ಲಾಕ್‌ಡೌನ್ ಪರಿಣಾಮ: ಮಗಳ ಮದುವೆಗೆ ಹಣ ಹೊಂದಿಸಲಾಗದೆ ತಂದೆ ಆತ್ಮಹತ್ಯೆ!

ಲಾಕ್‌ಡೌನ್ ಮತ್ತು ನಂತರದ ಆರ್ಥಿಕ ಸಮಸ್ಯೆಗಳಿಂದಾಗಿ 53 ವರ್ಷದ ವ್ಯಕ್ತಿಯೊಬ್ಬರು ತನ್ನ ಮಗಳ ಮದುವೆಗೆ ಚಿನ್ನದ ಆಭರಣಗಳನ್ನು ಖರೀದಿಸಲು ಹಣವನ್ನು ಹೊಂದಿಸಲಾಗದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಮಾರನಲ್ಲೂರು ಪ್ಲಾವಿಲ ಕೃಷ್ಣ ವಿಹಾರದ ನಿವಾಸಿ ಅನಿಲ್‌ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಎಂದು ಗುರುತಿಸಲಾಗಿದೆ. ಆತ ರೋಡ್ ರೋಲರ್ ಡ್ರೈವರ್ ಆಗಿದ್ದು, ಇತ್ತೀಚೆಗೆ ಆಟೋರಿಕ್ಷಾವನ್ನು ಬಾಡಿಗೆಗೆ ತೆಗೆದುಕೊಂಡು ದುಡಿಮೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಅನಿಲ್‌ಕುಮಾರ್ ಮಗಳ ಮದುವೆ ಸೋಮವಾರ ನಿಶ್ಚಯವಾಗಿತ್ತು. ಅವರು ಶುಕ್ರವಾರ ರಾತ್ರಿ ಮೂಕ್ಕುನ್ನಿಮಾಲ ಸಮೀಪದ ಎಡಮಾಲಾ ದೇವಸ್ಥಾನದ ಬಳಿಯ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನಿಲ್‌ಕುಮಾರ್ ಪತ್ತೆಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನರುವಮೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಅನಿಲ್‌ ಕುಮಾರ್ ಕಳೆದ ಮೂರು ತಿಂಗಳಿನಿಂದ ಮಗಳ ಮದುವೆಗೆ ಚಿನ್ನ ಖರೀದಿಸಲು ಹಣ ಹೊಂದಿಸಲು ಯತ್ನಿಸುತ್ತಿದ್ದರು.

“ಅವರು ಸ್ವಲ್ಪ ಹಣದ ವ್ಯವಸ್ಥೆ ಮಾಡಿದ್ದರೂ, ಮದುವೆಗೆ ಬೇಕಿದ್ದಷ್ಟು ಮೊತ್ತದ ಹಣವನ್ನು ಏರ್ಪಡಿಸಲು ಸಾಧ್ಯವಾಗಲಿಲ್ಲ. ಇದರಿಂದ ನಿರಾಶೆಗೊಂಡ ಅವರು ದೇವಸ್ಥಾನದ ಬಳಿ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ” ಎಂದು ಅಧಿಕಾರಿ ಹೇಳಿದರು.

ಶವಪರೀಕ್ಷೆಯ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಮದುವೆ ಕೂಡ ರದ್ದಾಗಿದೆ.

“ಮದುವೆ ನಡೆಸಲು ಸಾಕಷ್ಟು ಹಣವನ್ನು ಏರ್ಪಡಿಸಲು ಸಾಧ್ಯವಾಗದ ಕಾರಣ ಅನಿಲ್‌ಕುಮಾರ್ ಕಳೆದ ವಾರ ಬೇಸರಕ್ಕೊಳಗಾಗಿದ್ದರು. ಅವರು ತನ್ನ ಅಸಹಾಯಕತೆಯ ಬಗ್ಗೆ ತನ್ನ ಮನೆಯವರಿಗೆ ಹೇಳುತ್ತಿದ್ದರು. ಆದರೆ, ಯಾವುದೇ ಆತ್ಮಹತ್ಯೆ ಪತ್ರವೂ ದೊರೆತಿಲ್ಲ” ಎಂದು ನರುವಾಮೂಡು ಪೊಲೀಸ್ ಇನ್ಸ್‌ಪೆಕ್ಟರ್ ಕೆ ಧನಪಾಲನ್ ಹೇಳಿದ್ದಾರೆ.

ಇದನ್ನೂ ಓದಿ: ಹಿನ್ನಡೆಯಲ್ಲಿ ಕಾಂಗ್ರೆಸ್‌; ಮತ್ತೆ ಅಹಿಂದ ಪುನರುಜ್ಜೀವನಕ್ಕೆ ಮುಂದಾದ ಸಿದ್ದರಾಮಯ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights