BSNL ದೇಶದ್ರೋಹಿಗಳ ಅಡ್ಡ: jio ದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆಯೇ? ಅನಂತ್‌ ಕುಮಾರ್ ವಿರುದ್ಧ ಆಕ್ರೋಶ

ಸರ್ಕಾರಿ ಸ್ವಾಮ್ಯದ ದೈತ್ಯ ಕಂಪನಿ ‘ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ’ ಎಂಬ ಹೇಳಿಕೆ ಕೊಡುವ ಮೂಲಕ ಮಾಜಿ ಸಚಿವ, ಉತ್ತರ ಕನ್ನಡ ಸಂಸದ ಅನಂತ್‌ಕುಮಾರ್ ಹೆಗಡೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ದೆಹಲಿಯ ನನ್ನ ಮನೆಯಲ್ಲಿಯೂ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್ ಬರುವುದಿಲ್ಲ. ಈ ವಿಚಾರದಲ್ಲಿ ಬೆಂಗಳೂರಿಗೆ ಹೋಲಿಸಿಕೊಂಡರೆ ಉತ್ತರ ಕನ್ನಡವೇ ಬೆಸ್ಟ್. ಅಲ್ಲಿರುವವರು ಅಧಿಕಾರಿಗಳಲ್ಲ ಕೇವಲ ದೇಶದ್ರೋಹಿಗಳೇ ತುಂಬಿಕೊಂಡಿದ್ದಾರೆ. ನಾನು ಬಳಸವು ಭಾಷೆಯಲ್ಲಿ ನಿಖರತೆಯಿದೆ. ಹಾಗಾಗಿ ಹೂಡಿಕೆ ಹಿಂತೆಗೆತ ಮೂಲಕ ಬಿಎಸ್‌ಎನ್‌ಎಲ್‌ ಮುಗಿಸುತ್ತೇವೆ ಎಂದು ಅನಂತ್‌ ಕುಮಾರ್ ಹೆಗಡೆ ಹೇಳಿದ್ದಾರೆ.

ಸರ್ಕಾರ ಹಣ ಕೊಟ್ಟಿದೆ, ದೇಶದ ಜನರಿಗೆ ಅಗತ್ಯವಿದೆ, ಸೌಲಭ್ಯವಿದೆ ಎಲ್ಲವೂ ಇದೆ. ಆದರು ಅವರು ಕೆಲಸ ಮಾಡುವುದಿಲ್ಲ. ಅವರು ಕೆಲಸ ಮಾಡಲಿಕ್ಕೆ ಸಿದ್ದರಿಲ್ಲ. ಈಗಾಗಲೇ 85 ಸಾವಿರ ಜನರನ್ನು ತೆಗೆಯುತ್ತಿದ್ದೇವೆ. ಮುಂದೆ ಮತ್ತಷ್ಟು ಜನರನ್ನು ತೆಗೆದು, ಏನಾದರೂ ಸರಿ ಅದನ್ನು ಖಾಸಗೀಕರಣ ಮಾಡುತ್ತೇವೆ, ನಮಗೆ ಬೇರೆ ದಾರಿ ಇಲ್ಲ ಎಂದಿದ್ದಾರೆ.

ಸಂಸದರ ಈ ವಿವಾದಾತ್ಮಕ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಅವರ ಬಾಯಲ್ಲಿ ದೇಶದ್ರೋಹ ಬಿಟ್ಟರೆ ಮತ್ತೇನೂ ಬರುವುದಿಲ್ಲ. ಎಲ್ಲರನ್ನೂ ದೇಶದ್ರೋಹಿಗಳೆಂದು ಕರೆಯುವುದು ಅವರಿಗೆ ಖಯಾಲಿ ಆಗಿಬಿಟ್ಟಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದಾರೆ.

ಸಂಸದರ ಹೇಳಿಕೆಗೆ ಭಾರೀ ವಿರೋಧ

ನಾನುಗೌರಿ.ಕಾಂ ಜೊತೆ ಮಾತನಾಡಿದ ಬಿಎಸ್‌ಎನ್‌ಎಲ್‌ನ ಮಂಗಳೂರಿನ ಸಬ್‌ಡಿವಿಸಿನ್‌ ಅಧಿಕಾರಿಗಳಾಗಿ ಕೆಲಸ ಮಾಡಿ ನಿವೃತ್ತರಾದ ಚಂದ್ರಹಾಸ್ ಉಲ್ಲಾಳ್‌ರವರು, BSNL ಮತ್ತು ಅದರ ನೌಕರರ ಕುರಿತು ಸಂಸದರು ಹಗುರವಾಗಿ ಮಾತನಾಡುವುದು ನಿಲ್ಲಿಸಬೇಕು. ಈ ದೇಶದ ಮೂಲೆ ಮೂಲೆಗೂ, ಹಳ್ಳಿ ಹಳ್ಳಿಗೂ, ಬೆಟ್ಟ ಗುಡ್ಡ, ಕಾಡು ಮೇಡು ಲೆಕ್ಕಿಸದೇ ಆಫ್ಟಿಕ್‌ ಫೈಬರ್‌ಗಳನ್ನು ಜೋಡಿಸಿದವರು ಬಿಎಸ್‌ಎನ್‌ಎಲ್‌ ನೌಕರರು ಎಂಬುದನ್ನು ಸಂಸದರು ಮರೆಯಬಾರದು ಎಂದಿದ್ದಾರೆ.

ನೆರೆ ಬಂದಾಗ, ಭೂಕಂಪವಾದಾಗ ಮತ್ತಿತ್ತರ ಸಂಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ಉಳಿಸಿದ್ದು ಬಿಎಸ್‌ಎನ್‌ಎಲ್‌ ಹೊರತು, ಜಿಯೋ ಸೇರಿದಂತೆ ಯಾವುದೇ ಖಾಸಗಿ ಟೆಲಿಕಾಂ ಕಂಪನಿಗಳಲ್ಲ. ಬಿಎಸ್‌ಎನ್‌ಎಲ್‌ ಬಂದ ನಂತರ ಮೊಬೈಲ್ ಸೇವೆಗಳು ಜನರ ಕೈಗೆಟುಕಲು ಸಾಧ್ಯವಾಯಿತು. ಅದಕ್ಕೂ ಮುಂಚೆ ಬಾರೀ ದುಬಾರಿಯಾಗಿತ್ತು. ಬಿಎಸ್‌ಎನ್‌ಎಲ್‌ನಿಂದ ಜನಗಳಿಗೆ ಒಳ್ಳೇಯ ಸೇವೆ ಸಿಕ್ಕಿದೆ. ಇಂದು ಬಿಎಸ್‌ಎನ್‌ಎಲ್‌ ತಲುಪಿರುವ ಸ್ಥಿತಿಗೆ ಕಾರಣ ಕೇಂದ್ರ ಸರ್ಕಾರದ ದುರುದ್ದೇಶದ ನೀತಿಗಳೇ ಹೊರತು ನೌಕರರಲ್ಲ. ಖಾಸಗಿ ದೂರವಾಣಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಬಿಎಸ್‌ಎನ್ಎಲ್‌ ಅನ್ನು ಸರ್ಕಾರ ನಿರ್ಲಕ್ಷಿಸಿ ಈಗ ನೌಕರರನ್ನು ದೂರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಎಲ್ಲವನ್ನೂ ಖಾಸಗೀ ಮಾಲೀಕತ್ವಕ್ಕೆ ನೀಡಲು ಹೊರಟಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಗೆ ಆಡಳಿತ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನೇರವಾಗಿ ಒಪ್ಪಿಕೊಂಡಿದೆ ಇನ್ನು ಸರ್ಕಾರದ ಅಧೀನ ಸಂಸ್ಥೆಯಾದ BSNL ಉದ್ಯೋಗಿಗಳನ್ನು ದೇಶದ್ರೋಹಿಗಳು ಎಂದ ಸಂಸದ ಅನಂತ್ ಕುಮಾರ್ ಅವರು ತಮ್ಮ ಅಯೋಗ್ಯತನವನ್ನು ತೋರಿದ್ದಾರೆ ಎಂದು ಕರ್ನಾಟಕ ಕಾಂಗ್ರೆಸ್ ಟೀಕಿಸಿದೆ.

ತರ್ತೆತಾತ ಎಂಬ ಟ್ವಿಟ್ಟರ್ ಖಾತೆಯಲ್ಲಿ” #BSNL ನಲ್ಲಿರುವವರು ದೇಶದ್ರೋಹಿಗಳು ಮತ್ತು #Jio ನಲ್ಲಿರುವವರು ಸ್ವಾತಂತ್ರ್ಯ ಹೋರಾಟಗಾರರು” ಎಂದು ವ್ಯಂಗ್ಯವಾಡಿ ಟ್ವೀಟ್‌ ಮಾಡಲಾಗಿದೆ.


ಇದನ್ನೂ ಓದಿ:  ಆನ್‌ಲೈನ್ ಶಿಕ್ಷಣದ ಪಜೀತಿ; ವಿದ್ಯಾರ್ಥಿಗಳಿಗೆ ಬಸ್‌ ನಿಲ್ದಾಣವೇ ಗತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights