ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ : ಕುಳಿತುಕೊಳ್ಳಲು ಜಾಗವಿಲ್ಲದೆ ರಾತ್ರಿಯಿಡೀ ಒದ್ದಾಡಿದ ಜನ

ಬೆಂದಕಾಳೂರಿನ ಹುಳಿಮಾವು ಕೆರೆ ಒಡೆದು ಜನ ಬೀದಿ ಪಾಲಾದ ಘಟನೆ ತಡರಾತ್ರಿ ನಡೆದಿದೆ.

ಹೌದು..  ಸಿಲಿಕಾನ್ ಸಿಟಿ ಹೊರ ವಲಯದ ಹುಳಿಮಾವು ಕೆರೆ ಒಡೆದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಹುಳಿಮಾವು ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದೆ. ಸ್ಥಳಿಯರು ಆತಂಕದಲ್ಲಿದ್ದರೆ, ರಾತ್ರಿ ಒಡ್ಡು ಹಾಕಿ ಹೋಗಿದ್ದ ಬಿಬಿಎಂಪಿ, ಬಿಡಿಎ ಅಧಿಕಾರಿಗಳು ಇನ್ನೂ ಇತ್ತ ಬಂದಿಲ್ಲ.

ಹುಳಿಮಾವು ಕೆರೆ ಸುತ್ತಮುತ್ತಲ ಶಾಂತಿನಿಕೇತನ, ಕೃಷ್ಣನಗರ ಸೇರಿ ಆರಕ್ಕೂ ಹೆಚ್ಚು ಬಡಾವಣೆಗಳು ನಮ್ಮನಾಳುವ ಮಂದಿ ಸೃಷ್ಟಿಸಿದ ಕೃತಕ ಪ್ರವಾಹದಲ್ಲಿ ಸಿಲುಕಿವೆ. ಈ ಮಧ್ಯೆ ನೀರಿನಲ್ಲಿ ಬಂದ ಹಾವುಗಳ ಕಾಟವೂ ಹೆಚ್ಚಾಗಿದ್ದು, ಜನರು ಆತಂಕದಲ್ಲಿದ್ದಾರೆ. ಸರಿಸುಮಾರು 3 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ, ಸೊಂಟ ಮಟ್ಟಕ್ಕೆ ನೀರು ಆವರಿಸಿದೆ. ಅಪಾರ್ಟ್ ಮೆಂಟ್‍ಗಳು, ಅಂಗಡಿಗಳು ಸಂಪೂರ್ಣ ಜಲಾವೃತವಾಗಿವೆ. ಕಾರು, ಬೈಕ್ ಹೀಗೆ ಎಲ್ಲಾ ವಾಹನಗಳು ನೀರಲ್ಲಿ ಮುಳುಗಿವೆ. ಓಡಾಡಲು ಜಾಗವೇ ಇಲ್ಲದಂತೆ ರಸ್ತೆಗಳಲ್ಲಿ ನದಿಯೋಪಾದಿಯಲ್ಲಿ ನೀರು ಹರಿಯುತ್ತಿದೆ. ಮನೆಯಲ್ಲಿದ್ದ ಪಾತ್ರೆ ಪಗಡಿ, ಫ್ರಿಡ್ಜ್, ದವಸ ಧಾನ್ಯ ಸೇರಿ ನಿತ್ಯದ ವಸ್ತುಗಳು ಬೀದಿಪಾಲಾಗಿವೆ. ಆರು ಬಡಾವಣೆಗಳ ಸಾವಿರಾರು ಜನ ರಾತ್ರಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದಾರೆ. ಮಲಗಲು, ಕುಳಿತುಕೊಳ್ಳಲು ಜಾಗವಿಲ್ಲದೇ ರಾತ್ರಿಯಿಡೀ ಒದ್ದಾಡಿದ್ದಾರೆ.

ಜೆಸಿಬಿ ಮೂಲಕ ಬಿಡಿಎ ಕಂಟ್ರಾಕ್ಟರ್ ಕಾರ್ತಿಕ್ ಕೈಗೊಂಡ ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಕೆರೆ ಒಡೆದಿದ್ದು, ಸತತ ಐದಾರು ಗಂಟೆಗಳ ಕಾರ್ಯಾಚರಣೆ ಮಾಡಿ ಕೆರೆ ಒಡೆದ ಸ್ಥಳದಲ್ಲಿ ಮಣ್ಣು ಹಾಕಿ ರಾತ್ರಿ 8 ಗಂಟೆ ವೇಳೆಗೆ ನೀರಿಗೆ ತಡೆ ಒಡ್ಡಲಾಯ್ತು. ಇದರಿಂದ ಮುಂದಾಗಬಹುದಾಗಿದ್ದ ಇನ್ನಷ್ಟು ಅನಾಹುತ ತಪ್ಪಿತು. ಆದರೆ ಈಗ ಕೆರೆಗೆ ಕಟ್ಟಿದ್ದ ಒಡ್ಡಿನಲ್ಲಿ ಮತ್ತೆ ನೀರು ಸೋರಿಕೆಯಾಗಿ ಹರಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights