಿ ಮೂರು-ನಾಲ್ಕು ಜನ ಶಾಲೆ ಬದಲಾಯಿಸುತ್ತಾರೆ. ಮ್ಯಾನೆಜ್‌ಮೆಂಟ್‌ ನಲ್ಲಾದ ಬದಲಾವಣೆಯಿಂದ ಈ ವರ್ಷ ಬಹುತೇಕ ನನ್ನ ಸಹಪಾಠಿಗಳು ಸಾಮೂಹಿಕ ವಲಸೆಗೆ ಸಜ್ಜಾಗುತ್ತಿದ್ದಾರೆ” ಎನ್ನುತ್ತಾಳೆ. ಕಿರಿಯ ಪ್ರಾಥಮಿಕ ಶಾಲೆಯ ಹಂತ ದಾಟುವಷ್ಟರಲ್ಲಿ ಸರಾಸರಿ ಶೇಕಡಾ 30 ರಷ್ಟು ವಿದ್ಯಾರ್ಥಿಗಳು ಶಾಲೆಯಿಂದ ಶಾಲೆಗೆ ವಲಸೆ ಹೋಗುತ್ತಿರುವುದು ಈ ವಿದ್ಯಾರ್ಥಿನಿಯ ಅನುಭವವಾಗಿದೆ.

ಮತ್ತೊಂದು ವಿದ್ಯಮಾನವಿದೆ. ಖಾಸಗಿ ಶಾಲೆಗಳ ಶೇಕಡಾ 100. ರಷ್ಟು ಎಸ್ ಎಸ್ ಎಲ್ ಸಿ ಪಾಸ್ ಫಲಿತಾಂಶಕ್ಕೆ ತೊಡಕಾಗಬಹುದಾದವರನ್ನು 9 ನೇ ತರಗತಿಯಲ್ಲೇ ಬಲವಂತವಾಗಿ ಹೊರಗೆ ಕಳುಹಿಸುವ ಪದ್ದತಿಯೂ ಕೂಡ ಇದೆ. ವಿದ್ಯಾರ್ಥಿಗಳ ವಲಸೆಗೆ ಈ ಸಂಖ್ಯೆಯನ್ನು ಸೇರಿಸಿಕೊಂಡರೆ ವಲಸೆ ಪ್ರಮಾಣ ಏನಿಲ್ಲವೆಂದರೂ ಶೇಕಡಾ 40 ರಷ್ಟಾಗುತ್ತದೆ.

ಕೃಷಿ ಬಿಕ್ಕಟ್ಟಿನಿಂದ ಬಸವಳಿದಿರುವ ಗ್ರಾಮೀಣ ಕುಟುಂಬಗಳು, ಉನ್ನತ ಶಿಕ್ಷಣ ಪಡೆದು ಹೆಚ್ಚು ಗಳಿಕೆಯ ಹಣ ಸಂಪಾದಿಸುವಂತಾದರೆ ನಮ್ಮೆಲ್ಲಾ ಕಷ್ಟಗಳು ದೂರವಾಗುತ್ತವೆ ಎಂದು ತಿಳಿಯುತ್ತಿವೆ. ಶಿಕ್ಷಣ ಪಡೆದು ವಾರ್ಷಿಕ ಐದು ಲಕ್ಷಕ್ಕಿಂತ ಹೆಚ್ಚು ಸಂಪಾದಿಸುತ್ತಿರುವ ಉದಾಹರಣೆಗಳಿಗೆ ಇವರು ಆಕರ್ಷಿತರಾಗಿದ್ದಾರೆ.” ಕೃಷಿ ಜೂಜಾಟದಿಂದ ಬಚಾವಾಗಲೂ ಶಿಕ್ಷಣ ಜೂಜಾಟಕ್ಕೆ ಧುಮುಕಿದ್ದಾರೆ.ಇದು ಕೃಷಿ ಬಿಕ್ಕಟ್ಟಿನಿಂದ ಜಿಗಿದು ಪಾರಾಗುವ ಯತ್ನ” ಎನ್ನುತ್ತಾರೆ ರೈತ ಮುಖಂಡ ಸೊಳ್ಳೇಪುರ ಗ್ರಾಮದ ಎಸ್ ವಿಶ್ವನಾಥ್.

ಸರ್ಕಾರಿ ಶಾಲೆಗಳ ಕುರಿತ ಸರ್ಕಾರದ ಅನಾದರಕ್ಕೆ ಶಿಕ್ಷಣ ಹಕ್ಕು ಕಾಯ್ದೆಯನ್ನು ಜನ ವಿರೋಧಿಯಾಗಿ ಜಾರಿ ಮಾಡುತ್ತಿರುವುದು ಒಂದು ಪ್ರಮುಖ ಸಾಕ್ಷಿ. ಶಾಲಾ ಶಿಕ್ಷಣ ಶ್ರೇಣೀಕರಣದ‌ ಏಣಿಯಲ್ಲಿ ಎಲ್ಲಕ್ಕಿಂತ ಮೇಲಿರುವ ಶಿಕ್ಷಣ ಸಂಸ್ಥೆಗಳು ಇಂತಹ ವಿದ್ಯಾರ್ಥಿಗಳನ್ನು ಇನ್ನಿಲ್ಲದ ಕಿರುಕುಳ, ಅಪಮಾನ, ತಾರತಮ್ಯಕ್ಕೆ ಗುರಿ ಮಾಡುತ್ತಿದ್ದರೆ, ಸರ್ಕಾರಿ ಶಾಲೆಗಳಷ್ಟೇ ಮೂಲಭೂತ ಸೌಕರ್ಯ ಇರುವ ಕಾನ್ವೆಂಟ್ ಗಳು ಶಿಕ್ಷಣ ಹಕ್ಕು ಕಾಯ್ದೆ ಅಡಿ ಬರುವ ವಿದ್ಯಾರ್ಥಿಗಳಿಗಾಗಿ ಕಾತರಿಸುತ್ತಿವೆ.

ಅತ್ಯುತ್ತಮ ಫಲಿತಾಂಶ ಹಾಗೂ ಅತ್ಯುತ್ತಮ ಶ್ರೇಣಿಗಳಲ್ಲಿ ತೇರ್ಗಡೆಯಾಗುವಂತೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವುದು ಇಂತಹ ಶಿಕ್ಷಣ ಸಂಸ್ಥೆಗಳ ಒಂದು ಖಾಯಂ ಲಕ್ಷಣವಾಗಿದೆ. ಇದಕ್ಕಾಗಿ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಲ್ಲೇ ಹೋಲಿಕೆ ಮಾಡಿ ಪರಸ್ಪರ ಅಸೂಯೆಭರಿತ ಪೈಪೋಟಿ ಹುಟ್ಟುಹಾಕಲಾಗುತ್ತದೆ. ಇಂತಹ ಪ್ರಕ್ರಿಯೆಗಳ ದೆಸೆಯಿಂದ ಅಸಹನೆ ಮತ್ತು ಅತೃಪ್ತಿಗಳಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ನರಳುವಂತಾಗಿದೆ.

ಇಂತಹ ವಿಕೃತ ಮೌಲ್ಯಗಳಿಂದಾಗಿಯೇ ಎರಡನೇ ರ್ಯಾಂಕ್ ಗಳಿಸಿದವರೂ ಖಿನ್ನತೆಯಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ಸೃಷ್ಟಿಯಾಗಿವೆ. ಹೆಚ್ಚು ಅಂಕ ಗಳಿಸಬಲ್ಲ ವಿದ್ಯಾರ್ಥಿಗಳಿಗೆ ಒತ್ತು ನೀಡುವುದು ಮತ್ತು ಆ ವಿದ್ಯಾರ್ಥಿಗೆ ಪಬ್ಲಿಕ್ ಪರೀಕ್ಷಾ ಸಮಯದಲ್ಲಿ ಅಗತ್ಯ ನೆರವಿಗೆ ಧಾವಿಸಲು ಒಂದು ತಂಡವನ್ನೇ ಕಾರ್ಯಾಚರಣೆಗೆ ಬಿಡುವುದು ಸಹ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾರ್ಕೆಟ್ ಕಾರ್ಯಚರಣೆಯಲ್ಲಿ ಇರುವ ಒಂದು ಕಾರ್ಯತಂತ್ರವಾಗಿದೆ.

ಜಾಗತೀಕರಣ ಕಾಲಾವಧಿಯ ಮೌಲ್ಯಗಳು ಜನರಲ್ಲಿನ ‘ಅಂತಸ್ತು ಪ್ರಜ್ಞೆ’ಯನ್ನು ಉದ್ದೀಪಿಸುತ್ತಿದ್ದು ಸಾಮಾಜಿಕವಾಗಿ ಕೆಳಗಿರುವ ಮಕ್ಕಳ ಜೊತೆ ಬೆರೆಯದಂತೆ ತಡೆಯುವ ಒಂದು ‘ಜಾಣತನವೂ’ ಸಹ ಖಾಸಗಿ ಶಿಕ್ಷಣದ ಮೋಹಕ್ಕೆ ಕಾರಣವಾಗಿದೆ.

“ಖಾಸಗಿ ಶಿಕ್ಷಣ ಸಂಸ್ಥೆಗಳ ಮೋಹ ಮತ್ತು ಭ್ರಮೆಯ ಬಲೆಗೆ ಪೋಷಕರು ಸಿಲುಕಿ ಒದ್ದಾಡುತ್ತಿರುವುದು ಒಂದೆಡೆಯಾದರೆ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಲ್ಲಿ ಮಕ್ಕಳ ಕೊರತೆಯಿಂದ ಶಿಕ್ಷಕರು ಪರದಾಡುವುದು ಮತ್ತೊಂದೆಡೆ ಕಾಣುವ ದೃಶ್ಯವಾಗಿದೆ” ಎನ್ನುತ್ತಾರೆ ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸುತ್ತಿರುವ ಮಾದಹಳ್ಳಿ ಗ್ರಾಮದ ಶಿವಕುಮಾರ್.

ಶಿವಕುಮಾರ್ ರವರ ಮಾತನ್ನು ಇನ್ನೊಂದು ರೀತಿಯಲ್ಲಿ ಸಮರ್ಥಿಸುವ ಕವಿ ಹಾಗೂ ಉಪನ್ಯಾಸಕ ಕೆಪಿ ಮೃತ್ಯುಂಜಯ ರವರು “ಈಗ ಇರುವ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆ ಎಂದು ಬೋರ್ಡ್ ನೇತಾಕಿ ಎಲ್ ಕೆ ಜಿ -ಯುಕೆಜಿ ಪ್ರಾರಂಬಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ಭೋಧಿಸುವುದು ಸಾಮಾಜಿಕ-ಆರ್ಥಿಕ ವಾಗಿ ತುಂಬಾ ದುರ್ಬಲ ಕುಟುಂಬಗಳನ್ನು ಶಿಕ್ಷಣದಿಂದ ಹೊರ ಹಾಕುವ ಹುನ್ನಾರ” ಎಂದು ಅಭಿಪ್ರಾಯ ಪಡುತ್ತಾರೆ.

Reader's Take: 'Private schools should make spends public ...

ತುಂಬಾ ದುಬಾರಿ ಶುಲ್ಕ, ಡೊನೇಷನ್ ಕೊಟ್ಟರೂ ಸಂತೋಷದಿಂದ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮಕ್ಕಳನ್ನು ಕರೆದೊಯ್ಯುವ ಶಾಲಾ ವಾಹನಗಳ ರೂಟ್ ಮ್ಯಾಪ್ ನಲ್ಲಿ ಬರುವ ಮೊದಲ ಪಾಯಿಂಟ್ ನ ವಿದ್ಯಾರ್ಥಿ ಶಾಲೆ ತಲುಪಲು ಎರಡು ಗಂಟೆಯಷ್ಟು ದೀರ್ಘ ಕಾಲ ವಾಹನದಲ್ಲೇ ಇರಬೇಕು. ಕೆಲವು ಶಾಲಾ ವಾಹನಗಳು ಶಾಲೆಗೆ ಕರೆದೊಯ್ಯಲು 30 ಕಿ.ಮೀ ಕೂಡ ಚಲಿಸುತ್ತವೆ. ಶಾಲೆಯಿಂದ ಬರಬೇಕಾದರೆ ಮತ್ತೆ ಎರಡು ಗಂಟೆ ವಾಹನದಲ್ಲಿ ಪ್ರಯಾಣಿಸಬೇಕು.

ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದರೆ ಮಕ್ಕಳ ಹಕ್ಕುಗಳ ಉಲ್ಲಂಘನೆಯ ತಾಣಗಳು. ಶುಲ್ಕ ವಸೂಲಿಗೆ ಮಕ್ಕಳನ್ನೇ ಬೆದರಿಸುವುದು ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ಯೂನಿಪಾರಂ, ಶೂ, ಪುಸ್ತಕ ಮುಂತಾದ ಸಾಮಾಗ್ರಿಗಳ ಮಾರಾಟ ಕೇಂದ್ರಗಳಾಗಿವೆ ಈ ಶಾಲೆಗಳು. ಅಲ್ಲದೆ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಶಾಲೆಯ ಹೊರಗಿನ  ಟ್ಯೂಷನ್ ಅನ್ನೂ ಅವಲಂಬಿಸುವಂತಾಗಿದೆ.

ಗ್ರಾಮಕ್ಕೊಂದು ಸಮುದಾಯ ಶಾಲೆಯನ್ನು ಪಲ್ಲಟಗೊಳಿಸಿ ಶಾಲಾ ಶಿಕ್ಷಣಕ್ಕಾಗಿ ವಿವಿಧ ರೀತಿಯ ವಿದ್ಯಾರ್ಥಿ ವಲಸೆಗೆ ಕಾರಣವಾಗಿರುವ ಜಾಗತೀಕರಣ ಧೋರಣೆಗಳು, ಖಾಸಗಿ ಆಡಳಿತ ಮಂಡಳಿಗಳು ಹಾಗೂ ಶಿಕ್ಷಣಾಧಿಕಾರಿಗಳ ಅಕ್ರಮ ಕೂಟದ ಸೃಷ್ಟಿಗೆ ಕಾರಣವಾಗಿರುವುದಷ್ಟೇ ಅಲ್ಲದೇ ಸ್ಮಾರ್ಟ್ ತರಗತಿ ಹಾಗೂ ಆನ್ ಲೈನ್ ತರಗತಿಗಳ ಹೆಸರಿನಲ್ಲಿ ಅತಿದೊಡ್ಡ ಕಂದಕವನ್ನೇ ನಿರ್ಮಿಸಿವೆ. ಹೀಗೆ ಗ್ರಾಮೀಣ ಭಾರತವನ್ನು ಕೀಳಿರಿಮೆಯ ತಾಣವಾಗಿಸಿವೆ.

(ಎಲ್ಲ ಅಭಿಪ್ರಾಯಗಳು ಲೇಖಕರದ್ದೆ)

  • ಟಿ ಯಶವಂತ, ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿಯಲ್ಲಿ ವಾಸವಾಗಿರುವ ಯಶವಂತ್‌, ಹೊಸ ತಲೆಮಾರಿನ ಸಾಮಾಜಿಕ ಕಾರ್ಯಕರ್ತರ ಪೈಕಿ ಮುಂಚೂಣಿಯಲ್ಲಿರುವ ಗುಂಪಿನಲ್ಲಿ ಅಷ್ಟು ಸದ್ದು ಮಾಡದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸಕ್ರಿಯವಾಗಿರುವ ಅವರು ಈ ಸದ್ಯ ಪ್ರಾಂತ ರೈತ ಸಂಘದ ಸಂಘಟಕರು. ಬೇರು ಮಟ್ಟದ ಬೆಳವಣಿಗೆಗಳನ್ನು ಜಾಗತಿಕ ರಾಜಕೀಯಾರ್ಥಿಕತೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಯಶವಂತ್‌ ತುಂಬಾ ಗಂಭೀರವಾಗಿ ಬರೆದುಬಿಡುತ್ತಾರೆ ಎಂಬ ಆತಂಕವನ್ನು ಹೋಗಲಾಡಿಸುವಂತೆ ಈ ಸರಣಿ ಬರೆಯುತ್ತಿದ್ದಾರೆ.
  • ನಿಮ್ಮ ಪ್ರತಿಕ್ರಿಯೆಗಳನ್ನು ಈ ಈಮೇಲ್ ಐಡಿಗಳಿಗೆ [email protected],  [email protected] ಕಳುಹಿಸಿ ಅಥವಾ 9448572764 ವಾಟ್ಸ್ ಆಪ್ ನಂಬರ್ ಗೆ ಕಳುಹಿಸಿ.

ಇದನ್ನೂ ಓದಿ: ಹಳ್ಳಿ ಮಾತು-11:ಜಾಗತೀಕರಣದ ಅಭಿವೃದ್ಧಿಯೆಂದರೆ ಎಲ್ಲಾ ಮಾಯ ಇಲ್ಲಿ ಕೆರೆಗಳು ಮಾಯಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights