ನಾಳೆ ಬದಲು ಬೆಂಗಳೂರಿನಲ್ಲಿ – ಹಾಸನದಲ್ಲಿ ಇಂದೇ ಸಾರಿಗೆ ನೌಕರರ ಮುಷ್ಕರ ಪ್ರಾರಂಭ..!

ನಾಳೆ ಬದಲು ಬೆಂಗಳೂರಿನಲ್ಲಿ ಇಂದೇ ಸಾರಿಗೆ ನೌಕರರ ಮುಷ್ಕರ ಪ್ರಾರಂಭ ಮಾಡಲಾಗಿದೆ. ಆರನೇ ವೇತನ ಆಯೋಗವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರು ಬೀದಿಗಿಳಿದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಹೌದು… ನಾಳೆ ಮುಷ್ಕರಕ್ಕೆ ಸಜ್ಜಾಗಿರುವ ಸಾರಿಗೆ ನೌಕರರ ವಿರುದ್ಧ ಸರ್ಕಾರವೂ ತೊಡೆತಟ್ಟಿ ನಿಂತಿದೆ. ನಾಳೆ ಮುಷ್ಕರ ನಡೆಸಲು ನೌಕರರು ಹಠ ತೊಟ್ಟರೆ ಸರ್ಕಾರ ಎಸ್ಮಾ ಜಾರಿಗೂ ಸಜ್ಜಾಗಿದೆ ಎಂದು ಮೂಲಗಳು ಹೇಳುತ್ತಿವೆ. ಸಾರಿಗೆ ನೌಕರರ ಒಂಬತ್ತು ಪ್ರಮುಖ ಬೇಡಿಕೆಗಳ ಪೈಕಿ ಆರನೇ ವೇತನ ಆಯೋಗದ ವರದಿ ಜಾರಿಯ ಬೇಡಿಕೆಯನ್ನ ಮಾತ್ರ ಈಡೇರಿಸಲು ಸಾಧ್ಯ ಇಲ್ಲ ಎಂದು ಸರ್ಕಾರ ಬಹಳ ಸ್ಪಷ್ಟವಾಗಿ ಹೇಳಿದೆ. ಆರನೇ ವೇತನ ಜಾರಿ ಬದಲು ಸಾರಿಗೆ ನೌಕರರಿಗೆ ಶೇ. 8ರಷ್ಟು ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ, ವೇತನ ಹೆಚ್ಚಳ ಬೇಕಾಗಿಲ್ಲ. ತಮಗೆ ಆರನೇ ವೇತನ ಆಯೋಗ ಜಾರಿಯೇ ಆಗಬೇಕು ಎಂಬುದು ಸಾರಿಗೆ ನೌಕರರ ಸಂಘದ ಹಠ. ಹೀಗಾಗಿ, ಬುಧವಾರ ಮುಷ್ಕರ ನಡೆಸಿಯೇ ತೀರುತ್ತೇವೆ ಎಂದು ನೌಕರರು ಹಠ ತೊಟ್ಟಿದ್ದಾರೆ.

ಹೀಗಾಗಿ ಸಾರಿಗೆ ನೌಕರರು ಈಗಿನಿಂದಲೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಬೆಂಗಳೂರಿನ ಹೆಣ್ಣೂರು ಡಿಪೋ ಬಳಿ ಇಂದೇ ಹೋರಾಟ ಮಾಡಲಾಗುತ್ತಿದೆ. ಸಾರಿಗೆ ನೌಕರರ ಮುಷ್ಕರಕ್ಕೆ ಕರವೇ ಕೂಡ ಬೆಂಬಲ ನೀಡಿದೆ. ಬಸ್ ಬಂದ್ ಗೆ ಕೌಂಟ್ ಡೌನ್ ಶುರುವಾಗಿದೆ.

ಜೊತೆಗೆ ಹಾಸನದಲ್ಲಿ ನಾಳೆಯ ಮುಷ್ಕರ ಈಗಲೇ ಶುರುವಾಗಿದೆ. ಹಾಸನ ರೈಲ್ವೆ ನಿಲ್ದಾಣದ ಬಳಿ ಸಾರಿಗೆ ನೌಕರರು ಹೋರಾಟ ಶುರು ಮಾಡಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಸಾರಿಗೆ ನೌಕರರಿಂದ ಇಂದೇ ಹೋರಾಟ ಶುರು ಮಾಡಿದ್ದಾರೆ. ಸಾಂಕೇತಿಕ ಧರಣಿ ಮೂಲಕ ನಾಳೆಯ ಹೋರಾಟಕ್ಕೆ ಚಾಲನೆ ನೀಡಲಾಗಿದೆ.

“ಸಾರಿಗೆ ನೌಕರರ ಜೊತೆ ಸಂಧಾನ ಸಾಧ್ಯತೆ ಇಲ್ಲವೇ ಇಲ್ಲ. ಎಸ್ಮಾ ಜಾರಿ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ವ್ಯವಹರಿಸುವಂತೆ ಮುಖ್ಯಮಂತ್ರಿ ಸೂಚನೆ ಕೊಟ್ಟಿದ್ಧಾರೆ. ಹೀಗಾಗಿ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾರಿಗೆ ನೌಕರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಎಚ್ಚರಿಕೆಕೊಟ್ಟಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights