CAA : Modi ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ? – HDK …

ಸಿಎಎ ವಿಷಯದಲ್ಲಿ ಪದೇ ಪದೇ ಪಾಕಿಸ್ತಾನದ ಜಪ ಮಾಡುವ ಮೋದಿ ಅವರೇ ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ ಪ್ರಧಾನಿಯೋ? ಪಾಕಿಸ್ತಾನದ ವಲಸಿಗರು, ನಿರಾಶ್ರಿತರು ನಿಮಗೆ ವೋಟು ಕೊಟ್ಟರೋ? ಭಾರತದ ಪ್ರಜೆಗಳು ವೋಟು ಕೊಟ್ಟರೋ? ಭಾರತೀಯ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ, ಪಾಕಿಸ್ತಾನದ ಸಂವಿಧಾನದಿಂದ ಪ್ರಧಾನಿ ಹುದ್ದೆ ಸಿಕ್ಕಿತೋ? ಎಂದು ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಭಾರತೀಯರ ವೋಟು ಪಡೆದು ಸಂವಿಧಾನದ ಪ್ರಕಾರ ಪ್ರಧಾನಿಯಾದ ನಿಮಗೆ ಇಲ್ಲಿನ ರಾಜ್ಯಗಳ ಅಭಿವೃದ್ಧಿ ಆದ್ಯತೆಯೋ ಪಾಕಿಸ್ತಾನದವರಿಗೆ ಪೌರತ್ವ ನೀಡುವುದು ಆದ್ಯತೆಯೋ? ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಕರ್ನಾಟಕಕ್ಕೆ ಕೊಡಬೇಕಾದ ಅನುದಾನ ಕೊಡಲಾಗದಿದ್ದರೂ ಪಾಕಿಸ್ತಾನದ ಮೇಲೆ ನಿಮಗೆ ಪ್ರೀತಿ ಉಕ್ಕುತ್ತಿರುವುದೇಕೆ? ಅಲ್ಲಿನವರ ಮೇಲೆ ಯಾಕಿಷ್ಟು ಮಮಕಾರ? ಎಂದಿದ್ದಾರೆ.

25 ಸಂಸದರನ್ನು ಕೊಟ್ಟ ಕರ್ನಾಟಕದಲ್ಲಿ ಉಂಟಾದ ನೆರೆಯಿಂದ 35 ಸಾವಿರ ಕೋಟಿ ನಷ್ಟವಾದರೂ ಕೊಟ್ಟಿದ್ದು ಚಿಕ್ಕಾಸು. ನರೇಗಾ ಬಾಕಿ ಕೊಟ್ಟಿಲ್ಲ, ತೆರಿಗೆಯಲ್ಲಿ ರಾಜ್ಯದ ಪಾಲು ಕೊಟ್ಟಿಲ್ಲ, ಬರ ಪರಿಹಾರವಿಲ್ಲ. ಇವುಗಳ ಬಗ್ಗೆ ಮಾತನಾಡಲಾಗದ ನೀವು ಮಾತಾಡುವುದು ಪಾಕಿಸ್ತಾನದ ಬಗ್ಗೆ. ಮೊದಲು ಪಾಕಿಸ್ತಾನದ ಜಪ ನಿಲ್ಲಿಸಿ ಕರ್ನಾಟಕಕ್ಕೆ ಬರಬೇಕಾದ ಹಣ ಕೊಡಿ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಕಟ್ಟಿಸಿಕೊಂಡ ತೆರಿಗೆಯ ಕರ್ನಾಟಕದ ಪಾಲನ್ನು ಹಾಗೂ ನೆರೆ ಪರಿಹಾರದ ಹಣವನ್ನು ಯಡಿಯೂರಪ್ಪ ಪಾಕಿಸ್ತಾನವನ್ನು ಕೇಳಬೇಕೋ ಅಥವಾ ಭಾರತೀಯ ಮತದಾರರಿಂದ ಆಯ್ಕೆಯಾದ ನಿಮ್ಮನ್ನು ಕೇಳಬೇಕೋ? ಎಂದು ಸಹ ಅವರು ವ್ಯಂಗ್ಯವಾಡಿದ್ದಾರೆ.

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿದ್ಯಾರ್ಥಿಗಳ ಎದುರು ಭಾಷಣ ಮಾಡಿದ ನೀವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಏನಾದರೂ ಸಲಹೆ ಕೊಟ್ಟಿರಾ? ಇಲ್ಲ… ಅದು ಬಿಟ್ಟು ಪಾಕಿಸ್ತಾನದ ಜಪ ಮಾಡುತ್ತೀರಿ. ಇದು ನಿಮ್ಮ ರಾಜಕೀಯ, ಅಧಿಕಾರದ ಆಸೆಯನ್ನು ಸಾಬೀತು ಮಾಡುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.