Fact Check: ವೃಂದಾವನದಲ್ಲಿ ಗಾಯಗೊಂಡ ಸಾಧುವಿನ ಫೋಟೋಗಳಿಗೆ ನಕಲಿ ಬಾಂಗ್ಲಾ ಟ್ವಿಸ್ಟ್

ಗಾಯಗೊಂಡ, ರಕ್ತಸಿಕ್ತ ಸಾಧುವಿನ ಕೆಲವೊಂದು ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವೃಂದಾವನದಲ್ಲಿ ಹಿಂದೂ ಸಾಧುವನ್ನು “ಬಾಂಗ್ಲಾದೇಶಿ ವಲಸಿಗರು” ಕೊಲೆ ಮಾಡಿದ್ದಾರೆ ಎಂದು ಪೋಸ್ಟ್‍ ಗಳು ಮತ್ತು ಟ್ವೀಟ್‍ಗಳು ಹೇಳಿವೆ. ಈ ಘಟನೆಯು “ಹಿಂದೂ ಸಾಧುವನ್ನು ಮುಸ್ಲಿಮರು ಕೊಂದಿದ್ದಾರೆ” ಎಂದೂ, ಅದು ಕೋಮುಪ್ರೇರಿತ ಎಂದೂ ಆ ಟ್ವೀಟ್ ಗಳಲ್ಲಿ ಸೂಚಿಸುವ ಕೆಲಸ ಆಗಿದೆ. ಆರ್ ಟಿ ಐ ಕಾರ್ಯಕರ್ತನೆಂದು ತನ್ನನ್ನು ಗುರುತಿಸಿಕೊಳ್ಳುವ ವಿಕಾಸ್‍ಗೌರ್, ಈ ಹೇಳಿಕೆಯನ್ನು ಉತ್ತೇಜಿಸಿದವರಲ್ಲಿ ಒಬ್ಬರು. ಗೌರ್ ಈಗ ತನ್ನ ಟ್ವೀಟ್‍ನ್ನು ಅಳಿಸಿದ್ದಾರೆ. ಆದರೆ ಅದೇ ಹೇಳಿಕೆಯನ್ನು ಇತರರು ಹರಡುತ್ತಿದ್ದಾರೆ.

https://twitter.com/TatTwamAsi/status/1259918294838059011

`ಒಪ್‍ಇಂಡಿಯಾ’ ಸಂಪಾದಕ ಅಜಿತ್ ಭಾರತಿ ಅವರು, ಪಟ್ಟು ಹಿಡಿದು ನಿರಂತರ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ತಮ್ಮ ವೆಬ್‍ಸೈಟ್‍ನಲ್ಲಿ ಲೇಖನವೊಂದನ್ನು ಬರೆದಿದ್ದಾರೆ. ಲೇಖನದಲ್ಲಿಅವರು, “ಯಾವ ರೀತಿಯ ಜನರು ಸಂತರನ್ನು ಗುರಿಮಾಡಿ ಇಂತಹ ಕೆಲಸ ಮಾಡುತ್ತಾರೆ?” ಎಂದು ಪ್ರಶ್ನಿಸಿದ್ದಾರೆ. ದಾಳಿಯ ಹಿಂದೆ ಬಾಂಗ್ಲಾದೇಶದ ಕೈಗಳೂ ಇದ್ದವು ಎಂದು ಹೇಳಲಾಗುತ್ತಿದೆ ಎಂದೂ ಬರೆದಿದ್ದಾರೆ.

‘ಡೇಂಜರಸ್ ನ್ಯಾಷನಲಿಸ್ಟ್’ ಎಂಬ ಫೇಸ್‍ಬುಕ್ ಪುಟದಲ್ಲಿ ಹಿರಿಯ ವೈಷ್ಣವ ಸಂತನಾದ ತಮಲ್‍ ಕೃಷ್ಣ ದಾಸ್‍ ಅವರನ್ನು ಮುಸ್ಲಿಮರು ನಿಷ್ಕರುಣೆಯಿಂದ ಥಳಿಸಿದ್ದಾರೆ ಎಂದು ಬರೆದಿದ್ದಾರೆ. ಎಲ್ಲಾ ಹಲ್ಲೆಕೋರರು ಪರಾರಿಯಾಗಿದ್ದಾರೆ, ಅವರಲ್ಲಿಇಬ್ಬರು ಬಾಂಗ್ಲಾದೇಶದವರು, ಮತ್ತು ಮಥುರಾ ಪೊಲೀಸರು ಪ್ರಕರಣವನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಮೂರು ಸಾಧುಗಳನ್ನು ಕೊಂದ ಪಾಲ್ಘರ್ ಹಲ್ಲೆ ಪ್ರಕರಣದ ಬಗ್ಗೆ ಈ ಪೋಸ್ಟ್ ಪ್ರಸ್ತಾಪಿಸಿದೆ. ಆದರೆ, ಪಾಲ್ಘರ್‍ ಘಟನೆಯಲ್ಲಿ ಯಾವುದೇ ಕೋಮುವಾದದ ಹುರುಳಿಲ್ಲ ಮತ್ತು ಸ್ಥಳೀಯರು ಗುಂಪುಗೂಡಿ ಕಳ್ಳರು ಎಂದು ತಪ್ಪಾಗಿ ಭಾವಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್‍ ತನಿಖೆಯಿಂದ ತಿಳಿದಿದೆ. ಈ ಮೂವರನ್ನು ಕೊಂದ ಜನರ ಗುಂಪು ಒಂದೇ ಸಮುದಾಯದವರದ್ದು. ಪಾಲ್ಘರ್ ಹತ್ಯೆ ಘಟನೆಯ ಕೋಮುವಾದೀಕರಣವನ್ನು ಈ ಹಿಂದೆ ಆಲ್ಟ್ ನ್ಯೂಸ್‍ ಬಹಿರಂಗಪಡಿಸಿತ್ತು.

ಐಐಟಿ ರೂರ್ಕಿಯ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳುವ ಟ್ವಿಟರ್ ಬಳಕೆದಾರ ಆರ್ತಿ ಅಗರ್ವಾಲ್‍ ಅವರು ಅದೇ ಹೇಳಿಕೆಗಳೊಂದಿಗೆ ಛಾಯಾಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸುಳ್ಳು ಕೋಮುವಾದದ ಬಣ್ಣ

ಅಗರ್ವಾಲ್‍ ಅವರ ಟ್ವೀಟ್‍ಗೆ ಉತ್ತರಿಸಿದ ಮಥುರಾ ಪೊಲೀಸರು, ವೃಂದಾವನ ಪೊಲೀಸರು ಅಗತ್ಯ ತನಿಖೆ ಆರಂಭಿಸಿದ್ದು, ಸಾಧುವನ್ನು ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲಾಗಿದೆ ಎಂದಿದ್ದಾರೆ. ಈ ಟ್ವೀಟ್ ನಲ್ಲಿ ದಾಳಿಯ ವಿವರಗಳನ್ನು ನೀಡದಿದ್ದರೂ, ಸಾಧುವನ್ನು ಕೊಂದಿಲ್ಲ ಎಂಬುದಕ್ಕೆ ಇದು ಪುರಾವೆಯಾಗಿದೆ. ಅಗರ್ವಾಲ್‍ ಅವರ ಟ್ವೀಟ್ ಪೋಸ್ಟ್ ಆದ ಎರಡು ಗಂಟೆಗಳ ನಂತರ ಮಥುರಾ ಪೊಲೀಸರ ಟ್ವೀಟ್‍ನ್ನು ಪೋಸ್ಟ್ ಮಾಡಲಾಗಿದೆ. ಆದರೂ, ಹಿಂದಿನ ಸುಳ್ಳು ಸುದ್ದಿಯ ಟ್ವೀಟ್ 6,000 ಬಾರಿ ರಿಟ್ವೀಟ್ ಆಗಿದ್ದರೆ, ಪೊಲೀಸರ ಟ್ವೀಟ್‍ ಇದುವರೆಗೆ 19 ರಿಟ್ವೀಟ್‍ಗಳನ್ನು ಮಾತ್ರ ಕಂಡಿದೆ ಎಂಬುದು ಖೇದಕರ.

https://twitter.com/parantapah/status/1259894846833283076

ಸುದರ್ಶನ್ ನ್ಯೂಸ್ ಪತ್ರಕರ್ತ ಅಂಕಿತ್‍ ತ್ರಿವೇದಿ ಅವರಿಗೆ ಮಥುರಾ ಪೊಲೀಸರು ನೀಡಿದ ಮತ್ತೊಂದು ಟ್ವೀಟ್‍ ಉತ್ತರದಲ್ಲಿ ಹೆಚ್ಚಿನ ವಿವರಗಳು ದೊರೆತಿವೆ. ಅಂಕಿತ್ ತ್ರಿವೇದಿ ತಮ್ಮ ಟ್ವೀಟ್‍ ನಲ್ಲಿ ಬಾಂಗ್ಲಾ ದೇಶದ ಕೋನದೊಂದಿಗೆ ಪೋಸ್ಟ್ ಮಾಡಿದ್ದಾರೆ ಮತ್ತು ಎಲ್ಲಾ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಪೊಲೀಸರ ಉತ್ತರದ ಮೊದಲ ವಾಕ್ಯದಲ್ಲಿಯೇ “ಬಾಂಗ್ಲಾದೇಶದ ದಾಳಿಕೋರರ ಸುದ್ದಿ ಸುಳ್ಳು” ಎಂದು ಬರೆಯಲಾಗಿದೆ. ಗೌಡಿಯಾ ಮಠದಲ್ಲಿನ ವೈಯಕ್ತಿಕ ವಿವಾದವು ಈ ದಾಳಿಗೆ ಕಾರಣ  ಎಂದು ಹೇಳಲಾಗಿದೆ. ಈ ಘಟನೆಯಲ್ಲಿಯಾವುದೇ ಕೋಮು ದ್ವೇಷವಿಲ್ಲ ಎಂದು ಸ್ಪಷ್ಟಪಡಿಸುವ ಪೊಲೀಸ್‍ ಇನ್ಸ್‍ಪೆಕ್ಟರ್ ಸದರ್‍ ಅವರ ವೀಡಿಯೊ ಬೈಟ್‍ನ್ನು ಟ್ವೀಟ್ ಒಳಗೊಂಡಿದೆ. ವೃಂದಾವನದ ಇಮ್ಲಿಟಲಿಯಾದ ಗೌಡಿಯಾ ಮಠದ ಮಾಜಿ ಅಧ್ಯಕ್ಷ ತಮಲ್‍ದಾಸ್ ಮತ್ತು ಹಾಲಿ ಅಧ್ಯಕ್ಷ ಬಿ.ಪಿ.ಸಾಧು ಅವರ ಅನುಯಾಯಿಗಳು ಜಗಳಕ್ಕೆ ಇಳಿದಿದ್ದು, ಅದುದಾಸ್ ಗಾಯಗಳಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಪೊಲೀಸರು ಸಚಿದಾನಂದ್‍ ಎಂಬಾತನನ್ನು ಪ್ರಮುಖ ಆರೋಪಿ ಎಂದು ಗುರುತಿಸಿ ಬಂಧಿಸಿದ್ದಾರೆ. ಪರಾರಿಯಾದ ಇಬ್ಬರು ಗೋವಿಂದ ಮತ್ತು ಜಗನ್ನಾಥ್. ಭದ್ರತಾ ಸಿಬ್ಬಂದಿ ಗೋವಿಂದ್ ಸಿಂಗ್ ಅವರ ಹೆಸರೂ ತನಿಖೆಯ ಸಮಯದಲ್ಲಿ ಕಾಣಿಸಿಕೊಂಡಿದೆ. ಈ ಪ್ರಕರಣದಲ್ಲಿ ಯಾವುದೇ ಎಫ್‍ಐಆರ್‍ ದಾಖಲಾಗಿಲ್ಲ ಎಂದು ಪೊಲೀಸ್‍ ಅಧಿಕಾರಿ ಹೇಳಿದ್ದಾರೆ.

ಆದ್ದರಿಂದ, ಈ ಘಟನೆಗೆ ಯಾವುದೇ ಕೋಮು ಕೋನವಿಲ್ಲ ಮತ್ತುಇದು ವೈಯಕ್ತಿಕ ವಿವಾದದಿಂದ ಹುಟ್ಟಿಕೊಂಡಿದ್ದಾಗಿದೆ. ದಾಳಿಯಲ್ಲಿ ಭಾಗಿಯಾದ ಎಲ್ಲರೂ ಒಂದೇ ಸಮುದಾಯದವರು ಮತ್ತು ಸಾಧು ಗಾಯಗೊಂಡಿದ್ದರೂ ಪ್ರಾಣಕ್ಕೇನೂ ಅಪಾಯವಿಲ್ಲ. ಆದರೂ, ಆತಂಕ ಮೂಡಿಸುವ ಸಂಗತಿಯೆಂದರೆ, ದ್ವೇಷ ತುಂಬಿದ ತಪ್ಪು ಮಾಹಿತಿ ಇರುವ ಪೋಸ್ಟ್‍ ಗಳು ಸಾವಿರಾರು ಬಾರಿ ಶೇರ್ ಆಗಿದ್ದರೆ, ಸತ್ಯವನ್ನು ತಿಳಿಸುವ ಪೊಲೀಸರ ಹೇಳಿಕೆಯನ್ನು ಗಮನದಲ್ಲಿಟ್ಟುಕೊಳ್ಳಲು ಜನರಿಗೆ ಆಸಕ್ತಿ ಕಡಿಮೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಪೊಲೀಸರ ಸಮಯೋಚಿತ ಪ್ರತಿಕ್ರಿಯೆಯನ್ನು ಪ್ರಶಂಸಿಸಲಾಗುತ್ತಿದೆ ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ತಡೆಯಲುಇಂತಹ ಸ್ಪಷ್ಟೀಕರಣಗಳನ್ನು ವಾಡಿಕೆಯಂತೆ ನೀಡುತ್ತಾರೆಂದು ನಂಬುತ್ತೇವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights