Asha workers protest : ಮಹಿಳೆಯರ ಹೋರಾಟಕ್ಕೆ ಸ್ಪಂದಿಸದ ಸರಕಾರ…..

ಬೆಂಗಳೂರು ಬೃಹತ್‌ ಆಶಾ ಕಾರ್ಯಕರ್ತರ ಮೆರವಣಿಗೆ ಮತ್ತು ದಿಟ್ಟ ಹೋರಾಟಕ್ಕೆ ಸಾಕ್ಷಿಯಾಯಿತು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರಿಗೆ ಲಗ್ಗೆ ಇಟ್ಟ ಮಹಿಳೆಯರು ಬೆಂಗಳೂರಿನ ರೈಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್‌‌ವರೆಗೂ ಮೆರವಣಿಗೆ ನಡೆಸಿ ಗಮನ ಸೆಳೆದರು.

ಆನಂದ್‌ರಾವ್‌ ವೃತ್ತ ಸಂಪೂರ್ಣ ಗುಲಾಬಿ ಬಣ್ಣದಿಂದ ತುಂಬಿಹೋಗಿತ್ತು. ಗುಲಾಬಿ ಬಣ್ಣದ ಸೀರೆ ಕೈಯಲ್ಲಿ ಕೆಂಪು ಧ್ವಜ ಹಿಡಿದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಘೋಷಣೆ ಕೂಗಿದ ಮಹಿಳೆಯರು ಕೂಡಲೇ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

ಶಾಶ್ವತ ಉದ್ಯೋಗ ಭದ್ರತೆ, 12000 ವೇತನ ಮತ್ತು ಬಾಕಿ ಪಾವತಿಗಾಗಿ ಒತ್ತಾಯಿಸಿ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆಗಿಳಿದಿರುವ ಆಶಾ ಕಾರ್ಯಕರ್ತರು ಲಿಖಿತ ಭರವಸೆ ಸಿಗುವವರೆಗೂ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಖಡಕ್‌ಆಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಆರೋಗ್ಯ ಸಚಿವ ಬಿ.ಶ್ರೀರಾಮುಲು ದೆಹಲಿಯಲ್ಲಿದ್ದು ಆಶಾ ಕಾರ್ಯಕರ್ತರ ಸಂಬಳ ಹೆಚ್ಚು ಮಾಡುತ್ತೇವೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಯತ್ನ ಮಾಡುತ್ತೇವೆ. ದಯವಿಟ್ಟು ಪ್ರತಿಭಟನೆ ಹಿಂತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ದಿನ ಸಂಬಳ ನೀಡಬೇಕು, ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಶಾ ಕಾರ್ಯಕರ್ತರು ತಿಳಿಸಿದ್ದಾರೆ. ಈ ಕುರಿತು ಪರಿಶೀಲಿಸುತ್ತೇವೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

30 ಸಾವಿರಕ್ಕೂ ಹೆಚ್ಚು ಮಹಿಳೆಯರು ಒಟ್ಟುಗೂಡಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ ಆನಂದ್‌ ರಾವ್‌ ಸರ್ಕಲ್‌ ಸೇರಿದಂತೆ ಸುತ್ತಮುತ್ತಲ ರಸ್ತೆಗಳು ಪ್ರತಿಭಟನಾಕಾರರಿಂದ ತುಂಬಿಹೋಗಿದೆ. ಹಾಗಾಗಿ ಟ್ರಾಫಿಕ್ ನಿಭಾಯಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.

ಬಿ.ಶ್ರೀರಾಮುಲು ರವರ ಭರವಸೆ ಕುರಿತು ಪ್ರತಿಕ್ರಿಯಿಸಿರುವ ಪ್ರತಿಭಟನಾಕಾರರು ನಮಗೆ ಕೇವಲ ಭರವಸೆ ಬೇಡ. ಏಕೆಂದರೆ ಈ ಹಿಂದೆಯೂ ಹಲವು ಪ್ರತಿಭಟನೆ ನಡೆಸಿದ್ದೇವೆ. ಭರವಸೆಗಳು ಸಿಕ್ಕಿವೆಯೇ ಹೊರತು ಕೆಲಸ ಆಗಿಲ್ಲ. ಹಾಗಾಗಿ ನಮಗೆ ಸಂಬಳ ಹೆಚ್ಚಳದ ಆದೇಶ ಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಅನಿರ್ದಿಷ್ಠಾವಧಿ ಪ್ರತಿಭಟನೆಗೆ ಕರೆ ನೀಡಿರುವ ಮಹಿಳೆಯರು ಕಳೆದ ಸೆಪ್ಟಂಬರ್‌ನಲ್ಲಿ ಹೋರಾಟ ಮಾಡಿದರೂ ರಾಜ್ಯ ಸರ್ಕಾರ ಸೂಕ್ತವಾಗಿ ಸ್ಪಂದಿಸಿಲ್ಲ. ಹಾಗಾಗಿ ಈ ಬಾರಿ ಪ್ರತಿಫಲ ಸಿಗದೇ ವಾಪಸ್‌ ಹೋಗುವುದಿಲ್ಲ ಎಂದು ಧೃಡ ತೀರ್ಮಾನ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights