CAA Protest: ದೇಶದ್ರೋಹ ಮತ್ತು ಕೊಲೆಯತ್ನ ಆರೋಪದಲ್ಲಿ ಎಎಂಯು ವಿದ್ಯಾರ್ಥಿ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕಳೆದ ಡಿಸೆಂಬರ್‌ನಲ್ಲಿ ಅಲಿಘರ್ ಮುಸ್ಲೀಂ ವಿವಿ (ಎಎಂಯು)ಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಯಲ್ಲಿ  ಭಾಗಿಯಾಗಿದ್ದ ವಿದ್ಯಾರ್ಥಿಯನ್ನು ದೇಶದ್ರೋಹ ಮತ್ತು ಕೊಲೆ ಯತ್ನದ ಆರೋಪದಡಿ ಗುರುವಾರ ಬಂಧಿಸಲಾಗಿದೆ.

ಎಎಮ್‌ಯು ವಿದ್ಯಾರ್ಥಿಗಳಾದ ಫರ್ಹಾನ್ ಜುಬೇರಿ ಮತ್ತು ರವೀಶ್ ಅಲಿ ಖಾನ್ ಬಂಧಿತರು. ಈ  ಇಬ್ಬರೂ ಲಾಕ್‌ಡೌನ್‌ನಿಂದ ಸಿಕ್ಕಿಕೊಂಡಿದ್ದ ತಮ್ಮ ಸ್ನೇಹಿತನನ್ನು ಕರೆದುಕೊಂಡು ಬರಲೆಂದು ಹೊರಟಿದ್ದರು. ಅವರನ್ನು ಅಲಿಫರ್‌ ನಗರದಿಂದ 12 ಕಿ.ಮೀ ದೂರದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ವಿದ್ಯಾರ್ಥಿಗಳನ್ನು ಮಾಂಡ್ರಾಕ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಖಾನ್ ಅವರನ್ನು ಒಂದೆರಡು ಗಂಟೆಗಳಲ್ಲಿ ಬಿಟ್ಟುಕಳಿಸಿದ್ದು, ಜುಬೇರಿಯನ್ನು ಬಂಧಿಸಲಾಗಿದೆ.

ಜುಬೇರಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಮತ್ತು 124 ಎ (ದೇಶದ್ರೋಹ) ಸೇರಿದಂತೆ 11 ಆರೋಪಗಳನ್ನು ಹೇರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಆತನನ್ನು 11 ಆರೋಪಗಳ ಅಡಿಯಲ್ಲಿ ಬಂಧಿಸಲಾಗಿದ್ದು, ಅವುಗಳಲ್ಲಿ 07 ಆರೋಪಗಳ ಮೇಲೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ” ಎಂದು ಅಲಿಘರ್ ಪೊಲೀಸ್‌ ಅಧೀಕ್ಷಕ ಅಭಿಷೇಕ್ ಸಿಂಗ್‌ ಹೇಳಿದ್ದಾರೆ.

ಆದಾಗ್ಯೂ, ಈ ಏಳು ಆರೋಪಗಳು ಯಾವೆಂದು ಸಿಂಗ್ ಸ್ಪಷ್ಟಪಡಿಸಿಲ್ಲ.  ವಿದ್ಯಾರ್ಥಿ ಜುಬೇರಿ ಅಂತಿಮ ವರ್ಷದ ಎಂಎಸ್‌ಡಬ್ಲ್ಯೂ (ಸಾಮಾಜಿಕ ಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿ) ಓದುತ್ತಿದ್ದಾರೆ.

ಕಳೆದ ವರ್ಷ ಡಿಸೆಂಬರ್ 15 ರಂದು, ಎಎಂಯುನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ಭುಗಿಲೆದ್ದಿತು. ಇದಾದ ನಂತರ ವಿಶ್ವವಿದ್ಯಾಲಯದ 1,000 ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ಇಬ್ಬರು ವಿದ್ಯಾರ್ಥಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದರಿಂದ ಪ್ರತಿಭಟನೆ ಘರ್ಷಣೆಯ ರೂಪ ಪಡೆದಿತ್ತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಪೊಲೀಸರಿಗೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಲಾಗಿದ್ದು, ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಪ್ರಯೋಸಿದ್ದಾರೆ ಎಂದು ಆರೋಪಿಸಲಾಗಿದೆ.

ಘರ್ಷಣೆಯ ನಂತರ ಡಿಸೆಂಬರ್‌ನಲ್ಲಿ ಎಎಂಯುನ 07 ವಿದ್ಯಾರ್ಥಿಗಳೂ ಸೇರಿದಂತೆ 26 ಜನರನ್ನು ಬಂಧಿಸಲಾಗಿತ್ತು. ನಂತರವೇ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ: ದೆಹಲಿ ಹಿಂಸಾಚಾರದ ಪ್ರಕರಣದಲ್ಲಿ ಜಾಮಿಯಾ ವಿದ್ಯಾರ್ಥಿ ಬಂಧನ

ಆದರೆ, ಇದೀಗ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಫರ್ಹಾನ್ ಜುಬೇರಿಯನ್ನು ಬಂಧಿಸಲಾಗಿದೆ. “ಪೊಲೀಸರ ಮೇಲಿನ ಕಲ್ಲುತೂರಾಟ ಪ್ರಕರಣದ ಆಧಾರದಲ್ಲಿ ಆತನ ಮೇಲೆ ಕೊಲೆಯತ್ನ ಆರೋಪ ಹೊರಿಸಲಾಗಿದೆ” ಎಂದು ಎಸ್ಪಿ ಸಿಂಗ್ ಹೇಳಿದರು.

 ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ

ಫರ್ಹಾನ್ ಜುಬೇರಿ, ವಿದ್ಯಾರ್ಥಿ ಸಂಘದ ಮಾಜಿ ಕ್ಯಾಬಿನೆಟ್ ಸದಸ್ಯರಾಗಿದ್ದರು. ಅಲ್ಲದೆ, ಎಎಂಯು ಸಮನ್ವಯ ಸಮಿತಿಯ ಸಕ್ರಿಯ ಕಾರ್ಯಕರ್ತರೂ ಆಗಿದ್ದರು, ಹಲವು ವರ್ಷಗಳಿಂದ ಆತನ ಪರಿಚಯ ಎಲ್ಲರಿಗೂ ಇದೆ. ಆದರೆ, ಲಾಕ್ ಡೌನ್ ಸಮಯದಲ್ಲಿ ಆತನನ್ನು ಹಠಾತ್ ಬಂಧನ ಮಾಡಿರುವುದು ಆಶ್ಚರ್ಯವಾಗಿದೆ ಎಂದು ಎಎಂಪಿ ವಿದ್ಯಾರ್ಥಿಗಳು ವ್ಯಕ್ತಪಡಿಸಿದ್ದಾರೆ.

‘ಸಿಎಎ ವಿರೋಧಿ ಪ್ರತಿಭಟನೆಗಳು ಡಿಸೆಂಬರ್‌ನಲ್ಲಿ ನಡೆದವು, ಆದರೆ ಪೊಲೀಸರು ಆತನನ್ನು ಈಗ ಇದ್ದಕ್ಕಿದ್ದಂತೆ ಬಂಧಿಸಿದ್ದಾರೆ ಮತ್ತು ಲಾಕ್ ಡೌನ್ ಸಮಯದಲ್ಲಿ ಕೊಲೆ ಯತ್ನದ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನ್ಯಾಯಾಂಗವು ಆತನ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ನಮಗಿದೆ” ಎಂದು ವಿವಿ ವಿದ್ಯಾರ್ಥಿಗಳು ಹೇಳಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಲಾಕ್‌ಡೌನ್ ಸಮಯದಲ್ಲಿ ಮಾಡಿದ ಹಲವಾರು ಪ್ರಕರಣಗಳಲ್ಲಿ ಜುಬೇರಿಯ ಬಂಧನವೂ ಒಂದು. ಮಾರ್ಚ್‌ನಲ್ಲಿ ಕೋವಿಡ್ ಲಾಕ್‌ಡೌನ್ ಜಾರಿಗೆ ಬಂದಾಗಿನಿಂದ ನಾಲ್ಕು ಜಾಮಿಯಾ ವಿದ್ಯಾರ್ಥಿಗಳನ್ನು ಸಹ ಬಂಧಿಸಲಾಗಿದೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಜಾಮಿಯ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹ ಬಂಧನ; ಯುಎಪಿಎ ಅಡಿ ಪ್ರಕರಣ

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights